ಜಗದ್ಗುರು XIVನೇ ಲಿಯೋರವರು ಅಂಗೋಲಾಕ್ಕೆ ಭೇಟಿ ನೀಡಿ ಮಾಮಾ ಮುಕ್ಸಿಮಾ ದೇಗುಲದಲ್ಲಿ ಜಪಸರವನ್ನು ಪ್ರಾರ್ಥಿಸಿದರು ಜಗದ್ಗುರು XIVನೇ ಲಿಯೋರವರು ಅಂಗೋಲಾಕ್ಕೆ ಭೇಟಿ ನೀಡಿ ಮಾಮಾ ಮುಕ್ಸಿಮಾ ದೇಗುಲದಲ್ಲಿ ಜಪಸರವನ್ನು ಪ್ರಾರ್ಥಿಸಿದರು  (ANSA)

ಜಗದ್ಗುರುಗಳು ಮಾಮಾ ಮುಕ್ಸಿಮಾ ದೇವಾಲಯದಲ್ಲಿ: ಯುದ್ಧವಲ್ಲ, ಪ್ರೀತಿಯೇ ಜಯ ಸಾಧಿಸಬೇಕು.

ಆಂಗೋಲಾ ದೇಶಕ್ಕೆ ಮಾಡಿದ ಭೇಟಿಯ ವೇಳೆ, ಜಗದ್ಗುರು XIVನೇ ಲಿಯೋರವರು ಐತಿಹಾಸಿಕ ಮಾಮಾ ಮುಕ್ಸಿಮಾ ತೀರ್ಥಕ್ಷೇತ್ರದಲ್ಲಿ ಯಾತ್ರಿಕರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಸಮಾಜದಲ್ಲಿ ನ್ಯಾಯ, ಐಕ್ಯತೆ ಮತ್ತು ಶಾಂತಿಯತ್ತ ಬದ್ಧತೆಯನ್ನು ಬೆಳೆಸಿಕೊಳ್ಳಲು ಮರಿಯಮ್ಮನ ಭಕ್ತಿಯಿಂದ ಪ್ರೇರಣೆ ಪಡೆಯುವಂತೆ ಅವರು ಯುವಜನತೆಗೆ ಮನವಿ ಮಾಡಿದರು.

ವ್ಯಾಟಿಕನ್ ವರದಿ

ಭಾನುವಾರ, ಜಗದ್ಗುರು XIVನೇ ಲಿಯೋರವರು ಅಂಗೋಲಾದಲ್ಲಿರುವ ಮರಿಯಮ್ಮನ ತೀರ್ಥಕ್ಷೇತ್ರವಾದ ಮಾಮಾ ಮುಕ್ಸಿಮಾ ದೇವಾಲಯಕ್ಕೆ ಭೇಟಿ ನೀಡಿದರು. ಇದು ದೇಶದ ಅತ್ಯಂತ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದ್ದು, ಅಲ್ಲಿ ಅವರು ಭಕ್ತರೊಂದಿಗೆ ಸೇರಿ ಜಪಸರ ಪ್ರಾರ್ಥನೆ ಸಲ್ಲಿಸಿದರು.

ರಾಜಧಾನಿ ಲುವಾಂಡಾ ನಗರದಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿರುವ ಮಾಮಾ ಮುಕ್ಸಿಮಾ ದೇವಾಲಯ  ಕಿಂಬುಂಡು ಭಾಷೆಯಲ್ಲಿ “ಹೃದಯದ ತಾಯಿ” ಎಂದರ್ಥ  ಶತಮಾನಗಳ ಕಾಲ ಅಂಗೋಲಾದ ಜನರಿಗೆ ಪ್ರಾರ್ಥನೆಯ ಕೇಂದ್ರವಾಗಿಯೇ ಉಳಿದಿದೆ. 16ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ತೀರ್ಥಕ್ಷೇತ್ರವು, ವಸಾಹತು ಆಡಳಿತ ಮತ್ತು ದೀರ್ಘಕಾಲದ ಗೃಹಯುದ್ಧದಂತಹ ಕಠಿಣ ಸಂದರ್ಭಗಳಲ್ಲಿ ಭಕ್ತಿಯ ಪ್ರಮುಖ ಕೇಂದ್ರವಾಗಿ ಪರಿಣಮಿಸಿತು. ಇಂದಿಗೂ ಇದು ಪ್ರತಿ ವರ್ಷ ಸಾವಿರಾರು ಯಾತ್ರಿಕರನ್ನು ಆಕರ್ಷಿಸುತ್ತದೆ.

ಪ್ರಾರ್ಥನೆಯ ಕ್ಷಣಕ್ಕೆ ಕೃತಜ್ಞತೆ

ತೀರ್ಥಕ್ಷೇತ್ರದಲ್ಲಿ ಸೇರಿದ್ದ ಯುವಜನತೆ, ಲೆಜಿಯನ್ ಆಫ್ ಮೇರಿ ಸದಸ್ಯರು ಹಾಗೂ ಇತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸ್ಥಳೀಯ ಧರ್ಮ ಸಭೆಯೊಂದಿಗೆ “ಮರಿಯಮ್ಮನ ಪ್ರಾರ್ಥನೆಯ ಕ್ಷಣವನ್ನು” ಹಂಚಿಕೊಳ್ಳುವ ಅವಕಾಶ ದೊರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಅವರು ಇತ್ತೀಚೆಗೆ ಸಲ್ಲಿಸಿದ ಜಪಸರ ಪ್ರಾರ್ಥನೆ ಬಗ್ಗೆ ಚಿಂತನೆ ನಡೆಸಿ, ಇದು ಧರ್ಮ ಸಭೆಯ ಪರಂಪರೆಯಲ್ಲಿ ಬೇರುಬಿಟ್ಟಿರುವ ಸರಳ ಮತ್ತು ಎಲ್ಲರಿಗೂ ಸುಲಭವಾಗಿ ಅನುಸರಿಸಬಹುದಾದ ಪ್ರಾರ್ಥನೆಯ ರೂಪವಾಗಿದೆ ಎಂದು ಹೇಳಿದರು. ಸಂತ ದ್ವಿತೀಯ ಜಾನ್ ಪಾಲ್ ರವರ ಮಾತುಗಳನ್ನು ಉಲ್ಲೇಖಿಸಿ, ಜಪಮಾಲೆಯನ್ನು ಅವರು ಪ್ರಾರಂಭಿಕ ಕ್ರೈಸ್ತಧರ್ಮದ “ಹೊಸತನದ ಸುವಾಸನೆ”ಯನ್ನು ಇಂದಿಗೂ ಉಳಿಸಿಕೊಂಡಿರುವ ಪ್ರಾರ್ಥನೆ ಎಂದು ವರ್ಣಿಸಿದರು ಮತ್ತು ಇದು ವಿಶ್ವದಲ್ಲಿ ಕ್ರಿಸ್ತನನ್ನು ಘೋಷಿಸಲು ಭಕ್ತರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

ಜಗದ್ಗುರು ಲಿಯೋರವರು ಜನರಲ್ಲಿರುವ ಗಾಢವಾದ ನಂಬಿಕೆಯನ್ನು “ಜೀವಂತ ಮತ್ತು ಯುವ” ಎಂದು ವರ್ಣಿಸಿದರು. ಸಂತೋಷದ ಸಂದರ್ಭಗಳಲ್ಲಿಯೂ ಹಾಗೂ ಸಂಕಷ್ಟಗಳಲ್ಲಿಯೂ ತಲೆಮಾರುಗಳಿಂದ ಜನರು ಪ್ರಾರ್ಥಿಸಲು ಬಂದಿರುವ ಸ್ಥಳವಾಗಿ ಈ ತೀರ್ಥಕ್ಷೇತ್ರದ ಐತಿಹಾಸಿಕ ಮಹತ್ವವನ್ನೂ ಅವರು ಸ್ಮರಿಸಿದರು.

“ಮಾಮಾ ಮುಕ್ಸಿಮಾ ಎಲ್ಲರನ್ನೂ ಸ್ವಾಗತಿಸುತ್ತದೆ, ಎಲ್ಲರ ಮಾತುಗಳನ್ನು ಆಲಿಸುತ್ತದೆ ಮತ್ತು ಎಲ್ಲರಿಗಾಗಿ ಪ್ರಾರ್ಥಿಸುತ್ತದೆ,” ಎಂದು ಅವರು ಹೇಳಿದರು.

ಪಾಸ್ಖ ಕಾಲದ ಭೇಟಿ

ಜಗದ್ಗುರಗಳ ಈ ಭೇಟಿ ಈಸ್ಟರ್ ಕಾಲದಲ್ಲಿ ನಡೆಯುತ್ತಿರುವುದರಿಂದ, ಪುನರುತ್ಥಾನವು ವಿಶ್ವಾಸಿಗಳ ಅಂತಿಮ ಗುರಿಯನ್ನು ಸೂಚಿಸುವುದರ ಜೊತೆಗೆ, ಇಂದಿನ ಜೀವನದಲ್ಲೇ ತಮ್ಮ ಕರ್ತವ್ಯವನ್ನು ನೆರವೇರಿಸಲು ಕರೆ ನೀಡುತ್ತದೆ ಎಂದು ಅವರು ಒತ್ತಿಹೇಳಿದರು.

ಅವರು ಮರಿಯಮ್ಮನವರನ್ನು ಮಾದರಿಯಾಗಿ ನೋಡುವಂತೆ ಪ್ರೇರೇಪಿಸಿ, ವಿಶೇಷವಾಗಿ ತನ್ನ ಮಗನ ಜೀವನದ ಘಟನೆಗಳನ್ನು ಮನಸ್ಸಿನಲ್ಲಿ ಸಂಗ್ರಹಿಸಿ ಆಲೋಚಿಸುವ ಆಕೆಯ ಸಾಮರ್ಥ್ಯವನ್ನು ನೆನಪಿಸಿದರು. ಇದರಿಂದ ಕ್ರೈಸ್ತರು “ವಿಶ್ವವ್ಯಾಪಕ” ಪ್ರೀತಿಯಲ್ಲಿ ಬೆಳೆಯಲು ಮತ್ತು ಇತರರ ಅಗತ್ಯಗಳಿಗೆ ಸ್ಪಂದಿಸಲು ಆಹ್ವಾನಿತರಾಗುತ್ತಾರೆ ಎಂದು ಹೇಳಿದರು.

ಪ್ರಾರ್ಥನೆ ಕೇವಲ ಮಾತಿನ ಮಟ್ಟದಲ್ಲೇ ಉಳಿಯದೆ, ಕಾರ್ಯರೂಪದಲ್ಲಿ ವ್ಯಕ್ತವಾಗಬೇಕು, ವಿಶೇಷವಾಗಿ ಅಗತ್ಯವಿರುವವರ ಆರೈಕೆಯಲ್ಲಿ ಅದು ಗೋಚರಿಸಬೇಕು ಎಂದು ಜಗದ್ಗುರುಗಳು ಹೇಳಿದರು. ಆಹಾರ, ಆರೋಗ್ಯ ಸೇವೆ, ಶಿಕ್ಷಣ ಮತ್ತು ವೃದ್ಧರಿಗೆ ಮಾನ್ಯ ಜೀವನೋಪಾಯದಂತಹ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಕ್ರೈಸ್ತ ದಾನಶೀಲತೆಯ ಅವಿಭಾಜ್ಯ ಭಾಗಗಳಾಗಿವೆ ಎಂದು ಅವರು ತಿಳಿಸಿದರು.

“ಒಬ್ಬ ತಾಯಿ ತನ್ನ ಎಲ್ಲಾ ಮಕ್ಕಳನ್ನೂ ಪ್ರೀತಿಸುತ್ತಾಳೆ,” ಎಂದು ಅವರು ಹೇಳಿ, ವಿಶೇಷವಾಗಿ ದುರ್ಬಲರ ಮೇಲಿನ ನಮ್ಮ ಬದ್ಧತೆಯನ್ನು ಈ ಉದಾಹರಣೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.

ಭರವಸೆಯ ಚಿಹ್ನೆ

ಹೆಚ್ಚುತ್ತಿರುವ ಯಾತ್ರಿಕರ ಸಂಖ್ಯೆಯನ್ನು ಹೊಂದಿಕೊಳ್ಳಲು ನಿರ್ಮಿಸಲಾಗುತ್ತಿರುವ ಹೊಸ, ದೊಡ್ಡ ತೀರ್ಥಕ್ಷೇತ್ರದ ಬಗ್ಗೆ ಜಗದ್ಗುರುಗಳು ಉಲ್ಲೇಖಿಸಿದರು. ಇದನ್ನು ಅವರು ಭರವಸೆಯ ಸಂಕೇತವೆಂದು ಹಾಗೂ ವಿಶೇಷವಾಗಿ ಯುವಜನತೆಗೆ ನ್ಯಾಯಯುತ ಮತ್ತು ಶಾಂತಿಯುತ ಸಮಾಜ ನಿರ್ಮಾಣಕ್ಕೆ ಆಹ್ವಾನವೆಂದು ವರ್ಣಿಸಿದರು.

ಯುವಜನತೆಗೆ ನೇರವಾಗಿ ಮಾತನಾಡಿದ ಅವರು, ಯುದ್ಧ, ಅನ್ಯಾಯ, ಬಡತನ ಮತ್ತು ಭ್ರಷ್ಟಾಚಾರದಿಂದ ಮುಕ್ತವಾದ ವಿಶ್ವವನ್ನು ನಿರ್ಮಿಸಲು ಅವರು ಶ್ರಮಿಸಬೇಕು ಎಂದು ಕರೆ ನೀಡಿದರು. ಅಲ್ಲಿ ಸುವಾರ್ತೆಯ ಮೌಲ್ಯಗಳು ವೈಯಕ್ತಿಕ ಜೀವನವನ್ನೂ ಹಾಗೂ ಸಮಾಜದ ರಚನೆಗಳನ್ನೂ ರೂಪಿಸಬೇಕು ಎಂದು ಹೇಳಿದರು.

“ಯುದ್ಧವಲ್ಲ, ಪ್ರೀತಿಯೇ ಜಯ ಸಾಧಿಸಬೇಕು,” ಎಂದು ಅವರು ಹೇಳಿದರು.

ತಮ್ಮ ಭಾಷಣದ ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಭಕ್ತರನ್ನು ಮರಿಯಮ್ಮನವರಿಗೆ ತಮ್ಮನ್ನು ಅರ್ಪಿಸಿಕೊಳ್ಳಲು ಆಹ್ವಾನಿಸಿ, ದೇವರ ಆಶೀರ್ವಾದವನ್ನು ದೈನಂದಿನ ಜೀವನದಲ್ಲಿ ಸಾಗಿಸಲು ಪ್ರೇರೇಪಿಸಿದರು. “ಜೀವನದ ದೂತರಾಗಿ” ತೀರ್ಥಕ್ಷೇತ್ರದಿಂದ ಹೊರಟು, ಇತರರಿಗೆ ಭರವಸೆ ಮತ್ತು ಐಕ್ಯತೆಯನ್ನು ಹಂಚುವಂತೆ ಅವರು ಕರೆ ನೀಡಿದರು.

19 ಏಪ್ರಿಲ್ 2026, 18:15