ನಂಬಿಕೆ, ಸಂಶಯ, ನಿರೀಕ್ಷೆ: ಮೋನಾಕೋದಲ್ಲಿ ಯುವಕರ ಪ್ರಶ್ನೆಗಳಿಗೆ ಜಗದ್ಗುರುಗಳು ಉತ್ತರಿಸುತ್ತಾರೆ
ವ್ಯಾಟಿಕನ್ ವರದಿ
ಮಧ್ಯಾಹ್ನದ ವೇಳೆಗೆ, ಮೋನಾಕೋದೆಲ್ಲೆಡೆಯಿಂದ ಸಾವಿರಾರು ಯುವಕರು ಜಗದ್ಗುರು XIVನೇ ಲಿಯೋರವರನ್ನು ಭೇಟಿಯಾಗಲು ಸೈಂಟ್ ಡೆವೋಟಾ ದೇವಾಲಯದ ಮುಂದೆ ಇರುವ ಮೈದಾನದಲ್ಲಿ ಕೂಡಿದ್ದರು. ಇದು ಆ ದಿನ ಬೆಳಿಗ್ಗೆಯ ಗಟ್ಟಿಯಾದ ಕಾರ್ಯಕ್ರಮಗಳ ಸರಣಿಯ ಅಂತಿಮ ಕಾರ್ಯಕ್ರಮವಾಗಿತ್ತು.
ಈ ಸಣ್ಣ ರಾಷ್ಟ್ರದ ನಾಲ್ವರು ಯುವ ನಿವಾಸಿಗಳನ್ನು ಜಗದ್ಗುರು ಲಿಯೋ ರವರಿಗೆ ಪ್ರಶ್ನೆ ಕೇಳಲು ಆಯ್ಕೆ ಮಾಡಲಾಗಿತ್ತು. ಮೊದಲಿಗನಾದ 22 ವರ್ಷದ ವಿದ್ಯಾರ್ಥಿ ಮತ್ತು ಕ್ರಿಯಾಶೀಲ ಕಥೋಲಿಕ ಬೆಂಜಮಿನ್, ಪರಿಸರ ಸಮಸ್ಯೆಗಳು ಮತ್ತು ಹಿಂಸಾತ್ಮಕ ಸಂಘರ್ಷಗಳ ಮಧ್ಯೆ “ಆತ್ಮವಿಶ್ವಾಸವನ್ನು ಉಳಿಸಿಕೊಂಡು ನಿರೀಕ್ಷೆಯನ್ನು ಹಿಡಿದಿಡುವುದು ಹೇಗೆ?” ಎಂಬ ಬಗ್ಗೆ ಸಲಹೆ ಕೇಳಿದನು.
ತಮ್ಮ ಉತ್ತರದಲ್ಲಿ, ಜಗದ್ಗುರುಗಳು ಕ್ರಿಸ್ತನೊಂದಿಗೆ ಸಂಬಂಧವನ್ನು ಬೆಳೆಸುವುದರಿಂದ ವ್ಯಕ್ತಿಯೊಳಗೂ ಮತ್ತು ಇತರರೊಂದಿಗೂ ಉಂಟಾಗುವ ಏಕತೆಯ ಭಾವನೆಯನ್ನು ಒತ್ತಿಹೇಳಿದರು.
ಜೀವನಕ್ಕೆ ಸ್ಥಿರತೆಯನ್ನು ನೀಡುವುದು ಪ್ರೀತಿಯೇ, ಎಂದು ಜಗದ್ಗುರುಗಳು ಹೇಳಿದರು: ಮೊದಲನೆಯದಾಗಿ ದೇವರ ಪ್ರೀತಿಯ ಮೂಲಭೂತ ಅನುಭವ, ಮತ್ತು ಅದರ ವಿಸ್ತಾರವಾಗಿ ಪರಸ್ಪರ ಪ್ರೀತಿಯ ಪವಿತ್ರ ಮತ್ತು ಬೆಳಕು ನೀಡುವ ಅನುಭವ ಎಂದರು.
ಮಾಡುವಿಕೆ ಮತ್ತು ಮಾತಿನ ಅಬ್ಬರವನ್ನು ಶಮನಗೊಳಿಸಲು ಪ್ರಾರ್ಥನೆ ಮತ್ತು ಧ್ಯಾನ
ಮುಂದಿನ ಪ್ರಶ್ನೆಯನ್ನು ಪೋರ್ಚುಗಲ್ ಮೂಲದ 24 ವರ್ಷದ ಕಥೋಲಿಕ ಆಂಡ್ರಿಯಾ ಕೇಳಿದರು. ಸಂಶಯ ಮತ್ತು ಒಳಗಿನ ಖಾಲಿತನದ ಕ್ಷಣಗಳಲ್ಲಿ ತನ್ನ ನಂಬಿಕೆ ದೃಢವಾಗಿಯೂ ಜೀವಂತವಾಗಿಯೂ ಉಳಿಯಲು ಹೇಗೆ ಸಾಧ್ಯ? ಎಂದು ಅವರು ಕೇಳಿದರು.
ಉತ್ತರವಾಗಿ, ಜಗದ್ಗುರುಗಳು ಹೃದಯದ ಬಾಗಿಲನ್ನು ಅಪ್ರಧಾನ ಚಿಂತನೆಗಳಿಂದ ಸ್ವಚ್ಛಗೊಳಿಸಿ, ಪವಿತ್ರಾತ್ಮನಿಗೆ ಸ್ಥಳ ನೀಡುವ ಮಹತ್ವವನ್ನು ಒತ್ತಿಹೇಳಿದರು.
ಇದು ಪ್ರಾರ್ಥನೆ ಮತ್ತು ಮೌನದ ಕ್ಷಣಗಳು, ಧ್ಯಾನವನ್ನು ಅಗತ್ಯವಾಗಿಸುತ್ತದೆ ಎಂದು ಅವರು ಹೇಳಿದರು ಮಾಡುವಿಕೆ ಮತ್ತು ಮಾತನಾಡುವಿಕೆ, ಸಂದೇಶಗಳು, ರೀಲ್ಸ್ ಮತ್ತು ಚಾಟ್‌ಗಳ ಅಬ್ಬರವನ್ನು ಶಮನಗೊಳಿಸಲು ಹಾಗೂ ಇತರರೊಂದಿಗೆ ನೇರವಾಗಿ ಸಮಯ ಕಳೆಯುವುದರಿಂದ ನಿಜವಾದ ಮತ್ತು ಪ್ರಾಮಾಣಿಕ ಸಂಗಡಿತನದ ಸೌಂದರ್ಯವನ್ನು ಆಸ್ವಾದಿಸಲು ಸಹ ನೆರವಾಗುತ್ತದೆ.
ನಿರೀಕ್ಷೆ ತಕ್ಷಣ ಸೃಷ್ಟಿಸಲಾಗುವುದಿಲ್ಲ
ನಂತರ, ಈಸ್ಟರ್‌ನಲ್ಲಿ ದೀಕ್ಷಾಸ್ನಾನ ಪಡೆಯಲಿರುವ 25 ವರ್ಷದ ಇಥನ್ ಮತ್ತು 35 ವರ್ಷದ ವೈದ್ಯೆ ಸೋಫಿಯಾ ಕೇಳಿದ ಪ್ರಶ್ನೆಗಳಿಗೆ ಜಗದ್ಗುರುಗಳು ಉತ್ತರಿಸಿದರು.
ಇವರಿಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಸುವಾರ್ತೆಗೆ ಸಾಕ್ಷಿಯಾಗುವ ನೈಜ ಮಾರ್ಗಗಳ ಬಗ್ಗೆ ಕೇಳಿದರು ಇಥನ್ “ನಮ್ಮ ಜೀವನವನ್ನು ಬದಲಿಸಿದ ಪ್ರೀತಿಗೆ ಸಾಕ್ಷಿಯಾಗುವುದು ಹೇಗೆ?” ಎಂದು ಪ್ರಶ್ನಿಸಿದರೆ, ಸೋಫಿಯಾ ಇತರರತ್ತ ಪ್ರೀತಿಯಲ್ಲಿ ಬೆಳೆಯುವುದು ಹೇಗೆ ಎಂದು ಕೇಳಿದರು.
ಉತ್ತರವಾಗಿ, ಜಗದ್ಗುರು ಲಿಯೋರವರು “ಸಾಕ್ಷಿಯ ಮಾತುಗಳು ಮತ್ತು ನಿರೀಕ್ಷೆಯ ಕೃತಿಗಳು ತಕ್ಷಣವೇ ಹುಟ್ಟಿಬರುವುದಿಲ್ಲ” ಎಂದು ಹೇಳಿದರು.
ಇಂತಹ ಕಾರ್ಯಗಳು ನಮ್ಮ ಸ್ವಂತ ಪ್ರಯತ್ನಗಳ ಫಲವಲ್ಲ, ಆದರೆ ದೇವರೊಂದಿಗೆ ಇರುವ ಆಳವಾದ ಸಂಬಂಧದಿಂದ ಬರುತ್ತವೆ ಎಂದು ಅವರು ವಿವರಿಸಿದರು.
ನಾವು ದೇವರ ಕೃಪೆಯನ್ನು ಸ್ವೀಕರಿಸಲು ತೆರೆಯಲ್ಪಟ್ಟಿದ್ದರೆ, ಸರಿಯಾದ ಸಮಯದಲ್ಲಿ ಸರಿಯಾದ ಮಾತುಗಳೂ ಹಾಗೂ ಕಾರ್ಯಗೈಯಲು ಅಗತ್ಯವಾದ ಶಕ್ತಿಯೂ ನಮಗೆ ದೊರೆಯುತ್ತದೆ ಎಂದು ಜಗದ್ಗುರುಗಳು ವಿಶ್ವಾಸ ವ್ಯಕ್ತಪಡಿಸಿದರು.
‘ಸ್ವಯಂ ಅರ್ಪಣೆ’ ಸಂತೋಷದ ರಹಸ್ಯ
ತಮ್ಮ ಭಾಷಣದ ಕೊನೆಯಲ್ಲಿ, ಜಗದ್ಗುರು ಲಿಯೋರವರು ಮೋನಾಕೋದ ಯುವಕರಿಗೆ ನಿಮ್ಮನ್ನೇ ಸಂಪೂರ್ಣವಾಗಿ ಪ್ರಭುವಿಗೂ ಹಾಗೂ ಇತರರಿಗೂ ಅರ್ಪಿಸಿಕೊಳ್ಳಿರಿ ಎಂದು ಮನವಿ ಮಾಡಿದರು.
ಇದರಿಂದ ಮಾತ್ರ, “ನೀವು ಶಾಶ್ವತ ಸಂತೋಷವನ್ನೂ ಮತ್ತು ಜೀವನದ ಇನ್ನಷ್ಟು ಆಳವಾದ ಅರ್ಥವನ್ನೂ ಕಂಡುಕೊಳ್ಳುತ್ತೀರಿ.”ಎಂದು ಅವರು ಒತ್ತಿಹೇಳಿದರು
ಈ ಅರ್ಥವು ರಾಷ್ಟ್ರ ಮಟ್ಟದಲ್ಲಿಯೂ ಪ್ರತಿಫಲಿಸಬಹುದು ಎಂದು ಅವರು ಸೂಚಿಸಿದರು: ಮೋನಾಕೋ ಸಣ್ಣ ದೇಶವಾದರೂ, ಅದು ಐಕ್ಯತೆಯ ಮಹತ್ವದ ಸ್ಥಳವಾಗಿಯೂ ನಿರೀಕ್ಷೆಯ ದೀಪಸ್ತಂಭವಾಗಿಯೂ ಪರಿಣಮಿಸಬಹುದು ಎಂದರು.
