ಹುಡುಕಿ

ಕ್ಯಾಂಟರ್ಬರಿಯ ಆರ್ಚ್‌ಬಿಷಪ್ ಸಿಂಹಾಸರೋಹಣ ಕ್ಯಾಂಟರ್ಬರಿಯ ಆರ್ಚ್‌ಬಿಷಪ್ ಸಿಂಹಾಸರೋಹಣ  (ANSA)

ಜಗದ್ಗುರು ಲಿಯೋರವರು ಹೊಸ ಕ್ಯಾನ್ಟರ್ಬರಿ ಮಹಾಧರ್ಮಾಧ್ಯಕ್ಷರನ್ನು ಏಪ್ರಿಲ್‌ನಲ್ಲಿ ಭೇಟಿ ಮಾಡುವರು

ಅತ್ಯಂತ ಗೌರವಾನ್ವಿತ ಡೇಮ್ ಸಾರಾ ಮುಲ್ಲಾಲಿ ರವರು ಏಪ್ರಿಲ್ 25ರಿಂದ 28ರವರೆಗೆ ರೋಮಿಗೆ ಭೇಟಿ ನೀಡುವ ಸಂದರ್ಭದಲ್ಲಿ ಜಗದ್ಗುರುಗಳನ್ನು ಭೇಟಿ ಮಾಡುವರು. ಅವರು ಕ್ಯಾನ್ಟರ್ಬರಿ ಮಹಾಧರ್ಮಾಧ್ಯಕ್ಷೆಯಾಗಿ ಹಾಗೂ ಆಂಗ್ಲಿಕನ್ ಸಮುದಾಯದ ಪ್ರಧಾನಿಯಾಗಿ 106ನೇ ಸ್ಥಾನಕ್ಕೆ ಅಧಿಕೃತವಾಗಿ ನೇಮಕಗೊಂಡು ಎರಡು ದಿನಗಳ ನಂತರ ಈ ಘೋಷಣೆ ಹೊರಬಂದಿದೆ.

ವ್ಯಾಟಿಕನ್ ವರದಿ

ಕ್ಯಾನ್ಟರ್ಬರಿಯ ಹೊಸ ಮಹಾಧರ್ಮಾಧ್ಯಕ್ಷೆಯಾದ ಸಾರಾ ಮುಲ್ಲಾಲಿ ರವರು ಏಪ್ರಿಲ್ 25ರಿಂದ 28ರವರೆಗೆ ರೋಮಿಗೆ ಭೇಟಿ ನೀಡುವ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರನ್ನು ಭೇಟಿ ಮಾಡುವರು. ಈ ಭೇಟಿ ಕುರಿತ ಅಧಿಕೃತ ಘೋಷಣೆ, ಅವರು ಕ್ಯಾನ್ಟರ್ಬರಿ ದೇವಾಲಯದಲ್ಲಿ ಅಧಿಕೃತವಾಗಿ ಹುದ್ದೆಗೆ ನೇಮಕಗೊಂಡು ಎರಡು ದಿನಗಳ ನಂತರ ಹೊರಬಂದಿದೆ.

ಗುರುವಾರ, ರಕ್ತಸಾಕ್ಷಿಗಳ ಮಾತೆಯ ದೇವಾಲಯದಲ್ಲಿ ಮಹಾಧರ್ಮಾಧ್ಯಕ್ಷೆ ಕಾರ್ಡಿನಲ್ ಕುರ್ಟ್ ಕೊಚ್ ರವರೊಂದಿಗೆ ಹಾಗೂ ಕ್ರೈಸ್ತ ಏಕತೆಯನ್ನು ಉತ್ತೇಜಿಸುವ ದೀಕ್ಷಾಸ್ಥಾನದ ಪ್ರತಿನಿಧಿಗಳು ಸೇರಿದಂತೆ ಉನ್ನತ ಮಟ್ಟದ ಕಥೋಲಿಕ ಪ್ರತಿನಿಧಿ ಮಂಡಳಿಯೊಂದಿಗೆ ಸಭೆ ಹಾಗೂ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮವು 1966ರ ಮಾರ್ಚ್ 24ರಂದು ಹೊರಬಂದ ಸಾಮಾನ್ಯ ಘೋಷಣೆಯ 60ನೇ ವಾರ್ಷಿಕೋತ್ಸವವನ್ನು ಸ್ಮರಿಸಿತು. ಆ ಘೋಷಣೆಯು ಆಂಗ್ಲಿಕನ್ ಧರ್ಮ ಸಭೆ ಮತ್ತು ರೋಮಿನ ಕಥೋಲಿಕ ಧರ್ಮ ಸಭೆ ನಡುವೆ ನಡೆದ ಮೊದಲ ಅಧಿಕೃತ ಏಕಮತದ ಘೋಷಣೆಯಾಗಿದ್ದು, ಜಗದ್ಗುರು VIನೇ ಪೌಲ್ ಮತ್ತು ಮಹಾಧರ್ಮಾಧ್ಯಕ್ಷ ಮೈಕೆಲ್ ರಾಮ್ಸೇ ರವರು ಸಹಿ ಹಾಕಿದ್ದರು. ಈ ಸಂದರ್ಭದಲ್ಲಿ ಕಾರ್ಡಿನಲ್ ಕೊಚ್ ರವರು, ಇಂಗ್ಲೆಂಡ್ ಧರ್ಮ ಸಭೆ ಮತ್ತು ಜಗತ್ತಿನ ಆಂಗ್ಲಿಕನ್ ಸಮುದಾಯದಲ್ಲಿ ತಮ್ಮ ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸುತ್ತಿರುವ ಮಹಾಧರ್ಮಾಧ್ಯಕ್ಷೆ ಮುಲ್ಲಾಲಿರವರಿಗೆ ಜಗದ್ಗುರು ಲಿಯೋರವರ ಶುಭಾಶಯ ಮತ್ತು ಆಶೀರ್ವಾದದ ಪತ್ರವನ್ನು ಹಸ್ತಾಂತರಿಸಿದರು.

ಲ್ಯಾಂಬೆತ್ ಅರಮನೆಯ ಪ್ರಕಟಣೆಯ ಪ್ರಕಾರ, ಮಹಾಧರ್ಮಾಧ್ಯಕ್ಷೆ ಜಗದ್ಗುರುಗಳ ಪ್ರಾರ್ಥನೆಗಳಿಗೆ ಕೃತಜ್ಞತೆ ವ್ಯಕ್ತಪಡಿಸಿ, ತಾನೂ ಅವರಿಗಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. “ಕ್ಯಾನ್ಟರ್ಬರಿ ಮಹಾಧರ್ಮಾಧ್ಯಕ್ಷೆಯಾಗಿ ನನ್ನ ನೇಮಕದ ಸಂದರ್ಭದಲ್ಲಿ ಜಗದ್ಗುರುಗಳ  ಸೌಮ್ಯ ಪತ್ರ ಮತ್ತು ಅವರ ಪ್ರಾರ್ಥನೆಗಳ ಭರವಸೆಗೆ ನಾನು ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ,ಎಂದು ಅವರು ಬರೆದಿದ್ದಾರೆ. ಅವರ ಪ್ರೋತ್ಸಾಹದ ಮಾತುಗಳು ಮತ್ತು ಪವಿತ್ರಾತ್ಮನ ಮಾರ್ಗದರ್ಶನದ ಕೋರಿಕೆ ನನಗೆ ಬಹಳ ಗೌರವದಿಂದ ಸ್ವೀಕಾರವಾಗಿದೆ ಎಂದು ಹೇಳಿದರು.

ಮುಂದುವರಿಸಿ, “ಕ್ಯಾನ್ಟರ್ಬರಿ ಮಹಾಧರ್ಮಾಧ್ಯಕ್ಷೆಯಾಗಿ, ನಾನು ಆಂಗ್ಲಿಕನ್ ಸಮುದಾಯದಲ್ಲಿ ಏಕತೆಯ ಸಾಧನವಾಗಿಯೂ ಸೇವೆ ಸಲ್ಲಿಸಲು ಹಾಗೂ ಪ್ರಭು ನಮ್ಮೆಲ್ಲರನ್ನು ಕರೆಯುವ ಸಂಪೂರ್ಣ ಮತ್ತು ದೃಶ್ಯಮಾನ ಏಕತೆಯನ್ನು ಸಾಧಿಸಲು ಪ್ರಯತ್ನಿಸಲು ಕರೆಯಲ್ಪಟ್ಟಿದ್ದೇನೆ,ಎಂದು ಜಗದ್ಗುರು XIVನೇ ಲಿಯೋರವರಿಗೆ ಸಂದೇಶದಲ್ಲಿ ತಿಳಿಸಿದ್ದಾರೆ.

ಕೊನೆಯಲ್ಲಿ, ಶೀಘ್ರದಲ್ಲೇ ಜಗದ್ಗುರುಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಮತ್ತು ಸ್ನೇಹದ ಬಾಂಧವ್ಯಗಳನ್ನು ಬಲಪಡಿಸಲು ಹಾಗೂ ನಮ್ಮ ಸಂಯುಕ್ತ ಬದ್ಧತೆಯನ್ನು ಮುಂದುವರಿಸಲು ಕಾಯುತ್ತಿದ್ದೇನೆ,ಎಂದು ಅವರು ಹೇಳಿದರು.

27 ಮಾರ್ಚ್ 2026, 10:22