ಆಫ್ರಿಕಾದ ಏಳನೇ ದಿನ: ತಾಯಿಯ ಹೃದಯದಿಂದ ಪ್ರೀತಿಸುತ್ತಾ ಹೊಸ ಆರಂಭ ಮಾಡಲು ಜಗದ್ಗುರುಗಳು ಆಂಗೋಲಾದ ಜನರನ್ನು ಆಹ್ವಾನಿಸುತ್ತಾರೆ
ವ್ಯಾಟಿಕನ್ ವರದಿ
ಆಫ್ರಿಕಾದ ತನ್ನ ಏಳನೇ ದಿನದಲ್ಲಿ ಜಗದ್ಗುರು XIVನೇ ಲಿಯೋರವರು ಕೇವಲ ಎರಡು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ, ಆ ದಿನದ ತೀವ್ರತೆಯನ್ನಾಗಲಿ ಜನರ ಉತ್ಸಾಹವನ್ನಾಗಲಿ ಅದು ಕಡಿಮೆ ಮಾಡಲಿಲ್ಲ.
ಕಿಲಾಂಬಾದಲ್ಲಿ ಪವಿತ್ರಬಲಿಪೂಜೆ
ಮೊದಲ ಕಾರ್ಯಕ್ರಮವಾಗಿ, ಅಂಗೋಲಾ ರಾಜಧಾನಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಯೋಜಿತ ನಗರವಾದ ಕಿಲಾಂಬಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಲಾಯಿತು. ಭಾರೀ ಬಿಸಿಲು ಮತ್ತು ಹೆಚ್ಚಿದ ತೇವಾಂಶದ ನಡುವೆಯೂ, ಏಪ್ರಿಲ್ 19 ಭಾನುವಾರ ವಿವಿಧ ದೇಶಗಳಿಂದ ಜನರು ಈ ಪೂಜೆಯಲ್ಲಿ ಪಾಲ್ಗೊಂಡರು.
ತಮ್ಮ ಪ್ರಭೋಧನೆಯಲ್ಲಿ ಜಗದ್ಗುರುಗಳು, ಎಮ್ಮೌಸ್ ಮಾರ್ಗದಲ್ಲಿ ಪುನರುತ್ಥಾನಗೊಂಡ ಯೇಸುವನ್ನು ಭೇಟಿಯಾದರೂ ಅವನನ್ನು ಗುರುತಿಸಲಾರದೆ ಇರುವ ಶಿಷ್ಯರ ಕುರಿತು ಇರುವ ಸುವಾರ್ತಾ ಭಾಗದ ಬಗ್ಗೆ ಚಿಂತನೆ ನಡೆಸಿದರು.
ಸುವಾರ್ತೆಯ ಈ ಆರಂಭಿಕ ದೃಶ್ಯದಲ್ಲಿ, ಜಗದ್ಗುರುಗಳು ಹೇಳಿದರು, “ನಾನು ಆಂಗೋಲಾದ ಇತಿಹಾಸದ ಪ್ರತಿಬಿಂಬವನ್ನು ಕಾಣುತ್ತೇನೆ—ಸುಂದರವಾಗಿದ್ದರೂ ಗಾಯಗೊಂಡ ಈ ದೇಶವು ಭರವಸೆ, ಶಾಂತಿ ಮತ್ತು ಸಹೋದರತ್ವಕ್ಕಾಗಿ ಹಸಿವು ದಾಹದಿಂದ ಕಾಯುತ್ತಿದೆ.
ಅವರು ಮುಂದುವರಿದು, ತಮ್ಮ ಗುರುಗೆ ಸಂಭವಿಸಿದ ಘಟನೆಗಳ ಬಗ್ಗೆ ದುಃಖದಿಂದ ಚರ್ಚಿಸುತ್ತಿದ್ದ ಆ ಇಬ್ಬರು ಶಿಷ್ಯರ ನಡುವಿನ ಮಾತುಕತೆ, ಅಂಗೋಲಾವನ್ನು ಗುರುತಿಸಿದ ನೋವನ್ನು ನೆನಪಿಸುತ್ತದೆ ದೀರ್ಘ ಗೃಹಯುದ್ಧ, ಅದರ ಪರಿಣಾಮವಾಗಿ ಬಂದ ದ್ವೇಷಗಳು ಮತ್ತು ವಿಭಜನೆಗಳು, ವ್ಯರ್ಥಗೊಂಡ ಸಂಪನ್ಮೂಲಗಳು ಹಾಗೂ ಬಡತನ,ಎಂದು ಹೇಳಿದರು.
ಈ ಕಠಿಣ ಹಿನ್ನೆಲೆಯ ಮಧ್ಯೆ, ಜಗದ್ಗುರುಗಳು ಅಂಗೋಲಾದ ಜನರನ್ನು “ಹೊಸ ಆರಂಭ ಮಾಡಲು” ಪ್ರೇರೇಪಿಸಿದರು. ಪ್ರಭು ತನ್ನ ಶಿಷ್ಯರೊಂದಿಗೆ ಇದ್ದಂತೆ, ಅವರೊಂದಿಗೂ ಇದ್ದು ಕರುಣೆ ತೋರಿಸುತ್ತಾರೆ ಎಂಬ ನಂಬಿಕೆಯನ್ನು ಹೊಂದಬೇಕೆಂದು ಹೇಳಿದರು. ಬಲಿಪೂಜೆಯ ನಂತರ ಅವರು ಸಮೂಹದೊಂದಿಗೆ ರೆಜಿನಾ ಕೋಯೆಲಿ ಪ್ರಾರ್ಥನೆ ಸಲ್ಲಿಸಿದರು. ಉಕ್ರೇನ್ ದೇಶದ ಜನರ ಮೇಲೆ ಹೆಚ್ಚುತ್ತಿರುವ ದಾಳಿಗಳ ಸಂದರ್ಭದಲ್ಲಿ ತಮ್ಮ ಆತ್ಮೀಯತೆಯನ್ನು ವ್ಯಕ್ತಪಡಿಸಿ, ಲೆಬನಾನ್‌ನಲ್ಲಿ ಸಂವಾದ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಅಗತ್ಯವನ್ನೂ ಒತ್ತಿಹೇಳಿದರು.
ಮಾಮಾ ಮುಕ್ಸಿಮಾ ತೀರ್ಥಕ್ಷೇತ್ರದಲ್ಲಿ ಜಪಸರ ಪ್ರಾರ್ಥನೆ
ಮಧ್ಯಾಹ್ನ, ಸಾವಿರಾರು ಭಕ್ತರು ಆಂಗೋಲಾದ ಅತ್ಯಂತ ಪ್ರಮುಖ ಯಾತ್ರಾಸ್ಥಳವಾದ ಮುಕ್ಸಿಮಾದಲ್ಲಿ ಜಗದ್ಗುರುಗಳೊಂದಿಗೆ ಜಪಸರ ಪ್ರಾರ್ಥನೆ ಮಾಡಲು ಸೇರಿದರು. ಲುವಾಂಡಾದಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳದಲ್ಲಿ “ಹೃದಯದ ತಾಯಿ” ಎಂಬ ಅರ್ಥ ಹೊಂದಿರುವ ಮಾಮಾ ಮುಕ್ಸಿಮಾ ದೇವಾಲಯವಿದೆ ಇದು ಅಂಗೋಲಾದ ಜನರು ಮರಿಯಮ್ಮನವರಿಗೆ ನೀಡಿರುವ ಕಿಂಬುಂಡು ಹೆಸರು.
ಡಿವೈನ್ ವರ್ಡ್ ಮಿಷನರಿ ವಂ. ಸ್ವಾಮಿ ಡ್ಯಾನಿಯೆಲ್ ಮಲಾಂಬಾರವರು, ಅಂಗೋಲಾದ ಭಕ್ತರಿಗೆ ಮಾಮಾ ಮುಕ್ಸಿಮಾ ಎಂದರೆ ಎಲ್ಲವೂ,ಎಂದು ಹೇಳಿದರು. ಅವರ ಪ್ರಕಾರ, ಅಂಗೋಲಾದ ಧಾರ್ಮಿಕ ಭಕ್ತಿ ಮರಿಯಮ್ಮನವರ ಮೇಲಿನ ಪ್ರೀತಿಯಲ್ಲಿ ಆಳವಾಗಿ ಬೇರುಬಿಟ್ಟಿದೆ ಅದಕ್ಕಾಗಿಯೇ ಅನೇಕರು ಜಗದ್ಗುರುಗಳನ್ನು ನಮ್ಮ ತಾಯಿಯೊಂದಿಗೆ ಕಾಣಲು ಬಯಸಿದರು.
ಅನೇಕ ಭಕ್ತರು ಮಾಮಾ ಮುಕ್ಸಿಮಾಗೆ ಗೌರವ ಸಲ್ಲಿಸುವ ಈ ಸಂದರ್ಭದಲ್ಲಿ ಜಗದ್ಗುರುಗಳೊಂದಿಗೆ ಸೇರಲು ಸಿಕ್ಕ ಅವಕಾಶಕ್ಕೆ ಸಂತೋಷ ವ್ಯಕ್ತಪಡಿಸಿದರು. “ಅವರು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾರೆ” ಮತ್ತು “ನಮಗೆ ಇರುವ ಎಲ್ಲಾ ಸಮಸ್ಯೆಗಳಲ್ಲಿಯೂ ನಮ್ಮೊಂದಿಗೇ ಇರುತ್ತಾರೆ,” ಎಂದು ಯಾತ್ರಿಕರ ಗುಂಪಿನೊಂದಿಗೆ ಬಂದಿದ್ದ ಕಾಂಸೆಸಾಂ ಆಂಟೋನಿಯೊ ಹೇಳಿದರು.
ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ವಯಂಸೇವಕಿ ಫೆರ್ನಾಂಡಾ, ಹಲವರು ಜಗದ್ಗುರುಗಳನ್ನು ಸ್ವಾಗತಿಸಲು ಕೆಲ ದಿನಗಳ ಮುಂಚೆಯೇ ಬಂದು ಗುಡಾರಗಳಲ್ಲಿ ತಂಗಿದ್ದರು ಎಂದು ಹೇಳಿದರು.
ಅವರ ಸಹನೆಗೆ ಫಲ ದೊರಕಿತು, ಜಗದ್ಗುರು ಲಿಯೋರವರು ಲುವಾಂಡಾದಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದಾಗ. ಅವರು ದೇವಾಲಯದ ಒಳಗೆ ಪ್ರಾರ್ಥನೆ ಸಲ್ಲಿಸಿ, ಮಾಮಾ ಮುಕ್ಸಿಮಾ ಪ್ರತಿಮೆಯ ಪಾದದಲ್ಲಿ ಬಿಳಿ ಹೂಗಳನ್ನು ಅರ್ಪಿಸಿದರು. ನಂತರ ಜಗದ್ಗುರುಗಳು ಮೊಬೈಲ್‌ನಲ್ಲಿ ಜನರ ನಡುವೆ ಸಂಚರಿಸಿದಾಗ, ಜನರು ಹರ್ಷೋದ್ಗಾರ ಮಾಡುತ್ತಾ ಅವರನ್ನು ಹತ್ತಿರದಿಂದ ನೋಡುವ ಪ್ರಯತ್ನ ಮಾಡಿದರು.
ಮರಿಯಮ್ಮನವರ ಪ್ರಾರ್ಥನೆಯ ನಂತರ, ಜಪಸರ ಪ್ರಾರ್ಥನೆ ನಮಗೆ ಪ್ರತಿಯೊಬ್ಬರನ್ನೂ ತಾಯಿಯ ಹೃದಯದಿಂದ ಸಾಕ್ಷಾತ್ಕಾರವಾಗಿ ಮತ್ತು ಉದಾರವಾಗಿ ಪ್ರೀತಿಸಲು ಹಾಗೂ ಪರಸ್ಪರ ಹಿತಕ್ಕಾಗಿ, ವಿಶೇಷವಾಗಿ ಅತೀ ಬಡವರಿಗಾಗಿ ನಮ್ಮನ್ನು ಅರ್ಪಿಸಲು ಬದ್ಧಗೊಳಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.
ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುದ್ಧ, ಅನ್ಯಾಯ, ಬಡತನ ಮತ್ತು ಭ್ರಷ್ಟಾಚಾರದಿಂದ ಮುಕ್ತವಾದ ಲೋಕಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. “ಯುದ್ಧವಲ್ಲ, ಪ್ರೀತಿಯೇ ಜಯ ಸಾಧಿಸಬೇಕು,” ಎಂದು ಅವರು ಹೇಳಿದರು.
ಅದಾದ ಬಳಿಕ ಜಗದ್ಗುರುಗಳು ಲುವಾಂಡಾದ ಅಪೋಸ್ತೋಲಿಕ್ ನುಂಸಿಯಚರ್‌ಗೆ ರಾತ್ರಿ ವಾಸಕ್ಕಾಗಿ ಹಿಂತಿರುಗಿದರು.
