ಕಾರ್ಡಿನಲ್ ಪಾರೋಲಿನ್: ಜಗದ್ಗುರುಗಳ ಮೋನಾಕೊ ಭೇಟಿಯು ನಂಬಿಕೆ ಮತ್ತು ಭೇಟಿಗೆ ಆಹ್ವಾನವಾಗಿದೆ.
ವ್ಯಾಟಿಕನ್ ವರದಿ
ಮೋನಾಕೊ ಸಂಸ್ಥಾನವು ಜಗದ್ಗುರು XIVನೇ ಲಿಯೋರವರನ್ನು, ಅಂದರೆ ಪೇತ್ರನ ಉತ್ತರಾಧಿಕಾರಿಯನ್ನು, ಆತುರದಿಂದ ನಿರೀಕ್ಷಿಸುತ್ತಿದೆ. ಇಟಲಿಯ ಹೊರಗಿನ ಯುರೋಪಿನಲ್ಲಿ ಜಗದ್ಗುರುಗಳ ಮೊದಲ ಭೇಟಿ ಇದಾಗಿದ್ದು, ಇದು ನಂಬಿಕೆಯಲ್ಲಿ ಸಮೀಪತೆ ಮತ್ತು ಪ್ರೋತ್ಸಾಹದ ಸ್ಪಷ್ಟ ಸಂಕೇತವಾಗಿದೆ. ಈ ಭೇಟಿ ಕೇವಲ ಸಣ್ಣ ಕಥೋಲಿಕ ರಾಷ್ಟ್ರಕ್ಕೆ ಮಾತ್ರವಲ್ಲ, ಸಂಪೂರ್ಣ ಮಾನವಕುಲಕ್ಕೂ ಮಹತ್ವದ್ದಾಗಿದೆ.
ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯಾತ್ರೋ ಪಾರೋಲಿನ್ ರವರು, ಈ ಪ್ರಯಾಣವು ಸ್ಥಳೀಯ ಧರ್ಮ ಸಭೆಯ ಧ್ಯೇಯಕ್ಕೆ ಹೊಸ ಉತ್ಸಾಹ ನೀಡಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸೃಷ್ಟಿಯ ಸಂರಕ್ಷಣೆ, ಜೀವದ ರಕ್ಷಣೆ ಮತ್ತು ಅಂತರರಾಷ್ಟ್ರೀಯ ಐಕ್ಯತೆ ಎಂಬ ತುರ್ತು ವಿಷಯಗಳಲ್ಲಿ ಒಗ್ಗಟ್ಟಿನ ಬದ್ಧತೆಯನ್ನು ಬಲಪಡಿಸುವುದಾಗಿ ಅವರು ಹೇಳಿದ್ದಾರೆ. ಜೊತೆಗೆ, ಸಮಾಜದ ಅತೀ ದುರ್ಬಲರನ್ನು ಮರೆಯಬಾರದು ಎಂದು ಅವರು ಒತ್ತಿಹೇಳುತ್ತಾರೆ.
ಈ ಭೇಟಿ ಇತಿಹಾಸದ ದೃಷ್ಟಿಯಿಂದಲೂ ವಿಶೇಷ ಮಹತ್ವ ಹೊಂದಿದೆ. ಕೊನೆಯ ಬಾರಿ ಜಗದ್ಗುರುಗಳು ಮೋನಾಕೊಗೆ ಭೇಟಿ ನೀಡಿದ್ದು 16ನೇ ಶತಮಾನದಲ್ಲಿ ಜಗದ್ಗುರು IIIನೇ ಪಾಲ್ ಕಾಲದಲ್ಲಿ ನಡೆದಿತ್ತು. ಇಂದಿನ ಯುರೋಪಿನ ಹಿನ್ನೆಲೆಯಲ್ಲಿಯೂ, ಕಥೋಲಿಕ ಧರ್ಮವನ್ನು ರಾಜ್ಯಧರ್ಮವಾಗಿ ಉಳಿಸಿಕೊಂಡಿರುವ ಮೋನಾಕೊ, ಜೀವದ ರಕ್ಷಣೆಯಂತಹ ನೈತಿಕ ವಿಷಯಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.
ಸಣ್ಣ ರಾಷ್ಟ್ರಗಳ ಪಾತ್ರವನ್ನು ಕುರಿತು ಕಾರ್ಡಿನಲ್ ಪಾರೋಲಿನ್ ರವರು, ಇವು ಬಹುಪಕ್ಷೀಯತೆಯ ಸ್ವಾಭಾವಿಕ ರಕ್ಷಕರು ಎಂದು ಹೇಳಿದ್ದಾರೆ. ಇಂದಿನ ಯುಗದಲ್ಲಿ ಶಕ್ತಿ ರಾಜಕಾರಣದ ಬದಲಿಗೆ, ನೈತಿಕ ವಿಶ್ವಾಸಾರ್ಹತೆ ಮತ್ತು ಸಂಧಾನದ ಸೇತುವೆಗಳಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವೇ ಮುಖ್ಯವಾಗಿದೆ. ಶಾಶ್ವತ ಶಾಂತಿ ನ್ಯಾಯ ಮತ್ತು ಮಾನವ ಗೌರವದ ಮೇಲೆ ಆಧಾರಿತವಾಗಿರಬೇಕು ಎಂದು ಅವರು ವಿವರಿಸುತ್ತಾರೆ.
ಯುರೋಪಿನ ದೇಶಗಳು ಇಂದಿನ ಸಂಘರ್ಷಗಳು ಮತ್ತು ವಲಸೆ ಸಮಸ್ಯೆಗಳ ನಡುವೆ, ಮಾನವೀಯತೆ ಮತ್ತು ಸಂಸ್ಕೃತಿಯ ದೀಪವಾಗಬೇಕು ಎಂದು ಅವರು ಕರೆ ನೀಡಿದ್ದಾರೆ. ಯುದ್ಧ ಮತ್ತು ಸಂಘರ್ಷಗಳನ್ನು ತಡೆಯಲು ಸಂವಾದದ ಮಾರ್ಗವನ್ನು ಅನುಸರಿಸಬೇಕು. ವಲಸೆ ಸಮಸ್ಯೆಗೆ ಗೋಡೆಗಳು ಅಥವಾ ಮುಚ್ಚುವಿಕೆಯಿಂದ ಪರಿಹಾರವಿಲ್ಲ ಬದಲಾಗಿ ಮೂಲ ಕಾರಣಗಳನ್ನು ಪರಿಹರಿಸಿ, ಮಾನವ ಗೌರವವನ್ನು ಕೇಂದ್ರದಲ್ಲಿಟ್ಟುಕೊಂಡ ನೀತಿಗಳನ್ನು ಅನುಸರಿಸಬೇಕು.
ಈ ಹಿನ್ನೆಲೆಯಲ್ಲಿ, ಮೆಡಿಟೆರೇನಿಯನ್ ಪ್ರದೇಶವು ಜನರು ಮತ್ತು ಧರ್ಮಗಳ ನಡುವೆ ಸೇತುವೆಯಾಗುವ ಸಾಮರ್ಥ್ಯವನ್ನು ಇನ್ನೂ ಹೊಂದಿದೆ. ಜಗದ್ಗುರುಗಳ ಈ ಭೇಟಿ, ನಂಬಿಕೆಯನ್ನು ಗಾಢಗೊಳಿಸಲು, ಸತ್ಯವನ್ನು ಹುಡುಕಲು ಮತ್ತು ಸಮಾಜದಲ್ಲಿ ಐಕ್ಯತೆ ಹಾಗೂ ಶಾಂತಿಯನ್ನು ನಿರ್ಮಿಸಲು ಪ್ರೇರಣೆ ನೀಡುತ್ತದೆ. ಪ್ರೇಷಿತರ ಪ್ರಯಾಣವು ಧರ್ಮ ಸಭೆ ಮತ್ತು ಸಮಾಜದ ನಡುವೆ ಸಹಕಾರವನ್ನು ಬಲಪಡಿಸಿ, ಶಾಶ್ವತ ಶಾಂತಿಯತ್ತ ಸಾಗುವ ಮಾರ್ಗವನ್ನು ತೋರಿಸುತ್ತದೆ.
