ಹುಡುಕಿ

ಜಗದ್ಗುರು XIVನೇ ಲಿಯೋರವರು ಕ್ಯಾಂಟರ್ಬರಿ ಆರ್ಚ್‌ಬಿಷಪ್ ಡೇಮ್ ಸಾರಾ ಮುಲ್ಲಾಲಿರವರನ್ನು ಭೇಟಿ ಮಾಡುತ್ತಾರೆ ಜಗದ್ಗುರು XIVನೇ ಲಿಯೋರವರು ಕ್ಯಾಂಟರ್ಬರಿ ಆರ್ಚ್‌ಬಿಷಪ್ ಡೇಮ್ ಸಾರಾ ಮುಲ್ಲಾಲಿರವರನ್ನು ಭೇಟಿ ಮಾಡುತ್ತಾರೆ  (ANSA)

ಜಗದ್ಗುರುಗಳು: ಆಂಗ್ಲಿಕನ್‌ಗಳು ಮತ್ತು ಕಥೋಲಿಕರು ಭಿನ್ನತೆಗಳನ್ನು ಮೀರುವುದಕ್ಕಾಗಿ ಮುಂದುವರಿದು ಒಟ್ಟಾಗಿ ಕೆಲಸ ಮಾಡಬೇಕು.

ಕ್ಯಾಂಟರ್ಬರಿ ಆರ್ಚ್‌ಬಿಷಪ್ ರವರನ್ನು ಮೊದಲ ಬಾರಿಗೆ ಭೇಟಿ ಮಾಡಿದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಕಥೋಲಿಕರು ಮತ್ತು ಆಂಗ್ಲಿಕನ್‌ಗಳು ತಮ್ಮ ನಡುವೆ ಇರುವ ಯಾವುದೇ ಭಿನ್ನತೆಗಳು ಮತ್ತು ಸವಾಲುಗಳನ್ನು ಮೀರಿ, ಒಟ್ಟಾಗಿ ಕ್ರಿಸ್ತನನ್ನು ಜಗತ್ತಿಗೆ ಸಾರಲು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ಕ್ಯಾಂಟರ್ಬರಿ ಆರ್ಚ್‌ಬಿಷಪ್, ಅತ್ಯಂತ ಗೌರವಾನ್ವಿತ ಮತ್ತು ಮಾನ್ಯರಾದ ಡೇಮ್ ಸಾರಾ ಮುಲ್ಲಾಲಿರವರನ್ನು ಭೇಟಿ ಮಾಡಿ, ಪ್ರೇಷಿತರ ಅರಮನೆಯ ಅರ್ಬನ್ VIIIನೇ ಚಾಪೆಲ್‌ನಲ್ಲಿ ಅವರೊಂದಿಗೆ ಪ್ರಾರ್ಥಿಸಿದರು.

ತಮ್ಮ ಅಭಿನಂದನಾ ಮಾತುಗಳಲ್ಲಿ, ಜಗದ್ಗುರುಗಳು ಪಾಸ್ಖ ಕಾಲದಲ್ಲಿ ಆರ್ಚ್‌ಬಿಷಪ್ ರವರನ್ನು ಸ್ವಾಗತಿಸುವ ಸಂತೋಷವನ್ನು ವ್ಯಕ್ತಪಡಿಸಿದರು. ಜೊತೆಗೆ, 60 ವರ್ಷಗಳ ಹಿಂದೆ ನಡೆದ ಜಗದ್ಗುರು ಸಂತ VIನೇ ಪೌಲ್ ಮತ್ತು ಆರ್ಚ್‌ಬಿಷಪ್ ಮೈಕೆಲ್ ರ್ಯಾಮ್ಸಿ ರವರ ಐತಿಹಾಸಿಕ ಭೇಟಿಯನ್ನು ಸ್ಮರಿಸಿದರು.

ರೋಮಿನ ಆಂಗ್ಲಿಕನ್ ಕೇಂದ್ರದ ಸೇವೆಯನ್ನು ಅವರು ಮೆಚ್ಚಿ, ಕ್ಯಾಂಟರ್ಬರಿ ಆರ್ಚ್‌ಬಿಷಪ್ ರವರ ಪರವಾಗಿ ಜಗದ್ಗುರುಗಳ ಅಧಿಕಾರ ಸ್ಥಳವು ಪ್ರತಿನಿಧಿಸುತ್ತಿರುವ ಅದರ ನಿರ್ದೇಶಕ ಬಿಷಪ್ ಆಂಥನಿ ಬಾಲ್ ರವರಿಗೆ ವಂದನೆ ಸಲ್ಲಿಸಿದರು.

ಜಗದ್ಗುರು ಲಿಯೋರವರು ಕ್ರಿಸ್ತನ ಪುನರುತ್ಥಾನದ ಶಾಂತಿಯ ಸಂದೇಶವನ್ನು ಹಂಚಿಕೊಂಡು, ಅದು ಎಲ್ಲ ಕ್ರೈಸ್ತರಿಗೆ ಆಹ್ವಾನವಾಗಿದೆ ಎಂದು ಹೇಳಿದರು. “ಪುನರುತ್ಥಾನಿ ಪ್ರಭುವಿನ ಶಾಂತಿ ಶಸ್ತ್ರರಹಿತವಾಗಿದೆ,” ಎಂದು ಅವರು ಹೇಳಿ, ಯೇಸು ಯಾವಾಗಲೂ ಹಿಂಸೆ ಮತ್ತು ಆಕ್ರಮಣಕ್ಕೆ ಶಸ್ತ್ರರಹಿತ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಮತ್ತು ನಮಗೂ ಅದೇ ರೀತಿಯಲ್ಲಿ ನಡೆದುಕೊಳ್ಳಲು ಆಹ್ವಾನಿಸುತ್ತಾರೆ ಎಂದು ವಿವರಿಸಿದರು.

ಕ್ರೈಸ್ತರ ನಡುವೆ ಇರುವ ವಿಭಜನೆಗಳು, ಜಗತ್ತಿಗೆ ಕ್ರಿಸ್ತನ ಶಾಂತಿಯನ್ನು ಪರಿಣಾಮಕಾರಿಯಾಗಿ ಸಾರುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ ಎಂದು ಅವರು ಹೇಳಿದರು. “ಜಗತ್ತು ನಮ್ಮ ಸಂದೇಶವನ್ನು ಹೃದಯಂಗಮಿಸಬೇಕಾದರೆ, ಸುವಾರ್ತೆಯ ಪ್ರಕಟಣೆಗೆ ಅಡ್ಡಿಯಾಗುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ನಾವು ನಿರಂತರವಾಗಿ ಪ್ರಾರ್ಥನೆ ಮತ್ತು ಪ್ರಯತ್ನ ಮಾಡಬೇಕು,” ಎಂದು ಹೇಳಿದರು.

ಕಥೋಲಿಕರು ಮತ್ತು ಆಂಗ್ಲಿಕನ್‌ಗಳ ನಡುವೆ ಹಲವು ದಶಕಗಳಿಂದ ನಡೆಯುತ್ತಿರುವ ಧಾರ್ಮಿಕ ಸಂವಾದವನ್ನು ಜಗದ್ಗುರು ಲಿಯೋರವರು ಸ್ಮರಿಸಿ, ವಿಶ್ವಾಸ ಮತ್ತು ಸಂಸ್ಕಾರಗಳ ಜೀವನದಲ್ಲಿ ಸಂಪೂರ್ಣ ಏಕತೆಯನ್ನು ಪುನಃ ಸ್ಥಾಪಿಸುವ ದಾರಿಯಲ್ಲಿ ಅದು ಮಹತ್ವದ ಫಲಗಳನ್ನು ನೀಡಿದೆ ಎಂದು ಹೇಳಿದರು. ಆದರೆ ಈ ಮಾರ್ಗವು ಸಂಕೀರ್ಣವಾಗಿದ್ದರೂ, ಹಿಂದೆ ವಿಭಜನೆ ತಂದ ವಿಷಯಗಳ ಕುರಿತು ಉತ್ತಮ ಪ್ರಗತಿ ಕಂಡುಬಂದಿದೆ ಎಂದರು.

ಆದಾಗ್ಯೂ, ಈ ಸವಾಲುಗಳು ಎಷ್ಟೇ ಕಠಿಣವಾಗಿದ್ದರೂ, ನಾವು ಕ್ರಿಸ್ತನನ್ನು ಜಗತ್ತಿಗೆ ಒಟ್ಟಾಗಿ ಸಾರುವ ಅವಕಾಶಗಳನ್ನು ಕಳೆದುಕೊಳ್ಳಬಾರದು, ಎಂದು ಅವರು ಹೇಳಿದರು. 2024ರ ಮೇನಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಹೇಳಿದ ಮಾತುಗಳನ್ನು ಉಲ್ಲೇಖಿಸಿ, “ನಮ್ಮ ವಿಭಜನೆಗಳ ಕಾರಣದಿಂದ ಕ್ರಿಸ್ತನನ್ನು ಪರಿಚಯಿಸುವ ನಮ್ಮ ಸಾಮಾನ್ಯ ಕರ್ತವ್ಯವನ್ನು ನಾವು ನೆರವೇರಿಸದಿದ್ದರೆ, ಅದು ದೊಡ್ಡ ಅಪಕೀರ್ತಿಯಾಗುತ್ತದೆ,” ಎಂದು ಹೇಳಿದರು.

 “ನಮ್ಮ ಭಿನ್ನತೆಗಳು ಎಷ್ಟೇ ಕಠಿಣವಾಗಿದ್ದರೂ ಅವನ್ನು ಮೀರುವ ಪ್ರಯತ್ನವನ್ನು ಮುಂದುವರಿಸದಿದ್ದರೂ ಅದು ಸಹ ಅಪಕೀರ್ತಿಯೇ ಆಗುತ್ತದೆ.”ಎಂದು ಜಗದ್ಗುರು ಲಿಯೋರವರು ಸೇರಿಸಿ ಹೇಳಿದರು,

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಆರ್ಚ್‌ಬಿಷಪ್ ಮುಲ್ಲಾಲಿ ರವರ ಭೇಟಿಗೆ ಧನ್ಯವಾದಗಳನ್ನು ಸಲ್ಲಿಸಿ, ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಆಂಗ್ಲಿಕನ್‌ಗಳು ಮತ್ತು ಕಥೋಲಿಕರು ಸ್ನೇಹ ಮತ್ತು ಸಂವಾದದಲ್ಲಿ ಒಟ್ಟಾಗಿ ಮುಂದುವರಿಯಲಿ ಎಂದು ಅವರು ಪ್ರಾರ್ಥಿಸಿದರು.

27 ಏಪ್ರಿಲ್ 2026, 15:08