ಹುಡುಕಿ

Il Papa visita la moschea di Algeri, la terza al mondo

ಅಲ್ಜಿರಿಯಾದ ಮಹಾ ಮಸೀದಿಯನ್ನು ಭೇಟಿ ಮಾಡಿದ ಜಗದ್ಗುರುಗಳು, ಪರಸ್ಪರ ಗೌರವ ಮತ್ತು ಶಾಂತಿ ನಿರ್ಮಾಣಕ್ಕೆ ಕರೆ ನೀಡಿದರು.

ಜಗದ್ಗುರು XIVನೇ ಲಿಯೋರವರು ಅಲ್ಜಿರಿಯಾದ ಮಹಾ ಮಸೀದಿಯನ್ನು ಭೇಟಿ ಮಾಡಿ, ಅದನ್ನು ಪ್ರಾರ್ಥನೆ, ಸಂವಾದ ಮತ್ತು ದೇವರ ಅನ್ವೇಷಣೆಗೆ ಪವಿತ್ರ ಸ್ಥಳವೆಂದು ಅದರ ಮಹತ್ವವನ್ನು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಆಫ್ರಿಕಾಕ್ಕೆ ತಮ್ಮ ಪ್ರೇಷಿತರ ಯಾತ್ರೆಯನ್ನು ಅಲ್ಜಿಯರ್ಸ್‌ನ ಮಹಾ ಮಸೀದಿಗೆ ಭೇಟಿ ನೀಡುವುದರಿಂದ ಆರಂಭಿಸಿದರು. ಈ ಸಂದರ್ಭದಲ್ಲಿ ಅವರು ಮಸೀದಿಯ ಆಧ್ಯಾತ್ಮಿಕ ಮಹತ್ವವನ್ನು ಒತ್ತಿಹೇಳಿ, ಕೆಲ ಕ್ಷಣ ಮೌನ ಧ್ಯಾನದಲ್ಲೂ ತೊಡಗಿದರು.

ಮಸೀದಿಯ ರೆಕ್ಟರ್ ಮೊಹಮದ್ ಮಾಮೂನ್ ಅಲ್ ಖಾಸಿಂರವರು ಜಗದ್ಗುರುಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರು ಸಹೋದರತ್ವದ ಸಂದೇಶ ನೀಡಿದಾಗ, ಜಗದ್ಗುರುಗಳು ಧನ್ಯವಾದ ತಿಳಿಸಿ, “ಈ ಸ್ಥಳವು ದೇವರಿಗೆ ಸೇರಿದ ಪವಿತ್ರ ಸ್ಥಳವಾಗಿದ್ದು, ಇಲ್ಲಿ ಅನೇಕರು ಪ್ರಾರ್ಥನೆ ಮಾಡಲು ಮತ್ತು ಪರಮಾತ್ಮನ ಸಾನ್ನಿಧ್ಯವನ್ನು ಅನುಭವಿಸಲು ಬರುತ್ತಾರೆ” ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ಜಗದ್ಗುರುಗಳು, ಸಂತ ಆಗಸ್ಟಿನರ ಮೂಲಕ ಅಲ್ಜೀರಿಯಾದೊಂದಿಗೆ ತಮ್ಮ ಆತ್ಮೀಯ ಸಂಬಂಧವನ್ನು ಸ್ಮರಿಸಿದರು. ಇದು ನನ್ನ ಆತ್ಮೀಯ ತಂದೆಯ ನಾಡು ಎಂದು ಹೇಳಿದ ಅವರು, ಸತ್ಯದ ಹುಡುಕಾಟ, ಪ್ರತಿಯೊಬ್ಬ ಮಾನವನ ಗೌರವವನ್ನು ಗುರುತಿಸುವುದು ಮತ್ತು ಶಾಂತಿಯನ್ನು ನಿರ್ಮಿಸುವ ಜವಾಬ್ದಾರಿ ಎಲ್ಲರಿಗೂ ಸಾಮಾನ್ಯವಾಗಿದೆ ಎಂದು ಹೇಳಿದರು.

“ದೇವರನ್ನು ಹುಡುಕುವುದು ಎಂದರೆ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯಲ್ಲಿ ದೇವರ ಪ್ರತಿರೂಪವನ್ನು ಕಾಣುವುದು” ಎಂದು ಜಗದ್ಗುರುಗಳು ಹೇಳಿದರು. ಈ ಅರಿವು ಪರಸ್ಪರ ಗೌರವ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುತ್ತದೆ ಎಂದು ಅವರು ವಿವರಿಸಿದರು.

ಮಸೀದಿ ಸಂಕೀರ್ಣದ ಧಾರ್ಮಿಕ ಮತ್ತು ಬೌದ್ಧಿಕ ಪಾತ್ರವನ್ನು ಜಗದ್ಗುರುಗಳು ವಿಶೇಷವಾಗಿ ಉಲ್ಲೇಖಿಸಿದರು. ಮಾನವ ಜ್ಞಾನವನ್ನು ವೃದ್ಧಿಪಡಿಸುವುದರಿಂದ ಸೃಷ್ಟಿಯ ಅರ್ಥ ಮತ್ತು ಮಾನವ ಗೌರವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಅಂತಿಮವಾಗಿ, ಅಲ್ಜೀರಿಯಾದ ಜನತೆ ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳಿಗಾಗಿ ಜಗದ್ಗುರುಗಳು ಪ್ರಾರ್ಥನೆ ಸಲ್ಲಿಸಿ, ಶಾಂತಿ, ನ್ಯಾಯ, ಸೌಹಾರ್ದತೆ ಮತ್ತು ಕ್ಷಮೆ ಜನರ ನಡುವೆ ಹೆಚ್ಚಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಅಲ್ಜಿಯರ್ಸ್‌ನ ಮಹಾ ಮಸೀದಿ ವಿಶ್ವದ ಮೂರನೇ ಅತಿ ದೊಡ್ಡ ಮಸೀದಿಯಾಗಿದ್ದು, ಸುಮಾರು 1,20,000 ಭಕ್ತರನ್ನು ಒಂದೇ ಸಮಯದಲ್ಲಿ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ 267 ಮೀಟರ್ ಎತ್ತರದ ಮಿನಾರೇಟ್ ವಿಶ್ವದಲ್ಲೇ ಅತಿ ಎತ್ತರವಾದದ್ದು. ಮಸೀದಿ ಸಂಕೀರ್ಣದಲ್ಲಿ ಗ್ರಂಥಾಲಯ, ಸಂಶೋಧನಾ ಕೇಂದ್ರ, ಸಂಗ್ರಹಾಲಯಗಳು, ಉದ್ಯಾನಗಳು ಮತ್ತು ಇತರೆ ಸೌಲಭ್ಯಗಳಿದ್ದು, ಇದು ಧಾರ್ಮಿಕ ಹಾಗೂ ಸಾಮಾಜಿಕ ಮಹತ್ವದ ಕೇಂದ್ರವಾಗಿದೆ ಎಂದರು.

 

13 ಏಪ್ರಿಲ್ 2026, 18:53