ಹುಡುಕಿ

TOPSHOT-ANGOLA-VATICAN-DIPLOMACY

ಜಗದ್ಗುರುಗಳು ಅಂಗೋಲಾದ ಅಧಿಕಾರಿಗಳಿಗೆ: ಯುವಕರ ದೃಷ್ಟಿಗಳನ್ನು ಅಥವಾ ವೃದ್ಧರ ಕನಸುಗಳನ್ನು ದಮನಿಸಬೇಡಿ.

ಜಗದ್ಗುರು XIVನೇ ಲಿಯೋರವರು ಅಂಗೋಲಾದ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ರಾಜತಾಂತ್ರಿಕ ವಲಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಹುದ್ದೆಗಳನ್ನು ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಬಳಸುವಂತೆ ಅವರಿಗೆ ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಅಂಗೋಲಾ ಭೇಟಿಯ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಜಗದ್ಗುರು XIVನೇ ಲಿಯೋರವರು ಲುವಾಂಡಾದ ರಾಷ್ಟ್ರಪತಿ ಭವನದಲ್ಲಿ ದೇಶದ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ರಾಜತಾಂತ್ರಿಕ ವಲಯದ ಸದಸ್ಯರನ್ನು ಭೇಟಿಯಾದರು. ತಮ್ಮ ಭಾಷಣದಲ್ಲಿ ಅವರು ಆಹ್ವಾನಕ್ಕಾಗಿ ಕೃತಜ್ಞತೆ ಸಲ್ಲಿಸಿ, ನಾನು ದೇವರ ಸನ್ನಿಧಿಯ ಗುರುತುಗಳನ್ನು ಹುಡುಕುವ ಯಾತ್ರಿಕನಾಗಿ ನಿಮ್ಮ ಜನರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದರು. ಬೆಂಗುಯೆಲಾ ಪ್ರಾಂತ್ಯದಲ್ಲಿ ಸಂಭವಿಸಿದ ಇತ್ತೀಚಿನ ಪ್ರವಾಹವನ್ನು ಉಲ್ಲೇಖಿಸಿ, ಪೀಡಿತರಿಗಾಗಿ ಪ್ರಾರ್ಥನೆ ಸಲ್ಲಿಸಿ, ಮನೆ ಕಳೆದುಕೊಂಡ ಕುಟುಂಬಗಳೊಂದಿಗೆ ಆತ್ಮೀಯತೆಯನ್ನು ವ್ಯಕ್ತಪಡಿಸಿದರು.

ಜಗದ್ಗುರು ಲಿಯೋರವರು ಅಂಗೋಲಾದ ಜನರ ಶಕ್ತಿ ಮತ್ತು ಸಹನಶೀಲತೆಯನ್ನು ವಿಶೇಷವಾಗಿ ಹೊಗಳಿದರು. ನಿಮ್ಮ ಜನರು ಮಾರಾಟ ಮಾಡಲಾಗದ, ಕಳವು ಮಾಡಲಾಗದ ಅಮೂಲ್ಯ ಸಂಪತ್ತನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ಕಷ್ಟಕರ ಪರಿಸ್ಥಿತಿಗಳಲ್ಲಿಯೂ ಅವರ ಸಂತೋಷ ಮತ್ತು ಧೈರ್ಯ ಅಚಲವಾಗಿರುವುದನ್ನು ಅವರು ಗಮನಿಸಿದರು. ಆದರೆ, ಆರ್ಥಿಕ ಶೋಷಣೆಯ ಹಳೆಯ ಪದ್ಧತಿಗಳನ್ನು ಅವರು ಎಚ್ಚರಿಸಿ, ಸಂಪನ್ಮೂಲಗಳನ್ನು ಲಾಭಕ್ಕಾಗಿ ಬಳಸುವ ಮನೋಭಾವವನ್ನು ಮುರಿಯಬೇಕೆಂದು ಕರೆ ನೀಡಿದರು.

ಆಫ್ರಿಕಾ ಖಂಡದ ಬಗ್ಗೆ ಮಾತನಾಡಿದ ಜಗದ್ಗುರುಗಳು, ಅದನ್ನು ಸಂತೋಷ ಮತ್ತು ಭರವಸೆಯ ಭಂಡಾರ ಎಂದು ವರ್ಣಿಸಿದರು. ವಿಶೇಷವಾಗಿ ಯುವಕರು ಮತ್ತು ಬಡವರು ಇನ್ನೂ ಕನಸು ಕಾಣುತ್ತಾರೆ ಮತ್ತು ಭರವಸೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು. ಈ ಆಶಾವಾದವು ಕೇವಲ ರಾಜಕೀಯ ಕಾರ್ಯಕ್ರಮಗಳಿಗಿಂತಲೂ ಹೆಚ್ಚಿನ ಬದಲಾವಣೆಯ ಶಕ್ತಿಯಾಗಿದೆ ಎಂದು ಅವರು ಒತ್ತಿಹೇಳಿದರು.

ಸಮಾಜ ಮತ್ತು ಪರಿಸರಕ್ಕೆ ಹಾನಿ ಉಂಟುಮಾಡುವ ಶೋಷಣಾಧಾರಿತ ಆರ್ಥಿಕ ಮಾದರಿಗಳ ಬಗ್ಗೆ ಜಗದ್ಗುರುಗಳು ಎಚ್ಚರಿಸಿದರು. ಇವು ಅನ್ಯಾಯವನ್ನು ಹೆಚ್ಚಿಸಿ, ವಿಭಜನೆಗೆ ಕಾರಣವಾಗುತ್ತವೆ ಎಂದು ಹೇಳಿದರು. ನಿಜವಾದ ಪ್ರಗತಿ ಎಲ್ಲರನ್ನು ಒಳಗೊಂಡಿರಬೇಕು ಎಂಬುದನ್ನು ಅವರು ಸ್ಪಷ್ಟಪಡಿಸಿದರು.

ರಾಜಕೀಯ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ಸಂವಾದದ ಮಹತ್ವವನ್ನು ಜಗದ್ಗುರುಗಳು ಒತ್ತಿಹೇಳಿದರು. ಜೀವನವು ಭೇಟಿಗಳಲ್ಲಿ ಅರಳುತ್ತದೆ ಆರಂಭವೇ ಸಂವಾದ ಎಂದು ಅವರು ಹೇಳಿದರು. ಭಿನ್ನಾಭಿಪ್ರಾಯಗಳನ್ನು ದ್ವೇಷವಾಗಿ ಬದಲಾಯಿಸುವ ಬದಲು, ಅವನ್ನು ಶಾಂತಿಯತ್ತ ದಾರಿ ಮಾಡುವ ಅವಕಾಶಗಳಾಗಿ ಪರಿವರ್ತಿಸಬೇಕು ಎಂದು ಹೇಳಿದರು.

ಅಂಗೋಲಾದ ನಾಯಕರಿಗೆ ಅವರು ವಿಶೇಷವಾಗಿ ಮನವಿ ಮಾಡುತ್ತಾ, ಯುವಕರ ದೃಷ್ಟಿಗಳನ್ನು ಅಥವಾ ವೃದ್ಧರ ಕನಸುಗಳನ್ನು ದಮನಿಸಬೇಡಿ ಎಂದು ಹೇಳಿದರು. ಸಾಮೂಹಿಕ ಹಿತಾಸಕ್ತಿಯನ್ನು ವೈಯಕ್ತಿಕ ಲಾಭಕ್ಕಿಂತ ಮೇಲುಗೈ ಮಾಡಬೇಕು ಎಂದು ಅವರು ಒತ್ತಿಹೇಳಿದರು. ವಿಭಜನೆ ಮತ್ತು ನಿರಾಶೆಯನ್ನು ಉತ್ತೇಜಿಸುವ ರಾಜಕೀಯ ಕ್ರಮಗಳನ್ನು ಅವರು ತಿರಸ್ಕರಿಸಿ, ಸಮಾಜದಲ್ಲಿ ಏಕತೆ ಮತ್ತು ನಂಬಿಕೆಯನ್ನು ಬೆಳೆಸುವ ಅಗತ್ಯವನ್ನು ವಿವರಿಸಿದರು.

ಕೊನೆಗೆ, ಅಂಗೋಲಾದ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಜಗದ್ಗುರುಗಳು, ಸಮಾನತೆಯ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸೇರಿ ಕೆಲಸ ಮಾಡಬೇಕೆಂದು ಕರೆ ನೀಡಿದರು. ಕಥೊಲಿಕ ಧರ್ಮ ಸಭೆ ಈ ಪ್ರಕ್ರಿಯೆಯಲ್ಲಿ ಸಹಭಾಗಿಯಾಗಲು ಸಿದ್ಧವಾಗಿದೆ ಎಂದು ಹೇಳಿ, “ದೇವರು ಅಂಗೋಲಾವನ್ನು ಆಶೀರ್ವದಿಸಲಿ” ಎಂಬ ಆಶೀರ್ವಚನದೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

18 ಏಪ್ರಿಲ್ 2026, 14:28