ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ಯುದ್ಧಗಳನ್ನು ಅಂತ್ಯಗೊಳಿಸಲು ಸಂವಾದಕ್ಕೆ ಜಗದ್ಗುರು ಲಿಯೋರವರ ಮನವಿ ಮಾಡುತ್ತಾರೆ.
ವ್ಯಾಟಿಕನ್ ವರದಿ
ಭಾನುವಾರ ಜಗದ್ಗುರು XIVನೇ ಲಿಯೋರವರು, ಹೆಚ್ಚುತ್ತಿರುವ ರಷ್ಯಾ ದಾಳಿಗಳ ಅಡಿಯಲ್ಲಿ ಇರುವ ಉಕ್ರೇನ್‌ನಲ್ಲಿ ಸಂವಾದದ ಮಾರ್ಗವನ್ನು ಅನುಸರಿಸಬೇಕೆಂದು ತಮ್ಮ ಮನವಿಯನ್ನು ಪುನರುಚ್ಚರಿಸಿದರು. ಹಾಗೆಯೇ ಮಧ್ಯಪ್ರಾಚ್ಯದ ಕುರಿತು ಮಾತನಾಡುತ್ತಾ, ಲೆಬನಾನ್‌ನಲ್ಲಿ ಜಾರಿಗೆ ಬಂದ ಯುದ್ಧ ವಿರಾಮವನ್ನು ನಿರೀಕ್ಷೆಯ ಸಂಕೇತ ಎಂದು ಹೇಳಿದರು.
ದಕ್ಷಿಣ ಆಫ್ರಿಕಾ ಖಂಡದ ರಾಷ್ಟ್ರವಾದ ಆಂಗೋಲಾಕ್ಕೆ ತಮ್ಮ ಭೇಟಿಯ ಎರಡನೇ ದಿನವಾದ ಭಾನುವಾರ, ಲುವಾಂಡಾದ ಕಿಲಾಂಬಾ ಪ್ರದೇಶದಲ್ಲಿ ನಡೆದ ಪವಿತ್ರ ಬಲಿಪೂಜೆಯ ನಂತರದ ರೆಜಿನಾ ಕೋಯೆಲಿ ಭಾಷಣದಲ್ಲಿ ಅವರು ಈ ಮಾತುಗಳನ್ನು ಹೇಳಿದರು.
ಉಕ್ರೇನ್ ಯುದ್ಧಕ್ಕೆ ರಾಜತಾಂತ್ರಿಕ ಪರಿಹಾರದ ಮನವಿ
ಇತ್ತೀಚೆಗೆ ಉಕ್ರೇನ್ ವಿರುದ್ಧದ ದಾಳಿಗಳು ಹೆಚ್ಚುತ್ತಿರುವುದನ್ನು ನಾನು ಆಳವಾದ ವಿಷಾದದಿಂದ ಗಮನಿಸುತ್ತಿದ್ದೇನೆ ಅವು ಇನ್ನೂ ನಾಗರಿಕ ಜನರನ್ನು ಬಾಧಿಸುತ್ತಿವೆ, ಎಂದು ಜಗದ್ಗುರುಗಳು ಹೇಳಿದರು. ದುಃಖ ಅನುಭವಿಸುತ್ತಿರುವ ಎಲ್ಲರಿಗೂ ತಮ್ಮ ಸಮೀಪತೆ ಮತ್ತು ಪ್ರಾರ್ಥನೆಗಳನ್ನು ಅವರು ವ್ಯಕ್ತಪಡಿಸಿದರು.
“ಆಯುಧಗಳು ಮೌನವಾಗಲಿ ಎಂಬುದಾಗಿ ನಾನು ಮತ್ತೆ ಮನವಿ ಮಾಡುತ್ತೇನೆ,” ಎಂದು ಅವರು ಸೇರಿಸಿದರು, ಮತ್ತು ಸಂವಾದದ ಮಾರ್ಗವನ್ನು ಅನುಸರಿಸಬೇಕು ಎಂದರು.
ಕಳೆದ ವಾರದಲ್ಲಿ ರಷ್ಯಾ ಉಕ್ರೇನ್ ಮೇಲೆ ಕಳೆದ ಕೆಲವು ತಿಂಗಳಲ್ಲಿ ಅತಿ ಮಾರಕ ದಾಳಿಗಳನ್ನು ನಡೆಸಿದೆ ಹಲವು ಹಂತಗಳಲ್ಲಿ 700ಕ್ಕೂ ಹೆಚ್ಚು ಡ್ರೋನ್‌ಗಳನ್ನು ಬಳಸಿ, ಒಡೆಸಾ, ಡ್ನಿಪ್ರೊ ಮತ್ತು ಕೀವ್ ನಗರಗಳಲ್ಲಿ ಕನಿಷ್ಠ 18 ಜನರು ಮೃತಪಟ್ಟಿದ್ದಾರೆ. ಕಳೆದ ವಾರಾಂತ್ಯದ ಆರ್ಥೋಡಾಕ್ಸ್ ಪಾಸ್ಖ ಹಬ್ಬದ ಸಮಯದಲ್ಲಿ ಸ್ವಲ್ಪಕಾಲದ ಯುದ್ಧ ವಿರಾಮ ಜಾರಿಯಲ್ಲಿದ್ದರೂ, ಎರಡೂ ಪಕ್ಷಗಳು ಪರಸ್ಪರ ನೂರಾರು ಉಲ್ಲಂಘನೆಗಳ ಆರೋಪಗಳನ್ನು ಮಾಡಿವೆ ಅದಾದ ನಂತರ ದಾಳಿಗಳು ಮತ್ತೆ ತೀವ್ರಗೊಂಡಿವೆ.
ಲೆಬನಾನ್‌ನಲ್ಲಿ ಯುದ್ಧ ವಿರಾಮ — ನಿರೀಕ್ಷೆಯ ಸಂಕೇತ
“ಲೆಬನಾನ್‌ನಲ್ಲಿ ಘೋಷಿಸಲಾದ ಯುದ್ಧ ವಿರಾಮವು ನಿರೀಕ್ಷೆಯ ಸಂಕೇತವಾಗಿದೆ; ಅದು ಲೆಬನಾನ್ ಜನತೆಗೆ ಮತ್ತು ವಿಶಾಲ ಲೆವಾಂಟ್ ಪ್ರದೇಶಕ್ಕೂ ಸ್ವಲ್ಪ ನಿಟ್ಟುಸಿರು ನೀಡುತ್ತದೆ,” ಎಂದು ಜಗದ್ಗುರುಗಳು ಹೇಳಿದರು.
“ರಾಜತಾಂತ್ರಿಕ ಪರಿಹಾರಕ್ಕಾಗಿ ಶ್ರಮಿಸುತ್ತಿರುವ ಎಲ್ಲರನ್ನು ನಾನು ಶಾಂತಿಯ ಮಾರ್ಗದಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತೇನೆ, ಇದರಿಂದ ಮಧ್ಯಪ್ರಾಚ್ಯದಾದ್ಯಂತ ವೈಮನಸ್ಸಿನ ಅಂತ್ಯ ಶಾಶ್ವತವಾಗಬಹುದು,” ಎಂದು ಅವರು ಮನವಿ ಮಾಡಿದರು.
ಅಮೇರಿಕಾ ಅಧ್ಯಕ್ಷರು ಘೋಷಿಸಿದ ನಂತರ, ಇಸ್ರೇಲ್ ಮತ್ತು ಲೆಬನಾನ್ ನಡುವಿನ 10 ದಿನಗಳ ಯುದ್ಧ ವಿರಾಮವು ಗುರುವಾರದಿಂದ ಜಾರಿಗೆ ಬಂದಿದೆ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ನಡೆಸಿದ ದಾಳಿಗಳಿಂದ ಸುಮಾರು 2,000 ಜನರು ಮೃತಪಟ್ಟಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ ಮತ್ತು ದಶಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ.
ಪ್ರಾರ್ಥನೆಯಲ್ಲಿ ಏಕತೆ
ಆಫ್ರಿಕಾ ಖಂಡದ ನಾಲ್ಕು ರಾಷ್ಟ್ರಗಳ ಪ್ರೇಷಿತರ ಯಾತ್ರೆಯ ಮೂರನೇ ಹಂತದಲ್ಲಿ ಆಂಗೋಲಾದಲ್ಲಿರುವ ಜಗದ್ಗುರು ಲಿಯೋರವರು, ಲುವಾಂಡಾದ ಕಿಲಾಂಬಾ ಎಸ್ಪ್ಲನೇಡ್‌ನಲ್ಲಿ ಪವಿತ್ರ ಬಲಿಪೂಜೆಯ ಆಚರಣೆಯನ್ನು ಮುಕ್ತಾಯಗೊಳಿಸಿ, ಭಕ್ತರನ್ನು ತಮ್ಮೊಂದಿಗೆ ಪ್ರಾರ್ಥನೆಗೆ ಆಹ್ವಾನಿಸಿದರು.
ಈ ಸಂತೋಷಭರಿತ ಗೀತೆಯೊಂದಿಗೆ, ನಾವು ದುಃಖದಲ್ಲಿರುವವರ ಕೂಗನ್ನು ಮೌನಗೊಳಿಸಲು ಅಥವಾ ಮುಚ್ಚಿಹಾಕಲು ಬಯಸುವುದಿಲ್ಲ,ಎಂದು ಅವರು ಹೇಳಿದರು, ಬದಲಾಗಿ ಅದನ್ನು ಅಪ್ಪಿಕೊಳ್ಳಲು ಮತ್ತು ನಮ್ಮ ಧ್ವನಿಗಳೊಂದಿಗೆ ಸೇರಿಸಿ ಹೊಸ ಸಂಗತಿಯಲ್ಲಿ ಒಂದಾಗಿಸಲು ಬಯಸುತ್ತೇವೆ. ಹೀಗಾಗಿ ನೋವಿನಲ್ಲಿಯೂ ನಂಬಿಕೆಯ ಬೆಳಕು ಜೀವಂತವಾಗಿರಲಿ ಮತ್ತು ಉತ್ತಮ ಜಗತ್ತಿನ ನಿರೀಕ್ಷೆಯೂ ಉಳಿಯಲಿ ಎಂದು ಹೇಳಿದರು.
ಕ್ರಿಸ್ತನು ಮರಣವನ್ನು ಜಯಿಸಿದ್ದಾರೆ ಎಂದು ಅವರು ಸ್ಮರಿಸಿ, “ಅವರೊಂದಿಗೆ ಮತ್ತು ಅವರಲ್ಲೇ ಒಂದೇ ದೇಹವಾಗಿ ಒಂದಾಗಿರುವ ನಾವು, ಇಂದು ಮತ್ತು ಪ್ರತಿದಿನ ನಮ್ಮ ಸುತ್ತಮುತ್ತ ಪಾಸ್ಖ ಹಬ್ಬದ ಫಲಗಳನ್ನು ಬೆಳೆಸಲು ಪ್ರಯತ್ನಿಸಬೇಕು ಪ್ರೀತಿ, ನಿಜವಾದ ನ್ಯಾಯ ಮತ್ತು ಶಾಂತಿ, ಎಲ್ಲ ಅಡೆತಡೆಗಳನ್ನೂ ಮೀರಿ ಬೆಳೆಯಬೇಕು.
ಯೇಸುವಿನ ತಾಯಿ, ಹೃದಯದ ತಾಯಿ, ತನ್ನ ಪುನರುತ್ಥಾನಗೊಂಡ ಮಗನ ಸಾನ್ನಿಧ್ಯವು ನಮ್ಮೊಳಗೆ ಸದಾ ಜೀವಂತವಾಗಿಯೂ ಬಲವಾಗಿಯೂ ಅನುಭವಿಸಲು ನಮಗೆ ಸಹಾಯಮಾಡಲಿ ಎಂದು ಅವರು ಪ್ರಾರ್ಥಿಸಿದರು.
