ಜಗದ್ಗುರುಗಳ ಆಫ್ರಿಕಾ ಭೇಟಿಯ ಕುರಿತು ಕಾರ್ಡಿನಲ್ ಪಾರೋಲಿನ್ ರವರು :ಕಥೋಲಿಕರು ಬದಲಾವಣೆಯನ್ನು ಉತ್ತೇಜಿಸಬೇಕು
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಏಪ್ರಿಲ್ 13ರಿಂದ 23ರವರೆಗೆ ಆಫ್ರಿಕಾದ ನಾಲ್ಕು ರಾಷ್ಟ್ರಗಳು—ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಇಕ್ವೇಟೋರಿಯಲ್ ಗಿನಿಯಾಕ್ಕೆ ಪ್ರೇಷಿತರ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸದ ಉದ್ದೇಶವು ಕಷ್ಟ, ಬಡತನ, ಅಸಮಾನತೆ ಮತ್ತು ಅಶಾಂತಿಯನ್ನು ಎದುರಿಸುತ್ತಿರುವ ಜನರೊಂದಿಗೆ ಆಧ್ಯಾತ್ಮಿಕ ಸಾನ್ನಿಧ್ಯವನ್ನು ಹಂಚಿಕೊಳ್ಳುವುದಾಗಿದೆ. ಜಗದ್ಗುರಗಳು ಆಧ್ಯಾತ್ಮಿಕ ಭರವಸೆಯ ಸಂದೇಶದ ಮೂಲಕ ಜನರ ಹೃದಯಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ.
ಅಲ್ಜೀರಿಯಾದಲ್ಲಿ ಜಗದ್ಗುರುಗಳು ಅಲ್ಜಿಯರ್ಸ್‌ನ ಮಹಾ ಮಸೀದಿಗೆ ಭೇಟಿ ನೀಡಿ, ಸಂತ ಆಗಸ್ಟಿನ್ ರವರ ಪರಂಪರೆಯ ನೆನಪಿಗೆ ಸಂಬಂಧಿಸಿದ ಅನ್ನಾಬಾದಲ್ಲಿ ಪವಿತ್ರ ಬಲಿ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಭೇಟಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ನಡುವೆ ಸಂವಾದವನ್ನು ಗಾಢಗೊಳಿಸುವ ಸಂಕೇತವಾಗಲಿದೆ. ಸಂತ ಆಗಸ್ಟಿನ್ ರವರ ಆಧ್ಯಾತ್ಮಿಕ ಪರಂಪರೆ ಈ ಭೇಟಿಗೆ ವಿಶೇಷ ಮಹತ್ವ ನೀಡುತ್ತದೆ.
ಕ್ಯಾಮರೂನ್‌ನಲ್ಲಿ ಜಗದ್ಗುರುಗಳು ಯೌಂಡೆ, ಬಮೆಂಡಾ ಮತ್ತು ಡುವಾಲಾ ನಗರಗಳಿಗೆ ಭೇಟಿ ನೀಡಲಿದ್ದಾರೆ. ವಿಶೇಷವಾಗಿ ಬಮೆಂಡಾದಲ್ಲಿ ನಡೆಯುತ್ತಿರುವ ಅಶಾಂತಿ ಮತ್ತು ಮಾನವೀಯ ಸಂಕಷ್ಟದ ಹಿನ್ನೆಲೆಯಲ್ಲಿ, ಈ ಭೇಟಿ ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಹರಡಲು ಮಹತ್ವದ್ದಾಗಿದೆ. ಯುವಕರಿಗೆ ಭರವಸೆ ನೀಡುವ ಮತ್ತು ಸಮುದಾಯಗಳ ನಡುವೆ ಸೌಹಾರ್ದವನ್ನು ಉತ್ತೇಜಿಸುವುದು ಈ ಪ್ರವಾಸದ ಪ್ರಮುಖ ಉದ್ದೇಶವಾಗಿದೆ.
ಅಂಗೋಲಾದಲ್ಲಿ ಜಗದ್ಗುರುಗಳು ಲುವಾಂಡಾ, ಸೌರಿಮೊ ಮತ್ತು ಮುಕ್ಸಿಮಾ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಪ್ರಕೃತಿ ಸಂಪತ್ತು ಇದ್ದರೂ ಅಸಮಾನತೆ, ಕಾರ್ಮಿಕರ ಶೋಷಣೆ ಮತ್ತು ಪರಿಸರ ಹಾನಿ ಮುಂತಾದ ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಆದರೂ, ಮುಕ್ಸಿಮಾದ ಮರಿಯನ್ ಪವಿತ್ರಸ್ಥಳದಲ್ಲಿ ನಡೆಯುವ ಪ್ರಾರ್ಥನೆ ಜನರ ನಂಬಿಕೆಯನ್ನು ಬಲಪಡಿಸುವ ಮಹತ್ವದ ಕ್ಷಣವಾಗಲಿದೆ.
ಇಕ್ವೇಟೋರಿಯಲ್ ಗಿನಿಯಲ್ಲಿ ಜಗದ್ಗುರುಗಳು ಯುವಕರು, ಕುಟುಂಬಗಳು ಮತ್ತು ಬಂಧಿತರೊಂದಿಗೆ ಸಂವಾದ ನಡೆಸಲಿದ್ದಾರೆ. ಇದು ನಂಬಿಕೆಯನ್ನು ಬಲಪಡಿಸುವುದರ ಜೊತೆಗೆ ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ನೈತಿಕ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಕುಟುಂಬಗಳು ಮತ್ತು ಯುವಕರ ಪಾತ್ರವನ್ನು ವಿಶೇಷವಾಗಿ ಒತ್ತಿಹೇಳಲಾಗುತ್ತದೆ.
ಈ ಪ್ರವಾಸಕ್ಕೆ ರಾಜತಾಂತ್ರಿಕ ಮಹತ್ವವೂ ಇದೆ. ವಿವಿಧ ರಾಷ್ಟ್ರಗಳೊಂದಿಗೆ ಸಂಬಂಧ ಬಲಪಡಿಸುವುದು, ಧಾರ್ಮಿಕ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಶಾಂತಿಯ ಕುರಿತು ಸಂವಾದ ನಡೆಸುವುದು ಈ ಪ್ರಯಾಣದ ಪ್ರಮುಖ ಭಾಗವಾಗಿದೆ. ಇದು ದೇಶಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಳೆಸುವ ಪ್ರಯತ್ನವಾಗಿದೆ.
ಆಫ್ರಿಕಾ ಬಡತನ, ಭ್ರಷ್ಟಾಚಾರ ಮತ್ತು ಹಿಂಸೆಯಿಂದ ಬಳಲುತ್ತಿದ್ದರೂ, ಮಾನವೀಯ ಮತ್ತು ಸಾಂಸ್ಕೃತಿಕ ಸಂಪತ್ತಿನಲ್ಲಿ ಶ್ರೀಮಂತವಾಗಿದೆ. ಕಥೋಲಿಕ ಧರ್ಮ ಸಭೆ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಾಮಾಜಿಕ ಸೇವೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಿದೆ. ಜೊತೆಗೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಕಾರ್ಯದಲ್ಲಿಯೂ ಧರ್ಮ ಸಭೆ ತೊಡಗಿಸಿಕೊಂಡಿದೆ.
ಈ ಪ್ರೆಷಿತರ ಪ್ರಯಾಣ ಶಾಂತಿ, ಸಂವಾದ ಮತ್ತು ಸ್ಥಳೀಯ ಧರ್ಮ ಸಭೆಗಳ ಬೆಳವಣಿಗೆಗೆ ಹೊಸ ದಿಕ್ಕನ್ನು ನೀಡಲಿದೆ. ಆಫ್ರಿಕಾದ ಭವಿಷ್ಯವು ನಂಬಿಕೆ, ಸಹಕಾರ ಮತ್ತು ಏಕತೆಯ ಮೇಲೆ ನಿಂತಿದೆ ಎಂಬ ಭರವಸೆಯನ್ನು ಈ ಭೇಟಿ ಮತ್ತಷ್ಟು ಗಟ್ಟಿಗೊಳಿಸುತ್ತದೆ.
