Pope Leo XIV holds a holy Mass near Japoma Stadium in Douala

ಆಫ್ರಿಕಾದ ನಾಲ್ಕನೇ ದಿನ: ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ನ ‘ಆಂಗ್ಲೋಫೋನ್ ಸಂಕಟ’ ಕುರಿತು ಮಾತನಾಡಿದರು.

ಆಫ್ರಿಕಾದಲ್ಲಿ ನಡೆಯುತ್ತಿರುವ ತನ್ನ ಪ್ರೇಷಿತರ ಪ್ರವಾಸದ ನಾಲ್ಕನೇ ದಿನ, ಜಗದ್ಗುರು ಲಿಯೋರವರು ಕ್ಯಾಮರೂನ್‌ನ ಸಂಘರ್ಷದಿಂದ ಬಳಲುತ್ತಿರುವ ಉತ್ತರ-ಪಶ್ಚಿಮ ಭಾಗಕ್ಕೆ ಭೇಟಿ ನೀಡಿ, ಬದಲಾವಣೆಗೆ ಸಮಯ “ಇಂದು, ನಾಳೆ ಅಲ್ಲ; ಈಗಲೇ, ಭವಿಷ್ಯದಲ್ಲಿ ಅಲ್ಲ” ಎಂದು ಒತ್ತಿ ಹೇಳಿದರು.

ವ್ಯಾಟಿಕನ್ ವರದಿ

ಗುರುವಾರ ಜಗದ್ಗುರು ಲಿಯೋರವರು ಕ್ಯಾಮರೂನ್‌ನ ಸಮಸ್ಯೆಗಳಿಂದ ಬಳಲುತ್ತಿರುವ ಉತ್ತರ-ಪಶ್ಚಿಮ ಪ್ರದೇಶದಲ್ಲಿರುವ ಬಮೆಂಡಾ ನಗರಕ್ಕೆ ಭೇಟಿ ನೀಡಿದರು. ಈ ಪ್ರದೇಶವು ದಶಕಕ್ಕಿಂತ ಹೆಚ್ಚು ಕಾಲದಿಂದ ನಡೆಯುತ್ತಿರುವ ‘ಆಂಗ್ಲೋಫೋನ್ ಸಂಕಟ’ದ ಕೇಂದ್ರವಾಗಿದೆ.

2016ರಿಂದ, ಕ್ಯಾಮರೂನ್‌ನ ಇಂಗ್ಲಿಷ್ ಭಾಷಿಕ ಅಲ್ಪಸಂಖ್ಯಾತರಿಗೆ ಸೇರಿದ ಬಂಡುಕೋರ ಗುಂಪುಗಳು ಸರ್ಕಾರದ ಪಡೆಗಳ ವಿರುದ್ಧ ಹೋರಾಟ ನಡೆಸುತ್ತಿವೆ. ಉತ್ತರ-ಪಶ್ಚಿಮ ಮತ್ತು ದಕ್ಷಿಣ-ಪಶ್ಚಿಮ ಭಾಗಗಳಲ್ಲಿ ಪ್ರತ್ಯೇಕ ರಾಜ್ಯವನ್ನು ಸ್ಥಾಪಿಸಲು ಅವರು ಈ ಹೋರಾಟವನ್ನು ಮುಂದುವರಿಸುತ್ತಿದ್ದಾರೆ.

ಹತ್ಯೆ ಮತ್ತು ವಿನಾಶ

ಬಮೆಂಡಾಗೆ ಆಗಮಿಸಿದ ನಂತರ, ಜಗದ್ಗುರುಗಳು ಸ್ಥಳೀಯ ಸಮುದಾಯದ ನಾಯಕರು, ವಿವಿಧ ಧಾರ್ಮಿಕ ಪ್ರತಿನಿಧಿಗಳು ಮತ್ತು ಸಾಂಪ್ರದಾಯಿಕ ಆಡಳಿತದ ಸದಸ್ಯರೊಂದಿಗೆ ಶಾಂತಿ ಸಭೆಯನ್ನು ನಡೆಸಿದರು. ಸಭೆ ನಡೆದ ಸಂತ ಜೋಸೆಫ್ ಮಹಾಗಿರ್ಜೆಯ ಒಳಗೂ ಹೊರಗೂ ಅಪಾರ ಜನಸಮೂಹ ಸೇರಿ ಹಾಡುತ್ತಾ, ಕುಣಿಯುತ್ತಾ ಭಾಗವಹಿಸಿದರು.

“ಯುದ್ಧದ ನಾಯಕರಿಗೆ ನಾಶಮಾಡಲು ಕೇವಲ ಕ್ಷಣವೇ ಸಾಕು ಎಂಬುದು ಗೊತ್ತಿದ್ದರೂ, ಪುನರ್‌ನಿರ್ಮಾಣಕ್ಕೆ ಜೀವಮಾನವೇ ಸಾಲದು ಎಂಬುದನ್ನು ಅವರು ತಿಳಿದಂತೆ ತೋರುವುದಿಲ್ಲ, ಎಂದು ಜಗದ್ಗುರುಗಳು ಹೇಳಿದರು. “ಹತ್ಯೆ ಮತ್ತು ವಿನಾಶಕ್ಕಾಗಿ ಕೋಟ್ಯಾಂತರ ಡಾಲರ್‌ಗಳನ್ನು ಖರ್ಚು ಮಾಡಲಾಗುತ್ತಿದೆ ಎಂಬುದನ್ನು ಅವರು ಕಡೆಗಣಿಸುತ್ತಾರೆ.ಆದರೆ ಚೇತರಿಕೆ, ಶಿಕ್ಷಣ ಮತ್ತು ಪುನರ್‌ನಿರ್ಮಾಣಕ್ಕೆ ಬೇಕಾದ ಸಂಪನ್ಮೂಲಗಳು ಕಾಣಿಸುತ್ತಿಲ್ಲ.”

ಜಗತ್ತಿನ ಅನೇಕ ಮಾಧ್ಯಮಗಳಲ್ಲಿ ಪ್ರತಿಧ್ವನಿಸಿದ ಮಾತುಗಳಲ್ಲಿ, “ಲೋಕವು ಕೆಲವೇ ನಿರಂಕುಶ ನಾಯಕರಿಂದ ನಾಶವಾಗುತ್ತಿದೆ” ಎಂದು ಜಗದ್ಗುರುಗಳು ಎಚ್ಚರಿಸಿದರು.

ಹೊಸ ಸಾಧ್ಯತೆಗಳು

2016ರಲ್ಲಿ ಆರಂಭವಾದ ಆಂಗ್ಲೋಫೋನ್ ಸಂಕಟಕ್ಕೆ ಶಾಂತಿಯ ಪರಿಹಾರ ಕಂಡುಕೊಳ್ಳುವ ಎಲ್ಲಾ ಪ್ರಯತ್ನಗಳು ಇದುವರೆಗೆ ವಿಫಲವಾಗಿವೆ. ಬಮೆಂಡಾ ವಿಮಾನ ನಿಲ್ದಾಣದಲ್ಲಿ ನಡೆದ ಪವಿತ್ರ ಬಲಿಪೂಜೆಯ ಪ್ರವಚನದಲ್ಲಿ, ಈ ಪರಿಸ್ಥಿತಿ ನಿರಾಶೆ ಮತ್ತು ಅಸಹಾಯತೆಯನ್ನು ಉಂಟುಮಾಡುವಂತದ್ದು ಎಂದು ಜಗದ್ಗುರುಗಳು ಒಪ್ಪಿಕೊಂಡರು.

ಕ್ಯಾಮರೂನ್‌ನ ಶಾಂತಿಯುತ ಭವಿಷ್ಯದ ಆಶಯವನ್ನು ಭ್ರಷ್ಟಾಚಾರ, ಬಡತನ ಮತ್ತು ವಲಸೆ ಸಮಸ್ಯೆಗಳು ನಿರಂತರವಾಗಿ ಕುಂಠಿತಗೊಳಿಸುತ್ತಿವೆ ಎಂದು ಅವರು ಹೇಳಿದರು. ಆದರೆ, “ಪ್ರಭುವಿನ ವಾಕ್ಯವು ಹೊಸ ಸಾಧ್ಯತೆಗಳನ್ನು ತೆರೆದಿಡುತ್ತದೆ… ಅದು ನಮ್ಮ ಹೃದಯಗಳನ್ನು ಕದಡುತ್ತದೆ ಮತ್ತು ಘಟನೆಗಳ ಸಾಮಾನ್ಯ ಪ್ರವಾಹವನ್ನು ಸವಾಲು ಮಾಡುತ್ತದೆ” ಎಂದು ಜಗದ್ಗುರುಗಳು ಒತ್ತಿ ಹೇಳಿದರು. ಬದಲಾವಣೆಗೆ ಸಮಯ ಬಂದಿದೆ. “ಇಂದು, ನಾಳೆ ಅಲ್ಲ; ಈಗಲೇ, ಭವಿಷ್ಯದಲ್ಲಿ ಅಲ್ಲ.”ಎಂದರು

ಮುಂದೆ ಸಾಗುವ ದಾರಿ

ದಶಕದ ಹಿಂಸಾತ್ಮಕ ಸಂಘರ್ಷದ ನಂತರ, ಕ್ಯಾಮರೂನ್‌ನ ಉತ್ತರ-ಪಶ್ಚಿಮ ಮತ್ತು ದಕ್ಷಿಣ-ಪಶ್ಚಿಮ ಪ್ರದೇಶಗಳ ಜನರು ಜಗದ್ಗುರುಗಳ ಭೇಟಿ ಶಾಂತಿಯ ದಾರಿಗೆ ದಾರಿ ತೆರೆದೀತು ಎಂಬ ಆಶಯವನ್ನು ಹೊಂದಿದ್ದಾರೆ.

ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದ ಬುವೇಯ ಧರ್ಮಪ್ರಾಂತ್ಯದ ಬಿಷಪ್ ಮೈಕೆಲ್ ಬಿಬಿ ರವರು, ಜಗದ್ಗುರುಗಳ ಭೇಟಿಯ ಗೌರವಾರ್ಥವಾಗಿ ಆಂಗ್ಲೋಫೋನ್ ವಿಭಜನೆ ಪರ ಸಂಘಟನೆ ಮೂರು ದಿನಗಳ ಯುದ್ಧ ವಿರಾಮವನ್ನು ಘೋಷಿಸಿದೆ ಎಂದು ಹೇಳಿದರು  ಇದು ಮೊದಲ ಬಾರಿಗೆ ನಡೆದಿದೆ ಎಂದು ಅವರು ಒತ್ತಿ ಹೇಳಿದರು.

ಇದೀಗ ಅಗತ್ಯವಿರುವುದು ಯುದ್ಧದಲ್ಲಿರುವ ಎಲ್ಲ ಪಕ್ಷಗಳು ಒಟ್ಟುಗೂಡಿ, “ಇಲ್ಲಿಂದ ಮುಂದೆ ನಾವು ಹೇಗೆ ಸಾಗಬೇಕು?” ಎಂದು ಪ್ರಶ್ನಿಸುವುದೇ ಎಂದು ಬಿಷಪ್ ಬಿಬಿ ಅಭಿಪ್ರಾಯಪಟ್ಟರು.

16 ಏಪ್ರಿಲ್ 2026, 20:11