ಹುಡುಕಿ

Il Papa, 'in Africa per rafforzare l'appello per la pace'

“ಜಗದ್ಗುರುಗಳ ಸಾಮಾನ್ಯ ದರ್ಶನದಲ್ಲಿ: ಯುದ್ಧದ ಕಾಲದಲ್ಲಿ ಆಫ್ರಿಕಾ ಪ್ರವಾಸವು ಶಾಂತಿಯ ಸಂದೇಶವಾಗಿತ್ತು.”

“ತಮ್ಮ ವಾರದ ಸಾಮಾನ್ಯ ದರ್ಶನದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಏಪ್ರಿಲ್ 13ರಿಂದ 23ರವರೆಗೆ ನಡೆದ ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಈಕ್ವೇಟೋರಿಯಲ್ ಗಿನಿಯಾ ದೇಶಗಳಿಗೆ ತಮ್ಮ ಇತ್ತೀಚಿನ ಪ್ರೇಷಿತರ ಪ್ರವಾಸದ ವಿವಿಧ ಪ್ರಮುಖ ಕ್ಷಣಗಳನ್ನು ಸ್ಮರಿಸಿದರು.”

ವ್ಯಾಟಿಕನ್

ಜಗದ್ಗುರು XIVನೇ ಲಿಯೋರವರು ಏಪ್ರಿಲ್ 29ರಂದು ಸಾಮಾನ್ಯ ಸಭೆಯ ಸಂದರ್ಭದಲ್ಲಿ ಮಾತನಾಡುತ್ತಾ, ಏಪ್ರಿಲ್ 13ರಿಂದ 23ರವರೆಗೆ ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಈಕ್ವಟೋರಿಯಲ್ ಗಿನಿಯಾಗಳಿಗೆ ನಡೆದ ತಮ್ಮ ಪ್ರೇಷಿತರ ಪ್ರವಾಸವನ್ನು ಸ್ಮರಿಸಿದರು. ಈ ಪ್ರವಾಸವು ಯುದ್ಧಗಳು ಮತ್ತು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಗಳಿಂದ ಗುರುತಿಸಲ್ಪಟ್ಟ ಇತಿಹಾಸದ ಈ ಸಮಯದಲ್ಲಿ “ಶಾಂತಿಯ ಸಂದೇಶ”ವಾಗಿತ್ತು ಎಂದು ಅವರು ಹೇಳಿದರು. ದೇವರು ನೀಡಿದ ಈ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸಿದ ಜಗದ್ಗುರುಗಳು, ಈ ಪ್ರಯಾಣವನ್ನು ದೇವರ ಜನರನ್ನು ಭೇಟಿ ಮಾಡಿ ಉತ್ತೇಜಿಸುವ “ಕುರಿಗಾಹಿಯ ಸೇವೆ” ಎಂದು ವಿವರಿಸಿದರು.

ಈ ಪ್ರವಾಸದಲ್ಲಿ ಜಗದ್ಗುರುಗಳು ಶಾಂತಿಯ ಕೋರಿಕೆಗಳನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಜನರ ಸಂತೋಷಭರಿತ ಸ್ವಾಗತವನ್ನು ಕಂಡರು. ಆಫ್ರಿಕಾ ಜನರಿಗೆ ಇದು ತಮ್ಮ ಧ್ವನಿಯನ್ನು ಕೇಳಿಸಿಕೊಳ್ಳಲು, ದೇವರ ಜನರಾಗಿರುವ ಸಂತೋಷವನ್ನು ವ್ಯಕ್ತಪಡಿಸಲು ಮತ್ತು ಉತ್ತಮ ಭವಿಷ್ಯದ ನಿರೀಕ್ಷೆಯನ್ನು ಹಂಚಿಕೊಳ್ಳಲು ಒಂದು ಅವಕಾಶವಾಗಿತ್ತು. ವಿಶೇಷವಾಗಿ, ಬಾಟ ಕಾರಾಗೃಹದಲ್ಲಿ ಕೈದಿಗಳು ಮಳೆಯ ಮಧ್ಯೆ ಪ್ರಾರ್ಥಿಸಿದ ಕ್ಷಣವನ್ನು ಅವರು ಮರೆಯಲಾಗದು ಎಂದು ಹೇಳಿದರು. ಅದನ್ನು ದೇವರ ರಾಜ್ಯದ ನಿಜವಾದ ಚಿಹ್ನೆ ಎಂದು ಅವರು ವರ್ಣಿಸಿದರು.

ಅಲ್ಜೀರಿಯಾದಲ್ಲಿ ಜಗದ್ಗುರುಗಳು ಸಂತ ಅಗಸ್ಟೀನ್ ರವರ ಹೆಜ್ಜೆ ಗುರುತುಗಳನ್ನು ಅನುಸರಿಸಿ, ತಮ್ಮ ಆಧ್ಯಾತ್ಮಿಕ ಮೂಲಗಳನ್ನು ಮರುಪರಿಶೀಲಿಸಿದರು. ಅಲ್ಲದೆ ವಿವಿಧ ಧರ್ಮಗಳ ಪ್ರತಿನಿಧಿಗಳೊಂದಿಗೆ ಭೇಟಿಯಾಗಿ, ವಿಭಿನ್ನ ಧರ್ಮಗಳವರಾಗಿದ್ದರೂ ಸಹೋದರ ಸಹೋದರಿಯರಂತೆ ಬದುಕಬಹುದು ಎಂಬ ಸಂದೇಶವನ್ನು ನೀಡಿದರು. ಒಂದೇ ಕರುಣಾಮಯ ತಂದೆಯ ಮಕ್ಕಳು ಎಂಬ ಅರಿವು ಶಾಂತಿಯ ಬದುಕಿಗೆ ದಾರಿ ತೋರಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ನಂತರ ಕ್ಯಾಮರೂನ್, ಅಂಗೋಲಾ ಮತ್ತು ಈಕ್ವೇಟೋರಿಯಲ್ ಗಿನಿಯಾದ ದೇಶಗಳಲ್ಲಿ ಜನರ “ನ್ಯಾಯದ ಹಸಿವು ಮತ್ತು ದಾಹ”ವನ್ನು ಜಗದ್ಗುರುಗಳು ಗಮನಿಸಿದರು. ಕ್ಯಾಮರೂನ್‌ನಲ್ಲಿ ವಿಶೇಷವಾಗಿ ಬೆಮೆಂಡ ಪ್ರದೇಶದಲ್ಲಿ ಸಂಘರ್ಷಗಳ ನಡುವೆಯೂ ಶಾಂತಿ ಮತ್ತು ಸಮ್ಮಿಲನಕ್ಕಾಗಿ ಕೆಲಸ ಮಾಡಲು ಜನರನ್ನು ಪ್ರೇರೇಪಿಸಿದರು. ಅಲ್ಲದೆ ಸಂಪತ್ತಿನ ನ್ಯಾಯಯುತ ಹಂಚಿಕೆ, ಯುವಕರಿಗೆ ಅವಕಾಶಗಳು ಮತ್ತು ಶಾಶ್ವತ ಅಭಿವೃದ್ಧಿಯ ಅಗತ್ಯವನ್ನು ಅವರು ವಿವರಿಸಿದರು.

ಅಂಗೋಲಾದಲ್ಲಿ ಜಗದ್ಗುರುಗಳು, ಇತಿಹಾಸದ ಕಷ್ಟಗಳ ನಡುವೆಯೂ ದೇವರು ಧರ್ಮ ಸಭೆಯನ್ನು ಮಾರ್ಗದರ್ಶನ ಮಾಡಿರುವುದನ್ನು ಉಲ್ಲೇಖಿಸಿದರು. ಮಾಮಾ ಮುಕ್ಸಿಮಾ ಮರಿಯನ್ ದೇವಾಲಯದಲ್ಲಿ ಜನರ ಭಕ್ತಿಯು ಅವರಿಗೆ ಆಳವಾದ ಪ್ರಭಾವ ಬೀರಿತು. ಈ ಜನರ ನಂಬಿಕೆಯಲ್ಲಿ ಅವರು ಶಕ್ತಿಯುತ ನಿರೀಕ್ಷೆಯನ್ನು ಕಂಡರು ಆದರೆ ಈ ನಿರೀಕ್ಷೆ ನಿಜವಾದ ಬದ್ಧತೆಯನ್ನು ಬೇಡುತ್ತದೆ ಎಂದು ಅವರು ಹೇಳಿದರು.

ಕೊನೆಯಲ್ಲಿ ಈಕ್ವೇಟೋರಿಯಲ್ ಗಿನಿಯಾದಲ್ಲಿ ಯುವಕರೊಂದಿಗೆ ನಡೆದ ಸಂತೋಷಭರಿತ ಕಾರ್ಯಕ್ರಮ ಮತ್ತು ಬಲಿಪೂಜೆಯ ಆಚರಣೆ ಈ ಸಂಪೂರ್ಣ ಪ್ರವಾಸದ ಶಿಖರವಾಗಿತ್ತು ಎಂದು ಜಗದ್ಗುರುಗಳು ಹೇಳಿದರು. ಸುವಾರ್ತೆಯ ಮೂಲಕ ಸ್ವತಂತ್ರ ಮತ್ತು ಹೊಣೆಗಾರಿಕೆಯಿಂದ ಬೆಳೆಯುವ ದಾರಿಗೆ ಯುವಕರು ಸಾಕ್ಷಿಯಾದರು. ಈ ಪ್ರೇಷಿತರ ಪ್ರವಾಸವು ಧರ್ಮ ಸಭೆಯ ಏಕತೆ, ಶಾಂತಿ ಮತ್ತು ನಂಬಿಕೆಯನ್ನು ಬಲಪಡಿಸುವ ಮಹತ್ವದ ಕ್ಷಣವಾಗಿತ್ತು ಎಂದು ಅವರು ನಿರ್ಣಯಿಸಿದರು.

29 ಏಪ್ರಿಲ್ 2026, 21:17