ಜಗದ್ಗುರುಗಳು ಅಕಾಡೆಮಿಕ್ ಸಮುದಾಯಕ್ಕೆ: ಸಾಮೂಹಿಕ ಹಿತಕ್ಕಾಗಿ ಸೇವೆಗೆ ಸಮರ್ಪಿತ ನಾಯಕರನ್ನು ರೂಪಿಸಿ
ವ್ಯಾಟಿಕನ್ ವರದಿ
ಮಧ್ಯ ಆಫ್ರಿಕಾದ ಕಥೋಲಿಕ ವಿಶ್ವವಿದ್ಯಾಲಯದ ಸದಸ್ಯರನ್ನು ಭೇಟಿಯಾದ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಶಿಕ್ಷಣ ಸೇವೆಯಲ್ಲಿ ತೋರಿದ ಅವರ ಆತ್ಮೀಯ ಸ್ವಾಗತ ಮತ್ತು ನಿರಂತರ ಸಮರ್ಪಣೆಗೆ ಧನ್ಯವಾದಗಳನ್ನು ತಿಳಿಸಿದರು. 1989ರಲ್ಲಿ ಮಧ್ಯ ಆಫ್ರಿಕಾದ ಧರ್ಮಾಧ್ಯಕ್ಷೀಯ ಸಮ್ಮೇಳನಗಳ ಸಂಘಟನೆ ಸ್ಥಾಪಿಸಿದ ಈ ಸಂಸ್ಥೆ, ಸತ್ಯದ ಹುಡುಕಾಟದಲ್ಲೂ ಹಾಗೂ ನ್ಯಾಯ ಮತ್ತು ಐಕ್ಯತೆಯನ್ನು ಉತ್ತೇಜಿಸುವ ಕಾರ್ಯದಲ್ಲೂ ಧರ್ಮ ಸಭೆ ಮತ್ತು ಆಫ್ರಿಕಾಗೆ ದೀಪಸ್ತಂಭವಾಗಿರಬಹುದು ಎಂದು ಅವರು ಹೇಳಿದರು.
ಇಂದಿನ ಕಾಲದಲ್ಲಿ, ವಿಶ್ವವಿದ್ಯಾಲಯಗಳು—ವಿಶೇಷವಾಗಿ ಕಥೋಲಿಕ ಉನ್ನತ ಶಿಕ್ಷಣ ಸಂಸ್ಥೆಗಳು—ಜೀವನ ಮತ್ತು ಸಂಶೋಧನೆಯ ನಿಜವಾದ ಸಮುದಾಯಗಳಾಗಬೇಕು ಎಂದು ಜಗದ್ಗುರುಗಳು ಒತ್ತಿಹೇಳಿದರು. ವಿದ್ಯಾರ್ಥಿಗಳಿಗೂ ಪ್ರಾಧ್ಯಾಪಕರಿಗೂ ಜ್ಞಾನದಲ್ಲಿ ಸಹೋದರತ್ವವನ್ನು ಬೆಳೆಸುವ ವಾತಾವರಣವನ್ನು ಅವು ನಿರ್ಮಿಸಬೇಕು. ಸುವಾರ್ತೆಯ ಪ್ರಕಟಣೆ ಮತ್ತು ಧರ್ಮ ಸಭೆಯ ಉಪದೇಶವು, ಮಾನವೀಯ ಚೇತನದ ಬೆಳವಣಿಗೆಗೆ ಸಹಕರಿಸುವ ಶಕ್ತಿಗಳೊಂದಿಗೆ ಸಂವಾದ ಮತ್ತು ಸಹಕಾರದ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ.
ವಿಶ್ವವಿದ್ಯಾಲಯಗಳು ಇಂದಿನ ಜಗತ್ತಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆತ್ಮೀಯ ಮತ್ತು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಕಾಲದಲ್ಲಿ, ವ್ಯಕ್ತಿವಾದ, ಮೇಲ್ಮೈತನ ಮತ್ತು ದ್ವಂದ್ವಾಚಾರದಲ್ಲಿ ಸಿಲುಕಿರುವ ಮಾನವರ ನಡುವೆ, ವಿಶ್ವವಿದ್ಯಾಲಯವು ಸ್ನೇಹ, ಸಹಕಾರ ಮತ್ತು ಆತ್ಮಪರಿಶೀಲನೆಯ ವಿಶಿಷ್ಟ ಕೇಂದ್ರವಾಗಿರುತ್ತದೆ. ಮಧ್ಯಯುಗದಿಂದಲೂ ವಿಶ್ವವಿದ್ಯಾಲಯಗಳ ಹೃದಯದಲ್ಲಿ ಸತ್ಯವೇ ಮುಖ್ಯ ಗುರಿಯಾಗಿದೆ ಇಂದಿಗೂ ಅದೇ ಗುರಿಯನ್ನು ವಿದ್ಯಾರ್ಥಿಗಳು ಮತ್ತು ಗುರುಗಳು ತಮ್ಮ ಜೀವನದ ಮಾರ್ಗವಾಗಿ ಅಳವಡಿಸಿಕೊಳ್ಳಬೇಕಾಗಿದೆ.
ಆಫ್ರಿಕಾ ಮಾನವಕುಲದ ಸಂಕೀರ್ಣತೆಗಳನ್ನು ವಿಸ್ತರಿಸಲು ಮಹತ್ವದ ಕೊಡುಗೆ ನೀಡಬಲ್ಲದು ಎಂದು ಜಗದ್ಗುರುಗಳು ಹೇಳಿದರು. ಇಂದು ನಂಬಿಕೆಯನ್ನು ಆಧುನಿಕ ಸಾಂಸ್ಕೃತಿಕ ಸಂದರ್ಭಗಳಲ್ಲಿ ಹಾಗೂ ಸವಾಲುಗಳ ಬೆಳಕಿನಲ್ಲಿ ಪರಾಮರ್ಶಿಸುವ ಅಗತ್ಯವಿದೆ. ಅನ್ಯಾಯ, ಅಸಮಾನತೆ, ಹಿಂಸೆ ಮತ್ತು ಆತ್ಮೀಯ-ಭೌತಿಕ ಕುಸಿತದಿಂದ ಗಾಯಗೊಂಡ ಪರಿಸ್ಥಿತಿಗಳಲ್ಲಿಯೇ ನಂಬಿಕೆಯ ಸೌಂದರ್ಯ ಮತ್ತು ವಿಶ್ವಾಸಾರ್ಹತೆ ಹೆಚ್ಚು ಸ್ಪಷ್ಟವಾಗುತ್ತದೆ. ಒಂದು ರಾಷ್ಟ್ರದ ಸಂಪತ್ತನ್ನು ಕೇವಲ ಪ್ರಕೃತಿ ಸಂಪನ್ಮೂಲಗಳ ಆಧಾರದ ಮೇಲೆ ಅಳೆಯಲಾಗುವುದಿಲ್ಲ ಸತ್ಯದಲ್ಲಿ ರೂಪುಗೊಂಡ ಸಜ್ಜನ ಮನಸ್ಸುಗಳಿಲ್ಲದೆ ಯಾವುದೇ ಸಮಾಜವು ವೃದ್ಧಿಯಾಗುವುದಿಲ್ಲ ಎಂದು ಅವರು ಹೇಳಿದರು.
ಇಂದಿನ ಜಗತ್ತಿನಲ್ಲಿ ನೈತಿಕ ಮೌಲ್ಯಗಳ ಕುಸಿತ ಹೆಚ್ಚುತ್ತಿದೆ ಮತ್ತು ಹಿಂದೆ ಅಸ್ವೀಕಾರಾರ್ಹವೆಂದು ಕಂಡಿದ್ದ ಕೆಲವು ಕ್ರಮಗಳನ್ನು ಈಗ ಸುಲಭವಾಗಿ ಒಪ್ಪಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಗಳಲ್ಲಿ, ಕ್ರೈಸ್ತರು—ವಿಶೇಷವಾಗಿ ಯುವ ಆಫ್ರಿಕಾದ ಕಥೋಲಿಕರು ಹೊಸ ಸಂಗತಿಗಳ ಬಗ್ಗೆ ಭಯಪಡಬಾರದು ಎಂದು ಜಗದ್ಗುರುಗಳು ಕರೆ ನೀಡಿದರು. ಡಿಜಿಟಲ್ ಕ್ರಾಂತಿಯ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ಹೊಸ ಮಾನವೀಯತೆಯ ಮುಂಚೂಣಿಗರನ್ನು ರೂಪಿಸಬೇಕು. ಜೊತೆಗೆ, ಪ್ರಕೃತಿ ಸಂಪನ್ಮೂಲಗಳ ಶೋಷಣೆಯಿಂದ ಉಂಟಾಗುತ್ತಿರುವ ಪರಿಸರ ಮತ್ತು ಸಾಮಾಜಿಕ ಹಾನಿಗಳ ಬಗ್ಗೆ ಕಣ್ಣುಮುಚ್ಚಬಾರದು ಎಂದು ಅವರು ಎಚ್ಚರಿಸಿದರು.
ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ, ತಾಂತ್ರಿಕ ಜ್ಞಾನ ಮಾತ್ರವಲ್ಲದೆ ಮಾನವೀಯ ಮೌಲ್ಯಗಳ ಬೆಳವಣಿಗೆಯೂ ಅಗತ್ಯವಾಗಿದೆ. ಮಾನವ ಸಂಬಂಧಗಳು ಯಾಂತ್ರಿಕ ಸಂವಹನಗಳಾಗುವ ಅಪಾಯವಿದೆ, ಆದರೆ ನಾವು ನಿಜವಾದ ವ್ಯಕ್ತಿಗಳಾಗಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಜಗದ್ಗುರುಗಳು ಹೇಳಿದರು. ಇಲ್ಲವಾದರೆ, ಜನರು ತಮ್ಮದೇ ಪ್ರಪಂಚದಲ್ಲಿ ಬದುಕುತ್ತಾ ಭಿನ್ನತೆಯನ್ನು ಭಯಪಡುವ ಸ್ಥಿತಿಗೆ ತಲುಪುತ್ತಾರೆ ಇದರಿಂದ ವಿಭಜನೆ, ಸಂಘರ್ಷ ಮತ್ತು ಹಿಂಸೆ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ, ಕಥೋಲಿಕ ವಿಶ್ವವಿದ್ಯಾಲಯಗಳು ಜ್ಞಾನವನ್ನು ನೀಡುವುದರ ಜೊತೆಗೆ ವಿವೇಕಪೂರ್ಣ ಮನಸ್ಸು, ಪ್ರೀತಿಯ ಹೃದಯ ಮತ್ತು ಸೇವಾ ಮನೋಭಾವ ಹೊಂದಿದ ನಾಯಕರನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊರುತ್ತವೆ.
ಕೊನೆಯಲ್ಲಿ, ಕ್ಯಾಮರೂನ್‌ನ ಯುವಜನತೆಗೆ ತಮ್ಮ ದೇಶವನ್ನು ಬಿಟ್ಟು ಹೊರಡುವ ಬದಲು ತಮ್ಮದೇ ದೇಶದಲ್ಲಿ ಸೇವೆ ಸಲ್ಲಿಸಲು ಜಗದ್ಗುರುಗಳು ಪ್ರೇರೇಪಿಸಿದರು. ವಿಶ್ವವಿದ್ಯಾಲಯವು ಧರ್ಮ ಸಭೆಯ ಹೃದಯದಿಂದ ಹುಟ್ಟಿಕೊಂಡಿದ್ದು, ಅದರ ಮಿಷನ್ ಕ್ರಿಸ್ತನ ಸುವಾರ್ತೆಯನ್ನು ಎಲ್ಲರಿಗೂ ಘೋಷಿಸುವುದಾಗಿದೆ ಎಂದು ಅವರು ನೆನಪಿಸಿದರು. ಪ್ರಾಧ್ಯಾಪಕರು ತಮ್ಮ ಬೋಧನೆಗಳಲ್ಲಿ ಪ್ರತಿಪಾದಿಸುವ ಮೌಲ್ಯಗಳನ್ನು ತಮ್ಮ ಜೀವನದಲ್ಲೇ ಅನುಸರಿಸಬೇಕು. ಭ್ರಷ್ಟಾಚಾರದಿಂದ ಮುಕ್ತವಾದ ಸಮಾಜವನ್ನು ನಿರ್ಮಿಸಲು ವಿನಯವೇ ಮುಖ್ಯ ಗುಣವಾಗಬೇಕು. ನಾವು ಎಲ್ಲರೂ ಶಿಷ್ಯರಾಗಿದ್ದೇವೆ ಎಂಬ ಅರಿವು ಸದಾ ನಮ್ಮಲ್ಲಿ ಇರಬೇಕು ಎಂದು ಅವರು ತಮ್ಮ ಪ್ರಭೋಧನೆಯ ಅಂತ್ಯದಲ್ಲಿ ಹೇಳಿದರು.
