ಹುಡುಕಿ

Pope Leo XIV visits Cameroon

ಜಗದ್ಗುರು XIVನೇ ಲಿಯೋರವರು ತಮ್ಮ ಪ್ರೇಷಿತರ ಪ್ರವಾಸದ ಎರಡನೇ ಹಂತಕ್ಕಾಗಿ ಕ್ಯಾಮರೂನ್‌ಗೆ ಆಗಮಿಸಿದರು.

ಆಫ್ರಿಕಾ ಖಂಡಕ್ಕೆ ತನ್ನ ಪ್ರೇಷಿತರ ಪ್ರವಾಸವನ್ನು ಅಲ್ಜೀರಿಯಾದಲ್ಲಿ ಆರಂಭಿಸಿದ ನಂತರ, ಜಗದ್ಗುರುಗಳು ಬುಧವಾರ, ಏಪ್ರಿಲ್ 15 ರಂದು ಕ್ಯಾಮರೂನ್‌ಗೆ ಆಗಮಿಸಿದರು. ಇದರೊಂದಿಗೆ ಆಂಗೋಲಾ ಮತ್ತು ಇಕ್ವಟೋರಿಯಲ್ ಗಿನಿಯಾಗಳಿಗೂ ಅವರನ್ನು ಕರೆದೊಯ್ಯುವ ತನ್ನ ಯಾತ್ರೆಯ ಎರಡನೇ ಹಂತ ಆರಂಭವಾಯಿತು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಬುಧವಾರ, ಏಪ್ರಿಲ್ 15 ರಂದು ಮಧ್ಯಾಹ್ನ 2:57ಕ್ಕೆ (ಸ್ಥಳೀಯ ಸಮಯ) ಕ್ಯಾಮರೂನ್‌ನ ರಾಜಧಾನಿಯಾದ ಯೌಂಡೇ ಸಮೀಪದ ಯೌಂಡೇ-ನ್ಸಿಮಾಲೆನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದರೊಂದಿಗೆ ಅವರ ಪ್ರೇಷಿತರ ಪ್ರವಾಸದ ಎರಡನೇ ಹಂತ ಆರಂಭವಾಯಿತು.

ಅವರು ಸೋಮವಾರ, ಏಪ್ರಿಲ್ 13 ರಂದು ತಲುಪಿದ್ದ ತಮ್ಮ ಪ್ರವಾಸದ ಮೊದಲ ದೇಶವಾದ ಅಲ್ಜೀರಿಯಾದಿಂದ ಇಂದು ಬೆಳಿಗ್ಗೆ ಹೊರಟಿದ್ದರು. ಜಗದ್ಗುರುಗಳು ಏಪ್ರಿಲ್ 18, ಶನಿವಾರದವರೆಗೆ ಕ್ಯಾಮರೂನ್‌ನಲ್ಲಿ ಉಳಿದುಕೊಳ್ಳಲಿದ್ದು, ನಂತರ ಆಂಗೋಲಾ ಮತ್ತು ಇಕ್ವಟೋರಿಯಲ್ ಗಿನಿಯಾಗಳಿಗೆ ಭೇಟಿ ನೀಡಿ, ಏಪ್ರಿಲ್ 23, ಗುರುವಾರ ರೋಮಿಗೆ ಹಿಂತಿರುಗಲಿದ್ದಾರೆ.

ಜಗದ್ಗುರುಗಳು ದೇಶಕ್ಕೆ ಆಗಮಿಸಿದಾಗ ಪ್ರಧಾನಮಂತ್ರಿ ಜೋಸೆಫ್ ಡಿಯಾನ್ ಎಂಗುಟೆ ಸ್ವಾಗತಿಸಿದರು. ಇಬ್ಬರು ಮಕ್ಕಳು ಸಹ ಅವರನ್ನು ಬರಮಾಡಿಕೊಂಡರು. ನಂತರ ವಿವಿಧ ರಾಷ್ಟ್ರಗೀತೆಗಳನ್ನು ವಾದ್ಯಗೊಳಿಸಲಾಯಿತು ಮತ್ತು ಎರಡು ರಾಷ್ಟ್ರಗಳ ಪ್ರತಿನಿಧಿ ಮಂಡಳಿಗಳ ಸದಸ್ಯರನ್ನು ಪರಿಚಯಿಸಲಾಯಿತು. ಸ್ವಾಗತ ಸಮಾರಂಭದ ಬಳಿಕ, ಜಗದ್ಗುರುಗಳು ಪ್ರಧಾನಮಂತ್ರಿಯವರೊಂದಿಗೆ ಸಂಕ್ಷಿಪ್ತವಾಗಿ ಭೇಟಿಯಾದರು.

ಕ್ಯಾಮರೂನ್‌ನಲ್ಲಿ ಜಗದ್ಗುರುಗಳ ಮೊದಲ ದಿನ

ಕ್ಯಾಮರೂನ್‌ನಲ್ಲಿ ಜಗದ್ಗುರುಗಳ ಮೊದಲ ನಿಲ್ದಾಣ ರಾಷ್ಟ್ರಪತಿ ಭವನವಾಗಿದ್ದು, ಅಲ್ಲಿ ಅವರು ಗಣರಾಜ್ಯದ ರಾಷ್ಟ್ರಪತಿ ಪಾಲ್ ಬಾರ್ಥೆಲೇಮಿ ಬಿಯಾರವರೊಂದಿಗೆ ಖಾಸಗಿ ಭೇಟಿಯನ್ನು ನಡೆಸಿ, ಬಳಿಕ ದೇಶದ ಅಧಿಕಾರಿಗಳು, ನಾಗರಿಕ ಸಮಾಜ ಹಾಗೂ ರಾಜತಾಂತ್ರಿಕ ವಲಯದವರಿಗೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅದಾದ ನಂತರ ಜಗದ್ಗುರುಗಳು ಎಂಗುಲ್ ಜಾಂಬಾ ಅನಾಥಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳು ಮತ್ತು ಸಿಬ್ಬಂದಿಯನ್ನು ಭೇಟಿ ಮಾಡಲಿದ್ದಾರೆ. ನಂತರ ದಿನದ ಕೊನೆಯ ಕಾರ್ಯಕ್ರಮವಾಗಿ, ಅವರು ಎಪಿಸ್ಕೋಪಲ್ ಕಾನ್ಫರೆನ್ಸ್ ಮುಖ್ಯ ಕಚೇರಿಯಲ್ಲಿ ಕ್ಯಾಮರೂನ್‌ನ ಬಿಷಪ್‌ಗಳೊಂದಿಗೆ ಖಾಸಗಿ ಸಭೆ ನಡೆಸಲಿದ್ದಾರೆ.

15 ಏಪ್ರಿಲ್ 2026, 13:05