ಸೌರಿಮೋದಲ್ಲಿ ನಡೆದ ಬಲಿ ಪೂಜೆಯಲ್ಲಿ ಜಗದ್ಗುರುಗಳು: “ಪುನರುತ್ಥಾನಗೊಂಡವರು ನಮ್ಮ ಮಾರ್ಗವನ್ನು ಪ್ರಕಾಶಗೊಳಿಸಿ ನಮ್ಮನ್ನು ಪವಿತ್ರಗೊಳಿಸುತ್ತಾರೆ”
ವ್ಯಾಟಿಕನ್ ವರದಿ
ಸೌರಿಮೋದಲ್ಲಿ ನಡೆದ ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ವಿಶ್ವಾಸಿಗಳಿಗೆ ಧೈರ್ಯ ತುಂಬುವ ಸಂದೇಶ ನೀಡಿದರು. ಅವರು ಹೇಳಿದರು “ಪುನರುತ್ಥಾನಗೊಂಡ ಪ್ರಭು ನಮ್ಮನ್ನು ತಂದೆಯ ಕಡೆಗೆ ದಾರಿ ತೋರಿಸುತ್ತಾರೆ ಮತ್ತು ಪವಿತ್ರಾತ್ಮನ ಶಕ್ತಿಯಿಂದ ನಮ್ಮನ್ನು ಪವಿತ್ರಗೊಳಿಸುತ್ತಾರೆ.” ಆಫ್ರಿಕಾದ ನಾಲ್ಕು ರಾಷ್ಟ್ರಗಳ ಪ್ರೇಷಿತರ ಪ್ರವಾಸದ ಮೂರನೇ ಹಂತದಲ್ಲಿ ಈ ಸಂದೇಶವನ್ನು ಅವರು ನೀಡಿದರು.
ತಮ್ಮ ಪ್ರವಚನದಲ್ಲಿ, ಕ್ರಿಸ್ತನ ಶಿಷ್ಯರಾಗಿ ನಡೆಯುವ ಜನರಾಗಿ ಧರ್ಮ ಸಭೆ ವಿಶ್ವದ ಎಲ್ಲೆಡೆ ಜೀವಂತವಾಗಿದೆ ಎಂದು ಅವರು ಹೇಳಿದರು. ಸುವಾರ್ತೆ ನಮ್ಮ ಜೀವನಯಾತ್ರೆಯನ್ನು ಉಳಿಸಿಕೊಂಡು ಸಾಗಿಸುತ್ತದೆ. ನಾನು ಇಂದು ನಿಮ್ಮ ನಡುವೆ ಇರುವುದೂ ಇದೇ ಯಾತ್ರೆಯ ಭಾಗ ಎಂದು ಅವರು ಹೇಳಿದರು.
ಜಗದ್ಗುರಗಳು ಯೇಸು ಮಾಡಿದ ಅದ್ಭುತಗಳನ್ನು ಸ್ಮರಿಸಿ, ಅವು ದೇವರ ಇಚ್ಛೆಯನ್ನು ವ್ಯಕ್ತಪಡಿಸಲು ಮಾಡಿದ ಕಾರ್ಯಗಳಾಗಿವೆ ಎಂದು ಹೇಳಿದರು. ಅಂಧರಿಗೆ ದೃಷ್ಟಿ ನೀಡುವುದು, ಮೌನಿಗಳಿಗೆ ಮಾತಿನ ವರ ನೀಡುವುದು, ಬಡವರಿಗೆ ಆಹಾರ ಒದಗಿಸುವುದು ಇವೆಲ್ಲವೂ ಜನರನ್ನು ಯೇಸುವಿನ ಕಡೆಗೆ ಸೆಳೆದವು. ಆದರೆ, ಯೇಸುವನ್ನು ನಾವು ಯಾವ ಉದ್ದೇಶದಿಂದ ಹುಡುಕುತ್ತೇವೆ ಎಂಬುದನ್ನು ನಮ್ಮ ಹೃದಯದಲ್ಲಿ ಪರಿಶೀಲಿಸಬೇಕು ಎಂದು ಅವರು ಒತ್ತಿಹೇಳಿದರು.
ಅವರು ಎಚ್ಚರಿಕೆ ನೀಡುತ್ತಾ ಹೇಳಿದರು ನಿಜವಾದ ನಂಬಿಕೆ ಇಲ್ಲದೆ, ದೇವರನ್ನು ಕೇವಲ ಸ್ವಾರ್ಥಕ್ಕಾಗಿ ಹುಡುಕುವುದು ತಪ್ಪಾಗಿದೆ. ಯೇಸು ಜನರನ್ನು ತಳ್ಳಿಹಾಕುವುದಿಲ್ಲ, ಆದರೆ ಅವರ ಮನಸ್ಸುಗಳನ್ನು ಪರಿವರ್ತಿಸಲು ಕರೆ ನೀಡುತ್ತಾನೆ. “ನಾಶವಾಗುವ ಆಹಾರಕ್ಕಾಗಿ ಅಲ್ಲ, ಶಾಶ್ವತ ಜೀವನಕ್ಕೆ ಉಳಿಯುವ ಆಹಾರಕ್ಕಾಗಿ ಪರಿಶ್ರಮಿಸಿರಿ” ಎಂಬ ಕರೆಯನ್ನು ಅವರು ಸ್ಮರಿಸಿದರು.
ಇಂದಿನ ಜಗತ್ತಿನ ಪರಿಸ್ಥಿತಿಯನ್ನು ಉಲ್ಲೇಖಿಸಿ, ಹಿಂಸಾಚಾರ, ಅನ್ಯಾಯ ಮತ್ತು ಶೋಷಣೆಯಿಂದ ಹಲವರ ನಿರೀಕ್ಷೆಗಳು ಕುಸಿಯುತ್ತಿವೆ ಎಂದು ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು. ಆದರೆ, ಕ್ರಿಸ್ತನು ಜನರ ಕೂಗನ್ನು ಕೇಳಿ, ನಮ್ಮನ್ನು ಧೈರ್ಯಗೊಳಿಸಿ, ನಮ್ಮ ಇತಿಹಾಸವನ್ನು ಹೊಸದಾಗಿ ರೂಪಿಸುತ್ತಾರೆ ಎಂದು ಅವರು ಭರವಸೆ ನೀಡಿದರು.
ಕೊನೆಯಲ್ಲಿ, ಜಗದ್ಗುರು ಲಿಯೋರವರು ವಿಶ್ವಾಸಿಗಳಿಗೆ ಭರವಸೆ, ಶಾಂತಿ ಮತ್ತು ಸೌಹಾರ್ದತೆಯ ಮಾರ್ಗವನ್ನು ಅನುಸರಿಸಲು ಕರೆ ನೀಡಿದರು. “ಕ್ರಿಸ್ತ ಜೀವಂತವಾಗಿದ್ದಾರೆ ಆತನೇ ನಮ್ಮ ವಿಮೋಚಕ” ಎಂದು ಹೇಳಿ, ದೇವರು ತೋರಿಸಿದ ದಾರಿ ಎಂದಿಗೂ ವಿಫಲವಾಗುವುದಿಲ್ಲ ಎಂದು ಅವರು ನೆನಪಿಸಿದರು.
