ಹುಡುಕಿ

Il Papa lascia Yaounde', in volo verso l'Angola

ಜಗದ್ಗುರು ಲಿಯೋರವರು ಕ್ಯಾಮರೂನ್ ತೊರೆದು ಅಂಗೋಲಾಕ್ಕೆ ತೆರಳುತ್ತಾರೆ.

ಜಗದ್ಗುರು ಲಿಯೋರವರ ಮೂರನೇ ಪ್ರೇಷಿತರ ಪ್ರಯಾಣದ ಎರಡನೇ ಹಂತವು ಕ್ಯಾಮರೂನ್‌ನಿಂದ ಅವರ ನಿರ್ಗಮನ ಮತ್ತು ಅಂಗೋಲಾಕ್ಕೆ ವಿಮಾನ ಪ್ರಯಾಣದೊಂದಿಗೆ ಅಂತ್ಯಗೊಂಡಿದೆ. ಯೌಂಡೇ ವಿಮಾನ ನಿಲ್ದಾಣದಲ್ಲಿ, 2 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ ಪವಿತ್ರ ಬಲಿಪೂಜೆಯ ನಂತರ ವಿದಾಯ ಸಮಾರಂಭ ನಡೆಯಿತು.

 ವ್ಯಾಟಿಕನ್ ವರದಿ

ಶನಿವಾರ ಮಧ್ಯಾಹ್ನ ಜಗದ್ಗುರು XIVನೇ ಲಿಯೋರವರು ಕ್ಯಾಮರೂನ್‌ಗೆ ವಿದಾಯ ಹೇಳಿದರು. ತಮ್ಮ ಪ್ರೇಷಿತರ ಪ್ರಯಾಣದ ಮೂರನೇ ತಾಣವಾಗಿರುವ ಅಂಗೋಲಾಕ್ಕೆ ತೆರಳಲು ಅವರು ವಿಮಾನ ಹತ್ತಿದರು. ಜಗದ್ಗುರುಗಳು ಹಾಗೂ ಅವರ ತಂಡವನ್ನು ಹೊತ್ತ ವಿಮಾನವು ಸ್ಥಳೀಯ ಸಮಯ ಮಧ್ಯಾಹ್ನ 12:47ಕ್ಕೆ ಯೌಂಡೇ-ನ್ಸಿಮಾಲೆನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ಸುಮಾರು ಎರಡುವರೆ ಗಂಟೆಗಳ ಪ್ರಯಾಣದ ಬಳಿಕ ಅಂಗೋಲಾದ ಲುವಾಂಡಾಗೆ ಆಗಮಿಸುವ ನಿರೀಕ್ಷೆಯಿದೆ.

ಸ್ವಲ್ಪ ಹೊತ್ತಿನ ಮುಂಚೆ ಕ್ಯಾಮರೂನ್ ವಿಮಾನ ನಿಲ್ದಾಣದಲ್ಲಿ ನಡೆದ ವಿದಾಯ ಸಮಾರಂಭದಲ್ಲಿ, ಜಗದ್ಗುರು ಲಿಯೋರವರು ಕ್ಯಾಮರೂನ್ ಪ್ರಧಾನಮಂತ್ರಿ ಜೋಸೆಫ್ ಡಿಯೋನ್ ನ್ಗುಟ್ ರವರೊಂದಿಗೆ ರಾಷ್ಟ್ರೀಯ ಗೀತೆಗಳನ್ನು ಆಲಿಸಿದರು. ಗೌರವ ಪಹರೆಯ ನಡುವೆ, ಇಬ್ಬರೂ ಉದ್ದವಾದ ಕೆಂಪು ಹಾಸಿನ ಮೇಲೆ ನಡೆದು ವಿಮಾನದ ಬಳಿಗೆ ತೆರಳಿ, ಅಲ್ಲಿದ್ದ ವಿವಿಧ ಸರ್ಕಾರಿ ಮತ್ತು ಧರ್ಮ ಸಭೆಯ ಅಧಿಕಾರಿಗಳಿಗೆ ಶುಭಾಶಯ ಕೋರಿದರು.

ಅಂಗೋಲಾದ ಕಾರ್ಯಕ್ರಮಗಳು

ಜಗದ್ಗುರು XIVನೇ ಲಿಯೋರವರು ಏಪ್ರಿಲ್ 21ರ ಮಂಗಳವಾರದವರೆಗೆ ಅಂಗೋಲಾದಲ್ಲಿ ಉಳಿಯಲಿದ್ದಾರೆ. ನಂತರ ಅವರು ತಮ್ಮ ಪ್ರೇಷಿತರ ಪ್ರಯಾಣವನ್ನು ಇಕ್ವೇಟೋರಿಯಲ್ ಗಿನಿಯಾದಲ್ಲಿ ಸಮಾಪ್ತಿಗೊಳಿಸಲಿದ್ದಾರೆ. ಈ ಪ್ರವಾಸದ ಘೋಷವಾಕ್ಯ: “ಭರವಸೆ, ಸೌಹಾರ್ದತೆ ಮತ್ತು ಶಾಂತಿಯ ಯಾತ್ರಿಕರಾದ ಜಗದ್ಗುರು XIVನೇ ಲಿಯೋರವರು, ಅಂಗೋಲಾವನ್ನು ಆಶೀರ್ವದಿಸುತ್ತಾರೆ.”

ಶನಿವಾರ ಮಧ್ಯಾಹ್ನದಿಂದಲೇ ಜಗದ್ಗುರುಗಳನ್ನು ಅನೇಕ ಕಾರ್ಯಕ್ರಮಗಳು ನಿರೀಕ್ಷಿಸುತ್ತಿವೆ. ಇದರಲ್ಲಿ ಗಣರಾಜ್ಯದ ಅಧ್ಯಕ್ಷ ಜೊವೊ ಮ್ಯಾನುಯೆಲ್ ಗೊನ್ಸಾಲ್ವೆಸ್ ಲೌರೆನ್ಕೊ ರವರೊಂದಿಗೆ ಸೌಜನ್ಯ ಭೇಟಿಯೂ ಸೇರಿದೆ. ನಂತರ ರಾಜಕೀಯ ಮತ್ತು ಧಾರ್ಮಿಕ ನಾಯಕರು, ಉದ್ಯಮಿಗಳು ಹಾಗೂ ನಾಗರಿಕ ಸಮಾಜ ಮತ್ತು ಸಂಸ್ಕೃತಿ ಪ್ರತಿನಿಧಿಗಳೊಂದಿಗೆ ಸಭೆಗಳು ನಡೆಯಲಿವೆ.

18 ಏಪ್ರಿಲ್ 2026, 15:09