ಹುಡುಕಿ

ಜಗದ್ಗುರು ಲಿಯೋರವರು ಇಟಲಿಯ ರಾಷ್ಟ್ರೀಯ ಅಂಗಾಂಗ ಕಸಿ ಕೇಂದ್ರದ ಸದಸ್ಯರನ್ನು ಭೇಟಿಯಾದರು ಜಗದ್ಗುರು ಲಿಯೋರವರು ಇಟಲಿಯ ರಾಷ್ಟ್ರೀಯ ಅಂಗಾಂಗ ಕಸಿ ಕೇಂದ್ರದ ಸದಸ್ಯರನ್ನು ಭೇಟಿಯಾದರು 

ಜಗದ್ಗುರುಗಳು ಅಂಗಾಂಗ ಕಸಿ ಕೇಂದ್ರಕ್ಕೆ: “ರೋಗಿಯ ಹಿತವೇ ನಿಮ್ಮ ಮಾರ್ಗದರ್ಶಕ ತತ್ವವಾಗಿರಲಿ” ಎಂದು ಹೇಳಿದರು.

ಜಗದ್ಗುರು XIV ನೇ ಲಿಯೋ ರವರು ಇಟಲಿಯ ರಾಷ್ಟ್ರೀಯ ಅಂಗಾಂಗ ಕಸಿ ಕೇಂದ್ರವನ್ನು ಉದ್ದೇಶಿಸಿ ಮಾತನಾಡಿ, “ರೋಗಿಯ ಹಿತವೇ ನಿಮ್ಮ ಮಾರ್ಗದರ್ಶಕ ತತ್ವವಾಗಿರಲಿ” ಎಂದು ಅವರಿಗೆ ಪ್ರೇರೇಪಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋ ರವರು ವ್ಯಾಟಿಕನ್‌ನಲ್ಲಿ ಇಟಲಿಯ ರಾಷ್ಟ್ರೀಯ ಅಂಗಾಂಗ ಕಸಿ ಕೇಂದ್ರದ ಸಭೆಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡುತ್ತಾ, “ರೋಗಿಯ ಹಿತವೇ ನಿಮ್ಮ ಮಾರ್ಗದರ್ಶಕ ತತ್ವವಾಗಿರಲಿ” ಎಂದು ಸೂಚಿಸಿದರು. ರಾಷ್ಟ್ರೀಯ ಕಸಿ ಜಾಲದ ಮಹಾಸಭೆಯ ಸಂದರ್ಭದಲ್ಲಿ ಅವರನ್ನು ಸ್ವಾಗತಿಸುವುದು ಸಂತೋಷಕರವಾಗಿದೆ ಎಂದು ಹೇಳಿದ ಜಗದ್ಗುರುಗಳು, ಮಾನವ ಜೀವನದ ಅತಿ ನಾಜೂಕಾದ ಕ್ಷಣಗಳಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಸಿಬ್ಬಂದಿ, ಪರಿಣಿತರು ಮತ್ತು ಸ್ವಯಂಸೇವಕರ ಸಮರ್ಪಣೆಯನ್ನು ಪ್ರಶಂಸಿಸಿದರು.

ಇಟಲಿಯಲ್ಲಿ ಮೊದಲ ಅಂಗಾಂಗ ದಾನದ 70ನೇ ವರ್ಷದ ಸ್ಮರಣೆಯನ್ನು ಅವರು ಉಲ್ಲೇಖಿಸಿದರು. ಧನ್ಯ ಡಾನ್ ಕಾರ್ಲೋ ಗ್ನೋಕ್ಕಿ ರವರು ತಮ್ಮ ಮರಣಾನಂತರ ಕಣ್ಣಿನ ಕಾರ್ನಿಯಾಗಳನ್ನು ದಾನ ಮಾಡಿದ ಘಟನೆ ಸಮಾಜದಲ್ಲಿ ಚಿಂತನೆಗೆ ದಾರಿ ಮಾಡಿಕೊಟ್ಟಿತು ಮತ್ತು ಕಾನೂನು ವ್ಯವಸ್ಥೆಯ ಅಭಿವೃದ್ಧಿಗೆ ಪ್ರೇರಣೆಯಾಯಿತು ಎಂದು ಜಗದ್ಗುರುಗಳು ಹೇಳಿದರು. ನಂತರ ಜಗದ್ಗುರು XIIನೇ ಪಿಯಸ್ ರವರು ಮಾನವ ದೇಹದ ಗೌರವವನ್ನು ಕಾಪಾಡುವ ಶರತ್ತುಗಳಲ್ಲಿ ಚಿಕಿತ್ಸೆಗಾಗಿ ಅಂಗಾಂಗ ತೆಗೆದುಕೊಳ್ಳುವ ನೈತಿಕ ಮಾನ್ಯತೆಯನ್ನು ಒಪ್ಪಿಕೊಂಡರು ಎಂದು ಅವರು ಸ್ಮರಿಸಿದರು.

ಧರ್ಮ ಸಭೆ ಆರಂಭದಿಂದಲೇ ಪ್ರತಿರೋಪಣ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಬೆಂಬಲ ನೀಡುತ್ತಾ ಅದರ ನೈತಿಕ ಮಾನದಂಡಗಳನ್ನು ಸೂಚಿಸಿದೆ ಎಂದು ಜಗದ್ಗುರುಗಳು ಹೇಳಿದರು. ವೈಜ್ಞಾನಿಕ ಸಂಶೋಧನೆ ಮತ್ತು ಮಾನವ ಸೇವೆಯ ಫಲವಾಗಿ ಇಟಲಿಯ ಕಸಿ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಪೋಪ್ ಸಂತ IIನೇ ಜಾನ್ ಪಾಲ್ ರವರು ಇವಾಂಜೆಲಿಯಮ್ ವಿಟೇದಲ್ಲಿ ಅಂಗಾಂಗ ದಾನವನ್ನು ಜೀವ ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯವೆಂದು ಪ್ರಶಂಸಿಸಿದ್ದಾರೆ ಎಂದು ಅವರು ನೆನಪಿಸಿದರು.

ಕಥೋಲಿಕ ಧರ್ಮ ಸಭೆಯ ಕ್ಯಾಟೆಕಿಸಂ ಪ್ರಕಾರ, ಮರಣಾನಂತರದ ಅಂಗಾಂಗ ದಾನವು ಮಹತ್ತರ ಮತ್ತು ಶ್ಲಾಘನೀಯ ಕೃತ್ಯವಾಗಿದ್ದು, ದಾನಿಯ ಒಪ್ಪಿಗೆ ಮತ್ತು ಮಾನವ ಗೌರವವನ್ನು ಕಾಪಾಡುವುದು ಅಗತ್ಯ ಎಂದು ಜಗದ್ಗುರುಗಳು ಹೇಳಿದರು. ಮಾನವ ದೇಹದ ವ್ಯಾಪಾರೀಕರಣವನ್ನು ತಪ್ಪಿಸಲು ಮತ್ತು ನ್ಯಾಯಸಮ್ಮತ, ಪಾರದರ್ಶಕ ಮಾನದಂಡಗಳನ್ನು ಅನುಸರಿಸಲು ನಿರಂತರ ಎಚ್ಚರಿಕೆ ಅಗತ್ಯವಿದೆ ಎಂದು ಅವರು ಎಚ್ಚರಿಸಿದರು.

ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಉಲ್ಲೇಖಿಸಿದ ಜಗದ್ಗುರು ಲಿಯೋರವರು, ದಾನವು ಕೇವಲ ಸಾಮಾಜಿಕ ಉಪಯೋಗಕ್ಕಷ್ಟೇ ಸೀಮಿತವಲ್ಲ, ಅದು ವಿಶ್ವಸೌಹಾರ್ದತೆಯ ಅಭಿವ್ಯಕ್ತಿ ಎಂದು ಹೇಳಿದರು. ಇಂದಿನ ಕಾಲದಲ್ಲಿ ಎಲ್ಲವನ್ನೂ ಬೆಲೆ ಮತ್ತು ಲಾಭದ ದೃಷ್ಟಿಯಿಂದ ಅಳೆಯುವ ಪ್ರವೃತ್ತಿ ಇರುವುದರಿಂದ, ದಾನವು ಉಚಿತ ಮತ್ತು ನಿಸ್ವಾರ್ಥ ಕೃತ್ಯವಾಗಿರಬೇಕು ಎಂದು ಅವರು ಒತ್ತಿ ಹೇಳಿದರು.

ಕೊನೆಗೆ, ಅಂಗಾಂಗಗಳ ಕಸಿ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಜಗದ್ಗುರುಗಳು ಹೇಳಿದರು. ಅಂಗಾಂಗಗಳ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ, ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಅವರು ಸೂಚಿಸಿದರು. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಪರಿಶ್ರಮವನ್ನು ಶ್ಲಾಘಿಸಿ, ಅವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ, ಸದಾ “ರೋಗಿಯ ಹಿತವೇ ತಮ್ಮ ಮಾರ್ಗದರ್ಶಕ ತತ್ವವಾಗಿರಲಿ” ಎಂದು ಜಗದ್ಗುರುಗಳು ಪ್ರೇರೇಪಿಸಿದರು.

26 ಮಾರ್ಚ್ 2026, 16:55