ಮೊನಾಕೊ ಪ್ರಿನ್ಸಿಪಾಲಿಟಿಗೆ ಜಗದ್ಗುರು XIVನೇ ಲಿಯೋರವರ ಭೇಟಿ ಕಾರ್ಯಕ್ರಮ ಪ್ರಕಟಿಸಲಾಗಿದೆ
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ಮಾರ್ಚ್ 28ರಂದು ಯುರೋಪಿನ ನಗರ-ರಾಜ್ಯವಾದ ಮೊನಾಕೊ ಪ್ರಿನ್ಸಿಪಾಲಿಟಿಗೆ ಸುಮಾರು ಒಂಬತ್ತು ಗಂಟೆಗಳ ಅವಧಿಯ ಪ್ರೇಷಿತರ ಭೇಟಿ ನೀಡಲಿದ್ದಾರೆ. ಈ ಪ್ರಯಾಣದಲ್ಲಿ ನಾಲ್ಕು ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಮೊದಲಾಗಿ ಅವರು ಮೊನಾಕೊದ ರಾಜಕುಮಾರ ಮೊನಾಕೊದ ರಾಜಕುಮಾರ II ನೇ ಆಲ್ಬರ್ಟ್ ರವರನ್ನು ಭೇಟಿಯಾಗುವರು. ನಂತರ ಕಥೋಲಿಕ ಸಮುದಾಯ, ಯುವಕರು ಮತ್ತು ಧಾರ್ಮಿಕ ಶಿಕ್ಷಣ ಭೋಧಕರನ್ನು ಭೇಟಿಯಾಗಿ, ಕೊನೆಯಲ್ಲಿ ಸ್ಟೇಡ್ IIನೇ ಲೂಯಿಸ್ ಕ್ರೀಡಾಂಗಣದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸುವರು. ಇದು 2026ರ ಮೊದಲಾರ್ಧದಲ್ಲಿ ಜಗದ್ಗುರುಗಳ ಮೊದಲ ಯುರೋಪ್ ಭೇಟಿಯಾಗಿದ್ದು, ಬಳಿಕ ಏಪ್ರಿಲ್‌ನಲ್ಲಿ ಆಫ್ರಿಕಾಕ್ಕೆ ಮತ್ತು ಜೂನ್‌ನಲ್ಲಿ ಸ್ಪೇನ್‌ಗೆ ಪ್ರಯಾಣಗಳೂ ಯೋಜಿಸಲಾಗಿದೆ.
ಈ ಭೇಟಿಯ ಧ್ಯೇಯ ವಾಕ್ಯ “ಜೆ ಸುಯಿಸ್ ಲೆ ಕೆಮಿನ್, ಲಾ ವೆರಿಟೆ ಎಟ್ ಲಾ ವೈ” — ಅಂದರೆ “ನಾನೇ ಮಾರ್ಗ, ಸತ್ಯ ಮತ್ತು ಜೀವನು” (ಯೋಹಾನ 14:6). ಈ ವಾಕ್ಯವು ಜಗದ್ಗುರುಗಳು ಕ್ರಿಸ್ತನ ಸಂದೇಶವನ್ನು ಲೋಕಕ್ಕೆ ಹೊತ್ತೊಯ್ಯುವವನಾಗಿ ತನ್ನನ್ನು ತಾನೇ ಪರಿಚಯಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ.
ಜಗದ್ಗುರು ಲಿಯೋರವರು ಹೆಲಿಕಾಪ್ಟರ್ ಮೂಲಕ ಮೊನಾಕೊ ತಲುಪಲಿದ್ದಾರೆ. ಕಥೋಲಿಕ ಧರ್ಮವನ್ನು ರಾಜ್ಯಧರ್ಮವಾಗಿ ಗುರುತಿಸಿರುವ ಈ ಸಣ್ಣ ರಾಷ್ಟ್ರಕ್ಕೆ ಭೇಟಿ ನೀಡುವ ಮೊದಲ ಜಗದ್ಗುರುಗಳಾಗಿದ್ದಾರೆ. ಮೊನಾಕೊ ಸರ್ಕಾರದ ಅನೇಕ ಆಹ್ವಾನಗಳ ಹಿನ್ನೆಲೆಯಲ್ಲಿ ಈ ಭೇಟಿ ನಡೆಯುತ್ತಿದೆ. ಈ ಭೇಟಿಯ ಮೂಲಕ ಗ್ರಿಮಾಲ್ಡಿ ರಾಜಕುಟುಂಬ ಮತ್ತು ಪೇತ್ರನ ಉತ್ತರಾಧಿಕಾರಿಗಳ ನಡುವಿನ ಶತಮಾನಗಳ ಸಂಬಂಧವನ್ನು ಮತ್ತೊಮ್ಮೆ ಬಲಪಡಿಸುವ ಅವಕಾಶ ದೊರೆಯುತ್ತದೆ ಎಂದು ಧರ್ಮ ಸಭೆಯ ನಾಯಕರು ತಿಳಿಸಿದ್ದಾರೆ. ಮಾನವ ಜೀವನದ ಗೌರವ, ಪರಿಸರ ಸಂರಕ್ಷಣೆ ಮತ್ತು ಸಮಾಜದ ಹಿತಕ್ಕಾಗಿ ಸಹಕಾರವನ್ನು ಈ ಭೇಟಿ ಮತ್ತಷ್ಟು ಬಲಪಡಿಸಲಿದೆ.
ಪ್ರಯಾಣದ ವೇಳಾಪಟ್ಟಿಯ ಪ್ರಕಾರ ಜಗದ್ಗುರುಗಳು ಬೆಳಿಗ್ಗೆ 7 ಗಂಟೆಗೆ ವ್ಯಾಟಿಕನ್‌ನಿಂದ ಹೆಲಿಕಾಪ್ಟರ್‌ನಲ್ಲಿ ಹೊರಟು ಬೆಳಿಗ್ಗೆ 9 ಗಂಟೆಗೆ ಮೊನಾಕೊ ಹೆಲಿಪೋರ್ಟ್ ತಲುಪಲಿದ್ದಾರೆ. ನಂತರ ಪ್ರಿನ್ಸ್ ಅರಮನೆದಲ್ಲಿ ಅಧಿಕೃತ ಸ್ವಾಗತ ನಡೆಯಲಿದೆ. ಅಲ್ಲಿಗೆ ಅವರು ರಾಜಕುಮಾರರನ್ನು ಭೇಟಿಯಾಗಿ ತಮ್ಮ ಮೊದಲ ಸಾರ್ವಜನಿಕ ಭಾಷಣವನ್ನು ನೀಡಲಿದ್ದಾರೆ.
ಅದರ ನಂತರ ಬೆಳಿಗ್ಗೆ 11 ಗಂಟೆಗೆ ಕ್ಯಾಥೆಡ್ರಲ್ ಆಫ್ ದಿ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್, ಮೊನಾಕೊದಲ್ಲಿ ಕಥೋಲಿಕ ಸಮುದಾಯದೊಂದಿಗೆ ಭೇಟಿಯಾಗಿ ಪ್ರಭೋಧನೆ ನೀಡುವರು. ನಂತರ ಸೇಂಟ್-ಡೆವೋಟ್ ಧರ್ಮ ಸಭೆಯ ಮುಂಭಾಗದಲ್ಲಿ ಯುವಕರು ಮತ್ತು ಕ್ಯಾಟೆಕುಮೆನ್‌ಗಳನ್ನು ಭೇಟಿಯಾಗಿ ಮತ್ತೊಂದು ಸಂದೇಶ ನೀಡಲಿದ್ದಾರೆ. ಮಧ್ಯಾಹ್ನದ ನಂತರ ಅವರು ಸ್ಟೇಡ್ II ನೇ ಲೂಯಿಸ್ ಕ್ರೀಡಾಂಗಣದಲ್ಲಿ ಪವಿತ್ರ ಬಲಿಪೂಜೆಯನ್ನು ಅಧ್ಯಕ್ಷತೆ ವಹಿಸಿ ಆಚರಿಸುವರು.
ಕಾರ್ಯಕ್ರಮದ ಕೊನೆಯಲ್ಲಿ ಅಧಿಕೃತ ವಿದಾಯ ಸಮಾರಂಭದ ನಂತರ ಜಗದ್ಗುರುಗಳು ಸಂಜೆ 5:45ಕ್ಕೆ ಮೊನಾಕೊದಿಂದ ಹೊರಡಲಿದ್ದಾರೆ ಮತ್ತು ಸುಮಾರು ಎರಡು ಗಂಟೆಗಳ ನಂತರ ರೋಮ್ ತಲುಪಲಿದ್ದಾರೆ. ಈ ಭೇಟಿಗಾಗಿ ಪ್ರಕಟಿಸಿದ ಲೋಗೋದಲ್ಲಿ ಜಗದ್ಗುರುಗಳು ಆಶೀರ್ವಾದ ನೀಡುತ್ತಿರುವ ಚಿತ್ರವಿದ್ದು, ಮೊನಾಕೊ ಪ್ರಿನ್ಸ್ ಅರಮನೆಯ ಗೋಪುರದ ಚಿತ್ರವೂ ಸೇರಿಸಲಾಗಿದೆ. ಇದು ಜಗದ್ಗುರುಗಳ ಪ್ರೇಷಿತರ ಸೇವೆ ಮತ್ತು ಮೊನಾಕೊ ರಾಷ್ಟ್ರದ ಆತ್ಮೀಯ ಸ್ವಾಗತವನ್ನು ಪ್ರತಿಬಿಂಬಿಸುತ್ತದೆ.
