ಜಗದ್ಗುರು XIVನೇ ಲಿಯೋರವರು ತಮ್ಮ ಪ್ರಯಾಣದ ಮೂರನೇ ಹಂತಕ್ಕಾಗಿ ಅಂಗೋಲಾದಲ್ಲಿ ಇಳಿದರು.
ವ್ಯಾಟಿಕನ್ ವರದಿ
ಕ್ಯಾಮರೂನ್‌ನಲ್ಲಿ ನಾಲ್ಕು ದಿನಗಳನ್ನು ಕಳೆದ ನಂತರ, ಜಗದ್ಗುರು ಲಿಯೋರವರು ಸ್ಥಳೀಯ ಸಮಯದ ಮಧ್ಯಾಹ್ನ 3 ಗಂಟೆಗೆ ಮುನ್ನ ಲುವಾಂಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಅಂಗೋಲಾಕ್ಕೆ ಆಗಮಿಸಿದ್ದಾರೆ.
ಅವರು ಮುಂದಿನ ಮೂರು ದಿನಗಳನ್ನು ಅಂಗೋಲಾದಲ್ಲಿ ಕಳೆದ ಬಳಿಕ, ತಮ್ಮ ಪ್ರಯಾಣದ ನಾಲ್ಕನೇ ಮತ್ತು ಅಂತಿಮ ಗುರಿಯಾದ ಈಕ್ವಟೋರಿಯಲ್ ಗಿನಿಯಾಗೆ ತೆರಳಲಿದ್ದಾರೆ.
ಲುವಾಂಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಅಂಗೋಲಾದ ಅಧ್ಯಕ್ಷರಾದ ಜೋವೊ ಮ್ಯಾನುಯೆಲ್ ಗೊನ್ಸಾಲ್ವಿಸ್ ಲೊರೆನ್ಸೊ ರವರು ಜಗದ್ಗುರುಗಳನ್ನು ಸ್ವಾಗತಿಸಿದರು. ಜೊತೆಗೆ, ಇಬ್ಬರು ಮಕ್ಕಳು ಅವರಿಗೆ ಹೂಗುಚ್ಛಗಳನ್ನು ನೀಡಿದರು.
ಭಾನುವಾರ, ಜಗದ್ಗುರು XIVನೇ ಲಿಯೋರವರು ಕಿಲಾಂಬಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿ, ನಂತರ ಮುಕ್ಸಿಮಾ ಪವಿತ್ರ ತೀರ್ಥಕ್ಷೇತ್ರಕ್ಕೆ ತೆರಳಿ, ಅಲ್ಲಿ ಜಪಮಾಲೆಯನ್ನು ನೇತೃತ್ವವಹಿಸಿ ವಿಶ್ವಾಸಿಗಳೊಂದಿಗೆ ಪ್ರಾರ್ಥನೆ ನಡೆಸಲಿದ್ದಾರೆ.
ಸೋಮವಾರ, ಅವರು ಸೌರಿಮೋಗೆ ತೆರಳಿ ವೃದ್ಧರನ್ನು ಭೇಟಿ ಮಾಡಿ, ಪವಿತ್ರ ಬಲಿಪೂಜೆಯನ್ನು ಆಚರಿಸಿದ ಬಳಿಕ ಲುವಾಂಡಾಕ್ಕೆ ಮರಳಿ, ಅಂಗೋಲಾ ಭೇಟಿಯನ್ನು ಮುಕ್ತಾಯಗೊಳಿಸಲಿದ್ದಾರೆ.
ಮಂಗಳವಾರ ಬೆಳಿಗ್ಗೆ, ಅವರು ತಮ್ಮ ಪ್ರೇಷಿತರ ಪ್ರಯಾಣದ ಅಂತಿಮ ಹಂತವಾಗಿ ಈಕ್ವಟೋರಿಯಲ್ ಗಿನಿಯಾಗೆ ಹೊರಡಲಿದ್ದಾರೆ.
