Pope Leo XIV visits Cameroon

ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನಲ್ಲಿ ಧಾರ್ಮಿಕ ಮೇಲಾಧಿಕಾರಿಗಳನ್ನು ಭೇಟಿಯಾದರು

ಅಪೋಸ್ತೋಲಿಕ್ ನುಂಸಿಯೇಚರ್‌ಗೆ ಹಿಂದಿರುಗಿದ ನಂತರ, ಜಗದ್ಗುರು ಲಿಯೋರವರು ಕ್ಯಾಮರೂನ್‌ನ ಪ್ರಮುಖ ಧಾರ್ಮಿಕ ಮೇಲಾಧಿಕಾರಿಗಳು ಮತ್ತು ಧಾರ್ಮಿಕ ಸಂಘಗಳ ಪ್ರತಿನಿಧಿಗಳನ್ನು ಭೇಟಿಯಾದರು. ತಮ್ಮ ಸೇವೆ ಸಲ್ಲಿಸುವ ಧರ್ಮಪ್ರಾಂತ್ಯಗಳೊಂದಿಗೆ ಏಕತೆಯಲ್ಲಿ ಮತ್ತು ಅತ್ಯಂತ ಅಗತ್ಯವಿರುವವರಿಗೆ ಸೇವೆ ಸಲ್ಲಿಸುವ ಮನೋಭಾವದಲ್ಲಿ ಸಮರ್ಪಿತ ಜೀವನವನ್ನು ನಡೆಸಲು ಧಾರ್ಮಿಕ ಪುರುಷರು ಮತ್ತು ಮಹಿಳೆಯರನ್ನು ಅವರು ಉತ್ತೇಜಿಸಿದರು.

ವ್ಯಾಟಿಕನ್ ವರದಿ

ಶುಕ್ರವಾರ ಸಂಜೆ, ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 250ಕ್ಕೂ ಹೆಚ್ಚು ಧಾರ್ಮಿಕ ಸಂಸ್ಥೆಗಳು ಮತ್ತು ಸಂಘಗಳನ್ನು ಪ್ರತಿನಿಧಿಸುವ ರಾಷ್ಟ್ರೀಯ ಪ್ರಮುಖ ಮೇಲಾಧಿಕಾರಿಗಳ ಸಮ್ಮೇಳನದ ಒಂಬತ್ತು ಸಮರ್ಪಿತ ಧಾರ್ಮಿಕ ಸದಸ್ಯರ ಗುಂಪನ್ನು ಭೇಟಿಯಾದರು.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಪ್ರಕಾರ, ದೇಶಕ್ಕೆ ತಮ್ಮ ಭೇಟಿಗೂ ಮತ್ತು ಇತ್ತೀಚಿನ ದಿನಗಳಲ್ಲಿ ನೀಡಿದ ಭಾಷಣಗಳಿಗೂ ಧನ್ಯವಾದಗಳನ್ನು ವ್ಯಕ್ತಪಡಿಸಿದ ಅವರ ಮಾತುಗಳನ್ನು ಜಗದ್ಗುರುಗಳು ಆಲಿಸಿದರು. ಜೊತೆಗೆ, ಕ್ಯಾಮರೂನ್‌ನಲ್ಲಿ ನೋವು ಅನುಭವಿಸುತ್ತಿರುವ ಅನೇಕ ಜನರೊಂದಿಗೆ—ವಿಶೇಷವಾಗಿ ಯುವಕರು, ಸ್ಥಳಾಂತರಿತರು, ಹಿಂಸಾಚಾರದ ಬಲಿಯಾದವರು ಮತ್ತು ಮಾನವ ಕಳ್ಳಸಾಗಣೆಗೊಳಗಾದವರು ಇವರೊಂದಿಗೆ ತಾವು ನಡೆಸುತ್ತಿರುವ ಸೇವೆ ಮತ್ತು ಸಾಕ್ಷ್ಯವನ್ನು ಅವರು ವಿವರಿಸಿದರು.

ಧಾರ್ಮಿಕ ಮೇಲಾಧಿಕಾರಿಗಳು ಬಿಷಪ್‌ಗಳು ಮತ್ತು ಧರ್ಮಪ್ರಾಂತ್ಯದ ಯಾಜಕರೊಂದಿಗೆ ಹೆಚ್ಚಿನ ಸಹಕಾರದ ಅಗತ್ಯವಿದೆ ಎಂದು ಹೇಳಿದರು. ತಮ್ಮ ಸಂಘಗಳಲ್ಲಿ ಮೂಡಿಬರುತ್ತಿರುವ ಧಾರ್ಮಿಕ ಗುರುತಿನ ಕುರಿತು ಕೆಲವು ಪ್ರಶ್ನೆಗಳನ್ನೂ ಅವರು ಉಲ್ಲೇಖಿಸಿದರು.

ಜಗದ್ಗುರು ಲಿಯೋರವರು ಈ ಭೇಟಿಗೆ ಅವಕಾಶ ನೀಡಿದಕ್ಕಾಗಿ ಧನ್ಯವಾದಗಳನ್ನು ತಿಳಿಸಿ, “ಸಮರ್ಪಿತ ಧಾರ್ಮಿಕ ಜೀವನವು ಧರ್ಮ ಸಭೆಯ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಒತ್ತಿಹೇಳಿದರು. ಸಮರ್ಪಿತ ಜೀವನ ಮತ್ತು ಬಿಷಪ್‌ಗಳು ಹಾಗೂ ಧರ್ಮಪ್ರಾಂತ್ಯದ ಯಾಜಕರ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾ, ಇತ್ತೀಚಿನ ಸೀನೋಡ್‌ನ ಒಂದು ನಿರ್ಣಯವಾಗಿ ಪರಸ್ಪರ ಸಂಬಂಧಗಳು ಎಂಬ ದಸ್ತಾವೇಜಿನ ನವೀಕರಣಕ್ಕಾಗಿ ಅಧ್ಯಯನ ಸಮೂಹವನ್ನು ರಚಿಸುವ ಪ್ರಸ್ತಾವನೆ ನೆನಪಿಸಿದರು. ಈ ಹಿನ್ನೆಲೆಗಳಲ್ಲಿ, ಪ್ರತಿಯೊಂದು ಧರ್ಮಪ್ರಾಂತ್ಯದಲ್ಲಿರುವ ವಿವಿಧ ಧಾರ್ಮಿಕ ಸಂಘಗಳ ವೈಶಿಷ್ಟ್ಯಪೂರ್ಣ ಕೃಪಾವರಗಳನ್ನು ಗುರುತಿಸಿ ಉತ್ತೇಜಿಸುವುದು ಅಗತ್ಯವೆಂದು ಹೇಳಿದರು.

ಜಗದ್ಗುರುಗಳು ಸಮರ್ಪಿತ ಧಾರ್ಮಿಕ ಜೀವನದ ರೂಪಿಕರಣದ ಬಗ್ಗೆ ಮಾತನಾಡಿ, ಪ್ರತಿಯೊಂದು ಸಂಘವು ತನ್ನದೇ ಆದ ವಿಶೇಷ ಕೃಪಾವರವನ್ನು ಅನುಸರಿಸಬೇಕೆಂದು ಹೇಳಿದರು. ಅಭ್ಯರ್ಥಿಗಳನ್ನು ತ್ಯಾಗ, ಆತ್ಮಸಮರ್ಪಣೆ ಮತ್ತು ಸಮುದಾಯ ಸೇವೆಯ ಜೀವನಕ್ಕೆ ಸಿದ್ಧಗೊಳಿಸಲು ಸಂಯುಕ್ತ ವಿವೇಕ ಅಗತ್ಯವೆಂದು ಅವರು ಒತ್ತಿಹೇಳಿದರು.

ವಿವಿಧ ಧರ್ಮಗಳು ಮತ್ತು ನಂಬಿಕೆಗಳ ಜನರೊಂದಿಗೆ ಸಹಬಾಳ್ವೆ ನಡೆಸುವುದು ಹಾಗೂ ಯುವಕರಿಗೆ ಧರ್ಮಾಧ್ಯಕ್ಷೀಯ ಸೇವೆ ಸಲ್ಲಿಸುವುದು ಸೇರಿದಂತೆ ಹಲವು ಸವಾಲುಗಳು ಪ್ರತಿಯೊಂದು ಸಂಸ್ಥೆ ಮತ್ತು ಸಮುದಾಯದಲ್ಲಿ ಚಿಂತನೆಗೆ ಒಳಪಡಬೇಕು ಎಂದು ಜಗದ್ಗುರುಗಳು ಹೇಳಿದರು. ಧರ್ಮಪ್ರಾಂತ್ಯಗಳೊಂದಿಗೆ ಸಹಕಾರದಲ್ಲಿ, ಪ್ರತಿಯೊಂದು ಕೃಪಾವರವು ಧರ್ಮ ಸಭೆಯ ಸೇವೆಗೆ ಎಲ್ಲ ಮಟ್ಟಗಳಲ್ಲೂ ಉಪಯೋಗವಾಗಬೇಕು ಎಂದು ಅವರು ಹೇಳಿದರು.

ಈ ಭೇಟಿಯ ಸಂದರ್ಭದಲ್ಲಿ ನೀಡಿದ ತಮ್ಮ ಭಾಷಣಗಳನ್ನು ಉಲ್ಲೇಖಿಸಿ, “ಜಗದ್ಗುರುಗಳು  ಬಂದರು, ಜಗದ್ಗುರುಗಳು ಹೋಗುತ್ತಿದ್ದಾರೆ  ಆದರೆ ಹೇಳಲ್ಪಟ್ಟ ಮಾತುಗಳು ನಿಮ್ಮಲ್ಲಿಯೇ ಉಳಿದಿವೆ, ಎಂದು ಜಗದ್ಗುರು ಲಿಯೋರವರು ಹೇಳಿದರು. ಈ ಸಂದೇಶವನ್ನು ಸ್ವೀಕರಿಸಿ, ಅದರ ಮೇಲೆ ಚಿಂತನೆ ನಡೆಸಿ, ಇಂದಿನ ಕಠಿಣ ಸವಾಲುಗಳಿಗೆ ಪ್ರತಿಕ್ರಿಯಿಸುವಂತೆ ಅದನ್ನು ಹಂಚಿಕೊಳ್ಳುವಂತೆ ಅವರು ಕರೆ ನೀಡಿದರು.

ಅಂತಿಮವಾಗಿ, ಸಮರ್ಪಿತ ಜೀವನವು ಧೈರ್ಯವನ್ನುಕೆಲವೊಮ್ಮೆ ತೀವ್ರ ಧೈರ್ಯವನ್ನು—ಬೇಡಿಕೊಳ್ಳುತ್ತದೆ. ಯೇಸು ಸುವಾರ್ತೆಯಲ್ಲಿ ನಮಗೆ ಬೋಧಿಸಿದ ಸಂದೇಶವನ್ನು ಭಯವಿಲ್ಲದೆ ಪ್ರಕಟಿಸಲು, ಅತಿ ಕಷ್ಟಕರ ಸಮಸ್ಯೆಗಳನ್ನೂ, ಭೂಮಿಯ ಅತಿದೂರದ ಗಡಿಗಳನ್ನೂ, ಅತಿ ಸಣ್ಣವರನ್ನೂ, ಬಂಧಿತರನ್ನೂ ಮತ್ತು ದೇವರ ಪ್ರೀತಿಯ ಭರವಸೆಯನ್ನು ಅತ್ಯಂತ ಅಗತ್ಯವಿರುವವರನ್ನೂ ತಲುಪುವ ಶಿಷ್ಯರಾಗಬೇಕು ಎಂದು ಜಗದ್ಗುರುಗಳು ಹೇಳಿದರು.

ಸಭೆಯ ಕೊನೆಯಲ್ಲಿ, ಜಗದ್ಗುರು ಲಿಯೋರವರು ಉಪಸ್ಥಿತರಿದ್ದ ಎಲ್ಲರಿಗೂ ಆಶೀರ್ವಾದ ನೀಡಿದರು. ನಂತರ ಅವರೊಂದಿಗೆ “ಸ್ವಗ೯ದಲ್ಲಿರುವ ನಮ್ಮ ತಂದೆ” ಪ್ರಾರ್ಥನೆಯನ್ನು ಮಾಡಿದರು ಮತ್ತು ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಭೇಟಿಯಾಗಿ ಶುಭಾಶಯ ಕೋರಿದರು.

17 ಏಪ್ರಿಲ್ 2026, 11:39