ಅಲ್ಜೀರಿಯಾದಲ್ಲಿನ ಎರಡನೇ ದಿನ: ಸಂತ ಆಗಸ್ಟಿನ್ ರವರ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾ
ವ್ಯಾಟಿಕನ್ ವರದಿ
ಆಫ್ರಿಕಾದ ನಾಲ್ಕು ದೇಶಗಳ ಪ್ರೇಷಿತರ ಪ್ರವಾಸದ ಮೊದಲ ಹಂತವಾದ ಅಲ್ಜೀರಿಯಾದಲ್ಲಿನ ತನ್ನ ಎರಡನೇ ದಿನವನ್ನು ಜಗದ್ಗುರು XIVನೇ ಲಿಯೋರವರು ಪೂರ್ಣಗೊಳಿಸಿದರು.
ಏಪ್ರಿಲ್ 14 ಮಂಗಳವಾರ ಬೆಳಿಗ್ಗೆ, ಅವರು ಅಲ್ಜೀರಿಯಾದಿಂದ ಅನ್ನಾಬಾಕ್ಕೆ ಒಂದು ಗಂಟೆಯ ವಿಮಾನ ಪ್ರಯಾಣ ಮಾಡಿ, ಸಂತ ಆಗಸ್ಟಿನ್ ರವರು 30 ವರ್ಷಕ್ಕಿಂತ ಹೆಚ್ಚು ಕಾಲ ಬಿಷಪ್ ಆಗಿ ಸೇವೆ ಸಲ್ಲಿಸಿದ ಮತ್ತು ಕ್ರಿ.ಶ. 430ರಲ್ಲಿ ನಿಧನರಾದ ಹಿಪ್ಪೋ ಪುರಾತತ್ವ ಸ್ಥಳಕ್ಕೆ ಭೇಟಿ ನೀಡಿದರು. ಶಾಂತಿಯ ಸಂಕೇತವಾಗಿ, ಜಗದ್ಗುರುಗಳು ಅವಶೇಷಗಳ ಪಕ್ಕದಲ್ಲಿ ಆಲಿವ್ ಮರವನ್ನು ನೆಟ್ಟರು.
ನಂತರ ಜಗದ್ಗುರುಗಳು ‘ಲಿಟಲ್ ಸಿಸ್ಟರ್ಸ್ ಆಫ್ ದ ಪೂರು’ ಸಂಘವು ನಡೆಸುತ್ತಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಯುದ್ಧಗಳು, ಹಿಂಸೆ, ಅನ್ಯಾಯ ಮತ್ತು ಸುಳ್ಳುಗಳಿಂದ ದೇವರ ಹೃದಯವೇ ನೋವಿನಿಂದ ಕಂಗೆಟ್ಟಿದೆ ಎಂದು ಹೇಳಿದರು. “ನಮ್ಮ ಪರಲೋಕ ಪಿತನ ಹೃದಯ ದುಷ್ಟರು, ಅಹಂಕಾರಿಗಳು ಅಥವಾ ಗರ್ವಿಷ್ಠರೊಂದಿಗೆ ಇರುವುದಿಲ್ಲ ಎಂದು ಅವರು ಹೇಳಿದರು. ಈ ಭೇಟಿಯ ಸಮಯದಲ್ಲಿ ಶಾಂತಿಯ ವಾತಾವರಣ ನೆಲೆಸಿದ್ದು, ಸಣ್ಣ ಸಮುದಾಯದ ಸದಸ್ಯರು ಜಗದ್ಗುರುಗಳನ್ನು ವೈಯಕ್ತಿಕವಾಗಿ ಭೇಟಿಯಾಗಿ ವಂದಿಸಲು ಅವಕಾಶ ಪಡೆದರು.
ಆ ನಂತರ ಅವರು ತಮ್ಮ ಆಗಸ್ಟಿನಿಯನ್ ಸಹಸಂಘದವರೊಂದಿಗೆ ಖಾಸಗಿ ಸಭೆ ಹಾಗೂ ಊಟವನ್ನು ಹಂಚಿಕೊಂಡರು. ದಿನದ ಸಾರ್ವಜನಿಕ ಕಾರ್ಯಕ್ರಮಗಳನ್ನು ಅವರು ಅನ್ನಾಬಾದ ಸಂತ ಆಗಸ್ಟಿನ್ ಬಸಿಲಿಕಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸುವ ಮೂಲಕ ಮುಕ್ತಾಯಗೊಳಿಸಿದರು. ಈ ಆಚರಣೆಯಲ್ಲಿ ವಿಶ್ವದ ನಾನಾ ಭಾಗಗಳಿಂದ ಜನರು ಸೇರಿಕೊಂಡು, ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿರುವ ಸಣ್ಣ ಕ್ರೈಸ್ತ ಸಮುದಾಯದೊಂದಿಗೆ ಹತ್ತಿರತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದರು.
