Pope Leo XIV visits Angola

ಶಾಂತಿಯನ್ನು ವಾಸ್ತವವನ್ನಾಗಿಸುವುದು: ಜಗದ್ಗುರುಗಳ ಭೇಟಿಯ ಕುರಿತು ಕ್ಯಾಮರೂನ್ ಬಿಷಪ್‌ಗಳ ಅಧ್ಯಕ್ಷರ ಅಭಿಪ್ರಾಯ.

ಕ್ಯಾಮರೂನ್ ಧರ್ಮಾಧ್ಯಕ್ಷೀಯ ಸಮಾವೇಶದ ಅಧ್ಯಕ್ಷರಾದ ಆರ್ಚ್‌ಬಿಷಪ್ ಆಂಡ್ರೂ ಎನ್‌ಕಿಯಾ ಫುವಾನ್ಯಾ ರವರು, ಜಗದ್ಗುರು XIVನೇ ಲಿಯೋರವರ ದೇಶಕ್ಕೆ ನಡೆದ ಪ್ರೇಷಿತರ ಯಾತ್ರೆಯ ಬಗ್ಗೆ ವಾಟಿಕನ್ ನ್ಯೂಸ್‌ಗೆ ಮಾತನಾಡುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಆಫ್ರಿಕಾದ ನಾಲ್ಕು ದೇಶಗಳ ಪ್ರೇಷಿತರ ಯಾತ್ರೆಯ ಎರಡನೇ ಹಂತವನ್ನು ಪೂರ್ಣಗೊಳಿಸಿ ಕ್ಯಾಮರೂನ್‌ನಿಂದ ಹೊರಟಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ದೇಶದ ಆಂಗ್ಲಭಾಷಿಕ ಸಂಘರ್ಷ ಪ್ರದೇಶಗಳಲ್ಲಿ ಶಾಂತಿಯ ಅಗತ್ಯ, ಭ್ರಷ್ಟಾಚಾರವನ್ನು ಎದುರಿಸುವ ಬದ್ಧತೆ ಮತ್ತು ಯುವಜನತೆಗೆ ಭವಿಷ್ಯ ನೀಡುವ ಮಹತ್ವವನ್ನು ಒತ್ತಿ ಹೇಳಿದರು.

ಈ ಸಂದೇಶಗಳು ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬ ಪ್ರಶ್ನೆಗೆ ಬಮೆಂಡಾ ಮಹಾಧರ್ಮಾಧ್ಯಕ್ಷ ಹಾಗೂ ಕ್ಯಾಮರೂನ್ ಧರ್ಮಾಧ್ಯಕ್ಷೀಯ ಸಮಾವೇಶದ ಅಧ್ಯಕ್ಷರಾದ ಆರ್ಚ್‌ಬಿಷಪ್ ಆಂಡ್ರೂ ಎನ್‌ಕಿಯಾ ಫುವಾನ್ಯಾ ಪ್ರತಿಕ್ರಿಯಿಸಿದರು. “ಜಗದ್ಗುರುಗಳು  ಮಾತನಾಡಿದ್ದಾರೆ, ನಾವು ಎಲ್ಲರೂ ಚಪ್ಪಾಳೆ ತಟ್ಟಿದ್ದೇವೆ, ಸಂತೋಷಪಟ್ಟಿದ್ದೇವೆ. ಆದರೆ ಮುಂದೇನು?” ಎಂಬ ಪ್ರಶ್ನೆಯೇ ಮುಖ್ಯ ಎಂದು ಅವರು ಹೇಳಿದರು.

ಆರ್ಚ್‌ಬಿಷಪ್ ರವರ ಪ್ರಕಾರ, ಭರವಸೆಯ ಸೂಚನೆಗಳು ಈಗಾಗಲೇ ಕಾಣಿಸುತ್ತಿವೆ. ವಿಶೇಷವಾಗಿ ಸಂಘರ್ಷಪೀಡಿತ ಆಂಗ್ಲಭಾಷಿಕ ಪ್ರದೇಶಗಳಲ್ಲಿ ಜಗದ್ಗುರುಗಳ ಭೇಟಿ ಜನಜೀವನಕ್ಕೆ ಹೊಸ ಚೈತನ್ಯ ತಂದಿದ್ದು, ದಶಕದ ನಂತರ ಮೊದಲ ಬಾರಿಗೆ ಸರ್ಕಾರ ಮತ್ತು ವಿಭಜನೆಪರ ಗುಂಪುಗಳು ಒಂದೇ ರೀತಿಯ ಮಾತುಗಳನ್ನು ಆಡುತ್ತಿರುವುದು ಗಮನಾರ್ಹವಾಗಿದೆ. ಜಗದ್ಗುರಗಳ ಭೇಟಿ ಮಹತ್ತರ ಆಶೀರ್ವಾದವಾಗಿದೆ ಮತ್ತು ಶಾಂತಿಯ ಲಕ್ಷಣಗಳು ಈಗಾಗಲೇ ಕಾಣಿಸುತ್ತಿವೆ ಎಂದು ಅವರು ಹೇಳಿದರು.

ಕ್ಯಾಮರೂನ್ ಜನರಿಗೆ ಇದು ಅಪರೂಪದ ಅವಕಾಶವಾಗಿದ್ದು, ಜಗದ್ಗುರುಗಳ ಸ್ವಾಗತಕ್ಕೆ ಜನರು ಅಪಾರ ಸಂತೋಷದಿಂದ ಮುಂದಾದರು. ಎಲ್ಲೆಡೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರುವುದು ವಿಶೇಷ. ಹವಾಮಾನವೂ ಅನುಕೂಲಕರವಾಗಿದ್ದು, ದೇವರ ಆಶೀರ್ವಾದವೇ ಈ ಭೇಟಿಯ ಯಶಸ್ಸಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.

ಬಮೆಂಡಾ ನಗರಕ್ಕೆ ಜಗದ್ಗುರುಗಳು ಭೇಟಿ ನೀಡಿರುವುದು ವಿಶೇಷ ಮಹತ್ವದ್ದಾಗಿದೆ. ಕಳೆದ ಎಂಟು ವರ್ಷಗಳಿಂದ ಅಶಾಂತಿ, ಮೂಲಸೌಕರ್ಯಗಳ ಹಿನ್ನಡೆ ಮತ್ತು ನಿರಂತರ ಭೀತಿಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದರು. ಜಗದ್ಗುರಗಳ ಆಗಮನದಿಂದ ವಿಮಾನ ನಿಲ್ದಾಣ ಪುನಃ ಕಾರ್ಯನಿರ್ವಹಿಸಲು ಆರಂಭಿಸಿದ್ದು, ರಸ್ತೆ ಮತ್ತು ಮೂಲಸೌಕರ್ಯಗಳಲ್ಲಿ ಸುಧಾರಣೆ ಕಂಡುಬಂದಿರುವುದು ಜನರಿಗೆ ಹೊಸ ಭರವಸೆಯನ್ನು ತಂದಿದೆ.

ಯುವಜನರ ಸಮಸ್ಯೆಗಳ ಕುರಿತು ಮಾತನಾಡಿದ ಆರ್ಚ್‌ಬಿಷಪ್, ನಿರುದ್ಯೋಗ ಮತ್ತು ವಲಸೆ ಪ್ರಮುಖ ಸವಾಲುಗಳೆಂದು ಹೇಳಿದರು. ಉತ್ತಮ ವಿದ್ಯಾರ್ಹತೆ ಹೊಂದಿದರೂ ಉದ್ಯೋಗದ ಕೊರತೆಯಿಂದ ಯುವಕರು ವಿದೇಶಗಳಿಗೆ ಅಪಾಯಕರ ಮಾರ್ಗಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಯುವಜನರಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯವೆಂದು ಜಗದ್ಗುರುಗಳು ನೀಡಿದ ಸಂದೇಶ ಸಮಯೋಚಿತವಾಗಿದೆ.

ಅಧಿಕಾರದಲ್ಲಿರುವವರು ಸಾಮಾನ್ಯ ಜನರ ಹಿತವನ್ನು ಮರೆಯಬಾರದು ಎಂಬ ಜಗದ್ಗುರುಗಳ ಕರೆಗೂ ಮಹತ್ವವಿದೆ. ದೇಶದ ಸಂಪತ್ತನ್ನು ಸಮಾನವಾಗಿ ಹಂಚಿಕೊಳ್ಳುವುದು ಹಾಗೂ ಸಾಮೂಹಿಕ ಹಿತವನ್ನು ಮುಖ್ಯ ತತ್ವವನ್ನಾಗಿ ಪರಿಗಣಿಸುವುದು ಅಭಿವೃದ್ಧಿಗೆ ಅಗತ್ಯ. ಇಲ್ಲವಾದರೆ ಅಸಮಾನತೆ ಮತ್ತು ಅಶಾಂತಿ ಹೆಚ್ಚಾಗುವ ಸಾಧ್ಯತೆ ಇದೆ.

ಜಗದ್ಗುರಗಳ ಸಂದೇಶಗಳು ಕಾರ್ಯರೂಪಕ್ಕೆ ಬರಬೇಕಾದರೆ, ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಶಾಂತಿ ಈಗಲೇ ಸಾಧ್ಯ ಎಂಬ ಸಂದೇಶವನ್ನು ಆಧರಿಸಿ, ಸರ್ಕಾರ, ಧರ್ಮ ಸಭೆ ಮತ್ತು ನಾಗರಿಕ ಸಮಾಜ ಒಟ್ಟಾಗಿ ಸಂವಾದ ಮತ್ತು ಸಮನ್ವಯದ ಮೂಲಕ ಶಾಶ್ವತ ಶಾಂತಿಯನ್ನು ಸ್ಥಾಪಿಸಬೇಕು. ಜಗದ್ಗುರುಗಳು ಭೇಟಿ ಈಗಾಗಲೇ ಫಲ ನೀಡಲು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಶಾಂತಿಯುತ ಭವಿಷ್ಯಕ್ಕಾಗಿ ಇದು ಬಲವಾದ ನೆಲೆಯನ್ನು ನಿರ್ಮಿಸಲಿದೆ.

18 ಏಪ್ರಿಲ್ 2026, 14:36