ಅಲ್ಜೀರಿಯಾದತ್ತ ಸಾಗುತ್ತಿರುವ ವಿಮಾನದಲ್ಲಿರುವ ಜಗದ್ಗುರುಗಳು: “ನಾನು ರಾಜಕಾರಣಿ ಅಲ್ಲ, ನಾನು ಸುವಾರ್ತೆಯ ಕುರಿತು ಮಾತನಾಡುತ್ತೇನೆ.”
ವ್ಯಾಟಿಕನ್ ವರದಿ
ಅಲ್ಜೀರಿಯಾದತ್ತ ನಡೆದ ಚಿಕ್ಕ ವಿಮಾನ ಪ್ರಯಾಣದ ವೇಳೆ, ಜಗದ್ಗುರು XIVನೇ ಲಿಯೋರವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು ಜಗದ್ಗುರುಗಳು ವಿಮಾನಗಳಲ್ಲಿ ಇರುವ ಸಂಪ್ರದಾಯದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಟ್ರೂತ್ ಸೋಶಿಯಲ್ ಜಾಲತಾಣದಲ್ಲಿ ತಮ್ಮ ವಿರುದ್ಧ ಮಾಡಿದ ಹೇಳಿಕೆಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದರು।
ಪೋಪ್ ಅವರು “ನನ್ನ ಪಾತ್ರವನ್ನು ನಾನು ರಾಜಕಾರಣಿಯದ್ದಾಗಿ ನೋಡುತ್ತಿಲ್ಲ. ನಾನು ರಾಜಕಾರಣಿ ಅಲ್ಲ, ಮತ್ತು ಅವರೊಂದಿಗೆ ವಾದ-ವಿವಾದಕ್ಕೆ ಇಳಿಯಲು ನಾನು ಬಯಸುವುದಿಲ್ಲ” ಎಂದು ಒತ್ತಿಹೇಳಿದರು।
ಇದಲ್ಲದೆ, ಅವರು ಮುಂದುವರಿಸಿ, ಸುವಾರ್ತೆಯ ಸಂದೇಶವನ್ನು ಕೆಲವರು ಮಾಡುತ್ತಿರುವಂತೆ ದುರುಪಯೋಗಪಡಿಸಿಕೊಳ್ಳಬಾರದು ಎಂದು ನಾನು ಭಾವಿಸುತ್ತೇನೆ. ನಾನು ಯುದ್ಧದ ವಿರುದ್ಧ ದೃಢವಾಗಿ ಮಾತನಾಡುವುದನ್ನು ಮುಂದುವರಿಸುತ್ತೇನೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರಗಳ ನಡುವೆ ಶಾಂತಿ, ಸಂವಾದ ಮತ್ತು ಬಹುಪಕ್ಷೀಯತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತೇನೆ. ಇಂದು ಅನೇಕ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ, ಅನೇಕ ನಿರಪರಾಧ ಜೀವಗಳು ಕಳೆದುಹೋಗಿವೆ, ಮತ್ತು ಉತ್ತಮ ಮಾರ್ಗವಿದೆ ಎಂದು ಯಾರಾದರೂ ನಿಂತು ಹೇಳಬೇಕೆಂದು ನಾನು ನಂಬುತ್ತೇನೆ ಎಂದರು।
ನಂತರ, ತಮ್ಮ ಕೆಲಸ ಆರಂಭಿಸಿದಾಗ ನೀಡಿದ ಅದೇ ಕರೆ ಶಾಂತಿಯ ಕರೆಗೆ ಜಗದ್ಗುರುಗಳು ಮತ್ತೆ ಒತ್ತಿಹೇಳಿದರು. ನಾನು ಇದನ್ನು ಎಲ್ಲಾ ವಿಶ್ವ ನಾಯಕರಿಗೂ ಹೇಳುತ್ತೇನೆ, ಅವರಿಗಷ್ಟೇ ಅಲ್ಲ [ಅಧ್ಯಕ್ಷ ಟ್ರಂಪ್ ರವರಿಗೂ]: ಯುದ್ಧಗಳನ್ನು ಅಂತ್ಯಗೊಳಿಸಿ, ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸೋಣ ಎಂದರು।
ಅದೇ ಪ್ರಶ್ನೆಯನ್ನು ಕೇಳಿದ ಒಬ್ಬ ಅಮೆರಿಕನ್ ಪತ್ರಕರ್ತನಿಗೆ ಪ್ರತಿಕ್ರಿಯಿಸಿದ ಜಗದ್ಗುರುಗಳು, “ಟ್ರಂಪ್ ಆಡಳಿತದ ಬಗ್ಗೆ ಅಥವಾ ಸುವಾರ್ತೆಯ ಸಂದೇಶವನ್ನು ಧೈರ್ಯವಾಗಿ ಹೇಳುವುದರಲ್ಲಿ ನನಗೆ ಯಾವುದೇ ಭಯವಿಲ್ಲ ಅದೇ ನಾನು ಇಲ್ಲಿ ಇರುವ ಕಾರಣ, ಧರ್ಮ ಸಭೆ ಇರುವ ಕಾರಣ ಎಂದು ವಿವರಿಸಿದರು।
ನಾವು ರಾಜಕಾರಣಿಗಳು ಅಲ್ಲ, ಎಂದು ಅವರು ಹೇಳಿದರು. ವಿದೇಶಾಂಗ ನೀತಿಯನ್ನು ನಾವು ಅವರಂತೆ ನೋಡಿಕೊಳ್ಳುವುದಿಲ್ಲ, ಆದರೆ ನಾನು ಶಾಂತಿದೂತನಾಗಿ ಸುವಾರ್ತೆಯ ಸಂದೇಶದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ।”
ಅಮೆರಿಕದ ಬಿಷಪ್‌ಗಳ ಪ್ರತಿಕ್ರಿಯೆ
ಇದಕ್ಕೆ ಪ್ರತಿಕ್ರಿಯೆಯಾಗಿ, ಯುನೈಟೆಡ್ ಸ್ಟೇಟ್ಸ್ ಕಾನ್ಫರೆನ್ಸ್ ಆಫ್ ಕ್ಯಾಥೊಲಿಕ್ ಬಿಷಪ್‌ಗಳ ಅಧ್ಯಕ್ಷರಾದ ಆರ್ಚ್‌ಬಿಷಪ್ ಪೌಲ್ ಕೋಕ್‌ಲಿರವರು ಅಧ್ಯಕ್ಷರ ಮಾತುಗಳಿಂದ ನಿರಾಶೆಗೊಂಡಿದ್ದೇನೆ ಎಂದು ಹೇಳಿದರು.
“ಜಗದ್ಗುರು ಲಿಯೋರವರು ಅವರ ಪ್ರತಿಸ್ಪರ್ಧಿ ಅಲ್ಲ, ಮತ್ತು ಜಗದ್ಗುರುಗಳು ರಾಜಕಾರಣಿಯೂ ಅಲ್ಲ,” ಎಂದು ಅವರು ಪ್ರಕಟಣೆಯಲ್ಲಿ ಹೇಳಿದರು. ಅವರು ಕ್ರಿಸ್ತನ ಪ್ರತಿನಿಧಿ, ಸುವಾರ್ತೆಯ ಸತ್ಯದಿಂದ ಮತ್ತು ಆತ್ಮಗಳ ಆರೈಕೆಗಾಗಿ ಮಾತನಾಡುವವರು".
ನಿರಂತರ ಶಾಂತಿಯ ಸಂದೇಶ
ಈ ನಾಲ್ಕು ಆಫ್ರಿಕಾ ರಾಷ್ಟ್ರಗಳ ಪ್ರೇಷಿತರ ಪ್ರವಾಸದಲ್ಲಿ ಶಾಂತಿ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಈ ಪ್ರವಾಸವು ಹಲವಾರು ಕಾರಣಗಳಿಂದ ವಿಶೇಷವಾಗಿದ್ದು, ಇದು “ಜಗದ್ಗುರುಗಳಾಗಿ ಮೊದಲ ಪ್ರವಾಸ” ಎಂದು ಜಗದ್ಗುರು ಲಿಯೋರವರು ವಿವರಿಸಿದರು.
ಸೇಂಟ್ ಆಗಸ್ಟಿನರ ಅವರ ನೆಲಕ್ಕೆ ಮತ್ತೆ ಭೇಟಿ ನೀಡುವ ಅವಕಾಶ ಸಿಕ್ಕಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ಜಗದ್ಗುರುಗಳ ಪ್ರಕಾರ, ಅವರು ಅಂತರ್‌ಧಾರ್ಮಿಕ ಸಂವಾದದಲ್ಲಿ ಬಹಳ ಮಹತ್ವದ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾರೆ. ಈ ಉತ್ತರ ಆಫ್ರಿಕದ ಸಂತರು ಬಿಷಪ್ ಆಗಿ ಸೇವೆ ಸಲ್ಲಿಸಿದ ಸ್ಥಳಕ್ಕೆ ಭೇಟಿ ನೀಡುವುದು ಜಗದ್ಗುರುಗಳಿಗೆ ಆಶೀರ್ವಾದವಾಗಿದ್ದು, “ಧಮ೯ಸಭೆಗೂ ಮತ್ತು ಜಗತ್ತಿಗೂ ಆಶೀರ್ವಾದ, ಏಕೆಂದರೆ ನಾವು ಸದಾ ಶಾಂತಿ ಮತ್ತು ಸೌಹಾರ್ದತೆಯನ್ನು ನಿರ್ಮಿಸಲು ಸೇತುವೆಗಳನ್ನು ಹುಡುಕಬೇಕು ಎಂದು ಅವರು ಹೇಳಿದರು.
ಪತ್ರಕರ್ತರಿಗೆ ನೀಡಿದ ಶುಭಾಶಯವನ್ನು ಅವರು ಈ ಪ್ರವಾಸದ ಒಟ್ಟು ಗುರಿಯನ್ನು ಉಲ್ಲೇಖಿಸಿ ಮುಕ್ತಾಯಗೊಳಿಸಿದರು “ಒಂದೇ ಧ್ವನಿ ಮತ್ತು ಒಂದೇ ಸಂದೇಶದೊಂದಿಗೆ ಮುಂದುವರಿಯುವುದು ನಾವು ಶಾಂತಿ, ಸೌಹಾರ್ದತೆ, ಪರಸ್ಪರ ಗೌರವ ಮತ್ತು ಎಲ್ಲಾ ಜನರ ಬಗ್ಗೆ ಪರಿಗಣನೆಗಳನ್ನು ಉತ್ತೇಜಿಸಲು ಬಯಸುತ್ತೇವೆ” ಎಂದು ಹೇಳಿದರು.
ಅಲ್ಜೀರಿಯಾದಲ್ಲಿ ಆಗಮನ
ಜಗದ್ಗುರುಗಳ ವಿಮಾನವು ಅಲ್ಜಿಯರ್ಸ್ ರಾಜಧಾನಿ ನಗರದಲ್ಲಿ ಭೂಸ್ಪರ್ಶ ಮಾಡಿತು, ಅಲ್ಲಿ ಅಲ್ಜೀರಿಯಾ ಜನತಾಂತ್ರಿಕ ಗಣರಾಜ್ಯದ ಅಧ್ಯಕ್ಷ ಅಬ್ದೆಲ್ಮಜೀದ್ ತೆಬ್ಬೂನ್ ರವರು ಜಗದ್ಗುರು ಲಿಯೋರವರನ್ನು ಸ್ವಾಗತಿಸಿದರು.
ಮಳೆಯ ವಾತಾವರಣದಲ್ಲಿ ಸ್ವಾಗತಿಸಲ್ಪಟ್ಟ ಜಗದ್ಗುರುಗಳು ನೇರವಾಗಿ ವಿಮಾನ ನಿಲ್ದಾಣದ ‘ಸಲೋನ್ ಡ್’ಒನರ್’ ಕ್ಕೆ ತೆರಳಿದರು, ಅಲ್ಲಿ ಸಾಂಪ್ರದಾಯಿಕ ವೇಷಭೂಷಣದಲ್ಲಿದ್ದ ಒಬ್ಬ ಬಾಲಕಿ ಅವರಿಗೆ ಹೂಗಳನ್ನು ನೀಡಿದರು. ನಂತರ ಗೌರವ ಗಾರ್ಡ್ ವಿವಿಧ ರಾಷ್ಟ್ರಗೀತೆಗಳನ್ನು ಪ್ರದರ್ಶಿಸಿತು. ಸ್ವಾಗತ ಸಮಾರಂಭದ ನಂತರ, ಜಗದ್ಗುರು ಲಿಯೋರವರು ಅಧ್ಯಕ್ಷ ತೆಬ್ಬೂನ್ ರವರೊಂದಿಗೆ ಸ್ವಲ್ಪ ಸಮಯದ ಖಾಸಗಿ ಭೇಟಿಯನ್ನು ನಡೆಸಿದರು.
ಆ ಖಾಸಗಿ ಭೇಟಿಯ ನಂತರ, ಜಗದ್ಗುರುಗಳು ಅಲ್ಜೀರಿಯಾದ ಮೂರು ದಿನಗಳ ಪ್ರವಾಸದ ಮೊದಲ ನಿಲ್ದಾಣವಾಗಿ ಮಾಕಾಂ ಎಶಾಹೀದ್ (ಶಹೀದರ ಸ್ಮಾರಕ) ಕಡೆಗೆ ಪ್ರಯಾಣಿಸಿದರು.
