ಹುಡುಕಿ

ಏಪ್ರಿಲ್ 22ರಂದು, ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯಾದ ಬಾಟಾ ಕಾರಾಗೃಹದಲ್ಲಿನ ಕೈದಿಗಳನ್ನು ಭೇಟಿ ಮಾಡುತ್ತಾರೆ. ಏಪ್ರಿಲ್ 22ರಂದು, ಜಗದ್ಗುರು XIVನೇ ಲಿಯೋರವರು ಇಕ್ವೇಟೋರಿಯಲ್ ಗಿನಿಯಾದ ಬಾಟಾ ಕಾರಾಗೃಹದಲ್ಲಿನ ಕೈದಿಗಳನ್ನು ಭೇಟಿ ಮಾಡುತ್ತಾರೆ.  (ANSA)

ಬಾಟಾ ಕಾರಾಗೃಹದೊಳಗೆ ಮಳೆಯಿಂದ ನೆನೆದ ಕರುಣೆಯ ಸಂದೇಶ

ಆಫ್ರಿಕಾದಲ್ಲಿ ತನ್ನ ಕೊನೆಯ ಪೂರ್ಣ ದಿನದಲ್ಲಿ, ಜಗದ್ಗುರು XIVನೇ ಲಿಯೋರವರು ಬಾಟಾಗೆ ಪ್ರಯಾಣ ಮಾಡಿ, ಅಲ್ಲಿ ನಗರದ ಕಾರಾಗೃಹದಲ್ಲಿರುವ ಕೈದಿಗಳೊಂದಿಗೆ ಮನಮುಟ್ಟುವ ಭೇಟಿಯನ್ನು ನಡೆಸಿದರು.

ವ್ಯಾಟಿಕನ್ ವರದಿ

2024 ಏಪ್ರಿಲ್ 22ರಂದು ಇಕ್ವೇಟೋರಿಯಲ್ ಗಿನಿಯಾದ ಬಾಟಾ ಕಾರಾಗೃಹದಲ್ಲಿ ಜಗದ್ಗುರು XIVನೇ ಲಿಯೋರವರನ್ನು ಎದುರುಗೊಳ್ಳಲು ಒಂದು ವಿಶಿಷ್ಟ ದೃಶ್ಯ ಕಾದಿತ್ತು ನೂರಾರು ಪುರುಷರು ಮತ್ತು ಮಹಿಳೆಯರು ಶಾಂತವಾಗಿ ಸರಿಯಾದ ಸಾಲುಗಳಲ್ಲಿ ನಿಂತಿದ್ದರು ಅವರ ತಲೆಕೂದಲುಗಳನ್ನು ಕತ್ತರಿಸಲಾಗಿತ್ತು. ಅವರ ಕೈಗಳಲ್ಲಿ ವಾಟಿಕನ್ ಧ್ವಜಗಳು ಮತ್ತು ಜಗದ್ಗುರುಗಳ ಚಿತ್ರಗಳಿರುವ ಧ್ವಜಗಳು ಲಂಬವಾಗಿ ಹಿಡಿದಿದ್ದವು. ಕೆಲವರು ಆಲಿವ್-ಹಸಿರು ಬಣ್ಣದ ಕಾರಾಗೃಹ ಉಡುಪುಗಳನ್ನು ಧರಿಸಿದ್ದರೆ, ಇನ್ನು ಕೆಲವರು ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಉಡುಪುಗಳನ್ನು ಧರಿಸಿದ್ದರು. ಅವರ ಕಾಲುಗಳಲ್ಲಿ ಅದೇ ಬಣ್ಣದ ರಬ್ಬರ್ ಚಪ್ಪಲಿಗಳನ್ನು ಧರಿಸಿದ್ದರು.

ಅವರು ಎಲ್ಲರೂ ಶಾಂತವಾಗಿ ನಿಂತು, ಜಗದ್ಗುರುಗಳನ್ನು ಸ್ವಾಗತಿಸಲು ಸಿದ್ಧವಾಗಿದ್ದ ಸಣ್ಣ ವೇದಿಕೆಯ ಕಡೆಗೆ ಮುಖಮಾಡಿದ್ದರು. ಜಗದ್ಗುರುಗಳು ಒಳಗೆ ಪ್ರವೇಶಿಸುತ್ತಿದ್ದಂತೆಯೇ, ಎಲ್ಲಾ ಕೈದಿಗಳು ಹಾಡುತ್ತಾ ನೃತ್ಯ ಮಾಡಲು ಪ್ರಾರಂಭಿಸಿದರು. ಅವರ ಕೈಯಲ್ಲಿದ್ದ ಧ್ವಜಗಳು ಈಗ ಸಡಿಲವಾಗಿ ಇರದೇ, ಉತ್ಸಾಹದಿಂದ ತಲೆಯ ಮೇಲೆ ಬೀಸಲು ಆರಂಭಿಸಿದವು. ಚತುಷ್ಕೋನ ಆವರಣದ ಎತ್ತರದ ಕಾಂಕ್ರೀಟ್ ಗೋಡೆಗಳು ಅವರ ಸಮನ್ವಯಿತ ಸ್ವಾಗತದ ಶಬ್ದವನ್ನು ಮತ್ತಷ್ಟು ಘೋಷಗೊಳಿಸಿದವು. “ನಮ್ಮ ಜಗದ್ಗುರು, ನಿಮಗೆ ಧನ್ಯವಾದಗಳು. ನಮ್ಮ ಪಾಪಗಳಿಗೂ ನಮ್ಮ ಸ್ವಾತಂತ್ರ್ಯಕ್ಕೂ ಪ್ರಾರ್ಥಿಸಿರಿ,” ಎಂದು ಅವರು ಹಾಡಿದರು.

ಜಗದ್ಗುರು ಈ ದೃಶ್ಯವನ್ನು ಗಮನದಿಂದ ವೀಕ್ಷಿಸಿ, ಕೈದಿಗಳು ತಮ್ಮ ಹಾಡನ್ನು ಮುಗಿಸುವವರೆಗೆ ಕಾದರು. ನಂತರ ಶಿಕ್ಷೆಯನ್ನು ಅನುಭವಿಸುತ್ತಿದ್ದ ಕೆಲವರ ಸಾಕ್ಷ್ಯಗಳನ್ನು ಅವರು ಆಲಿಸಿದರು ಅವರು ಜಗದ್ಗುರುಗಳ ಭೇಟಿಗಾಗಿ ಕೃತಜ್ಞತೆ ವ್ಯಕ್ತಪಡಿಸಿ, ಶಾಂತಿ, ಸೌಹಾರ್ದತೆ ಮತ್ತು ಹೊಸ ಆರಂಭಕ್ಕಾಗಿ ತಮ್ಮ ಭರವಸೆಯನ್ನು ಹಂಚಿಕೊಂಡರು.

ಜಗದ್ಗುರುಗಳು ಮಾತನಾಡಲು ಸಿದ್ಧರಾಗುತ್ತಿದ್ದಂತೆಯೇ ಮಳೆ ಆರಂಭವಾಯಿತು. ಮೊದಲಿಗೆ ಅದು ಸಣ್ಣ ಮಳೆಯಾಗಿದ್ದರೂ, ಕೆಲವೇ ನಿಮಿಷಗಳಲ್ಲಿ ಭಾರೀ ಮಳೆಯಾಗಿ ಮಾರ್ಪಟ್ಟಿತು. ಪತ್ರಕರ್ತರು ತಮ್ಮ ಛತ್ರಿಗಳನ್ನು ತೆರೆಯಲು ಪ್ರಯತ್ನಿಸಿದರೂ, ತಕ್ಷಣವೇ ಆಶ್ರಯಕ್ಕಾಗಿ ಓಡಿಹೋದರು. ಆದರೆ ಕೈದಿಗಳು ತಮ್ಮ ಸ್ಥಾನವನ್ನು ಬಿಟ್ಟಿಲ್ಲ. ಅವರಿಗೆ ಛತ್ರಿಗಳು ಇರಲಿಲ್ಲ ಮಳೆಯಿಂದ ತಪ್ಪಿಸಿಕೊಳ್ಳಲು ಅವಕಾಶವೂ ಇರಲಿಲ್ಲ. ಅವರು ಸರಿಯಾದ ಸಾಲುಗಳಲ್ಲಿ ನಿಂತು, ಜಗದ್ಗುರುಗಳ ಮಾತನಾಡುವಾಗ ಅವರತ್ತ ಕಣ್ಣು ನೆಟ್ಟಿದ್ದರು.

ಕೆಲವು ಸ್ಥಳಗಳಲ್ಲಿ ಮಳೆಯು ದೇವರ ಆಶೀರ್ವಾದದ ಸಂಕೇತವೆಂದು ಹೇಳುತ್ತಾರೆ, ಎಂದು ಜಗದ್ಗುರುಗಳು ಹೇಳಿದರು. “ಇದು ನಿಜವಾಗಿಯೂ ಹಾಗೆಯೇ ಆಗಲಿ ಎಂದು ನಾವು ಪ್ರಾರ್ಥಿಸೋಣ. ಇದನ್ನು ದೇವರು ನಮ್ಮನ್ನು ಎಂದಿಗೂ ಬಿಟ್ಟುಹೋಗುವುದಿಲ್ಲ ಎಂಬ ಸಮೀಪತೆಯ ಸಂಕೇತವಾಗಿಯೂ ಅನುಭವಿಸೋಣ ಎಂದರು. ನಂತರ ಅವರು ಕೈದಿಗಳಿಗೆ ಒಂದು ಸರಳ ಸಂದೇಶ ನೀಡಿದರು: “ದೇವರ ಪ್ರೀತಿಯಿಂದ ಯಾರೂ ಹೊರತಾಗಿಲ್ಲ!”ಎಂದು.

ಅವರು, ಕಾರಾಗೃಹದಲ್ಲಿರುವವರಿಗೆ ಶಿಕ್ಷಣ ಪಡೆಯಲು ಮತ್ತು ಗೌರವಯುತವಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ಹೇಳಿದರು. ಜೀವನವು ಕೇವಲ ನಮ್ಮ ತಪ್ಪುಗಳಿಂದ ಮಾತ್ರ ನಿರ್ಧಾರವಾಗುವುದಿಲ್ಲ, ಎಂದರು.“ನಾವು ಮತ್ತೆ ಪ್ರಾರಂಭಿಸಬಹುದು, ಕಲಿಯಬಹುದು ಮತ್ತು ಹೊಸ ವ್ಯಕ್ತಿಯಾಗಬಹುದು” ಎಂಬ ಭರವಸೆಯನ್ನು ಅವರು ಒತ್ತಿಹೇಳಿದರು.

ಜಗದ್ಗುರುಗಳು ಮಾತುಗಳ ನಂತರ, ಭಾರೀ ಚಪ್ಪಾಳೆ ಮತ್ತು ಹರ್ಷೋದ್ಗಾರಗಳ ನಡುವೆ, ಕೈದಿಗಳು ತಮ್ಮಿಂದಲೇ ತಯಾರಿಸಿದ ಮರದ ಶಿಲುಬೆಯನ್ನು ಜಗದ್ಗುರುಗಳಿಗೆ ಉಡುಗೊರೆಯಾಗಿ ನೀಡಿದರು. ಜಗದ್ಗುರುಗಳು ಅದನ್ನು ಎಲ್ಲರಿಗೂ ಕಾಣುವಂತೆ ಎತ್ತಿ ಹಿಡಿದಾಗ, ಸಂಭ್ರಮದ ಘೋಷಣೆ ಮತ್ತಷ್ಟು ಜೋರಾಯಿತು. ನಂತರ ಅವರು ತಂದಿದ್ದ ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಮೂರ್ತಿಯನ್ನು ಕೈದಿಗಳಿಗೆ ತೋರಿಸಿದರು.

ಈ ಉಡುಗೊರೆ ವಿಶೇಷ ಅರ್ಥವನ್ನು ಹೊಂದಿತ್ತು. ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರ ಆತ್ಮೀಯ ಜೀವನದಲ್ಲಿ ಮಹತ್ವದ ತಿರುವು, ಅಸ್ಸಿಸಿ ಮತ್ತು ಪೆರೂಜಿಯಾ ನಡುವಿನ ಯುದ್ಧದ ನಂತರ ಕಾರಾಗೃಹದಲ್ಲಿದ್ದ ಅವಧಿಯಲ್ಲಿ ಉಂಟಾಯಿತು. ಆ ಏಕಾಂತ ಮತ್ತು ಪರೀಕ್ಷೆಗಳ ಕಾಲವು ಅವರನ್ನು ಪರಿವರ್ತನೆಯ ದಾರಿಗೆ ಕೊಂಡೊಯಿತು ಮತ್ತು ಸುವಾರ್ತೆಯ ಆನಂದದತ್ತ ನಡೆಸಿತು, ನಿಜವಾದ ಶಾಂತಿ ಹೃದಯದ ಆಳವಾದ ಪರಿವರ್ತನೆಯಿಂದ ಬರುತ್ತದೆ ಎಂಬುದನ್ನು ತೋರಿಸಿತು.

ಜಗದ್ಗುರುಗಳ ವಿದಾಯದ ಕ್ಷಣವೂ ಅದ್ಭುತವಾಗಿತ್ತು. ಸಾಮಾನ್ಯ ದಿನದಲ್ಲಿ, ಈ ದೃಶ್ಯವು ಕಾರಾಗೃಹದ ಗದ್ದಲದಂತೆ ಕಾಣಬಹುದಿತ್ತು  ಕೈದಿಗಳು ತಮ್ಮ ಸಾಲುಗಳನ್ನು ಮುರಿದು, ಹೊರಬಾಗಿಲಿನ ಕಡೆಗೆ ಓಡುತ್ತಾ, ಮಳೆಯ ಗದ್ದಲದ ನಡುವೆ ಕೂಗುತ್ತಿದ್ದಂತೆ. ಆದರೆ ಇದು ಸಾಮಾನ್ಯ ದಿನವಾಗಿರಲಿಲ್ಲ. ಅವರು ಅರಾಜಕತೆಯನ್ನು ಸೃಷ್ಟಿಸುತ್ತಿರಲಿಲ್ಲ ಬದಲಾಗಿ, ಅವರು ಕಳೆದುಕೊಂಡ ಸ್ವಾತಂತ್ರ್ಯದ ಮೇಲಿನ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಿದ್ದರು, ಸಂಕೀರ್ಣ ಮತ್ತು ಕಷ್ಟಕರ ಪರಿಸ್ಥಿತಿಗಳ ಕಾರಣದಿಂದ ಹಲವರು ಅದನ್ನು ಕಳೆದುಕೊಂಡಿದ್ದರು.

ಬಹುಶಃ ಆ ಕ್ಷಣಗಳಲ್ಲಿ ಅವರು ಆ ಕಳೆದುಹೋದ ಸ್ವಾತಂತ್ರ್ಯದ ಒಂದು ಭಾಗವನ್ನು ಅನುಭವಿಸಿದ್ದಿರಬಹುದು  ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹಾಡುತ್ತಾ, ನೃತ್ಯ ಮಾಡುತ್ತಾ, ಶಾಂತಿಯ ಸಂದೇಶವಾಹಕರೊಂದಿಗೆ ಪ್ರಾರ್ಥಿಸುತ್ತಿದ್ದರು.

22 ಏಪ್ರಿಲ್ 2026, 22:02