ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  (AFP or licensors)

ಜಗದ್ಗುರುಗಳ ವೃತ್ತಿದಿನದ ಸಂದೇಶ: “ದೇವರ ವರದ ಆಂತರಿಕ ಅನ್ವೇಷಣೆ”

ಜಗದ್ಗುರು ಲಿಯೋರವರು ಈ ವರ್ಷ ಏಪ್ರಿಲ್ 26, ಭಾನುವಾರ ಆಚರಿಸಲ್ಪಡುವ ವೃತ್ತಿಗಳಿಗಾಗಿ ವಿಶ್ವ ಪ್ರಾರ್ಥನಾ ದಿನದ ನಿಮಿತ್ತ ತಮ್ಮ ಸಂದೇಶವನ್ನು ಪ್ರಕಟಿಸಿ, “ಪ್ರತಿ ವೃತ್ತಿಯೂ ಧರ್ಮ ಸಭೆಗೆ ಹಾಗೂ ಅದನ್ನು ಸಂತೋಷದಿಂದ ಸ್ವೀಕರಿಸುವವರಿಗೆ ಅಳತೆಯಾಗದ ದೇವರ ವರವಾಗಿದೆ” ಎಂದು ಪುನರುಚ್ಚರಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರು ವೃತ್ತಿಗಳಿಗಾಗಿ ವಿಶ್ವ ಪ್ರಾರ್ಥನಾ ದಿನದ ಸಂದೇಶದಲ್ಲಿ, ವೃತ್ತಿ ಎಂಬುದು ದೇವರಿಂದ ದೊರೆಯುವ ಅಮೂಲ್ಯವಾದ ವರವಾಗಿದ್ದು, ಅದು ನಮ್ಮ ಹೃದಯದ ಆಳದಲ್ಲಿ ಅರಳುವ ಆಂತರಿಕ ಅನುಭವವಾಗಿದೆ ಎಂದು ಹೇಳಿದ್ದಾರೆ. ಈ ದಿನವನ್ನು ಅವರು ಕೃಪೆಯ ಸಮಯವೆಂದು ಕರೆಯುತ್ತಾ, ದೇವರ ಕರೆಯನ್ನು ಅರಿತು ಜೀವನದ ಸುಂದರ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದರು.

ಯೇಸು ತನ್ನನ್ನು “ಉತ್ತಮ ಕುರಿಗಾಹಿ” ಎಂದು ಪರಿಚಯಿಸಿಕೊಂಡು ತನ್ನ ಕುರಿಗಳಿಗಾಗಿ ಜೀವವನ್ನೇ ಅರ್ಪಿಸುವ ಮೂಲಕ ದೇವರ ಪ್ರೀತಿಯನ್ನು ತೋರಿಸುತ್ತಾನೆ ಎಂದು ಜಗದ್ಗುರುಗಳು ಹೇಳಿದರು. ಈ ಪ್ರೀತಿಯನ್ನು ಅರಿಯಲು ಮೌನ, ಪ್ರಾರ್ಥನೆ ಮತ್ತು ಆತ್ಮಪರಿಶೀಲನೆ ಅಗತ್ಯವಿದೆ. ಯಾರು ದೇವರ ಕಡೆಗೆ ಗಮನಹರಿಸುತ್ತಾರೋ ಅವರು ಮಾತ್ರ ಜೀವನದ ನಿಜವಾದ ಸೌಂದರ್ಯವನ್ನು ಕಂಡುಕೊಳ್ಳುತ್ತಾರೆ.

ವೃತ್ತಿ ಜೀವನವು ಬಾಧ್ಯತೆಯಲ್ಲ, ಆದರೆ ಪ್ರೀತಿ ಮತ್ತು ಸಂತೋಷದ ಸಾಹಸವಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಕುಟುಂಬಗಳು, ಧರ್ಮ ಕೇಂದ್ರಗಳು ಮತ್ತು ಧಾರ್ಮಿಕ ಸಮುದಾಯಗಳು ಈ ವೃತ್ತಿಯ ಬೆಳವಣಿಗೆಗೆ ಸಹಾಯ ಮಾಡಬೇಕು ಎಂದು ಅವರು ಕರೆ ನೀಡಿದರು. ಜೀವಂತ ನಂಬಿಕೆ ಮತ್ತು ಪ್ರಾರ್ಥನೆಯ ಮೂಲಕ ದೇವರ ಕರೆಯು ಅರಳಿ ಫಲ ನೀಡುತ್ತದೆ.

ಯುವಕರಿಗೆ ವಿಶೇಷವಾಗಿ ಜಗದ್ಗುರುಗಳು ಕರೆ ನೀಡುತ್ತಾ, ದೇವರ ಧ್ವನಿಯನ್ನು ಕೇಳಲು, ತಮ್ಮ ಪ್ರತಿಭೆಗಳನ್ನು ಬಳಸಲು ಮತ್ತು ತಮ್ಮ ದುರ್ಬಲತೆಗಳನ್ನು ಕ್ರಿಸ್ತನೊಂದಿಗೆ ಏಕೀಕರಿಸಲು ಹೇಳಿದರು. ಪ್ರಾರ್ಥನೆ, ದೇವರ ವಾಕ್ಯದ ಧ್ಯಾನ ಮತ್ತು ಸಕ್ರಿಯ ಧರ್ಮ ಸಭೆಯ ಜೀವನದ ಮೂಲಕ ಅವರು ತಮ್ಮ ವೃತ್ತಿಯನ್ನು ಅರಿತುಕೊಳ್ಳಬಹುದು ಎಂದು ಹೇಳಿದರು.

ಸಂತ ಜೋಸೆಫ್ ರವರ ಉದಾಹರಣೆಯನ್ನು ನೀಡುತ್ತಾ, ದೇವರ ಯೋಜನೆಗಳ ಮೇಲೆ ಸಂಪೂರ್ಣ ವಿಶ್ವಾಸವಿರಬೇಕು ಎಂದು ಜಗದ್ಗುರುಗಳು ತಿಳಿಸಿದರು. ಅನಿಶ್ಚಿತತೆಗಳ ನಡುವೆಯೂ ದೇವರ ಮೇಲೆ ಭರವಸೆ ಇಟ್ಟುಕೊಂಡಾಗ, ಜೀವನದ ಸವಾಲುಗಳಲ್ಲಿಯೂ ವೃತ್ತಿ ಬೆಳೆಯುತ್ತದೆ ಎಂದು ಹೇಳಿದರು.

ಕೊನೆಗೆ, ವೃತ್ತಿ ಒಂದು ನಿರಂತರ ಬೆಳವಣಿಗೆಯ ಪ್ರಕ್ರಿಯೆಯಾಗಿದ್ದು, ದೇವರೊಂದಿಗೆ ದಿನನಿತ್ಯದ ಸಂಬಂಧದಿಂದ ಪೋಷಿತವಾಗಬೇಕು ಎಂದು ಜಗದ್ಗುರುಗಳು ಹೇಳಿದರು. ಪ್ರಾರ್ಥನೆ ಮತ್ತು ಧ್ಯಾನದ ಮೂಲಕ ದೇವರೊಂದಿಗೆ ಸಂಬಂಧವನ್ನು ಗಾಢಗೊಳಿಸಿ, ನಮ್ಮ ವೃತ್ತಿಯನ್ನು ಬೆಳೆಸಿಕೊಂಡರೆ ಅದು ಧರ್ಮ ಸಭೆ ಮತ್ತು ಸಮಾಜಕ್ಕೆ ಸಮೃದ್ಧ ಫಲ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

25 ಮಾರ್ಚ್ 2026, 09:38