ಜಗದ್ಗುರುಗಳು : ಕ್ರಿಸ್ತನ ಶಾಂತಿ ಜೀವನದ ಬಿರುಗಾಳಿಗಳನ್ನು ಶಮನಗೊಳಿಸಿ, ಭಯವಿಲ್ಲದೆ ಮುಂದೆ ಸಾಗಲು ನೆರವಾಗುತ್ತದೆ.
ವ್ಯಾಟಿಕನ್ ವರದಿ
ಕ್ಯಾಮರೂನ್‌ನಲ್ಲಿ ತನ್ನ ಭೇಟಿಯನ್ನು ಸಮಾಪ್ತಿಗೊಳಿಸುವ ಬಲಿಪೂಜೆಗೆ ಅಧ್ಯಕ್ಷತೆ ವಹಿಸಿದ ಜಗದ್ಗುರು XIVನೇ ಲಿಯೋರವರು, ತಮಗೆ ನೀಡಿದ ಆತ್ಮೀಯ ಸ್ವಾಗತ ಹಾಗೂ ಒಟ್ಟಿಗೆ ಅನುಭವಿಸಿದ ಸಂತೋಷ ಮತ್ತು ನಂಬಿಕೆಯ ಕ್ಷಣಗಳಿಗಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸುಮಾರು ಎರಡು ಲಕ್ಷ ಮಂದಿ ಈ ಭಕ್ತಿಪೂರ್ಣ ಆಚರಣೆಯಲ್ಲಿ ಭಾಗವಹಿಸಿದ್ದು, ಇನ್ನೂ ಅನೇಕರು ಸುತ್ತಮುತ್ತಲಿನ ಪ್ರದೇಶಗಳಿಂದ ಅನುಸರಿಸಿದರು. ಈ ಕಾರ್ಯಕ್ರಮವು ಅವರ ನಾಲ್ಕು ದಿನಗಳ ಕ್ಯಾಮರೂನ್ ಭೇಟಿಗೆ ಅಂತ್ಯ ಸೂಚಿಸಿತು.
ತಮ್ಮ ಪ್ರಭೋಧನೆಯಲ್ಲಿ ಜಗದ್ಗುರುಗಳು, ತಿಬೇರಿಯಾಸ್ ಸರೋವರವನ್ನು ದಾಟುವಾಗ ಭಯ ಮತ್ತು ಸಂಶಯದ ನಡುವೆ ಬಲವಾದ ಗಾಳಿಗಳನ್ನು ಎದುರಿಸಿದ ಯೇಸುವಿನ ಶಿಷ್ಯರ ಅನುಭವವನ್ನು ಸ್ಮರಿಸಿದರು. ಧರ್ಮ ಸಭೆಯ ಇತಿಹಾಸದಲ್ಲಿಯೂ ಅನೇಕ ಬಿರುಗಾಳಿಗಳನ್ನು ಎದುರಿಸಿರುವಂತೆ, ನಮ್ಮ ಜೀವನದಲ್ಲಿಯೂ ಸಂಕಷ್ಟಗಳು ಎದುರಾಗುತ್ತವೆ ಎಂದು ಅವರು ಹೇಳಿದರು. ಆದರೂ, ಯೇಸು ಸದಾ ನಮ್ಮೊಂದಿಗಿದ್ದಾರೆ ಮತ್ತು ಅವರು ಯಾವಾಗಲೂ ನಮ್ಮನ್ನು ತ್ಯಜಿಸುವುದಿಲ್ಲ ಎಂಬ ವಿಶ್ವಾಸವನ್ನು ನಾವು ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಜಗದ್ಗುರುಗಳು ಮುಂದುವರಿದು, ಯೇಸು ನಮ್ಮನ್ನು ತ್ಯಜಿಸುವುದಿಲ್ಲ ಎಂಬ ಅರಿವು ನಮಗೆ ಧೈರ್ಯ ಮತ್ತು ವಿಶ್ವಾಸ ನೀಡುತ್ತದೆ ಎಂದರು. ಜೀವನದ ಬಿರುಗಾಳಿಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ ನಾವು ಸದಾ ಧೈರ್ಯದಿಂದ ಮುಂದೆ ಸಾಗಬೇಕು. ನಂಬಿಕೆ ನಮ್ಮನ್ನು ಸಂಕಷ್ಟಗಳಿಂದ ಸಂಪೂರ್ಣವಾಗಿ ರಕ್ಷಿಸದಿದ್ದರೂ, ಯೇಸು ನಮ್ಮೊಂದಿಗಿರುವುದರಿಂದ ನಾವು ಅವುಗಳನ್ನು ಎದುರಿಸಲು ಶಕ್ತರಾಗುತ್ತೇವೆ ಎಂದರು.
ಯೇಸು ನಮ್ಮೊಂದಿಗಿರುವುದರಿಂದ ನಾವು ಕೂಡ ಸಂಕಷ್ಟದಲ್ಲಿರುವವರ ಬಳಿ ನಿಲ್ಲಬೇಕು. ಭಯಗೊಂಡವರನ್ನೂ ದುಃಖಿತರನ್ನೂ ಸಮೀಪಿಸಿ, ಅವರಿಗೆ ಬೆಂಬಲ ನೀಡಬೇಕು. ಯಾವುದೇ ವ್ಯಕ್ತಿ ಜೀವನದ ಕಷ್ಟಗಳನ್ನು ಒಬ್ಬನೇ ಎದುರಿಸಬಾರದು. ಆದ್ದರಿಂದ ಪ್ರತಿಯೊಂದು ಸಮುದಾಯವೂ ಪರಸ್ಪರ ಸಹಾಯ ಮತ್ತು ಸಹಕಾರದ ಮೂಲಕ ಬಲಪಡಿಸಿಕೊಳ್ಳಬೇಕು, ವಿಶೇಷವಾಗಿ ಸಾಮಾಜಿಕ, ರಾಜಕೀಯ, ವೈದ್ಯಕೀಯ ಅಥವಾ ಆರ್ಥಿಕ ಸಂಕಷ್ಟಗಳ ಸಂದರ್ಭಗಳಲ್ಲಿ.
“ಭಯಪಡಬೇಡಿ” ಎಂಬ ಯೇಸುವಿನ ಸಂದೇಶವು ಪ್ರತಿಯೊಬ್ಬರಿಗೂ ಮತ್ತು ಸಮುದಾಯಕ್ಕೂ ಉದ್ದೇಶಿತವಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಈ ಸಂದೇಶವು ದಾರಿದ್ರ್ಯ ಮತ್ತು ನ್ಯಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಒಟ್ಟಾಗಿ ಹೊಣೆಗಾರಿಕೆಯಿಂದ ಎದುರಿಸಲು ಪ್ರೇರಣೆ ನೀಡುತ್ತದೆ. ನಂಬಿಕೆ ಆತ್ಮಿಕ ಮತ್ತು ಸಾಮಾಜಿಕ ಜೀವನವನ್ನು ಬೇರ್ಪಡಿಸುವುದಿಲ್ಲ ಬದಲಾಗಿ ಅದು ದುರ್ಬಲರ ಅಗತ್ಯಗಳಿಗೆ ಸ್ಪಂದಿಸಲು ಶಕ್ತಿಯನ್ನು ನೀಡುತ್ತದೆ ಎಂದರು.
ಜಗದ್ಗುರುಗಳು ಪ್ರಾರಂಭಿಕ ಶಿಷ್ಯರ ಉದಾಹರಣೆಯನ್ನು ಸ್ಮರಿಸಿ, ಅವರು ಎದುರಿಸಿದ ಸವಾಲುಗಳ ನಡುವೆಯೂ ಒಟ್ಟಾಗಿ ಚರ್ಚಿಸಿ, ಪ್ರಾರ್ಥನೆ ಮೂಲಕ ಪರಿಹಾರಗಳನ್ನು ಕಂಡುಕೊಂಡರು ಎಂದು ಹೇಳಿದರು. ಪವಿತ್ರಾತ್ಮನ ಧ್ವನಿಯನ್ನು ಆಲಿಸಿ, ಸಂಕಷ್ಟದಲ್ಲಿರುವವರ ಕಡೆ ಗಮನಹರಿಸುವ ಮೂಲಕ ಅವರು ಸಮುದಾಯವನ್ನು ಬಲಪಡಿಸಿದರು ಮತ್ತು ಸಂಕಷ್ಟವನ್ನು ಅಭಿವೃದ್ಧಿಯ ಅವಕಾಶವನ್ನಾಗಿ ಪರಿವರ್ತಿಸಿದರು.
ಕೊನೆಯಲ್ಲಿ, ಜಗದ್ಗುರುಗಳು ಎಲ್ಲರನ್ನು ತಮ್ಮ ದೈನಂದಿನ ಜೀವನಕ್ಕೆ ಮರಳುವಾಗ ಈ ಸುಂದರ ಕ್ಷಣಗಳನ್ನು ಹೃದಯದಲ್ಲಿ ಉಳಿಸಿಕೊಳ್ಳುವಂತೆ ಪ್ರೇರೇಪಿಸಿದರು. ಕ್ಯಾಮರೂನ್ ಧರ್ಮ ಸಭೆ ಜೀವಂತವಾಗಿದ್ದು, ಉತ್ಸಾಹ ಮತ್ತು ಏಕತೆಯೊಂದಿಗೆ ಬೆಳೆಯುತ್ತಿದೆ ಎಂದು ಹೇಳಿದರು. ದೇವರ ಕೃಪೆಯಿಂದ ಮತ್ತು ಪರಸ್ಪರ ಸಹಕಾರದಿಂದ, ಜೀವನದ ಬಿರುಗಾಳಿಗಳನ್ನು ಬೆಳವಣಿಗೆಯ ಅವಕಾಶವನ್ನಾಗಿ ಮಾಡಿಕೊಂಡು, ದೇವರ ಸೇವೆಯಲ್ಲಿ ಮುಂದುವರಿಯುವಂತೆ ಆಶಿಸಿದರು.
