ಜಗದ್ಗುರು XIVನೇ ಲಿಯೋರವರು: ವಿಮಾನಗಳು ಶಾಂತಿಯನ್ನು ತರಬೇಕು, ಯುದ್ಧ ಮತ್ತು ವಿನಾಶವನ್ನು ಅಲ್ಲ.
ವ್ಯಾಟಿಕನ್ ವರದಿ
ತಮ್ಮ ನಾಲ್ಕು ಆಫ್ರಿಕಾ ರಾಷ್ಟ್ರಗಳಿಗೆ ನಡೆಯಲಿರುವ ಪ್ರೇಷಿತರ ಪ್ರವಾಸಕ್ಕೆ ಇನ್ನು ಇಪ್ಪತ್ತು ದಿನಗಳು ಬಾಕಿ ಇರುವಾಗ, ಜಗದ್ಗುರು XIVನೇ ಲಿಯೋರವರು ಇಟಲಿಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಐಟಿಎ ಏರ್ವೇಸ್ ಗೆ ಹಾಗೂ ಲುಫ್ತಾನ್ಸಾ ಗ್ರೂಪ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪ್ರತಿನಿಧಿ ಮಂಡಳಿಯನ್ನು ಭೇಟಿಯಾದರು.
ಜಗದ್ಗರುಗಳು ಐಟಿಎ ಏರ್ವೇಸ್ ಗೆ ಹಾಗೂ ಅದರ ಪೂರ್ವ ಸಂಸ್ಥೆಯಾದ ಅಲಿಟಾಲಿಯಾ ಸಂಸ್ಥೆಗಳಿಗೆ—ಜಗದ್ಗುರುಗಳ ಪವಿತ್ರ VI ನೇ ಪೌಲ ಕಾಲದಿಂದಲೇ—ಜಗದ್ಗುರುಗಳಿಗೆ ನೀಡಿದ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ತಮ್ಮ ಪ್ರೇಷಿತರ ಪ್ರವಾಸಗಳಿಗೆ ಜೊತೆಯಾಗುವ ಜಗದ್ಗುರುಗಳು, ಅವರ ಸಹಚರರು ಮತ್ತು ವರದಿ ಮಾಡಲು ಪ್ರಯಾಣಿಸುವ ಪತ್ರಕರ್ತರಿಗೆ ಶಾಂತ ಮತ್ತು ಸಮಾಧಾನಕರ ವಾತಾವರಣವನ್ನು ಸೃಷ್ಟಿಸುವಲ್ಲಿ ಅರ್ಹ ಮತ್ತು ಅನುಭವಸಂಪನ್ನ ವೃತ್ತಿಪರರನ್ನು ಅವರು ಪ್ರಶಂಸಿಸಿದರು.
ಐಟಿಎ ಏರ್ವೇಸ್ ಸಂಸ್ಥೆ ಜಗದ್ಗುರುಗಳ ಭೇಟಿಗಳನ್ನು ಕುಟುಂಬದಂತಿರುವ ವಾತಾವರಣದಿಂದ ತುಂಬುವಂತೆ ಮಾಡುತ್ತದೆ ಅಲ್ಲಿ ಗೌರವ ಮತ್ತು ಭಕ್ತಿ ಒಂದಾಗಿ ಸೇರುತ್ತವೆ ಎಂದು ಅವರು ಹೇಳಿದರು.
ನಿಮ್ಮನ್ನು ಭೇಟಿ ಮಾಡುವುದು ನನಗೆ ವೈಯಕ್ತಿಕವಾಗಿ ಹಾಗೂ ಪವಿತ್ರ ಸಭೆಯ ಪರವಾಗಿ ಈ ಅಮೂಲ್ಯ ಸೇವೆಗೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತದೆ,ಎಂದು ಅವರು ಹೇಳಿದರು.
ಜಗದ್ಗುರು ಲಿಯೋರವರು ಜಗದ್ಗುರುಗಳ ವಿಮಾನಯಾನಗಳು ಇಂದಿನ ಸಮಾಜದಲ್ಲಿ ಪೇತ್ರನ ಉತ್ತರಾಧಿಕಾರಿಯ ಧರ್ಮಸೇವೆಯ ಒಂದು ಸ್ಪಷ್ಟ ಚಿಹ್ನೆಯಾಗಿವೆ ಎಂದು ಹೇಳಿದರು, ಏಕೆಂದರೆ ಅವರು ಯಾವಾಗಲೂ ಶಾಂತಿಯ ಸಂದೇಶವಾಹಕರಾಗಿ ದೇಶಗಳಿಗೆ ಪ್ರಯಾಣಿಸುತ್ತಾರೆ.
ಅವರ ಪ್ರಯಾಣ ಮಾರ್ಗಗಳು ಸದಾ ಹಾಗೆಯೇ ಇರಬೇಕು ಅವು ಸಂವಾದ, ಭೇಟಿಗಳು ಮತ್ತು ಸಹೋದರತ್ವದ ಸೇತುವೆಗಳಾಗಿರಬೇಕು, ಎಂದು ಅವರು ಹೇಳಿದರು.
ಆದರೆ, ವಿಮಾನಗಳನ್ನು ಯುದ್ಧಭೂಮಿಗಳಲ್ಲಿ ವಿನಾಶ ಮತ್ತು ಭೀತಿಯನ್ನು ಉಂಟುಮಾಡಲು ಬಳಸಲಾಗುತ್ತಿರುವುದನ್ನು ಜಗದ್ಗುರುಗಳು ವಿಷಾದಿಸಿದರು.
ವಿಮಾನಗಳು ಯಾವಾಗಲೂ ಶಾಂತಿಯನ್ನು ಹೊತ್ತೊಯ್ಯುವ ಸಾಧನಗಳಾಗಿರಬೇಕು, ಯುದ್ಧದ ಸಾಧನಗಳಾಗಿರಬಾರದು ಎಂದು ಅವರು ಹೇಳಿದರು. ಆಕಾಶದಿಂದ ಮರಣ ಮತ್ತು ವಿನಾಶದ ಬೆದರಿಕೆ ಬರುತ್ತದೆ ಎಂಬ ಭಯ ಯಾರಿಗೂ ಇರಬಾರದು.
ಜಗದ್ಗರುಗಳು ವಿಶ್ವಯುದ್ಧಗಳ ಕಾಲದಲ್ಲಿ ನಡೆದ ವಾಯು ಬಾಂಬ್ ದಾಳಿಗಳನ್ನು ಹಾಗೂ ಇತರ ಸಂಘರ್ಷಗಳನ್ನು ಸ್ಮರಿಸಿದರು, ಅವು ಇಂದಿಗೂ ಮುಂದುವರಿಯುತ್ತಿವೆ ಎಂದು ಹೇಳಿದರು.
ಇಪ್ಪತ್ತನೇ ಶತಮಾನದ ದುಃಖಕರ ಅನುಭವಗಳ ನಂತರ, ವಾಯು ಬಾಂಬ್ ದಾಳಿಗಳನ್ನು ಶಾಶ್ವತವಾಗಿ ನಿಷೇಧಿಸಬೇಕಾಗಿತ್ತು ಎಂದು ಅವರು ಹೇಳಿದರು. ಆದರೆ ಅವು ಇನ್ನೂ ಮುಂದುವರಿಯುತ್ತಿವೆ, ಮತ್ತು ಸ್ವತಃ ಉತ್ತಮವಾದ ತಂತ್ರಜ್ಞಾನ ಅಭಿವೃದ್ಧಿಯನ್ನು ಯುದ್ಧದ ಸೇವೆಗೆ ಬಳಸಲಾಗುತ್ತಿದೆ. ಇದು ಪ್ರಗತಿ ಅಲ್ಲ ಇದು ಹಿನ್ನಡೆ ಎಂದರು.
ಕೊನೆಗೆ, ಜಗದ್ಗುರು XIVನೇ ಲಿಯೋರವರು ಸುವಾರ್ತೆಯ ಶಾಂತಿಯನ್ನು ಹರಡುವ ತಮ್ಮ ಧ್ಯೇಯದಲ್ಲಿ ಸಹಾಯ ಮಾಡಿದ ಐಟಿಎ ಏರ್ವೇಸ್ ಸಿಬ್ಬಂದಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದರು.
ನಮ್ಮ ಇಂದಿನ ಪರಿಸ್ಥಿತಿಯಲ್ಲಿ,ಎಂದು ಅವರು ಹೇಳಿದರು, “ಆಕಾಶದಲ್ಲಿಯೇ ಶಾಂತಿಯ ಮಾರ್ಗಗಳನ್ನು ರೂಪಿಸುವುದು ಇನ್ನಷ್ಟು ಮಹತ್ವದ್ದಾಗಿದೆ. ಪ್ರಭು ನನಗೆ ಒಪ್ಪಿಸಿದ ಈ ಧ್ಯೇಯದಲ್ಲಿ, ನಾನು ನಿಮ್ಮ ಮೇಲೆ ಅವಲಂಬಿಸಬಹುದು ಎಂದು ತಿಳಿದಿರುವುದರಿಂದ ನಿಮಗೆ ಧನ್ಯವಾದಗಳು ಎಂದು ಹೇಳಿದರು
