ಆಫ್ರಿಕಾದಲ್ಲಿ ಐದನೇ ದಿನ: ಜಾಗತಿಕ ಹಸಿವನ್ನು ನಿವಾರಿಸಲು ನಾವೆಲ್ಲರೂ ಸಹಕರಿಸಬೇಕು ಎಂದು ಜಗದ್ಗುರುಗಳು ಹೇಳಿದರು.
ವ್ಯಾಟಿಕನ್ ವರದಿ
ಶುಕ್ರವಾರ, ಉತ್ತರ-ಪಶ್ಚಿಮ ನಗರವಾದ ಬಮೆಂಡಾದಲ್ಲಿ ಭ್ರಷ್ಟಾಚಾರವನ್ನು ಖಂಡಿಸಿ ಶಾಂತಿಗೆ ಕರೆ ನೀಡಿದ ಒಂದು ದಿನದ ನಂತರ, ಜಗದ್ಗುರು ಲಿಯೋರವರು ಕ್ಯಾಮರೂನ್‌ನ ಇನ್ನೊಂದು ತುರ್ತು ಸಮಸ್ಯೆಯಾದ ಹಸಿವಿನ ಕುರಿತು ಮಾತನಾಡಿದರು.
ದೇಶದ ಆರ್ಥಿಕ ಕೇಂದ್ರವಾದ ಡುವಾಲಾದಲ್ಲಿ ನಡೆದ ಪವಿತ್ರ ಬಲಿಪೂಜೆಯ ಪ್ರಭೋಧನೆಯಲ್ಲಿ, “ಶ್ರಮದಿಂದ ಕುಗ್ಗಿಹೋಗಿರುವ ಈ ಎಲ್ಲಾ ಹಸಿದ ಜನರನ್ನು ನೋಡಿರಿ” ಎಂದು ಯೇಸು ನಮಗೆ ಪ್ರೇರೇಪಿಸುತ್ತಾರೆ ಎಂದು ಜಗದ್ಗುರುಗಳು ಹೇಳಿದರು. ಬಳಿಕ ಅವರು ಪ್ರತಿಯೊಬ್ಬರಿಗೂ ಪ್ರಶ್ನೆ ಹಾಕುತ್ತಾರೆ “ನೀವು ಏನು ಮಾಡುವಿರಿ?”ಎಂದು.
‘ಎಲ್ಲರಿಗೂ ಅನ್ನ ಇದೆ’
ಕ್ಯಾಮರೂನ್‌ನ ಜನಸಂಖ್ಯೆಯ ಸುಮಾರು 40 ಶೇಕಡಾ ಜನರು ದಾರಿದ್ರ್ಯ ರೇಖೆಯ ಕೆಳಗೆ ಬದುಕುತ್ತಿದ್ದಾರೆ. ಫೆಬ್ರವರಿಯಲ್ಲಿ ರೆಡ್ ಕ್ರಾಸ್ ವರದಿ ಪ್ರಕಾರ, 3.3 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ.
ಆ ದಿನದ ಸುವಾರ್ತಾ ವಾಚನದಲ್ಲಿ ಐದು ಸಾವಿರ ಮಂದಿಗೆ ಅನ್ನವನ್ನು ನೀಡಿದ ಅದ್ಭುತದ ಬಗ್ಗೆ ಹೇಳಲಾಗಿದೆ ಎಂದು ಜಗದ್ಗುರುಗಳು ನೆನಪಿಸಿದರು. ಜನರ ಹಸಿವಿನ ಮುಂದೆ, ಈ ಸಮಸ್ಯೆಯನ್ನು ಹೇಗೆ ಪರಿಹರಿಸುವಿರಿ ಎಂದು ಯೇಸು ತನ್ನ ಶಿಷ್ಯರನ್ನು ಕೇಳಿದನು ಇಂದು ಅದೇ ಪ್ರಶ್ನೆಯನ್ನು ನಮ್ಮ ಪ್ರತಿಯೊಬ್ಬರಿಗೂ ಕೇಳಲಾಗುತ್ತಿದೆ ಎಂದು ಅವರು ಹೇಳಿದರು. ಕೊನೆಯಲ್ಲಿ, ಹಂಚಿಕೊಳ್ಳುವ ಮನೋಭಾವದಿಂದಲೇ ಜನಸಮೂಹ ತೃಪ್ತಿಗೊಳ್ಳುತ್ತದೆ ಎಂದು ಅವರು ಒತ್ತಿಹೇಳಿದರು. ಎಲ್ಲರಿಗೂ ಹಂಚಿದರೆ, ಎಲ್ಲರಿಗೂ ಅನ್ನ ಸಿಗುತ್ತದೆ ಎಂಬುದನ್ನು ಇದು ನೆನಪಿಸುತ್ತದೆ.
ಸುಮಾರು 1,20,000 ಜನರ ಸಮೂಹಕ್ಕೆ ಜಗದ್ಗುರುಗಳು ಹೇಳಿದರು ಆಹಾರವನ್ನು ಕಸಿದುಕೊಳ್ಳುವ ಕೈಯಿಂದಲ್ಲ, ಕೊಡುವ ಕೈಯಿಂದ ತೆಗೆದುಕೊಂಡರೆ ಯಾರೂ ಹಸಿವಿನಿಂದ ಬಳಲುವುದಿಲ್ಲ ಎಂದು ಹೇಳಿದರು.
‘ಪವಿತ್ರ ಶಾಂತಿ’
ಪವಿತ್ರ ಬಲಿಪೂಜೆಯ ನಂತರ, ಜಗದ್ಗುರುಗಳು ಖಾಸಗಿ ರೀತಿಯಲ್ಲಿ ಒಂದು ಕಥೋಲಿಕ ಆಸ್ಪತ್ರೆಯನ್ನು ಭೇಟಿ ಮಾಡಿ, ನಂತರ ಕ್ಯಾಮರೂನ್‌ನ ರಾಜಧಾನಿಯಾದ ಯೌಂಡೆಗೆ ಹಿಂತಿರುಗಿ ಮಧ್ಯ ಆಫ್ರಿಕಾದ ಕಥೋಲಿಕ ವಿಶ್ವವಿದ್ಯಾಲಯವನ್ನು ಭೇಟಿ ನೀಡಿದರು.
ಅಲ್ಲಿ ಅವರು ಉನ್ನತ ಶಿಕ್ಷಣದ ಅರ್ಥದ ಬಗ್ಗೆ ಆಳವಾದ ಚಿಂತನೆಗಳನ್ನು ಹಂಚಿಕೊಂಡರು. ಹೆಚ್ಚುತ್ತಿರುವ ವೈಯಕ್ತಿಕತಾವಾದ, ಮೇಲ್ಮೈತನ ಮತ್ತು ದ್ವಂದ್ವಾಚಾರದ ಕಾಲದಲ್ಲಿ, ವಿಶ್ವವಿದ್ಯಾಲಯವು ಸ್ನೇಹ, ಸಹಕಾರ, ಆತ್ಮಪರಿಶೀಲನೆ ಮತ್ತು ಚಿಂತನೆಗಾಗಿ ವಿಶಿಷ್ಟ ಸ್ಥಳವಾಗಿರುತ್ತದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಒಂದು ಪ್ರಮುಖ ಕರ್ತವ್ಯವೆಂದರೆ ಸ್ವತಂತ್ರ ಮನಸ್ಸುಗಳನ್ನು ರೂಪಿಸುವುದು ಎಂದು ಜಗದ್ಗುರುಗಳು ಒತ್ತಿಹೇಳಿದರು ಮತ್ತು “ಪವಿತ್ರ ಶಾಂತಿಯನ್ನು” ಉತ್ತೇಜಿಸಬೇಕು ಎಂದರು. ಕೃತಕ ಬುದ್ಧಿಮತ್ತೆಯ ವಿಷಯವನ್ನೂ ಅವರು ಮತ್ತೊಮ್ಮೆ ಉಲ್ಲೇಖಿಸಿದರು.
ಈ ತಂತ್ರಜ್ಞಾನವು ನಮ್ಮ ಮನೋಭಾವವನ್ನು ದಿನೇದಿನೇ ರೂಪಿಸುತ್ತಾ ಪ್ರಭಾವ ಬೀರುತ್ತಿದೆ ಎಂದು ಅವರು ಹೇಳಿದರು. ಈ ಬದಲಾವಣೆಯ ನಡುವೆ, ಮಾನವೀಯ ವಿದ್ಯೆಗಳ ಅಧ್ಯಯನ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ, ಏಕೆಂದರೆ ಅದು ಎಐ ಯುಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ಥಿಕತೆಯ ಒಳಹೊರಗೆ, ಅಡಗಿದ ಪೂರ್ವಗ್ರಹಗಳು ಮತ್ತು ಅಧಿಕಾರದ ರೂಪಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಧಾರ್ಮಿಕ ಮೇಲಾಧಿಕಾರಿಗಳೊಂದಿಗೆ ಭೇಟಿ
ತಾವು ವಾಸಿಸುತ್ತಿರುವ ಅಪೋಸ್ತೋಲಿಕ್ ನುಂಸಿಯೇಚರ್‌ಗೆ ಹಿಂದಿರುಗಿದ ನಂತರ, ಜಗದ್ಗುರು ಲಿಯೋರವರು ಕ್ಯಾಮರೂನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 250ಕ್ಕೂ ಹೆಚ್ಚು ಧಾರ್ಮಿಕ ಸಂಸ್ಥೆಗಳು ಮತ್ತು ಸಂಘಗಳನ್ನು ಪ್ರತಿನಿಧಿಸುವ ಒಂಬತ್ತು ಧಾರ್ಮಿಕ ಪುರುಷರು ಮತ್ತು ಮಹಿಳೆಯರನ್ನು ಭೇಟಿಯಾದರು.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಪ್ರಕಟಣೆಯ ಪ್ರಕಾರ, ಅವರು ತಮ್ಮ ದಾನಧರ್ಮದ ಸೇವೆಗಳ ಬಗ್ಗೆ ವಿಶೇಷವಾಗಿ ಯುವಕರು, ಸ್ಥಳಾಂತರಿತರು, ಹಿಂಸಾಚಾರದ ಬಲಿಯಾದವರು ಮತ್ತು ಮಾನವ ಕಳ್ಳಸಾಗಣೆಗೊಳಗಾದವರೊಂದಿಗೆ ಮಾಡುವ ಸೇವೆಗಳ ಬಗ್ಗೆ ವಿವರಿಸಿದರು.
ಅದಕ್ಕೆ ಪ್ರತಿಯಾಗಿ, ಜಗದ್ಗುರುಗಳು ಸಮರ್ಪಿತ ಧಾರ್ಮಿಕ ಜೀವನವು ತೀವ್ರ ಧೈರ್ಯವನ್ನು ಬೇಡಿಕೊಳ್ಳುತ್ತದೆ ಎಂದು ಹೇಳಿದರು, ವಿಶ್ವದ ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಲು ಮತ್ತು ಭರವಸೆಯ ಮತ್ತು ದೇವರ ಪ್ರೀತಿಯನ್ನು ಅತ್ಯಂತ ಅಗತ್ಯವಿರುವವರ ಬಳಿಗೆ ತಲುಪುವಂತೆ ತಿಳಿಸಿದರು.
