MONACO-VATICAN-RELIGION-POPE

ಮೋನಾಕೋದಲ್ಲಿ ಜಗದ್ಗುರು ಲಿಯೋರವರು: ಕ್ರಿಸ್ತನು ಧರ್ಮ ಸಭೆಯನ್ನು ಏಕತೆಗೂ ಮತ್ತು ಮಾನವ ಗೌರವದ ರಕ್ಷಣೆಗೆ ಕರೆಯುತ್ತಾರೆ.

ಜಗದ್ಗುರು XIVನೇ ಲಿಯೋರವರು ಮೋನಾಕೋದ ಕಥೋಲಿಕ ಸಮುದಾಯವನ್ನು, ಲೌಕಿಕತೆಯನ್ನು ಎದುರಿಸಲು ಸಮರ್ಥವಾಗಿರುವ, ಮಾನವ ಗೌರವವನ್ನು ಉತ್ತೇಜಿಸುವ ಮತ್ತು ಸುವಾರ್ತೆಯನ್ನು ಸೃಜನಶೀಲತೆಯೊಂದಿಗೆ ಹಾಗೂ ದೃಢ ನಂಬಿಕೆಯಿಂದ ಘೋಷಿಸುವ ನಂಬಿಕೆಯನ್ನು ಪುನರುಜ್ಜೀವನಗೊಳಿಸಲು ಆಹ್ವಾನಿಸುತ್ತಾರೆ.

ವ್ಯಾಟಿಕನ್ ವರದಿ

ಮೋನಾಕೋ ಪ್ರಿನ್ಸಿಪಾಲಿಟಿಯ ಹೃದಯ ಭಾಗದಲ್ಲಿರುವ ಅಮಲೊಧ್ಭವ ಮಾತೆ ಕ್ಯಾಥೀಡ್ರಲ್‌ನಲ್ಲಿ, ಶನಿವಾರ ಬೆಳಿಗ್ಗೆ ಜಗದ್ಗುರು XIVನೇ ಲಿಯೋರವರು ಮಧ್ಯಾಹ್ನದ ಪ್ರಾರ್ಥನೆಯ ಆಚರಣೆಗೆ ಮೋನಾಕೋದ ಕಥೋಲಿಕ ಸಮುದಾಯದೊಂದಿಗೆ ಸೇರಿ, “ತಂದೆಯ ಮುಂದೆ ನಮ್ಮ ಪರವಾಗಿ ನಿಲ್ಲುವ ವಕೀಲನಾದ ಕ್ರಿಸ್ತನು” ಎಂಬ ವಿಷಯದ ಮೇಲೆ ಚಿಂತನೆ ಮಂಡಿಸಿದರು.

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು  ಯೋಹಾನನ ಮಾತುಗಳಿಂದ ಆರಂಭಿಸಿದರು ನಮಗೆ ದೇವರ ಮುಂದೆ ಒಬ್ಬ ವಕೀಲನಿದ್ದಾನೆ: ನ್ಯಾಯನಿಷ್ಠನಾದ ಯೇಸು ಕ್ರಿಸ್ತನು, ಎಂದು ಹೇಳಿ, ದುರ್ಬಲತೆ ಮತ್ತು ಪಾಪಗಳಿಂದ ಗುರುತಿಸಲ್ಪಟ್ಟ ಮಾನವಕುಲದ ಕಡೆ ದೇವರ ಕರುಣೆಯ ಮುಂದಾಳತ್ವವೆಂಬ ರಕ್ಷಣೆಯ ರಹಸ್ಯವನ್ನು ಧ್ಯಾನಿಸಲು ಎಲ್ಲರನ್ನೂ ಆಹ್ವಾನಿಸಿದರು.

“ಕ್ರಿಸ್ತನು ಮಾನವಕುಲದಲ್ಲಿಯೂ ಮತ್ತು ಜಗತ್ತಿನಲ್ಲಿಯೂ ಇರುವ ಕೆಡುಕನ್ನು ತನ್ನ ಮೇಲೆ ಹೊತ್ತುಕೊಂಡನು ಮತ್ತು ಅದನ್ನು ಜಯಿಸಿ, ಅದನ್ನು ಪರಿವರ್ತಿಸಿ, ನಮ್ಮನ್ನು ಶಾಶ್ವತವಾಗಿ ಮುಕ್ತಗೊಳಿಸಿದ್ದಾನೆ.” ಎಂದು ಹೇಳಿದರು.

ಮೋನಾಕೋದ ಪ್ರಿನ್ಸ್ ದ್ವಿತೀಯ ಅಲ್ಬರ್ಟ್ , ಆರ್ಚ್‌ಬಿಷಪ್ ಡೊಮಿನಿಕ್-ಮರಿ ಡೇವಿಡ್, ಧರ್ಮಗುರುಗಳು ಮತ್ತು ಭಕ್ತರನ್ನು ಅಭಿನಂದಿಸಿದ ಜಗದ್ಗುರುಗಳು, ವೈವಿಧ್ಯತೆ ಮತ್ತು ತೆರೆಯಲ್ಪಟ್ಟ ಮನೋಭಾವದಿಂದ ವಿಶಿಷ್ಟವಾಗಿರುವ ಸ್ಥಳೀಯ ಧರ್ಮ ಸಭೆಯ ಜೀವನವನ್ನು ಹಂಚಿಕೊಳ್ಳುವುದರಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಏಕತೆಯ ವರ

ನಮ್ಮ ಪರವಾದ ವಕೀಲನಾದ ಯೇಸುವಿನ ಬಗ್ಗೆ ಚಿಂತನೆ ಮಾಡುವಾಗ, ಜಗದ್ಗುರು XIVನೇ ಲಿಯೋರವರು ಮೊದಲು ಏಕತೆಯ ವರವನ್ನು ಒತ್ತಿಹೇಳಿದರು. ಕ್ರಿಸ್ತನು,“ನಮ್ಮನ್ನು ತಂದೆಯೊಂದಿಗೆ ಮತ್ತು ಪರಸ್ಪರರೊಂದಿಗೆ ಸಮನ್ವಯಗೊಳಿಸುತ್ತಾರೆ" ದಂಡನೆಯ ಮೂಲಕವಲ್ಲ, ಆದರೆ ಶುದ್ಧಗೊಳಿಸುವ, ಗುಣಪಡಿಸುವ, ಪರಿವರ್ತಿಸುವ ಮತ್ತು ನಮ್ಮನ್ನು ದೇವರ ಒಂದೇ ಕುಟುಂಬದ ಭಾಗವಾಗಿಸುವ ಕರುಣೆಯ ಮೂಲಕ ಎಂದು ಅವರು ಹೇಳಿದರು.

ಈ ಏಕತೆಯು ಸಾಮಾಜಿಕ ಅರ್ಥವನ್ನೂ ಹೊಂದಿದೆ ಎಂದು ಅವರು ಸೂಚಿಸಿದರು. ಯೇಸುವಿನ ಗುರಿ ಕೇವಲ ಆತ್ಮೀಯ ಸುಖಶಾಂತಿಯನ್ನು ಮಾತ್ರವಲ್ಲ, ಮಾನವ ಗೌರವವನ್ನೂ ಪುನಃಸ್ಥಾಪಿಸುತ್ತದೆ ಮತ್ತು ವ್ಯಕ್ತಿಗಳನ್ನು ಸಮುದಾಯದೊಳಗೆ ಮತ್ತೆ ಸೇರಿಸುತ್ತದೆ. ಈ ದೃಷ್ಟಿಯಲ್ಲಿ, ಧರ್ಮ ಸಭೆ ಯಾರನ್ನೂ ಪ್ರೀತಿಯಲ್ಲಿ ವಿಭಜಿಸದ ದೇವರ ಪ್ರೀತಿಯ ಪ್ರತಿಬಿಂಬವಾಗಿರಲು” ಕರೆಯಲ್ಪಟ್ಟಿದೆ.

ಸ್ಥಳೀಯ ಪರಿಸ್ಥಿತಿಯತ್ತ ಗಮನ ಹರಿಸಿದ ಜಗದ್ಗುರುಗಳು, ಮೋನಾಕೋದ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ ವಿಭಜನೆಯಲ್ಲ, ಆದರೆ ಒಂದು ಶ್ರೀಮಂತಿಕೆ ಎಂದು ಹೇಳಿದರು. ಧರ್ಮ ಸಭೆಯಲ್ಲಿ  ಇಂತಹ ವೈವಿಧ್ಯತೆ ಸಾಮಾಜಿಕ ವರ್ಗಗಳ ವಿಭಜನೆಗೆ ಕಾರಣವಾಗಬಾರದು,ಆದರೆ ಎಲ್ಲರೂ ವ್ಯಕ್ತಿಗಳಾಗಿಯೂ ದೇವರ ಮಕ್ಕಳಾಗಿಯೂ ಸ್ವಾಗತಿಸಲ್ಪಡುವುದಕ್ಕೆ ಒಂದು ಗುರುತಾಗಬೇಕು ಎಂದು ಅವರು ಹೇಳಿದರು,

ಮಾನವ ವ್ಯಕ್ತಿಯ ರಕ್ಷಣೆಗೆ ಕರೆಯಲ್ಪಟ್ಟ ಧರ್ಮ ಸಭೆ

ಜಗದ್ಗುರುಗಳು ನಂತರ ಕ್ರಿಸ್ತನ ವಕಾಲತ್ತಿನ ಎರಡನೇ ಆಯಾಮವನ್ನು ಉಲ್ಲೇಖಿಸಿದರು ಪ್ರತಿಯೊಬ್ಬ ಮಾನವನ ರಕ್ಷಣೆಗೆ ಸುವಾರ್ತೆಯ ಘೋಷಣೆ. ಯೇಸು ಮರೆಯಲ್ಪಟ್ಟ ಮತ್ತು ಅಂಚಿಗೆ ತಳ್ಳಲ್ಪಟ್ಟವರ ಪರವಾಗಿ ಮಾತಾಡುತ್ತಾರೆ ಎಂದು ಅವರು ಹೇಳಿದರು, ಮತ್ತು ಹಿಂಸೆಗೆ ಒಳಗಾದ ಎಲ್ಲರಿಗೂ ನ್ಯಾಯ ಮತ್ತು ವಿಮೋಚನೆಯನ್ನು ನೀಡುವ ಕರುಣೆಯ ದೇವರನ್ನು ಪ್ರಕಟಿಸುತ್ತಾರೆ ಎಂದರು.

ಈ ದೃಷ್ಟಿಕೋನದಲ್ಲಿ, ಧರ್ಮ ಸಭೆ ಸ್ವತಃ ವಕೀಲನಾಗಿರಲು ಕರೆಯಲ್ಪಟ್ಟಿದೆ, ಮಾನವ ವ್ಯಕ್ತಿಯ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿರಬೇಕು. ಸುವಾರ್ತೆಯು ಮಾನವ ಗುರುತು, ಸಂಬಂಧಗಳು ಮತ್ತು ಜೀವನದ ಅಂತಿಮ ಅರ್ಥವನ್ನು ಬೆಳಗಿಸಬೇಕು ಎಂದು ಅವರು ವಿವರಿಸಿದರು.

ಹೊಸ ಮಿಷನರಿ ಉತ್ಸಾಹವನ್ನು ಉತ್ತೇಜಿಸಿ, ಜಗದ್ಗುರು XIVನೇ ಲಿಯೋರವರು ಭಕ್ತರನ್ನು ಜೀವನ, ನಿರೀಕ್ಷೆ ಮತ್ತು ಪ್ರೀತಿಯ ಸುವಾರ್ತೆಯನ್ನು ಘೋಷಿಸಲು ಪ್ರೇರೇಪಿಸಿದರು, “ಗರ್ಭಧಾರಣೆಯಿಂದ ಸ್ವಾಭಾವಿಕ ಮರಣದವರೆಗೆ” ಮಾನವ ಗೌರವವನ್ನು ರಕ್ಷಿಸುವಂತೆ ಕರೆ ನೀಡಿದರು. ಅವರು ಲೌಕಿಕತೆಯ ಒತ್ತಡಗಳ ಬಗ್ಗೆ ಎಚ್ಚರಿಕೆ ನೀಡಿದರು, ಅದು ಮಾನವ ಜೀವನವನ್ನು ವೈಯಕ್ತಿಕತೆಯ ಮತ್ತು ಆರ್ಥಿಕ ಉತ್ಪಾದಕತೆಯ ಮಟ್ಟಕ್ಕೆ ಇಳಿಸುವ ಅಪಾಯವಿದೆ ಎಂದು ಹೇಳಿದರು.

ಜೀವಂತ ಮತ್ತು ಪ್ರವಾದಿ ನಂಬಿಕೆ

ಜಗದ್ಗುರುಗಳು ನಂಬಿಕೆ ರೂಢಿಯಲ್ಲೇ ಸೀಮಿತವಾಗದಂತೆ ಎಚ್ಚರಿಸಿದರು. “ಜೀವಂತ ನಂಬಿಕೆ ಯಾವಾಗಲೂ ಪ್ರವಾದಿಯಂತಿರುತ್ತದೆ,” ಎಂದು ಅವರು ಹೇಳಿದರು, ಅದು ನ್ಯಾಯ, ಐಕ್ಯತೆ ಮತ್ತು ಸಮಾಜದ ನೈತಿಕ ಅಡಿಪಾಯಗಳ ಕುರಿತು ಪ್ರಶ್ನೆಗಳನ್ನು ಎಬ್ಬಿಸುವ ಸಾಮರ್ಥ್ಯ ಹೊಂದಿದೆ ಎಂದರು.

ಇಂದಿನ ಆರ್ಥಿಕ ಮತ್ತು ಸಾಮಾಜಿಕ ಮಾದರಿಗಳು ನಿಜವಾಗಿಯೂ ಎಲ್ಲರ ಗೌರವವನ್ನು ಉತ್ತೇಜಿಸುತ್ತಿವೆಯೇ, ಅಥವಾ ಲಾಭವೇ ಅಂತಿಮ ಗುರಿ ಎಂಬ ತರ್ಕದಲ್ಲೇ ಸೀಮಿತವಾಗಿವೆ ಎಂಬುದನ್ನು ಅವರು ಪ್ರಶ್ನಿಸಿದರು.

ಕ್ರಿಸ್ತನತ್ತ ದೃಷ್ಟಿಯನ್ನು ನೆಟ್ಟರೆ, ಅದು ವೈಯಕ್ತಿಕ ಜೀವನವನ್ನೂ ಸಮಾಜವನ್ನೂ ಪರಿವರ್ತಿಸುವ ನಂಬಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರು ಲಿಯೋರವರು ಇಂತಹ ನಂಬಿಕೆಯನ್ನು ಹೊಸ ಭಾಷೆಯ ಮೂಲಕ ಮತ್ತು ಡಿಜಿಟಲ್ ಉಪಕರಣಗಳನ್ನು ಒಳಗೊಂಡ ಹೊಸ ಸಾಧನಗಳ ಮೂಲಕ ಹಂಚಿಕೊಳ್ಳಬೇಕು ಎಂದು ಹೇಳಿದರು, ವಿಶೇಷವಾಗಿ ತಮ್ಮ ನಂಬಿಕೆಯನ್ನು ಪುನಃ ಕಂಡುಕೊಳ್ಳುತ್ತಿರುವವರತ್ತ ಗಮನಹರಿಸಿ ಎಂದು ತಿಳಿಸಿದರು.

28 ಮಾರ್ಚ್ 2026, 14:16