Il Papa, 'la pace � possibile, la storia pu� cambiare'

“ಸಂತ ಆಗಸ್ಟಿನ್ ಬಾಸಿಲಿಕಾದಲ್ಲಿ ನಂಬಿಕೆಯ ಸಂತೋಷಭರಿತ ಸಮಾಗಮ”

ಆಫ್ರಿಕಾದಲ್ಲಿನ ತನ್ನ ಪ್ರೇಷಿತರ ಪ್ರವಾಸದ ಮೊದಲ ಹಂತದ ವೇಳೆ, ಏಪ್ರಿಲ್ 14 ಮಂಗಳವಾರ, ಜಗದ್ಗುರು XIVನೇ ಲಿಯೋರವರೊಂದಿಗೆ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಲು ವಿಶ್ವದ ನಾನಾ ಭಾಗಗಳಿಂದ ಜನರು ಅನ್ನಾಬಾದ ಸಂತ ಆಗಸ್ಟಿನ್ ಬಾಸಿಲಿಕಾದಲ್ಲಿ ಸೇರಿದರು.

ವ್ಯಾಟಿಕನ್ ವರದಿ

ಅಲ್ಜೀರಿಯಾದಲ್ಲಿನ ತನ್ನ ಎರಡನೇ ದಿನವಾದ ಏಪ್ರಿಲ್ 14 ಮಂಗಳವಾರ, ಜಗದ್ಗುರು XIVನೇ ಲಿಯೋರವರೊಂದಿಗೆ ನಡೆದ ಪವಿತ್ರ ಬಲಿಪೂಜೆಗಾಗಿ ಅನ್ನಾಬಾದ ಸಂತ ಆಗಸ್ಟಿನ್ ಬಾಸಿಲಿಕಾ ಜನಸಾಗರದಿಂದ ಕಂಗೊಳಿಸಿತು.

ಟ್ಯುನೀಷಿಯಾ, ಉಗಾಂಡಾ ಹಾಗೂ ದೂರದ ಬ್ರೆಝಿಲ್‌ನಿಂದಲೂ ಸೇರಿದಂತೆ ವಿಶ್ವದ ನಾನಾ ಭಾಗಗಳಿಂದ ಬಂದ ಯಾತ್ರಿಕರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಧಾರ್ಮಿಕ ಪುರುಷರು ಮತ್ತು ಮಹಿಳೆಯರು, ಸಮುದ್ರತೀರದ ಅನ್ನಾಬಾ ನಗರದ ಬೆಟ್ಟದ ಮೇಲಿರುವ ಈ ಧರ್ಮ ಸಭೆಯಲ್ಲಿ ನಡೆದ ಆಚರಣೆಯಲ್ಲಿ ಭಾಗವಹಿಸಲು ಗಾಳಿ ಮತ್ತು ಮಳೆಯನ್ನೂ ಲೆಕ್ಕಿಸದೆ ಆಗಮಿಸಿದರು.

ಈ ಬಾಸಿಲಿಕಾವನ್ನು 1881 ರಿಂದ 1907 ರ ನಡುವೆ ನಿರ್ಮಿಸಲಾಯಿತು. ಅಲ್ಜೀರಿಯಾದ ಆಗಿನ ಮಹಾಧರ್ಮಾಧ್ಯಕ್ಷರಾದ ಮೊಂಡ್ಸಿನ್ಯರ್ ಚಾರ್ಲ್ಸ್-ಮಾರ್ಷಿಯಲ್-ಅಲ್ಲೆಮಾಂಡ್ ಲಾವಿಜೇರಿ ರವರು ಈ ಉದ್ದೇಶಕ್ಕಾಗಿ ಭೂಮಿಯನ್ನು ಖರೀದಿಸಿದ ನಂತರ ಇದರ ನಿರ್ಮಾಣ ಪ್ರಾರಂಭವಾಯಿತು.

ಸ್ನೇಹದ ಬಂಧಗಳನ್ನು ಬಲಪಡಿಸುವುದು

ಜಗದ್ಗುರುಗಳೊಂದಿಗೆ ನಡೆದ ಈ ಧೈವಾರಾಧನೆ ಆಚರಣೆಯಲ್ಲಿ ಭಾಗವಹಿಸಿದ್ದವರಲ್ಲಿ ಉತ್ತರ ಆಫ್ರಿಕಾದ ಆಂಗ್ಲಿಕನ್ ಬಿಷಪ್ ಅಶ್ಲಿ ನಲ್ ಕೂಡ ಇದ್ದರು. ಅವರ ಧರ್ಮಪ್ರಾಂತ್ಯವು ಮೌರಿಟೇನಿಯಾ, ಅಲ್ಜೀರಿಯಾ, ಟ್ಯುನೀಷಿಯಾ, ಲಿಬಿಯಾ ಮತ್ತು ಚಾಡ್ ದೇಶಗಳನ್ನು ಒಳಗೊಂಡಿದೆ. ಆಚರಣೆಗೆ ಮೊದಲು ವಾಟಿಕನ್ ನ್ಯೂಸ್‌ಗೆ ಮಾತನಾಡಿದ ಅವರು, “ಅಲ್ಜೀರಿಯಾದ ನೈಸರ್ಗಿಕ ಸೌಂದರ್ಯಕ್ಕಿಂತಲೂ ಹೆಚ್ಚು ಸುಂದರವಾದದ್ದು ಅಲ್ಲಿನ ಜನರ ಹೃದಯಗಳ ಸೌಂದರ್ಯವೇ” ಎಂದು ಹೇಳಿದರು. ಅಲ್ಜೀರಿಯಾದ ಜನರು ಜಗದ್ಗುರು ಲಿಯೋರವರನ್ನು ತೆರೆದ ಹೃದಯದಿಂದ ಸ್ವಾಗತಿಸಿ, ಅವರಿಗೆ ಆತ್ಮೀಯತೆಯನ್ನು ನೀಡಿದುದು ಮತ್ತು ಅವರ ಶಾಂತಿಯ ಧ್ಯೇಯವನ್ನು ಗೌರವಿಸಿದುದು ಅವರನ್ನು ಮೆಚ್ಚಿಸಿತು.

ಅವರು ಮತ್ತಷ್ಟು ಹೇಳಿದ್ದು ಭಿನ್ನತೆಗಳು, ಕಠಿಣತೆಗಳು ಮತ್ತು ಸಮುದಾಯದ ಭಂಗಗಳಿಂದ ತುಂಬಿರುವ ಜಗತ್ತಿನಲ್ಲಿ, ದೇವರ ರೂಪವನ್ನು ಹೊತ್ತಿರುವ ಪ್ರತಿಯೊಬ್ಬ ಮಾನವನಿಗೂ ಗೌರವ ನೀಡುವತ್ತ ಹಾಗೂ ಪ್ರೀತಿ ಮತ್ತು ಸ್ನೇಹದ ಬಂಧಗಳನ್ನು ಬಲಪಡಿಸುವತ್ತ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಭವಿಷ್ಯದ ಒಳ್ಳೆಯ ಮತ್ತು ಪ್ರಗತಿಶೀಲ ಸಾಧ್ಯತೆಯತ್ತ ಸಾಗುವ ಪ್ರಮುಖ ಹೆಜ್ಜೆಯಾಗಿದೆ.

ದೇವರ ಸಮಸ್ತ ಜನರಿಗಾಗಿ ಪ್ರಾರ್ಥನೆ

ಈ ಬಲಿಪೂಜೆಯಲ್ಲಿ ಸಹಗುರುಗಳಾಗಿ ಉಗಾಂಡಾದ ಮಸಾಕಾ ಧರ್ಮಪ್ರಾಂತ್ಯದ ಮೂವರು ಯಾಜಕರು ಭಾಗವಹಿಸಿದರ ಧರ್ಮ ಕೇಂದ್ರದ ಯಾಜಕರಾದ ವಂ.ಸ್ವಾಮಿ ಜೋಸೆಫ್ ಕಾಮೋಗಾ ಮತ್ತು ವಂ.ಸ್ವಾಮಿ ಜಾನ್ ಮೇರಿ ವಿಯಾನ್ನಿ, ಹಾಗು ಧರ್ಮಪ್ರಾಂತ್ಯದ ಉಪ ಚಾನ್ಸಲರ್ ವಂ. ಸ್ವಾಮಿ ಅಲೆಕ್ಸ್ ಕಿಯಿಂಬಾರವರು ಉಪಸ್ಥಿತರಿದ್ದರು.

ಪೂರ್ವ ಆಫ್ರಿಕದಿಂದ ದೀರ್ಘ ಪ್ರಯಾಣ ಮಾಡಿದರೂ, ಜಗದ್ಗುರುಗಳೊಂದಿಗೆ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು “ಅದ್ಭುತ ಅವಕಾಶ” ಎಂದು ವಂ.ಸ್ವಾಮಿ ಜೋಸೆಫ್ ರವರು ಹೇಳಿದರು ಮತ್ತು ಸಂತ ಅಗಸ್ಟಿನ್ ರವರ ಭೂಮಿಯನ್ನು ಭೇಟಿ ಮಾಡುವ ಅವಕಾಶಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ವಂ. ಸ್ವಾಮಿ ಜಾನ್ ಮೇರಿ ವಿಯಾನ್ನಿ ರವರು ದೇವರ ಸಮಸ್ತ ಜನರಿಗಾಗಿ, ವಿಶೇಷವಾಗಿ ಉಗಾಂಡಾದ ಜನರಿಗಾಗಿ ಪ್ರಾರ್ಥಿಸಲು ಅವರು ಅನ್ನಾಬಾಗೆ ಬಂದಿದ್ದಾರೆ ಎಂದರು. ಅವರ ಮಾತಿಗೆ ಪ್ರತಿಧ್ವನಿಯಾಗಿ, ವಂ.ಸ್ವಾಮಿ ಅಲೆಕ್ಸ್ ಕಿಯಿಂಬಾರವರು ಶಾಂತಿಗಾಗಿ ಹಾಗೂ ಹೃದಯಗಳ ಪರಿವರ್ತನೆಗಾಗಿ ಪ್ರಾರ್ಥನೆಯ ಮಹತ್ವವನ್ನು ಒತ್ತಿಹೇಳಿದರು. ಸಂತ ಆಗಸ್ಟಿನ್ ರವರ ತಾಯಿ ಸಂತ ಮೊನಿಕಾರನ್ನು ಉದಾಹರಿಸಿ, “ಅವರು ತಮ್ಮ ಮಗನಿಗಾಗಿ ಪ್ರಾರ್ಥಿಸಿದರು ಅವರು ಪರಿವರ್ತನೆಗೊಂಡು ಹಿಪ್ಪೋ ನಗರದ ಬಿಷಪ್ ಆಗುವ ಮಟ್ಟಿಗೆ ಸೇವೆ ಸಲ್ಲಿಸಿದರು ಎಂದು ಹೇಳಿದರು. ತಾನೂ ಉತ್ತಮವಾಗಿ ಸೇವೆ ಮಾಡಲು ಮತ್ತು ಜನರು ದೇವರ ಕಡೆ ತಿರುಗುವಂತೆ ಕೃಪೆ ದೊರಕಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಹೇಳಿದರು.

ದೇವರ ಪ್ರೀತಿ ಮುಸ್ಲಿಮರು ಮತ್ತು ಕ್ರೈಸ್ತರನ್ನು ಒಂದಾಗಿಸುತ್ತದೆ

ಬಲಿಪೂಜೆಗೆ ಮುನ್ನ ಅವರ ಪಕ್ಕದಲ್ಲಿ ಕುಳಿತಿದ್ದ ವಂ.ಸ್ವಾಮಿ ರೇಮಂಡ್ ಗೊನ್ನೆಟ್ ರವರು 56 ವರ್ಷಕ್ಕಿಂತ ಹೆಚ್ಚು ಕಾಲ ಅಲ್ಜೀರಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಬಸಿಲಿಕಾಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರು. ಪವಿತ್ರ ಬಲಿಪೂಜೆಗೆ ಸೇರಿದ್ದ ವಿಶಾಲ ಜನಸಮೂಹ ಅವರನ್ನು ಆಶ್ಚರ್ಯಚಕಿತರನ್ನಾಗಿಸಿತು. ಅವರು ವಾಸಿಸುವ ಸಹಾರಾದ ಚಾರ್ಲ್ಸ್ ಡಿ ಫೂಕೋ ಹರ್ಮಿಟೇಜ್‌ನಲ್ಲಿ ಪಾಸ್ಖ ಹಬ್ಬವನ್ನು ಕೇವಲ ಇಬ್ಬರೊಂದಿಗೆ ಆಚರಿಸಲಾಗಿತ್ತು ಎಂದು ಅವರು ಹೇಳಿದರು. ನಮ್ಮನ್ನು ಒಂದಾಗಿಸುವುದು ಕ್ರಿಸ್ತನೇ, ದೇವರ ಪ್ರೀತಿಯೇ ನಮ್ಮನ್ನು ಏಕತೆಯಲ್ಲೂ ಸಹೋದರ ಪ್ರೀತಿಯಲ್ಲೂ ಒಂದಾಗಿಸುತ್ತದೆ ಎಂದು ಅವರು ಹೇಳಿದರು ಮುಸ್ಲಿಮರು ಮತ್ತು ಕ್ರೈಸ್ತರು ಇಬ್ಬರೂ ಕೂಡ ಎಂದು ಹೇಳಿದರು.

ಸಂತ ಆಗಸ್ಟಿನ್ ರವರ ಹೆಜ್ಜೆ ಗುರುತುಗಳಲ್ಲಿ ಯಾತ್ರಿಕರು

ಟ್ಯುನಿಸ್ ಧರ್ಮಪ್ರಾಂತ್ಯದಿಂದ ಬಂದ 20 ಜನರ ಗುಂಪು ಸಂತ ಆಗಸ್ಟಿನ್ ರವರ ಹೆಜ್ಜೆ ಗುರುತುಗಳನ್ನು ಅನುಸರಿಸಲು ಮತ್ತು ಅನ್ನಾಬಾದ ಜಗದ್ಗುರುಗಳ ಬಲಿಪೂಜೆಯಲ್ಲಿ ಭಾಗವಹಿಸಲು ಯಾತ್ರೆ ಮಾಡಿದರು. ಅವರಲ್ಲಿ ಮೇರಿ ಬೌಜಿರ್ ರವರು ಈ ಆಚರಣೆ “ಧಮ೯ಸಭೆಯ ನಂಬಿಕೆಗೂ ಹಾಗೂ ಆಫ್ರಿಕಾದ ನಂಬಿಕೆಗೂ ಅತ್ಯಂತ ಮಹತ್ವದ್ದಾಗಿದೆ” ಎಂದು ಹೇಳಿದರು. ಅವರ ಪಕ್ಕದಲ್ಲಿದ್ದ ಡೊಮ್ನಿನೊ ಮಾರ್ಟಿನೆಸ್ ರವರು ಶತಮಾನಗಳ ಹಿಂದೆ ಸಂತ ಆಗಸ್ಟಿನ್ ನಡೆದ ದಾರಿಯಲ್ಲಿ ನಡೆಯುವ ಅವಕಾಶ ಅಪಾರ ಕೃಪೆ ಎಂದು ಹೇಳಿದರು. ಭಾರೀ ಮಳೆ ಮತ್ತು ನಾಲ್ಕು ಗಂಟೆಗಳ ಬಸ್ ಪ್ರಯಾಣವೂ ಈ ಅನುಭವದ ಮುಂದೆ ಅಲ್ಪವಾಗಿದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಾದ ಥೆರೇಸಾ ಮತ್ತು ರೂತ್ ರವರು ಅಲ್ಜೀರಿಯಾದಲ್ಲಿನ ಈ ಅಪೂರ್ವ ಜಗದ್ಗುರುಗಳ ಭೇಟಿಯ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡರು. ಥೆರೇಸಾರವರು ಇದನ್ನು “ಬಹು ದೊಡ್ಡ ಗೌರವ” ಮತ್ತು “ಆಶೀರ್ವಾದ” ಎಂದು ವಿವರಿಸಿದರೆ, ರೂತ್ “ಇದು ವಿಶೇಷ ದಿನ” ಎಂದು ಹೇಳಿ ತಾನು ಕಥೋಲಿಕ ಎಂಬುದರಲ್ಲಿ ಹೆಮ್ಮೆಪಡುತ್ತಿರುವುದಾಗಿ ತಿಳಿಸಿದರು.

ನಂಬಿಗಸ್ತರಲ್ಲಿದ್ದ ಜಾಕ್ಸನ್ ಸ್ಯಾಂಟೋಸ್ ರವರು ಬ್ರೆಝಿಲ್ ಮೂಲದ ಶಲೋಮ್ ಕಥೋಲಿಕ ಸಮುದಾಯದ ಮಿಷನರಿಯಾಗಿದ್ದು, ಮೂರು ವರ್ಷಗಳಿಂದ ಅಲ್ಜೀರಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬೆಜಾಯಾ ಧರ್ಮ ಕೇಂದ್ರದಲ್ಲಿ ಪ್ರಾರ್ಥನಾ ಕಾರ್ಯಕ್ರಮಗಳು, ದೈವಾರಾಧನೆ ಆಚರಣೆಗಳು ಮತ್ತು ಆಫ್ರಿಕಾದ ವಿದ್ಯಾರ್ಥಿಗಳಿಗೆ ಭಾಷಾ ತರಗತಿಗಳನ್ನು ಆಯೋಜಿಸುತ್ತಿದ್ದಾರೆ. ಜಗದ್ಗುರು ಲಿಯೋರವರ ಭೇಟಿ ಅಲ್ಜೀರಿಯಾದ ಸಣ್ಣ ಕ್ರೈಸ್ತ ಸಮುದಾಯಕ್ಕೆ ದೇವರಿಂದ ದೊರೆತ ಮಹತ್ತರ ಆಶೀರ್ವಾದ ಎಂದು ಅವರು ಹೇಳಿದರು.

ಅನ್ನಾಬಾದ ಸಂತ ಅಗಸ್ಟಿನ್ ಬಸಿಲಿಕಾದಲ್ಲಿ ಜಗದ್ಗುರು XIVನೇ ಲಿಯೋರವರೊಂದಿಗೆ ನಡೆದ ಈ ಆಚರಣೆ ಸಂಸ್ಕೃತಿಗಳ ಮತ್ತು ಪೀಳಿಗೆಗಳ ನಡುವಿನ ಸಂತೋಷಭರಿತ ಹಾಗೂ ಪ್ರಾರ್ಥನಾಮಯ ಸಂಗಮವಾಗಿದ್ದು, ಕ್ರೈಸ್ತಧರ್ಮದ ಮಹಾನ್ ಚಿಂತಕರಲ್ಲಿ ಒಬ್ಬರಾದ ಸಂತ ಆಗಸ್ಟಿನರಿಗೆ ಸಂಬಂಧಿಸಿದ ಮಹತ್ವದ ಸ್ಥಳದಲ್ಲಿ ಯಾತ್ರಿಕರು, ಯಾಜಕರು ಮತ್ತು ವಿದ್ಯಾರ್ಥಿಗಳನ್ನು ಒಂದಾಗಿಸಿತು.

14 ಏಪ್ರಿಲ್ 2026, 17:27