ಜಗದ್ಗುರುಗಳು: ಒಬ್ಬ ಧಮ೯ಗುರುವಾಗಿ, ನಾನು ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲ ಬಹಳಷ್ಟು ನಿರಪರಾಧಿಗಳು ಸಾವನ್ನಪ್ಪಿದ್ದಾರೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಆಫ್ರಿಕಾ ಖಂಡದ ತಮ್ಮ ದೀರ್ಘ ಪ್ರೇಷಿತರ ಪ್ರಯಾಣವನ್ನು ಪೂರ್ಣಗೊಳಿಸಿ ರೋಮಿಗೆ ಮರಳುವ ವೇಳೆ ಪತ್ರಕರ್ತರೊಂದಿಗೆ ಮಾತುಕತೆ ನಡೆಸಿದರು. ಈ ಪ್ರಯಾಣದ ಮುಖ್ಯ ಉದ್ದೇಶ ರಾಜಕೀಯ ವಿಚಾರಗಳಿಗಿಂತಲೂ ದೇವರ ಜನರನ್ನು ಭೇಟಿ ಮಾಡುವುದು, ಅವರೊಂದಿಗೆ ನಡೆಯುವುದು ಮತ್ತು ಸುವಾರ್ತೆಯನ್ನು ಎಲ್ಲರಿಗೂ ಸಾರುವುದು ಎಂದು ಅವರು ಹೇಳಿದರು. ಜನರ ಸಂತೋಷದಲ್ಲೂ, ನಂಬಿಕೆಯಲ್ಲಿ ಮತ್ತು ದುಃಖದಲ್ಲೂ ಅವರ ಬಳಿ ಹೋಗುವುದು ಈ ಗುರಿಯ ಹೃದಯವಾಗಿದೆ ಎಂದು ಅವರು ವಿವರಿಸಿದರು.
ಅವರು ಈ ಪ್ರಯಾಣವನ್ನು ಅತ್ಯಂತ ಸಂತೋಷಕರ ಅನುಭವವೆಂದು ಹೇಳಿ, ವಿಶೇಷವಾಗಿ ಇಕ್ವೇಟೋರಿಯಲ್ ಗಿನಿಯಾದ ಜನರೊಂದಿಗೆ ಕಳೆದ ಸಮಯವನ್ನು ಆಶೀರ್ವಾದವೆಂದು ಬಣ್ಣಿಸಿದರು. ಮಳೆಯಲ್ಲಿಯೂ ಜನರೊಂದಿಗೆ ಹಂಚಿಕೊಂಡ ನಂಬಿಕೆ ಮತ್ತು ಉತ್ಸಾಹವು ವಿಶ್ವ ಧರ್ಮ ಸಭೆಯ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಯುದ್ಧದ ಬಗ್ಗೆ ಮಾತನಾಡಿದ ಜಗದ್ಗುರುಗಳು, ಹಿಂಸೆಯು ಪರಿಹಾರವಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಇರಾನ್ ಮತ್ತು ಇತರ ಸಂಘರ್ಷ ಪ್ರದೇಶಗಳಲ್ಲಿ ನಿರಪರಾಧಿಗಳು, ವಿಶೇಷವಾಗಿ ಮಕ್ಕಳು, ಸಾವನ್ನಪ್ಪುತ್ತಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಹೇಳಿದರು. ಆಡಳಿತ ಬದಲಾವಣೆ ಮುಖ್ಯ ವಿಷಯವಲ್ಲ ಬದಲಿಗೆ ಶಾಂತಿ, ಸಂವಾದ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡುವುದು ಮುಖ್ಯ ಎಂದು ಅವರು ಒತ್ತಿ ಹೇಳಿದರು.
ಅಂತರಾಷ್ಟ್ರೀಯ ಕಾನೂನಿನ ಗೌರವ ಮತ್ತು ನಿರಪರಾಧಿಗಳ ರಕ್ಷಣೆಯನ್ನು ಅತ್ಯಂತ ಮುಖ್ಯವೆಂದು ಅವರು ತಿಳಿಸಿದರು. ಲೆಬನಾನ್‌ನಲ್ಲಿ ಭೇಟಿಯಾದ ಒಂದು ಮಗು ಯುದ್ಧದಲ್ಲಿ ಸಾವನ್ನಪ್ಪಿರುವುದನ್ನು ಸ್ಮರಿಸಿ, ಯುದ್ಧವು ಎಷ್ಟು ಮಾನವೀಯ ನೋವನ್ನು ಉಂಟುಮಾಡುತ್ತದೆ ಎಂಬುದನ್ನು ಅವರು ಮನದಟ್ಟು ಮಾಡಿದರು. ಒಬ್ಬ ಧರ್ಮ ಗುರುವಾಗಿ ತಾನು ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು.
ವಲಸೆ ಸಮಸ್ಯೆಯ ಕುರಿತು ಮಾತನಾಡಿದ ಜಗದ್ಗುರುಗಳು, ಇದು ಜಾಗತಿಕ ಸಮಸ್ಯೆಯಾಗಿದೆ ಎಂದು ಹೇಳಿದರು. ಶ್ರೀಮಂತ ದೇಶಗಳು ಬಡ ರಾಷ್ಟ್ರಗಳ ಅಭಿವೃದ್ಧಿಗೆ ಸಹಾಯ ಮಾಡಬೇಕು, ಆಗ ಜನರು ತಮ್ಮ ದೇಶವನ್ನು ಬಿಟ್ಟು ಹೋಗುವ ಅಗತ್ಯ ಕಡಿಮೆಯಾಗುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ವಲಸಿಗನನ್ನೂ ಮಾನವನಂತೆ ಗೌರವದಿಂದ ನಡೆಸಿಕೊಳ್ಳಬೇಕು ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ರಾಜಕೀಯ ನಾಯಕರೊಂದಿಗೆ ಭೇಟಿಯಾಗುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಜಗದ್ಗುರುಗಳು, ಧರ್ಮ ಸಭೆಯು ನೇರವಾಗಿ ಖಂಡಿಸುವುದಕ್ಕಿಂತ, ಶಾಂತಿ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸಲು ಹಿಂಬದಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದರು. ರಾಜತಾಂತ್ರಿಕ ಸಂಬಂಧಗಳ ಮೂಲಕ ಜನರ ಜೀವನವನ್ನು ಉತ್ತಮಗೊಳಿಸಲು ಪ್ರಯತ್ನಿಸುವುದು ಧರ್ಮ ಸಭೆಯ ಉದ್ದೇಶ ಎಂದು ಅವರು ವಿವರಿಸಿದರು.
ಸಮಲಿಂಗ ಜೋಡಿಗಳ ಆಶೀರ್ವಾದ ವಿಷಯದಲ್ಲಿ, ಧರ್ಮ ಸಭೆಯ ಏಕತೆ ಲೈಂಗಿಕ ವಿಷಯಗಳ ಮೇಲೆ ಮಾತ್ರ ಆಧರಿಸಬಾರದು ಎಂದು ಅವರು ಹೇಳಿದರು. ನ್ಯಾಯ, ಸಮಾನತೆ ಮತ್ತು ಧರ್ಮಸ್ವಾತಂತ್ರ್ಯವೇ ಪ್ರಮುಖ ಮೌಲ್ಯಗಳಾಗಿವೆ ಎಂದು ಹೇಳಿದರು. ಎಲ್ಲರಿಗೂ ದೇವರ ಆಶೀರ್ವಾದ ಲಭ್ಯವಿದ್ದರೂ, ಕೆಲವು ವಿಧದ ಅಧಿಕೃತ ಆಶೀರ್ವಾದಗಳಿಗೆ ಧರ್ಮ ಸಭೆ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮರಣದಂಡನೆಯ ಕುರಿತು ಜಗದ್ಗುರುಗಳು ಕಠಿಣವಾಗಿ ವಿರೋಧ ವ್ಯಕ್ತಪಡಿಸಿದರು. ಮಾನವ ಜೀವನವು ಗರ್ಭಧಾರಣೆಯಿಂದ ಪ್ರಾಕೃತಿಕ ಮರಣದವರೆಗೆ ಗೌರವಿಸಲ್ಪಡಬೇಕು ಎಂದು ಹೇಳಿದರು. ಅನ್ಯಾಯವಾಗಿ ಜೀವವನ್ನು ಕಸಿದುಕೊಳ್ಳುವ ಯಾವುದೇ ಕ್ರಮವನ್ನೂ ಅವರು ಖಂಡಿಸಿ, ಶಾಂತಿ ಮತ್ತು ನ್ಯಾಯದ ಮಾರ್ಗವನ್ನು ಅನುಸರಿಸಲು ಎಲ್ಲರನ್ನೂ ಕರೆ ನೀಡಿದರು.
