ಗರಿಗಳ ಭಾನುವಾರದ ಬಲಿ ಪೂಜೆಯಲ್ಲಿ ಜಗದ್ಗುರುಗಳು: ‘ಯುದ್ಧ ನಡೆಸುವವರ ಪ್ರಾರ್ಥನೆಗಳನ್ನು ಯೇಸು ಕೇಳುವುದಿಲ್ಲ’
ವ್ಯಾಟಿಕನ್ ವರದಿ
ಪ್ರಭುವಿನ ಯಾತನೆಯ ಗರಿಗಳ ಭಾನುವಾರದ ದಿನದಂದು, ಜಗದ್ಗುರು XIVನೇ ಲಿಯೋರವರು ಸಂತ ಪೇತ್ರರ ಚೌಕದಲ್ಲಿ ಕೂಡಿಕೊಂಡಿದ್ದ ಭಕ್ತರಿಗಾಗಿ ಬಲಿ ಪೂಜೆಯನ್ನು ಆಚರಿಸಿದರು.
ತಮ್ಮ ಪ್ರಭೋಧನೆಯಲ್ಲಿ, ಸುತ್ತಮುತ್ತ ಹಿಂಸಾಚಾರ ಮಡುಗಟ್ಟಿದ್ದರೂ, ಯೇಸು ತಾನೇ ಶಾಂತಿಯ ರಾಜನಾಗಿ ತಾನು ತಾನೇ ಪ್ರಕಟಿಸಿಕೊಂಡದ್ದು ಕುರಿತು ಜಗದ್ಗುರುಗಳು ಚಿಂತನೆ ಮಾಡಿದರು.
ಯೇಸು ಶಿಲುಬೆಯ ಮಾರ್ಗವನ್ನು ನಡೆದುಹೋದಾಗ, ನಾವು ಸಹ ಅವರೊಂದಿಗೆ ನಡೆದು, ಮಾನವಕುಲದ ಹಿತಾರ್ಥವಾಗಿ ಪ್ರೀತಿಯ ಕಾಣಿಕೆಯಾಗಿಸಿ ಅವರು ಭರಿಸಿದ ಅವರ ಯಾತನೆಯನ್ನು ಧ್ಯಾನಿಸುತ್ತೇವೆ.
ಇತರರು ಹಿಂಸೆಯನ್ನು ಪ್ರಚೋದಿಸುತ್ತಿರುವಾಗಲೂ, ಆತನು ವಿನಯದಲ್ಲಿ ಸ್ಥಿರನಾಗಿದ್ದಾನೆ, ಎಂದು ಜಗದ್ಗುರುಗಳು ಹೇಳಿದರು. ಇತರರು ಕತ್ತಿಗಳು ಮತ್ತು ಕೋಲುಗಳನ್ನು ಎತ್ತಿದಾಗಲೂ, ಆತನು ಮಾನವಕುಲವನ್ನು ಅಪ್ಪಿಕೊಳ್ಳಲು ತನ್ನನ್ನೇ ಅರ್ಪಿಸುತ್ತಾನೆ.
ಅವರು ಮುಂದುವರಿದು, ಕತ್ತಲೆಯೂ ಮರಣವೂ ಅವರನ್ನು ಆವರಿಸಲು ಸಿದ್ಧವಾಗಿದ್ದಾಗಲೂ, ಯೇಸು ಲೋಕಕ್ಕೆ ಜೀವವನ್ನೂ ಬೆಳಕನ್ನೂ ತರುವುದಕ್ಕಾಗಿ ಬಂದನು ಎಂದು ಹೇಳಿದರು.
ಜಗದ್ಗುರು ಲಿಯೋರವರು ಯೇಸು ಲೋಕವನ್ನು ತಂದೆಯ ಮಡಿಲಿಗೆ ಕರೆತರಲು ಮತ್ತು ದೇವರಿಂದಲೂ ನಮ್ಮ ನೆರೆಯವರಿಂದಲೂ ನಮ್ಮನ್ನು ದೂರವಿಡುವ ಪ್ರತಿಯೊಂದು ಅಡೆತಡೆಗಳನ್ನು ಒಡೆಯಲು ಬಯಸಿದ್ದನು ಎಂದು ಸೂಚಿಸಿದರು.
“ಶಾಂತಿಯ ರಾಜ” ಎಂಬ ಪದವನ್ನು ಹಲವು ಬಾರಿ ಪುನರಾವರ್ತಿಸಿ, ತನ್ನ ಯಾತನೆಯ ಸಂದರ್ಭಗಳಲ್ಲಿ ಯೇಸು ಮಾಡಿದ ಕ್ರಿಯೆಗಳು ಶಾಂತಿಯನ್ನು ತರುವ ಅವರ ಇಚ್ಛೆಗೆ ಸಾಕ್ಷಿಯಾಗಿವೆ ಎಂದು ಜಗದ್ಗುರುಗಳು ಒತ್ತಿಹೇಳಿದರು.
ತಮ್ಮ ಶಿಷ್ಯರಲ್ಲಿ ಒಬ್ಬನು ಮಹಾಯಾಜಕನ ಸೇವಕನನ್ನು ಹೊಡೆದು ಅವನ ಕಿವಿಯನ್ನು ಕತ್ತರಿಸಿದಾಗ, ಕತ್ತಿಯಿಂದ ಬದುಕುವವರು ಕತ್ತಿಯಿಂದಲೇ ಸಾಯುತ್ತಾರೆ ಎಂದು ನೆನಪಿಸಿ, ಯೇಸು ಆ ಶಿಷ್ಯನಿಗೆ ತನ್ನ ಕತ್ತಿಯನ್ನು ಇಡಲು ಆಜ್ಞಾಪಿಸಿದನು.
ಶಿಲುಬೆಗೆ ಹಾಕಲ್ಪಟ್ಟು ಮರಣಕ್ಕೆ ಒಳಗಾದಾಗಲೂ, ಯೇಸು ತನ್ನನ್ನು ರಕ್ಷಿಸಿಕೊಳ್ಳಲಿಲ್ಲ ಅಥವಾ ಪ್ರತಿರೋಧಿಸಲಿಲ್ಲ ಬಲಿಕೋಣೆಗೆ ಕರೆದೊಯ್ಯಲ್ಪಡುವ ಕುರಿಯಂತೆ ತನ್ನನ್ನು ಒಪ್ಪಿಸಿಕೊಂಡನು.
ಅವರು ಯಾವಾಗಲೂ ಹಿಂಸೆಯನ್ನು ತಿರಸ್ಕರಿಸುವ ದೇವರ ಮೃದುಮುಖವನ್ನು ಪ್ರಕಟಿಸಿದರು,ಎಂದು ಜಗದ್ಗುರುಗಳು ಹೇಳಿದರು. ತನ್ನನ್ನು ಉಳಿಸಿಕೊಳ್ಳುವುದಕ್ಕಿಂತ, ಆತನು ತನ್ನನ್ನು ಶಿಲುಬೆಗೆ ಏರಿಸಲು ಅನುಮತಿಸಿ, ಮಾನವ ಇತಿಹಾಸದ ಪ್ರತಿಯೊಂದು ಕಾಲ ಮತ್ತು ಸ್ಥಳದಲ್ಲಿ ಹೊರುವ ಪ್ರತಿಯೊಂದು ಶಿಲುಬೆಯನ್ನೂ ಅಪ್ಪಿಕೊಂಡರು.
ನಂತರ, ಯೆಶಾಯ ಪ್ರವಾದಿಯ ಮಾತುಗಳನ್ನು ಜಗದ್ಗುರು ಲಿಯೋರವರು ನೆನಪಿಸಿದರು "ನೀವು ಅನೇಕ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳುವುದಿಲ್ಲ ನಿಮ್ಮ ಕೈಗಳು ರಕ್ತದಿಂದ ತುಂಬಿವೆ". (ಯೆಶಾಯ 1:15).
ಯೇಸು ಶಾಂತಿಯ ರಾಜನು ಆತನು ಯುದ್ಧವನ್ನು ತಿರಸ್ಕರಿಸುತ್ತಾನೆ ಮತ್ತು ಯಾರೂ ಯುದ್ಧವನ್ನು ಸಮರ್ಥಿಸಲು ಅವನನ್ನು ಬಳಸಲಾಗುವುದಿಲ್ಲ, ಎಂದು ಜಗದ್ಗುರುಗಳು ಹೇಳಿದರು. ಯುದ್ಧ ಮಾಡುವವರ ಪ್ರಾರ್ಥನೆಗಳನ್ನು ಆತನು ಕೇಳುವುದಿಲ್ಲ ಅವನ್ನು ತಿರಸ್ಕರಿಸುತ್ತಾನೆ”ಎಂದರು.
ಇಂದಿನ ಜಗತ್ತಿನಲ್ಲಿ ಮಾನವಕುಲದ ಅನೇಕ ಗಾಯಗಳನ್ನು ಅವರು ದುಃಖದಿಂದ ಉಲ್ಲೇಖಿಸಿ, ಹಿಂಸೆಯಿಂದ ಹಿಂಸಿಸಲ್ಪಟ್ಟವರ ಮತ್ತು ಯುದ್ಧದ ಬಲಿಯಾಗಿರುವವರ ನೋವಿನ ನಿಟ್ಟುಸಿರುಗಳಿಂದ ಜನರು ದೇವರನ್ನು ಕರೆದಾಡುತ್ತಿದ್ದಾರೆ ಎಂದು ಹೇಳಿದರು.
ಶಾಂತಿಯ ರಾಜನಾದ ಕ್ರಿಸ್ತನು ತನ್ನ ಶಿಲುಬೆಯಿಂದ ಮತ್ತೆ ಕೂಗುತ್ತಾನೆ ದೇವರ ಪ್ರೀತಿಯೇ! ಕರುಣೆ ತೋರಿಸು! ನಿಮ್ಮ ಆಯುಧಗಳನ್ನು ಕೆಳಗೆ ಇಡಿ! ನೀವು ಸಹೋದರರು ಮತ್ತು ಸಹೋದರಿಯರು ಎಂಬುದನ್ನು ನೆನಪಿಸಿಕೊಳ್ಳಿ! ಎಂದು ಜಗದ್ಗುರುಗಳು ಹೇಳಿದರು.
ಕೊನೆಗೆ, ಬಿಷಪ್ ಟೋನಿನೊ ಬೆಲ್ಲೊ ರವರ ಮಾತುಗಳನ್ನು ಉಲ್ಲೇಖಿಸಿ, ತನ್ನ ಮಗನ ಶಿಲುಬೆಯ ಪಾದದಲ್ಲಿ ನಿಂತಿದ್ದ ಧನ್ಯ ಕನ್ಯಾ ಮರಿಯಮ್ಮನವರ ಬಗ್ಗೆ ಜಗದ್ಗುರುಗಳು ಚಿಂತನೆ ಮಾಡಿದರು.
“ಪವಿತ್ರ ಮರಿಯಮ್ಮನವರೆ, ಮೂರನೇ ದಿನದ ಮಹಿಳೆಯೇ, ಎಲ್ಲದಕ್ಕೂ ಮಧ್ಯೆಯೂ ಮರಣವು ನಮ್ಮ ಮೇಲೆ ಇನ್ನು ಪ್ರಭುತ್ವ ಸಾಧಿಸದು ಎಂಬ ನಂಬಿಕೆಯನ್ನು ನಮಗೆ ನೀಡು ಜನಾಂಗಗಳ ಅನ್ಯಾಯಗಳಿಗೆ ಅಂತ್ಯವಿದೆ ಯುದ್ಧದ ಮಿಂಚುಗಳು ಸಂಧ್ಯಾಕಾಲಕ್ಕೆ ಮರೆಯಾಗುತ್ತಿವೆ ಬಡವರ ನೋವುಗಳು ಕೊನೆಯ ಉಸಿರನ್ನು ಬಿಡುತ್ತಿವೆ, ಎಂದು ಅವರು ಹೇಳಿದರು.
“ಮತ್ತು ಕೊನೆಗೆ, ಹಿಂಸೆ ಮತ್ತು ನೋವಿನ ಎಲ್ಲಾ ಬಲಿಗಳ ಕಣ್ಣೀರುಗಳು ವಸಂತ ಸೂರ್ಯನಡಿ ಕರಗುವ ಹಿಮದಂತೆ ಶೀಘ್ರದಲ್ಲೇ ಒಣಗಿಬಿಡಲಿ ಎಂದು ಅನುಗ್ರಹಿಸು”ಎಂದು ಪ್ರಾರ್ಥಿಸಿದರು.
