ಕಾರ್ಡಿನಲ್ ಜೀನ್-ಬ್ಯಾಪ್ಟಿಸ್ಟ್ ಫಾಮ್ ಮಿನ್ ಮಾನ್ ರವರು ಕಾರ್ಡಿನಲ್ ಜೀನ್-ಬ್ಯಾಪ್ಟಿಸ್ಟ್ ಫಾಮ್ ಮಿನ್ ಮಾನ್ ರವರು 

ಜಗದ್ಗುರುಗಳು ನಿಧನರಾದ ಕಾರ್ಡಿನಲ್ ಜೀನ್-ಬ್ಯಾಪ್ಟಿಸ್ಟ್ ಫಾಮ್ ಮಿನ್ ಮಾನ್ ರವರ ಆಳವಾದ ಸಾಕ್ಷ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಜಗದ್ಗುರು XIVನೇ ಲಿಯೋರವರು ವಿಯೆಟ್ನಾಂನ ಥಾನ್-ಫೋ ಹೋ ಚಿ ಮಿನ್ ನಗರದ ನಿವೃತ್ತ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜೀನ್-ಬ್ಯಾಪ್ಟಿಸ್ಟ್ ಫಾಮ್ ಮಿನ್ ಮಾನ್ ರವರನ್ನು ಸ್ಮರಿಸಿದರು. ಅವರು ಭಾನುವಾರ 92ನೇ ವಯಸ್ಸಿನಲ್ಲಿ ನಿಧನರಾದರು.ವಿಯೆಟ್ನಾಂನ ಧರ್ಮ ಸಭೆಗೆ ಸಲ್ಲಿಸಿದ ಅವರ ಸೇವೆಯನ್ನು ಧರ್ಮಾಧ್ಯಕ್ಷೀಯ ಆರೈಕೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಆಳವಾದ ಬದ್ಧತೆ, ಸಂವಾದ ಮತ್ತು ಧರ್ಮ ಸಭೆಯ ಏಕತೆಯ ದೃಢ ಪ್ರೋತ್ಸಾಹ, ಮತ್ತು ಸುವಾರ್ತೆಯ ಸರಳತೆ ಹಾಗೂ ವಿನಯದಲ್ಲಿ ನಡೆಸಿದ ಜೀವನದ ಸಾಕ್ಷ್ಯ ಎಂದು ಜಗದ್ಗುರುಗಳು ಶ್ಲಾಘಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋ ರವರು ಮಾರ್ಚ್ 22 ರಂದು 92ನೇ ವಯಸ್ಸಿನಲ್ಲಿ ನಿಧನರಾದ ವಿಯೆಟ್ನಾಂನ ಥಾನ್-ಫೋ ಹೋ ಚಿ ಮಿನ್ ನಗರದ ನಿವೃತ್ತ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜೀನ್-ಬ್ಯಾಪ್ಟಿಸ್ಟ್ ಫಾಮ್ ಮಿನ್ ಮಾನ್ ರವರ ನಿಧನದ ಬಗ್ಗೆ ಆಳವಾದ ಸಂತಾಪ ವ್ಯಕ್ತಪಡಿಸಿದರು. ಅವರು ಗುರುವಾರ ಹೋ ಚಿ ಮಿನ್ ನಗರದ ಪ್ರಸ್ತುತ ಮಹಾಧರ್ಮಾಧ್ಯಕ್ಷರಾದ ಜೋಸೆಫ್ ನ್ಗುಯೆನ್ ನಾಂಗ್ ರವರಿಗೆ ಕಳುಹಿಸಿದ ಸಂತಾಪ ಸಂದೇಶದಲ್ಲಿ ಇದನ್ನು ತಿಳಿಸಿದ್ದಾರೆ.

ತಮ್ಮ ಸಂದೇಶದಲ್ಲಿ, ಜಗದ್ಗುರುಗಳು ನಿಧನರಾದ ಕಾರ್ಡಿನಲ್ ಕುರಿತು ದುಃಖ ವ್ಯಕ್ತಪಡಿಸಿ, ಸ್ಥಳೀಯ ಧರ್ಮ ಸಭೆಯ ಎಲ್ಲಾ ಸದಸ್ಯರಿಗೆ ತಮ್ಮ ಹೃದಯಪೂರ್ವಕ ಸಂತಾಪವನ್ನು ಅರ್ಪಿಸಿದರು. ಅವರ ಆತ್ಮವನ್ನು ದೇವರ ಅನಂತ ಕರುಣೆಗೆ ಒಪ್ಪಿಸುವಲ್ಲಿ ತಾವು ಸಹ ಸೇರಿಕೊಂಡಿದ್ದಾಗಿ ತಿಳಿಸಿದರು. ಮಿ ಥೋ ಮತ್ತು ಹೋ ಚಿ ಮಿನ್ ನಗರದ ಸ್ಥಳೀಯ ಧರ್ಮ ಸಭೆಗಳಿಗೆ ಅವರು ನೀಡಿದ ದೀರ್ಘಕಾಲದ ಸಮರ್ಪಿತ ಯಾಜಕ ಹಾಗೂ ಮಹಾಧರ್ಮಾಧ್ಯಕ್ಷ ಸೇವೆಯನ್ನು ಜಗದ್ಗುರುಗಳು ಕೃತಜ್ಞತೆಯಿಂದ ಸ್ಮರಿಸಿದರು. ಹಾಗೆಯೇ, ವಿಯೆಟ್ನಾಂ ಧರ್ಮ ಸಭೆ ಹಾಗೂ ಪ್ರೇಷಿತರ ಅಧಿಕಾರ ಸ್ಥಳವು ನೀಡಿದ ಕೊಡುಗೆಗಳನ್ನೂ ಪ್ರಶಂಸಿಸಿದರು.

ಜಗದ್ಗುರುಗಳು ಅವರ ಸೇವೆಯನ್ನು ಧರ್ಮಾಧ್ಯಕ್ಷೀಯ ಆರೈಕೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಆಳವಾದ ಬದ್ಧತೆ, ಸಂವಾದ ಮತ್ತು ಧರ್ಮ ಸಭೆಯ ಏಕತೆಯ ದೃಢ ಪ್ರೋತ್ಸಾಹ, ಹಾಗೂ ಸುವಾರ್ತೆಯ ಸರಳತೆ ಮತ್ತು ವಿನಯದಲ್ಲಿ ನಡೆಸಿದ ಜೀವನದ ಸಾಕ್ಷ್ಯ ಎಂದು ವಿವರಿಸಿದರು.

ಕೊನೆಯಲ್ಲಿ, ಅವರ ನಿಧನದಿಂದ ದುಃಖಿತರಾದ ಎಲ್ಲರ ಮೇಲೂ ಪ್ರಭುವಿನಲ್ಲಿ ಸಮಾಧಾನ ಮತ್ತು ಶಾಂತಿಯ ಸಂಕೇತವಾಗಿ ತಮ್ಮ ಪ್ರೇಷಿತರ ಆಶೀರ್ವಾದವನ್ನು ಜಗದ್ಗುರುಗಳು ನೀಡಿದರು.

ವಿಯೆಟ್ನಾಂ ಧರ್ಮ ಸಭೆಯ ಒಂದು ದೃಢ ಸ್ತಂಭ

ಕಾರ್ಡಿನಲ್ ಜೀನ್-ಬ್ಯಾಪ್ಟಿಸ್ಟ್ ಫಾಮ್ ಮಿನ್ ಮಾನ್ ರವರು 1934 ಮಾರ್ಚ್ 5 ರಂದು ವಿಯೆಟ್ನಾಂನ ಕಾ ಮೌನಲ್ಲಿ, ಕ್ಯಾನ್ ಥೋ ಧರ್ಮಪ್ರಾಂತ್ಯದಲ್ಲಿ ಜನಿಸಿದರು. ಅವರು 1965 ಮೇ 25 ರಂದು ಯಾಜಕರಾಗಿ ಅಭಿಷಿಕ್ತರಾದರು. ಅಭಿಷೇಕದ ನಂತರ, ಕೈ ರಾಂಗ್‌ನ “ಬಿಯಾಟೋ ಕ್ವಿ” ಕಿರಿಯ ಧರ್ಮಶಿಕ್ಷಣಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

1975ರಲ್ಲಿ ದಕ್ಷಿಣ ವಿಯೆಟ್ನಾಂನಲ್ಲಿ ರಾಜಕೀಯ ವ್ಯವಸ್ಥೆಯ ದೊಡ್ಡ ಬದಲಾವಣೆಯ ಕಾರಣ ಧರ್ಮ ಸಭೆ ಹಿಂಸೆಗೆ ಒಳಗಾಯಿತು ಮತ್ತು ಧರ್ಮಶಿಕ್ಷಣಾಲಯಗಳು ಮುಚ್ಚಲ್ಪಟ್ಟವು ಅಥವಾ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲ್ಪಟ್ಟವು. ಆ ಸಮಯದಲ್ಲಿ ಅವರು ಯಾಜಕರ ತರಬೇತಿಗೆ ಹೊಣೆಗಾರರಾಗಿದ್ದರು. 1988ರಲ್ಲಿ ವಿಯೆಟ್ನಾಂನಲ್ಲಿ ಆರು ಪ್ರಮುಖ ಧರ್ಮಶಿಕ್ಷಣಾಲಯಗಳು ಮತ್ತೆ ತೆರೆಯಲ್ಪಟ್ಟಾಗ, ಕೈ ರಾಂಗ್‌ನ “ಸಾಂತೋ ಕ್ವಿ” ಧರ್ಮಶಿಕ್ಷಣಾಲಯದ ರೆಕ್ಟರ್ ಆಗಿ ನೇಮಕಗೊಂಡರು ಮತ್ತು ಪ್ರಾಧ್ಯಾಪಕರ ಕೊರತೆ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸಿದರು.

1993 ಮಾರ್ಚ್ 22 ರಂದು ಮಿ ಥೋ ಧರ್ಮಪ್ರಾಂತ್ಯದ ಸಹಾಯಕ ಬಿಷಪ್ ಆಗಿ (ಅನುಕ್ರಮ ಹಕ್ಕು ಹೊಂದಿದ) ನೇಮಕಗೊಂಡು, ಆಗಸ್ಟ್ 11 ರಂದು ಬಿಷಪ್ ಆಗಿ ಅಭಿಷೇಕಗೊಂಡರು. 1998 ಮಾರ್ಚ್‌ನಲ್ಲಿ ಥಾನ್-ಫೋ ಹೋ ಚಿ ಮಿನ್ ನಗರದ ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡು 2014ರವರೆಗೆ ಆ ಸೇವೆಯನ್ನು ನಿರ್ವಹಿಸಿದರು. 2003 ಅಕ್ಟೋಬರ್ 21 ರಂದು ಜಗದ್ಗುರು ಸಂತ IIನೇ  ಜಾನ್ ಪಾಲ್ ರವರು ಅವರನ್ನು ಕಾರ್ಡಿನಲ್ ಆಗಿ ನೇಮಿಸಿದರು.

26 ಮಾರ್ಚ್ 2026, 16:45