ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (AFP or licensors)

ಜಗದ್ಗುರು ಲಿಯೋರವರು ಮಧ್ಯಪ್ರಾಚ್ಯದ ಹಿಂಸಾಚಾರದಲ್ಲಿ ಮೃತಪಟ್ಟವರಿಗಾಗಿ ದುಃಖ ವ್ಯಕ್ತಪಡಿಸಿ, ಶಾಂತಿಗಾಗಿ ಪ್ರಾರ್ಥನೆ ಮಾಡುತ್ತಾರೆ.

ಮಧ್ಯಪ್ರಾಚ್ಯದಲ್ಲಿ ನಡೆದ ಬಾಂಬ್ ದಾಳಿಗಳಲ್ಲಿ ಸಾವನ್ನಪ್ಪಿದವರಿಗಾಗಿ ಜಗದ್ಗುರು XIVನೇ ಲಿಯೋರವರು ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ ವಿಶೇಷವಾಗಿ ಮಕ್ಕಳಿಗಾಗಿ ಹಾಗೂ ಲೆಬನಾನ್‌ನಲ್ಲಿ ಹತ್ಯೆಯಾದ ಮರೋನೈಟ್ ವಂ.ಸ್ವಾಮಿ ಪಿಯರ್ ಎಲ್-ರಾಹಿರವರಿಗಾಗಿ ಪ್ರಾರ್ಥಿಸಿದ್ದಾರೆ.

ವ್ಯಾಟಿಕನ್ ವರದಿ

ಸೋಮವಾರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದ ಪ್ರಕಟಣೆಯಲ್ಲಿ, ಜಗದ್ಗುರು XIVನೇ ಲಿಯೋರವರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಹಿಂಸಾಚಾರವು ತಕ್ಷಣ ನಿಲ್ಲಲೆಂದು ಪ್ರಾರ್ಥಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಜಗದ್ಗರುಗಳು ಈ ದಾಳಿಗಳಲ್ಲಿ ಮೃತಪಟ್ಟ ಅನೇಕ ನಿರಪರಾಧಿಗಳಿಗಾಗಿ  ವಿಶೇಷವಾಗಿ ಮಕ್ಕಳಿಗಾಗಿ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದವರಿಗಾಗಿ  ಆಳವಾದ ದುಃಖವನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ವಂ. ಸ್ವಾಮಿ ಪಿಯರ್ ಎಲ್-ರಾಹಿರವರ ಸಾವಿನ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು.

ಪ್ರಕಟಣೆಯಲ್ಲಿ ಹೀಗೆ ಹೇಳಲಾಗಿದೆ

ಈ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆದ ಬಾಂಬ್ ದಾಳಿಗಳಲ್ಲಿ ಸಾವನ್ನಪ್ಪಿದ ಎಲ್ಲರಿಗಾಗಿ  ಅನೇಕ ನಿರಪರಾಧಿಗಳು, ಅವರಲ್ಲಿ ಬಹಳಷ್ಟು ಮಕ್ಕಳು, ಮತ್ತು ಅವರಿಗೆ ಸಹಾಯ ಮಾಡುತ್ತಿದ್ದವರು  ಉದಾಹರಣೆಗೆ ಇಂದು ಮಧ್ಯಾಹ್ನ ಕ್ವಲಾಯಾದಲ್ಲಿ ಹತ್ಯೆಯಾದ ಮರೋನೈಟ್ ವಂ.ಸ್ವಾಮಿ ಪಿಯರ್ ಎಲ್-ರಾಹಿ ಇವರಿಗಾಗಿ ಜಗದ್ಗುರು XIVನೇ ಲಿಯೋರವರು ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸುತ್ತಾರೆ. ಅವರು ನಡೆಯುತ್ತಿರುವ ಘಟನೆಗಳನ್ನು ತೀವ್ರ ಕಾಳಜಿಯೊಂದಿಗೆ ಗಮನಿಸುತ್ತಿದ್ದು, ಎಲ್ಲ ರೀತಿಯ ಶತ್ರುತ್ವಗಳು ಸಾಧ್ಯವಾದಷ್ಟು ಬೇಗ ಅಂತ್ಯಗೊಳ್ಳಲೆಂದು ಪ್ರಾರ್ಥಿಸುತ್ತಿದ್ದಾರೆ.

ಲೆಬನಾನ್ ಮಾಧ್ಯಮಗಳ ವರದಿಗಳ ಪ್ರಕಾರ, ಮರೋನೈಟ್ ವಿಧಿಯ ಕಥೋಲಿಕ ಯಾಜಕರಾದ ವಂ.ಸ್ವಾಮಿ ಎಲ್-ರಾಹಿರವರು ಸೋಮವಾರ ಲೆಬನಾನ್‌ನ ಕ್ವಲಾಯಾ ಗ್ರಾಮದಲ್ಲಿ ಮೃತಪಟ್ಟರು. ಅಲ್ಲಿ ಇಸ್ರೇಲ್ ಟ್ಯಾಂಕ್ ಗುಂಡು ಹಾರಿಸಿದ ಮನೆಯಲ್ಲಿದ್ದ ತಮ್ಮ ಧರ್ಮ ಕೇಂದ್ರದ ಸದಸ್ಯರಿಗೆ ಸಹಾಯ ಮಾಡಲು ಅವರು ತೆರಳಿದ್ದಾಗ ಈ ಘಟನೆ ಸಂಭವಿಸಿತು.

ತಮ್ಮ ಧರ್ಮ ಕೇಂದ್ರದ ಪರ್ವತ ಪ್ರದೇಶದಲ್ಲಿರುವ ಆ ಮನೆಗೆ ಕೆಲವು ಯುವಕರೊಂದಿಗೆ ಅವರು ಧಾವಿಸಿದ್ದರು. ಆ ವೇಳೆಯಲ್ಲಿ ಟ್ಯಾಂಕ್ ಮತ್ತೊಮ್ಮೆ ಆ ಮನೆಗೆ ಗುಂಡು ಹಾರಿಸಿತು ಅದರಿಂದ ವಂ.ಸ್ವಾಮಿ ಎಲ್-ರಾಹಿ ಗಾಯಗೊಂಡರು.

ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಗಾಯಗಳ ತೀವ್ರತೆಯಿಂದ ಅವರು ಅಲ್ಲಿ ಮೃತಪಟ್ಟರು.

ವಾಟಿಕನ್ ನ್ಯೂಸ್‌ಗೆ ಮಾತನಾಡಿದ ಟೈರ್ ಮತ್ತು ಡೈರ್ಮಿಮಾಸ್ ಪ್ರದೇಶದ ಲ್ಯಾಟಿನ್ ವಿಧಿಯ ಧರ್ಮ ಕೇಂದ್ರದ ಯಾಜಕರಾದ ವಂ. ಸ್ವಾಮಿ ತೌಫಿಕ್ ಬು ಮೆರ್ಹಿ, 50 ವರ್ಷದ ವಂ.ಸ್ವಾಮಿ ಎಲ್-ರಾಹಿ ತಮ್ಮ ಧರ್ಮ ಕೇಂದ್ರದ ಕ್ರೈಸ್ತರಿಗಾಗಿ ನಿಜವಾದ ಮೇಯ್ದಾರರಾಗಿದ್ದರು ಎಂದು ಹೇಳಿದರು.

ಆ ಪ್ರದೇಶವನ್ನು ತೊರೆಯುವಂತೆ ಇಸ್ರೇಲ್ ಹಲವು ಬಾರಿ ಸೂಚನೆ ನೀಡಿದ್ದರೂ, ವಂ.ಸ್ವಾಮಿ ಎಲ್-ರಾಹಿ ತಮ್ಮ ಧರ್ಮ ಕೇಂದ್ರದ ಜನರಿಗೆ ಸೇವೆ ಸಲ್ಲಿಸಲು ಅಲ್ಲಿ ಉಳಿದುಕೊಂಡಿದ್ದರು.

ವಂ. ಸ್ವಾಮಿ ಮೆರ್ಹಿ ರವರು ಹೇಳುವುದೇನೆಂದರೆ, ಧರ್ಮ ಕೇಂದ್ರದ ಸಮುದಾಯವು ವಂ. ಸ್ವಾಮಿ ಎಲ್-ರಾಹಿರವರ ಸಾವಿಗಾಗಿ ಶೋಕಾಚರಣೆಯಲ್ಲಿ ಮುಳುಗಿದ್ದು, ಈಗ ತುಂಬಾ ಭಯದಲ್ಲಿದೆ. ಮತ್ತೊಬ್ಬ ಯಾಜಕನ ಮನೆಯ ಮೇಲೂ ನೇರ ದಾಳಿ ನಡೆದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಇಲ್ಲಿಯವರೆಗೆ ಕ್ರೈಸ್ತ ಗ್ರಾಮಗಳ ಜನರು ತಮ್ಮ ಮನೆಗಳನ್ನು ಬಿಟ್ಟು ಹೋಗಲು ಇಚ್ಛಿಸಲಿಲ್ಲ. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ, ಎಂದು ವಂ.ಸ್ವಾಮಿ ಮೆರ್ಹಿ ಹೇಳಿದರು.

ಮನೆ ಬಿಟ್ಟು ಹೋಗುವುದು ಎಂದರೆ ಬೀದಿಯಲ್ಲಿ ಬದುಕುವುದು ಅಥವಾ ಮತ್ತೊಂದು ಸ್ಥಳವನ್ನು ಬಾಡಿಗೆಗೆ ತೆಗೆದುಕೊಳ್ಳಲು ಪ್ರಯತ್ನಿಸುವುದು. ಆದರೆ ಈಗಾಗಲೇ ದೇಶವು ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಜನರಿಗೆ ಅದು ಸಾಧ್ಯವಾಗುತ್ತಿಲ್ಲ.

ವಂ.ಸ್ವಾಮಿ ಮೆರ್ಹಿ ರವರ ಪ್ರಕಾರ, ಪವಿತ್ರ ಭೂಮಿಯ ಕಸ್ಟೋಡಿಯಾದ ಫ್ರಾನ್ಸಿಸ್ಕನ್ ಸನ್ಯಾಸಿಗಳು ಈಗ ಟೈರ್‌ನಲ್ಲಿರುವ ತಮ್ಮ ಮಠದಲ್ಲಿ ಸುಮಾರು 200 ಸ್ಥಳಚ್ಯುತರಿಗೆ ಆಶ್ರಯ ನೀಡುತ್ತಿದ್ದಾರೆ, ಅವರಲ್ಲಿ ಎಲ್ಲರೂ ಮುಸ್ಲಿಮರು.

ಇದಲ್ಲದೆ, ಸುರಕ್ಷತೆಯನ್ನು ಹುಡುಕಿಕೊಂಡು ದಕ್ಷಿಣ ಲೆಬನಾನ್‌ನಿಂದ 3 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ಅವರು ಹೇಳಿದರು.

“ನಾವು ಯಾವಾಗಲೂ ಹೇಳುವುದು ಒಂದೇ: ನಮ್ಮೊಳಗೆ ಕೊನೆಯದಾಗಿ ಸಾಯಬಾರದದ್ದು ಎಂದರೆ ಪ್ರಭುವಿನಲ್ಲಿ ಇರುವ ನಿರೀಕ್ಷೆ. ಆತನು ನಮಗೆ ಮುಂದುವರಿಯಲು ಸದಾ ಶಕ್ತಿಯನ್ನು ನೀಡುತ್ತಾನೆ, ಎಂದು ವಂ.ಸ್ವಾಮಿ ಮೆರ್ಹಿ ಹೇಳಿದರು.

“ಯುದ್ಧ ಸಾಕು ಹಿಂಸಾಚಾರ ಸಾಕು. ಎಂದು ಜಗದ್ಗುರುಗಳು ಹೇಳಿದಂತೆ, ಶಸ್ತ್ರಾಸ್ತ್ರಗಳು ಶಾಂತಿಯನ್ನು ನೀಡುವುದಿಲ್ಲ ಅವು ಹತ್ಯಾಕಾಂಡ ಮತ್ತು ದ್ವೇಷವನ್ನು ಮಾತ್ರ ಉಂಟುಮಾಡುತ್ತವೆ. ನಮಗೆ ಬೇಕಿರುವುದು ಒಂದೇ  ಸ್ವಲ್ಪ ಗೌರವದೊಂದಿಗೆ ಬದುಕಲು ಅವಕಾಶ ಎಂದು ಹೇಳಿದರು.

10 ಮಾರ್ಚ್ 2026, 14:58