ಜಗದ್ಗುರುಗಳು: ಎಲ್ಲರನ್ನು ಸೌಹಾರ್ದದಲ್ಲಿ ಶಿಕ್ಷಣ ನೀಡುವ ಮೂಲಕ ಹೊಂದಾಣಿಕೆಯ ಸ್ಮೃತಿಯನ್ನು ಉತ್ತೇಜಿಸಿ
ವ್ಯಾಟಿಕನ್ ವರದಿ
ಲುವಾಂಡಾದಲ್ಲಿರುವ “ಅವರ್ ಲೇಡಿ ಆಫ್ ಫಾತಿಮಾ” ಧರ್ಮ ಕೇಂದ್ರದಲ್ಲಿ ಸೋಮವಾರ ನೀಡಿದ ಭಾಷಣದಲ್ಲಿ ಜಗದ್ಗುರು XIVನೇ ಲಿಯೋರವರು, ಸ್ವತಂತ್ರ, ಹೊಂದಾಣಿಕೆಯ, ಸುಂದರ ಮತ್ತು ಮಹಾನ್ ಅಂಗೋಲಾ ಸಮಾಜವನ್ನು ನಿರ್ಮಿಸುವುದು ಸ್ಥಳೀಯ ಧರ್ಮ ಸಭೆಗೆ ನೀಡಲ್ಪಟ್ಟ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಬಿಷಪ್‌ಗಳು, ಯಾಜಕರು, ಉಪಯಾಜಕರು, ಧಾರ್ಮಿಕ ಜೀವನಕ್ಕೆ ಸಮರ್ಪಿತರಾದವರು, ಧರ್ಮೋಪದೇಶಕರು ಹಾಗೂ ಪಾಸ್ಟರಲ್ ಕಾರ್ಯಕರ್ತರನ್ನು ಭೇಟಿಯಾದರು. ಸೌರಿಮೊ ಭೇಟಿ ಬಳಿಕ ಅವರು ಇಲ್ಲಿಗೆ ಆಗಮಿಸಿದ್ದರು. ನಿನ್ನೆ ಕಿಂಬಾಲಾದಲ್ಲಿ ಧರ್ಮ ಸಭೆಯು ತನ್ನ ಮಕ್ಕಳ ಆಕ್ರಂದನವನ್ನು ಕೇಳುತ್ತಿರಬೇಕೆಂದು ಹೇಳಿದ್ದ ಜಗದ್ಗುರುಗಳು, ಇಂದು ಅನ್ಯಾಯವನ್ನು ಖಂಡಿಸಲು, ಹೊಂದಾಣಿಕೆಯ ಸ್ಮೃತಿಯನ್ನು ಉತ್ತೇಜಿಸಲು ಮತ್ತು ಸೌಹಾರ್ದದಲ್ಲಿ ಶಿಕ್ಷಣವನ್ನು ಬೆಳೆಸಲು ಕರೆ ನೀಡಿದರು.
1960ರ ದಶಕದಲ್ಲಿ ಕಾಪುಚಿನ್ ಧರ್ಮಗುರುಗಳಿಂದ ನಿರ್ಮಿತವಾದ ಈ ಧರ್ಮ ಕೇಂದ್ರ, ಫಾತಿಮಾ ನಗರದಿಂದ ತರಲಾದ ಕಲ್ಲಿನಿಂದ ಸ್ಥಾಪಿತವಾಗಿದೆ. ಈ ಸ್ಥಳದಲ್ಲಿ ಜಗದ್ಗುರುಗಳು, ಹಿಂಸೆಯ ನಡುವೆ ಶಾಂತಿಯನ್ನು ಬಿತ್ತಿದ ಧೈರ್ಯಶಾಲಿ ಧರ್ಮ ಸಭೆಯ ಸುವಾರ್ತಾ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ಸೌರಿಮೊದ ಆರ್ಚ್‌ಬಿಷಪ್ ಜೋಸೆ ಮನುವೆಲ್ ಇಂಬಾಂಬಾ ಹೇಳಿದಂತೆ, ಈ ಧೈರ್ಯವು ಪೂರ್ವ ಜಗದ್ಗುರುಗಳಾದ ಸಂತ ದ್ವಿತೀಯ ಜಾನ್ ಪಾಲ್ ಮತ್ತು XVIನೇ ಬೆನೆಡಿಕ್ಟ್ ರವರು ನೀಡಿದ ಆದೇಶದ ಮುಂದುವರಿಕೆಯಾಗಿದೆ. ಅಂಗೋಲಾ ಧರ್ಮ ಸಭೆ ಒಂದು ಮಿಷನರಿ ಧರ್ಮ ಸಭೆಯಾಗಿದ್ದು, ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರಯತ್ನಿಸುತ್ತಿದೆ ಮತ್ತು ವಿವಿಧ ಧರ್ಮಗಳೊಂದಿಗೆ ಸಂವಾದವನ್ನು ಆರಂಭಿಸಿದೆ.
ಜಗದ್ಗುರುಗಳು ಯುವಕರಿಗೆ ಕ್ರಿಸ್ತನಿಗೆ ತಮ್ಮ “ಹೌದು” ಅನ್ನು ಪುನರುಚ್ಚರಿಸಲು ಭಯಪಡಬಾರದೆಂದು ಪ್ರೋತ್ಸಾಹಿಸಿದರು. “ನಾಳೆಯನ್ನು ಭಯಪಡಬೇಡಿ ನೀವು ಸಂಪೂರ್ಣವಾಗಿ ಪ್ರಭುವಿಗೆ ಸೇರಿದವರು” ಎಂದು ಅವರು ಹೇಳಿದರು. ಜೊತೆಗೆ, ಧರ್ಮೋಪದೇಶಕರ ಮಹತ್ವವನ್ನು ಅವರು ವಿಶೇಷವಾಗಿ ಒತ್ತಿಹೇಳಿದರು. ವಿಶೇಷವಾಗಿ ಆಫ್ರಿಕಾದಲ್ಲಿ, ಧರ್ಮೋಪದೇಶಕರ ಸೇವೆ ಧರ್ಮ ಸಭೆಯ ಜೀವಾಳವಾಗಿದ್ದು, ವಿಶ್ವದ ಕಥೋಲಿಕ ಸಮುದಾಯಗಳಿಗೆ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು.
ಕ್ರಿಸ್ತನೊಂದಿಗೆ ಏಕತೆಯು ಒಳ್ಳೆಯತನದ ಭರವಸೆಯಾಗಿದೆ ಎಂದು ಜಗದ್ಗುರುಗಳು ತಿಳಿಸಿದರು. ಧರ್ಮ ಸಭೆಯ ಸಾಮಾಜಿಕ ಸೇವೆ “ಪ್ರೇಮದ ನಿಯಮ”ದ ಮೇಲೆ ಆಧಾರಿತವಾಗಿರಬೇಕು ಮತ್ತು ಶಾಂತಿಯ ಸುವಾರ್ತೆಯನ್ನು ನಿರಂತರವಾಗಿ ಸಾರಬೇಕು ಎಂದು ಅವರು ಹೇಳಿದರು.ಧಮ೯ ಸಭೆ ಮುಂದಕ್ಕೆ ಸಾಗಬೇಕಾದ ಮೊದಲ ಮಾರ್ಗ ಕ್ರಿಸ್ತನಿಗೆ ನಿಷ್ಠೆಯಾಗಿದೆ ಎಂದು ಅವರು ಒತ್ತಿಹೇಳಿದರು.
ಜಗದ್ಗುರುಗಳು ಶಿಕ್ಷಣದ ಮಹತ್ವವನ್ನು ಸಹ ವಿವರಿಸಿದರು. ತಪ್ಪು ಸಂದೇಶಗಳು ಸುವಾರ್ತೆಯನ್ನು ವಕ್ರಗೊಳಿಸುವ ಅಪಾಯವಿರುವುದರಿಂದ, ಸರಿಯಾದ ರೂಪುಗೊಳಿಸುವಿಕೆ ಅಗತ್ಯವೆಂದು ಹೇಳಿದರು. ಕಲೆ, ಕ್ರೀಡೆ ಮತ್ತು ಸಾಹಿತ್ಯದ ಮೂಲಕವೂ ಉತ್ತಮ ಶಿಕ್ಷಣ ಸಾಧ್ಯವೆಂದು ಅವರು ಸೂಚಿಸಿದರು. ಜೊತೆಗೆ, ಆಂತರಿಕ ಜೀವನದ ಏಕತೆ ಮತ್ತು ಧ್ಯಾನದ ಮಹತ್ವವನ್ನೂ ಅವರು ನೆನಪಿಸಿದರು.
ಜಗದ್ಗುರುಗಳು ಸಹೋದರತ್ವವನ್ನು ಬೆಳೆಸಲು ಮತ್ತು ಬಡವರ ಕಡೆಗೆ ವಿಶೇಷ ಕಾಳಜಿಯನ್ನು ತೋರುವ ಕರೆ ನೀಡಿದರು. ಅಹಂಕಾರ ಮತ್ತು ಸ್ವಾರ್ಥದಿಂದ ದೂರವಿದ್ದು, ಜನರೊಂದಿಗೆ ನಿಕಟವಾಗಿರಬೇಕೆಂದು ಹೇಳಿದರು. ಕುಟುಂಬವು ನಂಬಿಕೆಯನ್ನು ಹಂಚುವ ಪ್ರಮುಖ ಆಧಾರವಾಗಿದ್ದು, ಧರ್ಮ ಸಭೆ ಎಲ್ಲರಿಗೂ ಸೇವೆ ಸಲ್ಲಿಸಬೇಕೆಂದು ಅವರು ಹೇಳಿದರು.
ಕೊನೆಯಲ್ಲಿ, ಜಗದ್ಗುರುಗಳು ಯುದ್ಧದ ವಿಪತ್ತುಗಳನ್ನು ಖಂಡಿಸಿದ ಧರ್ಮ ಸಭೆಯ ಧೈರ್ಯವನ್ನು ಮೆಚ್ಚಿದರು. “ಈ ಹೊಣೆಗಾರಿಕೆ ಇನ್ನೂ ಮುಗಿದಿಲ್ಲ” ಎಂದು ಅವರು ಹೇಳಿದರು. ಶಾಂತಿಯ ಮಾರ್ಗಗಳಲ್ಲಿ ಎಲ್ಲರಲ್ಲೂ ಶಿಕ್ಷಣ ನೀಡುವ ಮೂಲಕ ಹೊಂದಾಣಿಕೆಯ ಮನೋಭಾವವನ್ನು ಉತ್ತೇಜಿಸಲು ಅವರು ಕರೆ ನೀಡಿದರು. ನೋವುಗಳನ್ನು ಅನುಭವಿಸಿದರೂ ಕ್ಷಮಿಸಲು ಸಾಧ್ಯವಾದವರ ಸಾಕ್ಷಿಯನ್ನು ಗೌರವಿಸಿ, ಅವರೊಂದಿಗೆ ಶಾಂತಿಯನ್ನು ಆಚರಿಸಬೇಕೆಂದು ಅವರು ಹೇಳಿದರು.
