ಕಾರ್ಡಿನಲ್ ಅಂಬೋಂಗೊ: ಜಗದ್ಗುರು ಲಿಯೋರವರ ಆಫ್ರಿಕಾ ಭೇಟಿ ಮಾನವ ಗೌರವವನ್ನು ಉತ್ತೇಜಿಸಿತು.
ವ್ಯಾಟಿಕನ್ ವರದಿ
ಭೇಟಿ ನೀಡಲಾದ ದೇಶಗಳ ಆಯ್ಕೆ ಆಫ್ರಿಕಾದ ಸವಾಲುಗಳ ವೈವಿಧ್ಯತೆಯನ್ನು ತೋರಿಸುತ್ತದೆ. ಅಲ್ಜೀರಿಯಾದಲ್ಲಿ ಅಂತರಧಾರ್ಮಿಕ ಸಂವಾದ, ಕ್ಯಾಮರೂನ್‌ನಲ್ಲಿ ಶಾಂತಿಯ ಸಾಧನೆ, ಮತ್ತು ಅಂಗೋಲಾ ಹಾಗೂ ಇಕ್ವೇಟೋರಿಯಲ್ ಗಿನಿಯಾದಲ್ಲಿ ಸಂಪತ್ತಿನ ನ್ಯಾಯಸಮ್ಮತ ಹಂಚಿಕೆಗೆ ಕರೆ.
ವ್ಯಾಟಿಕನ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಕಿನ್ಶಾಸಾ ಮಹಾಧರ್ಮಾಧ್ಯಕ್ಷರು ಮತ್ತು ಆಫ್ರಿಕಾ ಹಾಗೂ ಮಡಗಾಸ್ಕರ್ ಬಿಷಪ್‌ಗಳ ಸಮ್ಮೇಳನದ (ಎಸ್ಇಸಿಎಎಂ) ಅಧ್ಯಕ್ಷರಾದ ಕಾರ್ಡಿನಲ್ ಫ್ರಿಡೋಲಿನ್ ಅಂಬೋಂಗೊ ಬೆಸುಂಗುರವರು, ಏಪ್ರಿಲ್ 13 ರಿಂದ 23ರವರೆಗೆ ನಡೆದ ಜಗದ್ಗುರು ಲಿಯೋರವರ ಆಫ್ರಿಕಾ ಪ್ರೇಷಿತರ ಭೇಟಿಯ ಮಹತ್ವವನ್ನು ಒತ್ತಿಹೇಳುತ್ತಾ ಈ ವಿಷಯವನ್ನು ವ್ಯಕ್ತಪಡಿಸಿದರು.
ಇದಲ್ಲದೆ, ಕಾರ್ಡಿನಲ್ ರವರು ಜಗದ್ಗುರುಗಳು ರಾಜಕೀಯ ನಾಯಕರಿಗೆ ಮಾಡಿದ ಮನವಿಗಳ ಮಹತ್ವವನ್ನು ವಿಶೇಷವಾಗಿ ಒತ್ತಿಹೇಳಿದರು—ವಿಶೇಷವಾಗಿ, ಸ್ಥಳೀಯವಾಗಿ ಗೌರವಯುತ ಜೀವನ ಪರಿಸ್ಥಿತಿಗಳನ್ನು ನಿರ್ಮಿಸುವ ಮೂಲಕ ಯುವಕರ ವಲಸೆ ಪ್ರವಾಹವನ್ನು ಕಡಿಮೆ ಮಾಡಲು ಅವರು ಕರೆ ನೀಡಿದರು.
ಜಗದ್ಗುರು XIVನೇ ಲಿಯೋರವರ ಪ್ರೇಷಿತರ ಪ್ರಯಾಣವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ?
ನಾನು ಸಂತೋಷವಾಗಿದ್ದೇನೆ, ತೃಪ್ತನಾಗಿದ್ದೇನೆ ಎಲ್ಲಾ ಆಫ್ರಿಕಾ ಜನರ ಪರವಾಗಿ ಹೇಳುವುದಾದರೆ. ಇದು ನಮಗೆ ಹೆಮ್ಮೆಯ ವಿಷಯವಾಗಿದ್ದು, ಜೊತೆಗೆ ಒಂದು ಜವಾಬ್ದಾರಿಯೂ ಆಗಿದೆ. ಇದರಿಂದ ನಾಳೆಯ ವಿಶ್ವ ಧರ್ಮ ಸಭೆ ಆಫ್ರಿಕಾ ಧರ್ಮ ಸಭೆಯೊಂದಿಗೆ ಕೈಜೋಡಿಸಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ, ಮತ್ತು ನಾವು ಈ ಜವಾಬ್ದಾರಿಯನ್ನು ಸ್ವೀಕರಿಸಬೇಕು.
ಎರಡನೆಯದಾಗಿ, ಈ ನಾಲ್ಕು ದೇಶಗಳ ಆಯ್ಕೆಯನ್ನು ಗಮನಿಸುವುದು ಮುಖ್ಯ. ಅವುಗಳಲ್ಲಿ ಒಂದು ಅರಬ್ ಮತ್ತು ಮುಖ್ಯವಾಗಿ ಮುಸ್ಲಿಂ ದೇಶವಾಗಿದ್ದು, ಅಲ್ಲಿ ವಾಸಿಸುವ ಕ್ರೈಸ್ತರಿಗೆ ಧಾರ್ಮಿಕ ಸ್ವಾತಂತ್ರ್ಯದ ಮಹತ್ವದ ಸಂದೇಶವನ್ನು ಜಗದ್ಗುರುಗಳು ನೀಡಿದರು. ನಂತರ ಅವರು ಕ್ಯಾಮರೂನ್‌ಗೆ ಭೇಟಿ ನೀಡಿದರು—ಅಲ್ಲಿ ಸಮುದಾಯಗಳ ನಡುವೆ ಸಹಜೀವನದ ಸವಾಲುಗಳಿವೆ ಅಲ್ಲಿ ಅವರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕುವ ಕುರಿತು ಬಲವಾದ ಸಂದೇಶ ನೀಡಿದರು. ಉಳಿದ ಎರಡು ದೇಶಗಳು ಸಂಪನ್ಮೂಲ ಸಮೃದ್ಧವಾಗಿದ್ದು, ಅಲ್ಲಿ ಜಗದ್ಗುರುಗಳ ಸಂದೇಶವು ಸಂಪತ್ತಿನ ನ್ಯಾಯಸಮ್ಮತ ಹಂಚಿಕೆಯ ಅಗತ್ಯದ ಮೇಲೆ ಕೇಂದ್ರೀಕರಿಸಿತು ಎಲ್ಲರ ಹಿತಕ್ಕಾಗಿ ಸಂಪನ್ಮೂಲಗಳನ್ನು ಬಳಸಬೇಕು.
ನಮ್ಮ ಆಫ್ರಿಕಾ ಕಥೋಲಿಕರ ದೃಷ್ಟಿಯಲ್ಲಿ, ಮುಖ್ಯ ಸಂದೇಶವು ನಮ್ಮ ನಂಬಿಕೆಯನ್ನು ಆಳವಾಗಿ ಗ್ರಹಿಸುವುದು ಮತ್ತು ನಮ್ಮ ಕಥೋಲಿಕರ ಗುರುತನ್ನು ಅರಿಯುವುದರ ಬಗ್ಗೆ ಆಗಿತ್ತು. ಇತರರೊಂದಿಗೆ ಸಂವಹನ ಮಾಡುವ ಮುನ್ನ ನಾವು ನಮ್ಮನ್ನು ನಾವು ತಿಳಿದುಕೊಳ್ಳಬೇಕು. ಧರ್ಮ ಸಭೆಗೆ ನೀಡಿದ ಪ್ರಮುಖ ಸಂದೇಶವೇ ಇದು ನಮ್ಮ ಕಥೋಲಿಕರ ಗುರುತನ್ನು ಗುರುತಿಸಿಕೊಳ್ಳುವುದು. ಈ ಪ್ರಯಾಣದ ಸಮಯದಲ್ಲಿ, ಜಗದ್ಗುರುಗಳು ಆಫ್ರಿಕಾ ಧರ್ಮ ಸಭೆಯ ಎಲ್ಲಾ ಅಂಶಗಳನ್ನು ಭೇಟಿಯಾಗಿ ನೋಡಿದರು ಇದು ನನಗೆ ಬಹಳ ಪ್ರೇರಣಾದಾಯಕವಾಗಿತ್ತು.
ಸಾಮಾಜಿಕ ರಾಜಕೀಯ ದೃಷ್ಟಿಕೋನದಿಂದ, ಅವರು ಶಾಂತಿ, ನ್ಯಾಯ ಮತ್ತು ಉತ್ತಮ ಆಡಳಿತವನ್ನು ಒತ್ತಿಹೇಳಿದರು. ಇದು ಈ ಎಲ್ಲಾ ದೇಶಗಳಿಗೆ ಅನ್ವಯಿಸುತ್ತದೆ. ಜಗದ್ಗುರು XIVನೇ ಲಿಯೋರವರು ಅಲ್ಜೀರಿಯಾ (ಅರಬಿಕ್ ಮಾತನಾಡುವ ಮತ್ತು ಬಹುಪಾಲು ಮುಸ್ಲಿಂ ಜನಸಂಖ್ಯೆಯ ದೇಶ), ಕ್ಯಾಮರೂನ್ (ಭಾಗಶಃ ಫ್ರೆಂಚ್ ಮತ್ತು ಭಾಗಶಃ ಇಂಗ್ಲಿಷ್ ಭಾಷೆಯ ದೇಶ), ಅಂಗೋಲಾ (ಪೋರ್ಚುಗೀಸ್ ಭಾಷೆಯ ದೇಶ), ಮತ್ತು ಇಕ್ವೇಟೋರಿಯಲ್ ಗಿನಿಯಾ (ಸ್ಪ್ಯಾನಿಷ್ ಭಾಷೆಯ ಏಕೈಕ ಆಫ್ರಿಕಾ ದೇಶ)ಗಳಿಗೆ ಭೇಟಿ ನೀಡಿದರು.
ಪೋಪ್ ಎದುರಿಸಿದ ಧರ್ಮ ಸಭೆಯ ಮುಖ ಯಾವುದು?
ಇದು ಎರಡು ಮುಖಗಳನ್ನು ಹೊಂದಿದೆ. ಮೊದಲನೆಯದು—ಇದು ಯುವ ಹಾಗೂ ಚುರುಕು ಧರ್ಮ ಸಭೆ, ತನ್ನ ಭವಿಷ್ಯದ ಬಗ್ಗೆ ಆತ್ಮವಿಶ್ವಾಸ ಹೊಂದಿದೆ. ಇದು ಜಗದ್ಗುರುಗಳ ಇತ್ತೀಚಿನ ಎಲ್ಲಾ ಭೇಟಿಗಳಲ್ಲೂ ಸ್ಪಷ್ಟವಾಗಿ ಗೋಚರಿಸಿತು. ಯುವಜನರಿಂದ ತುಂಬಿರುವ ಧರ್ಮ ಸಭೆ ಅವರು ಭವಿಷ್ಯವನ್ನು ಪ್ರತಿನಿಧಿಸುತ್ತಾರೆ. ಮತ್ತೊಂದೆಡೆ, ಇದು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಧರ್ಮ ಸಭೆ ದಾರಿದ್ರ್ಯ, ಕೆಲವು ದೇಶಗಳಲ್ಲಿ ನ್ಯಾಯದ ಕೊರತೆ, ಮತ್ತು ಅಧಿಕಾರದ ದುರುಪಯೋಗದಿಂದ ಶಾಂತಿಯುತವಾಗಿ ಬದುಕುವಲ್ಲಿ ಕಷ್ಟ. ಜಗದ್ಗುರುಗಳು ಭೇಟಿ ನೀಡಿದ ಧರ್ಮ ಸಭೆ ಇದೇ ಆಗಿದ್ದು, ಅವರ ಭೇಟಿ ಭವಿಷ್ಯದತ್ತ ಮುಂದುವರೆಯಲು ಪ್ರೋತ್ಸಾಹ ನೀಡುವಂತಾಗಿದೆ. ಇದು ನಮಗೂ ಹಾಗೂ ಎಲ್ಲಾ ಕಥೋಲಿಕರಿಗೆ ಅಪಾರ ಪ್ರೇರಣೆಯಾಗಿದೆ ನಮ್ಮ ನಂಬಿಕೆಗೆ ದೃಢೀಕರಣದ ಕ್ಷಣವಾಗಿದೆ.
ಜಗದ್ಗುರುಗಳು ಸ್ವಾತಂತ್ರ್ಯ, ಸಮಾನತೆ ಬಗ್ಗೆ ಬಲವಾಗಿ ಮಾತನಾಡಿ, ಕೆಲವೇ ಶ್ರೀಮಂತರ ಮತ್ತು ಬಹಳಷ್ಟು ಬಡವರ ನಡುವಿನ ಅಂತರವನ್ನು ಖಂಡಿಸಿ, ಮಾನವ ಗೌರವಕ್ಕೆ ಗೌರವ ನೀಡಬೇಕೆಂದು ಕರೆ ನೀಡಿದರು. ಈ ಸಂದೇಶವು ಈ ನಾಲ್ಕು ದೇಶಗಳಲ್ಲಿ ಎಷ್ಟು ಪರಿಣಾಮ ಬೀರುತ್ತದೆ ಎಂದು ನೀವು ಭಾವಿಸುತ್ತೀರಿ?
ನಾನು ಜಗದ್ಗುರುಗಳ ಸಂದೇಶವನ್ನು ಭವಿಷ್ಯವಾಣಿ ಸ್ವರೂಪದದ್ದೆಂದು ಕಾಣುತ್ತೇನೆ. ಪ್ರವಾದಿ ಮಾತನಾಡಿದಾಗ ಕೆಲವರು ಕೇಳುತ್ತಾರೆ, ಕೆಲವರು ಕೇಳುವುದಿಲ್ಲ ಯೇಸು ಕ್ರಿಸ್ತನ ಕಾಲದಲ್ಲೂ ಹಾಗೆಯೇ ಇತ್ತು, ಜಗದ್ಗುರು ಲಿಯೋ ಅವರ ಸಂದೇಶಕ್ಕೂ ಹಾಗೆಯೇ ಆಗಲಿದೆ.
ಜನಸಾಮಾನ್ಯರ ಬಗ್ಗೆ ಏನು ಹೇಳಬಹುದು? ಅವರಲ್ಲಿ ಧೈರ್ಯ ತುಂಬಲು ಜಗದ್ಗುರುಗಳ ಮಾತುಗಳು ಎಷ್ಟು ಮುಖ್ಯವಾಗಿದ್ದವು?
ಜನರ ಸಂತೋಷ ವಿಶೇಷವಾಗಿ ಯುವಕರದು—ಸ್ಪಷ್ಟವಾಗಿ ಗೋಚರಿಸಿತು. ಜಗದ್ಗುರುಗಳ ಸಂದೇಶವು ಅವರಿಗೆ ವಿಶ್ವಾಸ ಮತ್ತು ಶಕ್ತಿ ನೀಡುವುದೇ?
ಜಗದ್ಗುರುಗಳ ಸಂದೇಶದ ಮೌಲ್ಯವೆಂದರೆ, ಇದು ಆಫ್ರಿಕಾ ನಾಯಕರ ಮನಸ್ಸಿನ ಧ್ವನಿಗೆ ಮಾಡಿದ ಕರೆ. ಯುವಕರ ಭವಿಷ್ಯಕ್ಕಾಗಿ ಅವಕಾಶಗಳನ್ನು ಸೃಷ್ಟಿಸಬೇಕು ಎಂಬುದಾಗಿದೆ. ನಾವು ಉತ್ಸಾಹಭರಿತ ಯುವಕರನ್ನು ನೋಡಿದ್ದೇವೆ ಆದರೆ, ಮತ್ತೊಂದೆಡೆ ಉತ್ತಮ ಜೀವನದ ಹುಡುಕಾಟದಲ್ಲಿ ಖಂಡವನ್ನು ತೊರೆಯುವವರನ್ನೂ ಯೋಚಿಸಬೇಕು ಅವರಲ್ಲಿ ಹಲವರು ಸಹಾರಾ ಮರುಭೂಮಿಯಲ್ಲಿ ಅಥವಾ ಸಮುದ್ರದಲ್ಲಿ ಜೀವ ಕಳೆದುಕೊಳ್ಳುತ್ತಾರೆ. ಇದರಿಂದ ಆಫ್ರಿಕಾದಲ್ಲಿ ಏನೋ ತಪ್ಪಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಜಗದ್ಗುರುಗಳು ನಾಯಕರಿಗೆ ನೀಡಿದ ಸಂದೇಶ ಸರಿಯಾಗಿದೆ ಯುವಕರು ಇಲ್ಲಿ ಸಂತೋಷದಿಂದ ಬದುಕುವಂತೆ ಪರಿಸ್ಥಿತಿಗಳನ್ನು ನಿರ್ಮಿಸಬೇಕು.
ನೀವು ಆಶಾವಾದಿಯಾಗಿದ್ದೀರಾ?
ಹೌದು, ಬಹಳ ಮಟ್ಟಿಗೆ. ನಾನು ಈ ಖಂಡದ ಭವಿಷ್ಯದಲ್ಲಿ, ವಿಶೇಷವಾಗಿ ನನ್ನ ದೇಶ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಭವಿಷ್ಯದಲ್ಲಿ ನಂಬಿಕೆ ಇಟ್ಟಿದ್ದೇನೆ ಇದೀಗ ಅದು ಸಂಕಷ್ಟವನ್ನು ಎದುರಿಸುತ್ತಿದೆ.
ಕಾರ್ಡಿನಲ್ ಅಂಬೋಂಗೊ, ಈ ಭೇಟಿಯಿಂದ ನಿಮಗೆ ಯಾವ ಭಾವನೆ ಉಳಿದಿದೆ?
ನನಗೆ ಮೊದಲನೆಯದಾಗಿ ಹೆಮ್ಮೆ ಅನ್ನಿಸುತ್ತದೆ. ನಾನು ಹೆಮ್ಮೆ ಮತ್ತು ಸಂತೋಷವನ್ನು ಅನುಭವಿಸುತ್ತಿದ್ದೇನೆ, ಮತ್ತು ಎಲ್ಲಾ ಆಫ್ರಿಕನ್ನರೂ ಈಗ ಇದೇ ಭಾವನೆ ಹೊಂದಿದ್ದಾರೆ ಎಂದು ನಂಬುತ್ತೇನೆ. ಈ ಭಾವನೆ ಮುಂದುವರಿಯಲಿ ಎಂಬುದು ನನ್ನ ಆಶಯ. ಆಫ್ರಿಕಾ ಧರ್ಮ ಸಭೆಗೆ ಫಲಗಳು ದೊರೆಯಲಿವೆ, ಮತ್ತು ಅದರ ಪಾತ್ರವನ್ನು ವಿಶ್ವ ಮಟ್ಟದಲ್ಲಿ ಗುರುತಿಸಬೇಕು. ಜಗದ್ಗುರು ಲಿಯೋರವರ ಮೊದಲ ವರ್ಷದ ಸೇವೆಯನ್ನು ಗಮನಿಸಿದರೆ, ನಾವು ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಿದ್ದೇವೆ ಎಂದರು.
