Pope Leo XIV visits the Great Mosque Of Algiers

ಕಾರ್ಡಿನಲ್ ಕೂವಕೂಡ್: ಜಗದ್ಗುರುಗಳ ಆಫ್ರಿಕಾ ಭೇಟಿ ಧರ್ಮಗಳು ಶಾಂತಿಯತ್ತ ವಿಶೇಷ ಮಾರ್ಗವೆಂದು ತೋರಿಸುತ್ತದೆ

ಜಗದ್ಗುರು XIVನೇ ಲಿಯೋರವರು ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಇಕ್ವೇಟೋರಿಯಲ್ ಗಿನಿಯಾದ ಪ್ರೇಷಿತರ ಪ್ರಯಾಣವನ್ನು ಸಮಾಪ್ತಿಗೊಳಿಸುತ್ತಿರುವ ಸಂದರ್ಭದಲ್ಲಿ, ಅಂತರಧರ್ಮ ಸಂವಾದದ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಜಾರ್ಜ್ ಕೂವಕೂಡ್, ಜನರ ನಡುವೆ ನ್ಯಾಯ, ಸಾಮಾಜಿಕ ಸ್ಥಿರತೆ ಮತ್ತು ಶಾಂತಿಯುತ ಸಹಜೀವನವನ್ನು ನಿರ್ಮಿಸಲು ಧರ್ಮಗಳ ಪಾತ್ರದ ಕುರಿತು ಜಗದ್ಗುರುಗಳು ನೀಡಿದ ಪ್ರಸ್ತಾವನೆಯನ್ನು ಪರಾಮರ್ಶಿಸುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರ ಪ್ರೇಷಿತರ ಪ್ರಯಾಣದ ಅಂತರಧರ್ಮೀಯ ಕಾರ್ಯಕ್ರಮಗಳು ವಿಶೇಷವಾಗಿ ಅಲ್ಜೀರಿಯಾ ಮತ್ತು ಕ್ಯಾಮರೂನ್‌ನಲ್ಲಿ ಮಹತ್ವ ಪಡೆದುಕೊಂಡವು ಜೊತೆಗೆ ಅಂಗೋಲಾ ಮತ್ತು ಇಕ್ವೇಟೋರಿಯಲ್ ಗಿನಿಯಾದಲ್ಲಿ ಅವರು ಅಧಿಕಾರಿಗಳು ಮತ್ತು ರಾಜತಾಂತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭಗಳಲ್ಲಿಯೂ ಇದು ಸ್ಪಷ್ಟವಾಗಿ ಗೋಚರಿಸಿತು. ಧರ್ಮಗಳ ನಡುವಿನ ಸಂವಾದವು ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಸ್ಥಿರತೆಗೆ ಪ್ರಮುಖ ಮಾರ್ಗವೆಂದು ಅವರು ಸ್ಪಷ್ಟವಾದ ದೃಷ್ಟಿಕೋನವನ್ನು ಮುಂದಿಟ್ಟರು. ಈ ಸಂಪೂರ್ಣ ಪ್ರಯಾಣವು ಒಂದೇ ಏಕೀಕೃತ ತತ್ವವನ್ನು ಪ್ರತಿಬಿಂಬಿಸಿತು, ಅಲ್ಲಿ ಸಂಕೇತಾತ್ಮಕ ಕೃತ್ಯಗಳು ಮತ್ತು ಮಾತುಗಳು ಒಂದೇ ಧಾರ್ಮಿಕ ಮತ್ತು ಧರ್ಮಾಧ್ಯಕ್ಷೀಯ ದೃಷ್ಟಿಯಲ್ಲಿ ಒಂದಾಗಿದ್ದವು.

ಅಲ್ಜೀರಿಯಾದಲ್ಲಿ, ಈ ಪ್ರಯಾಣವು ಸೇತುವೆಗಳನ್ನು ನಿರ್ಮಿಸುವ ಮತ್ತು ಸೌಹಾರ್ದತೆಯನ್ನು ಬೆಳೆಸುವ ದಿಕ್ಕಿನಲ್ಲಿ ಸಾಗಿತು. ಜಗದ್ಗುರುಗಳು ಇದನ್ನು “ಶಾಂತಿ, ಸೌಹಾರ್ದತೆ ಮತ್ತು ಎಲ್ಲ ಜನರ ಮೇಲಿನ ಗೌರವವನ್ನು ಉತ್ತೇಜಿಸುವ ಅವಕಾಶ” ಎಂದು ವಿವರಿಸಿದರು. ಅವರು ಸಂತ ಅಗಸ್ಟಿನ್ ರವರನ್ನು ಅಂತರಧರ್ಮೀಯ ಸಂವಾದದ ಪ್ರಮುಖ ಸೇತುವೆಯಾಗಿ ಉಲ್ಲೇಖಿಸಿದರು. ಅಲ್ಜೀರಿಯಾದಲ್ಲಿ ಮಾತನಾಡುವಾಗ, “ನಾವು ಎಲ್ಲರೂ ಸಹೋದರ-ಸಹೋದರಿಯರು” ಎಂಬ ವಿಶ್ವಬಂಧುತ್ವದ ತತ್ವವನ್ನು ಅವರು ಒತ್ತಿಹೇಳಿದರು, ಇದು ನ್ಯಾಯ, ಏಕತೆ ಮತ್ತು ಶಾಂತಿಗೆ ಆಧಾರವಾಗುತ್ತದೆ.

ಕ್ಯಾಮರೂನ್‌ನಲ್ಲಿ, ಧಾರ್ಮಿಕ ಸಂಘರ್ಷವಿಲ್ಲದಿದ್ದರೂ, ಸಾಮಾಜಿಕ ಒತ್ತಡಗಳ ನಡುವೆ ಧರ್ಮಗಳ ಸಕಾರಾತ್ಮಕ ಪಾತ್ರವನ್ನು ಜಗದ್ಗುರುಗಳು ಉಲ್ಲೇಖಿಸಿದರು. ಮೂಲಭೂತವಾದದ ವಿಷದಿಂದ ದೂರವಿದ್ದು, ಧರ್ಮಗಳು ಶಾಂತಿಗೆ ಸಾಧನವಾಗಬೇಕು ಎಂದು ಹೇಳಿದರು. ಬಮೆಂಡಾದಲ್ಲಿ ನಡೆದ ಸಭೆಯಲ್ಲಿ ಕ್ರೈಸ್ತರು, ಮುಸ್ಲಿಮರು ಮತ್ತು ಪರಂಪರೆಯ ನಾಯಕರು ಒಗ್ಗಟ್ಟಿನ ಉದಾಹರಣೆಯನ್ನು ತೋರಿಸಿದರು. ಈ ಘಟನೆ ಅಂತರಧರ್ಮೀಯ ಸಂವಾದವು ನೋವಿನ ಅನುಭವದಿಂದ ಹುಟ್ಟಿ, ಸೌಹಾರ್ದತೆಯ ದಾರಿಗೆ ಬೆಳೆಯಬಹುದು ಎಂಬುದನ್ನು ತೋರಿಸಿತು.

ಅಂಗೋಲಾದಲ್ಲಿ, ಜಗದ್ಗುರುಗಳು ಆಫ್ರಿಕಾ ಖಂಡದ ಸವಾಲುಗಳನ್ನು ಉಲ್ಲೇಖಿಸಿ, ಸಂಘರ್ಷ ಮತ್ತು ವೈಮನಸ್ಯವನ್ನು ಮೀರಿ ಸಂವಾದದ ಮೂಲಕ ಶಾಂತಿಯನ್ನು ನಿರ್ಮಿಸಬೇಕೆಂದು ಕರೆ ನೀಡಿದರು. “ಸಂವಾದವೇ ಮೊದಲ ಹೆಜ್ಜೆ” ಎಂದು ಅವರು ಹೇಳಿದರು. ಇಕ್ವೇಟೋರಿಯಲ್ ಗಿನಿಯಾದಲ್ಲಿ ಅವರು ಸಾಮಾನ್ಯ ಹಿತ, ನ್ಯಾಯ ಮತ್ತು ಮಾನವ ಗೌರವದ ಮೌಲ್ಯಗಳನ್ನು ಒತ್ತಿಹೇಳಿದರು. “ಅಹಂಕಾರದಿಂದ ಗಾಯಗೊಂಡ ಜಗತ್ತಿನಲ್ಲಿ ಜನರು ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಜಗದ್ಗುರು XIVನೇ ಲಿಯೋರವರು ತಮ್ಮ ಪೂರ್ವಜರಾದ ಜಗದ್ಗುರು ಫ್ರಾನ್ಸಿಸ್ ರವರ ಪರಂಪರೆಯನ್ನು ನೆನಪಿಸಿಕೊಂಡು, ವಿಶ್ವಬಂಧುತ್ವ ಮತ್ತು ಎಲ್ಲರ ಮೇಲಿನ ನಿಜವಾದ ಗೌರವದ ಮಹತ್ವವನ್ನು ಪುನರುಚ್ಚರಿಸಿದರು. ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಎಚ್ಚರಿಕೆ ನೀಡುತ್ತಾ, ಧಾರ್ಮಿಕ ನಾಯಕರಿಗೆ ಶಾಂತಿ ನಿರ್ಮಾಣದಲ್ಲಿ ಪ್ರಮುಖ ಪಾತ್ರವಿದೆ ಎಂದು ಹೇಳಿದರು.

ಒಟ್ಟಾರೆ, ಈ ಪ್ರೇಷಿತರ ಪ್ರಯಾಣವು ಸಹೋದರತ್ವ, ಶಾಂತಿ ಮತ್ತು ನ್ಯಾಯವನ್ನು ಕೇಂದ್ರವಾಗಿ ಹೊಂದಿದ ಸ್ಪಷ್ಟ ಸಂದೇಶವನ್ನು ನೀಡಿತು. ವಿಭಿನ್ನ ದೇಶಗಳಲ್ಲಿ ನಡೆದ ಅನುಭವಗಳು ಒಂದೇ ಸಮಗ್ರ ದೃಷ್ಟಿಯನ್ನು ತೋರಿಸಿತು  ಅಂತರಧರ್ಮೀಯ ಸಂವಾದವು ಇಂದಿನ ಜಗತ್ತಿನಲ್ಲಿ ಶಾಶ್ವತ ಶಾಂತಿ, ನ್ಯಾಯ ಮತ್ತು ಸಮಾಧಾನಕರ ಸಹಜೀವನವನ್ನು ನಿರ್ಮಿಸಲು ಶಕ್ತಿಯುತ ಸಾಧನವಾಗಿದೆ.

 

23 ಏಪ್ರಿಲ್ 2026, 19:00