ತ್ರಿಕಾಲ ಪ್ರಾರ್ಥನೆಯಲ್ಲಿ ಜಗದ್ಗುರುಗಳು: ಯೇಸು ನಮ್ಮ ಆತ್ಮಿಕ ದಾಹವನ್ನು ತಣಿಸುತ್ತಾರೆ
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ಭಾನುವಾರ ಬಾವಿಯ ಬಳಿಯ ಸಮಾರ್ಯದ ಮಹಿಳೆಯ ಸುವಾರ್ತಾ ಘಟನೆಯನ್ನು ಕುರಿತು ಚಿಂತನೆ ಮಾಡುತ್ತಾ, ಯೇಸು ಮಾನವನ ಆತ್ಮಿಕ ದಾಹಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ನಂಬುವವರನ್ನು ನಿಜವಾದ ಶಿಷ್ಯತ್ವಕ್ಕೆ ಹೇಗೆ ಕರೆಯುತ್ತಾರೆ ಎಂಬುದನ್ನು ಒತ್ತಿ ಹೇಳಿದರು.
ತಪಸ್ಸು ಕಾಲದ ಮೂರನೇ ಭಾನುವಾರದಂದು ಸಂತ ಪೇತ್ರರ ಚೌಕದಲ್ಲಿ ನಡೆದ ತ್ರಿಕಾಲ ಪ್ರಾರ್ಥನೆಯ ವೇಳೆ ಅವರು ಮಾತನಾಡುತ್ತಾ, ಯೇಸುವಿನೊಂದಿಗೆ ನಡೆಯುವ ಭೇಟಿಯು ಪ್ರತಿಯೊಬ್ಬರ ಹೃದಯದ ಆಳದಲ್ಲಿ ಶಾಶ್ವತ ಜೀವನಕ್ಕೆ ಹರಿದುಬರುವ ನೀರಿನ ಒರೆಯನ್ನು ಉಂಟುಮಾಡುತ್ತದೆ ಎಂದು ಹೇಳಿದರು.
ಜೀವನದ ಮೂಲವಾಗಿರುವ ಯೇಸುವಿನ ಭೇಟಿ
ಜಗದ್ಗರುಗಳು ತಪಸ್ಸು ಕಾಲವು ದೇವರ ಕೃಪೆಯನ್ನು ಅನುಭವಿಸಲು ತಡೆಯಾಗಿರುವ ಅಡೆತಡೆಗಳಿಂದ ನಮ್ಮ ಹೃದಯಗಳನ್ನು ಮುಕ್ತಗೊಳಿಸಲು ವಿಶೇಷ ಸಮಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಡಚ್ ಯಹೂದಿ ಲೇಖಕಿ ಎಟ್ಟಿ ಹಿಲ್ಲೆಸಮ್ ರವರ ಮಾತುಗಳನ್ನು ನೆನಪಿಸಿದರು. ದೇವರು ಕೆಲವೊಮ್ಮೆ ಕಲ್ಲುಗಳ ಮತ್ತು ಧೂಳಿನ ಕೆಳಗೆ ಮರೆತುಹೋಗಿದಂತಾಗಬಹುದು, ಆದರೆ ಅವರನ್ನು ಮತ್ತೆ ಹೊರತೆಗೆದುಕೊಳ್ಳಬೇಕು ಎಂದು ಅವರು ಬರೆದಿದ್ದರು.
ಯೇಸು ಸಮಾರ್ಯ ಮಹಿಳೆಯೊಂದಿಗೆ ಮಾತನಾಡಿದಾಗ ಶಿಷ್ಯರು ಆಶ್ಚರ್ಯಪಟ್ಟರು ಎಂದು ಜಗದ್ಗುರುಗಳು ಹೇಳಿದರು. ಇದರಿಂದ ಯೇಸುವಿನ ಗುರಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವರ ಮೊದಲಿನ ಹಿಂಜರಿತವನ್ನು ಅವರು ವಿವರಿಸಿದರು.
ಜಾಗೃತಿಯೂ ಸೇವೆಯೂ ಅಗತ್ಯ
ಜಗದ್ಗರು XIV ನೇ ಲಿಯೋರವರು ಶಿಷ್ಯರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ, ದೇವರ ಕೃಪೆಯನ್ನು ಎಲ್ಲೆಡೆ ಗುರುತಿಸುವ ಜಾಗೃತಿಯ ಅಗತ್ಯವನ್ನು ಒತ್ತಿ ಹೇಳಿದರು. ನಿಮ್ಮ ಸುತ್ತಲೂ ನೋಡಿ ಹೊಲಗಳು ಈಗಲೇ ಕೊಯ್ಲಿಗೆ ಸಿದ್ಧವಾಗಿವೆ ಎಂದು ಯೇಸು ಹೇಳಿದ ಮಾತನ್ನು ಅವರು ನೆನಪಿಸಿದರು. ಯೇಸುವಿನ ಗಮನ, ಗೌರವ ಮತ್ತು ಯಾರನ್ನೂ ತೀರ್ಪು ಕೊಡದ ಮನೋಭಾವ ಕ್ರೈಸ್ತರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಸುವಾರ್ತೆ ಸಾರುವವರಾಗಿ ಮಹಿಳೆಯರು
ಜಗದ್ಗರುಗಳು ಸಮಾರ್ಯ ಮಹಿಳೆಯ ಪಾತ್ರದ ಬಗ್ಗೆ ಚಿಂತನೆ ಮಾಡುತ್ತಾ, ಆಕೆ ಅನೇಕ ಮಹಿಳಾ ಸುವಾರ್ತಾ ಸಾರಕರಲ್ಲಿ ಮೊದಲನೆಯವರಾಗಿದ್ದಾಳೆ ಎಂದು ಹೇಳಿದರು. ಆಕೆಯ ಸಾಕ್ಷಿಯ ಮೂಲಕ ಆಕೆಯ ಸಮುದಾಯವು ನಂಬಿಕೆಗೆ ಬಂದಿತು. ನಾವು ಎದುರಾಗುವ ವ್ಯಕ್ತಿಗೆ ಸಮಯ ನೀಡುವಾಗ ಅದು ಎಷ್ಟು ಸುಂದರವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದರು.
ಶಾಂತಿ ಮತ್ತು ಏಕತೆಗೆ ಕರೆ
ತಮ್ಮ ಸಂದೇಶವನ್ನು ಮುಕ್ತಾಯಗೊಳಿಸುವಾಗ, ಸತ್ಯ ಮತ್ತು ನ್ಯಾಯಕ್ಕಾಗಿ ದಾಹಪಡುವವರ ಸೇವೆ ಮಾಡುವಲ್ಲಿ ಧರ್ಮ ಸಭೆಯ ತಾಯಿ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಬೇಡಿಕೊಳ್ಳುವಂತೆ ಜಗದ್ಗುರುಗಳು ವಿಶ್ವಾಸಿಗಳಿಗೆ ಆಹ್ವಾನಿಸಿದರು. ಈ ಸೇವೆ ವಿಭಜನೆಗಳನ್ನು ಮೀರಿ ನಡೆಯಬೇಕು ಎಂದು ಅವರು ಹೇಳಿದರು. ದೇವರನ್ನು ಆರಾಧಿಸುವವರು ಆತ್ಮದಲ್ಲಿಯೂ ಸತ್ಯದಲ್ಲಿಯೂ ಅವರನ್ನು ಆರಾಧಿಸುವ ಶಾಂತಿಯ ಪುರುಷರು ಮತ್ತು ಮಹಿಳೆಯರಾಗಲು ಪ್ರಯತ್ನಿಸುತ್ತಾರೆ ಎಂದು ಜಗದ್ಗುರುಗಳು ಹೇಳಿದರು.
