ಜಗದ್ಗುರು ಲಿಯೋರವರು ಆರು ಮಂದಿಯ ಪವಿತ್ರತೆಯ ಘೋಷಣೆಯ ಪ್ರಕ್ರಿಯೆಯನ್ನು ಮುಂದುವರಿಸುತ್ತಾರೆ
ವ್ಯಾಟಿಕನ್ ವರದಿ
ಸೋಮವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಪವಿತ್ರರ ಘೋಷಣೆಯ ಕಾರ್ಯಗಳ ವಿಭಾಗದ ಪ್ರಿಫೆಕ್ಟ್ ಕಾರ್ಡಿನಲ್ ಮಾರ್ಚೆಲ್ಲೋ ಸೆಮೆರಾರೊರವರನ್ನು ಭೇಟಿಯಾಗಿ, ಆ ವಿಭಾಗವು ಆರು ಮಂದಿಯನ್ನು ಪವಿತ್ರರ ಘೋಷಣೆಯ ದಿಕ್ಕಿನಲ್ಲಿ ಮುಂದುವರಿಸುವ ಹಲವು ಡಿಕ್ರಿಗಳನ್ನು ಪ್ರಕಟಿಸಲು ಅನುಮತಿ ನೀಡಿದರು.
ಜಗದ್ಗರುಗಳು ದೇವರ ಸೇವಕ ಲೂಡೋವಿಕೋ ಆಲ್ತಿಯೇರಿರವರ “ಜೀವನ ಅರ್ಪಣೆಯನ್ನು” ಗುರುತಿಸಿದರು. ಅವರು ಅಲ್ಬಾನೋನ ಬಿಷಪ್ ಆಗಿದ್ದು, ಪವಿತ್ರ ರೋಮನ್ ಧರ್ಮ ಸಭೆಯ ಕಾರ್ಡಿನಲ್ ಆಗಿದ್ದರು. 1805ರ ಜುಲೈ 17ರಂದು ಇಟಲಿಯ ರೋಮ್‌ನಲ್ಲಿ ಜನಿಸಿದ ಅವರು, 1867ರ ಆಗಸ್ಟ್ 11ರಂದು ಇಟಲಿಯ ಅಲ್ಬಾನೋ ಲಾಜಿಯಾಲೆ ಪಟ್ಟಣದಲ್ಲಿ ನಿಧನರಾದರು.
ಇದಲ್ಲದೆ, ಜಗದ್ಗುರುಗಳು ನಾಲ್ವರು ಧಾರ್ಮಿಕ ವ್ಯಕ್ತಿಗಳ ಮತ್ತು ಕುಟುಂಬದ ತಂದೆಯಾಗಿದ್ದ ಒಬ್ಬ ಇಟಾಲಿಯನ್ ಪ್ರಜೆಯ “ವೀರಧರ್ಮ ಗುಣಗಳನ್ನು” ಸಹ ಗುರುತಿಸಿದರು:
ದೇವರ ಸೇವಕ ಎಡ್ವರ್ಡ್ ಜೋಸೆಫ್ ಫ್ಲಾನಗನ್, ಧರ್ಮಪ್ರಾಂತ್ಯದ ಯಾಜಕ, “ಬಾಯ್ಸ್ ಟೌನ್” ಸಂಸ್ಥಾಪಕ. 1886ರ ಜುಲೈ 13ರಂದು ಐರ್ಲ್ಯಾಂಡ್‌ನ ಬ್ಯಾಲಿಮೋದಲ್ಲಿ ಜನಿಸಿ, 1948ರ ಮೇ 15ರಂದು ಜರ್ಮನಿಯ ಬರ್ಲಿನ್‌ನಲ್ಲಿ ನಿಧನರಾದರು;
ದೇವರ ಸೇವಕ ಹೆನ್ರಿ ಕಫರೇಲ್, ಧರ್ಮಪ್ರಾಂತ್ಯದ ಯಾಜಕ, “ಟೀಮ್ಸ್ ಆಫ್ ಅವರ್ ಲೇಡಿ” ಸಂಘಟನೆಯ ಸ್ಥಾಪಕ ಹಾಗೂ “ಅವರ್ ಲೇಡಿ ಆಫ್ ದ ರೆಸರೆಕ್ಷನ್” ಎಂಬ ಲೌಕಿಕ ಸಂಸ್ಥೆಯ ಸ್ಥಾಪಕ. 1903ರ ಜುಲೈ 30ರಂದು ಫ್ರಾನ್ಸ್‌ನ ಲಿಯೋನ್‌ನಲ್ಲಿ ಜನಿಸಿ, 1996ರ ಸೆಪ್ಟೆಂಬರ್ 18ರಂದು ಬೊವೇನಲ್ಲಿ ನಿಧನರಾದರು.
ದೇವರ ಸೇವಕಿ ಸ್ಟಾನಿಸ್ವಾವಾ ಸಾಮುಲೋವ್ಸ್ಕಾ (ಜನನ ಹೆಸರು ಬಾರ್ಬರಾ), ಸೇಂಟ್ ವಿನ್ಸೆಂಟ್ ಡಿ ಪಾಲ್ ಅವರ ದಾನ ಪುತ್ರಿಯರ ಸಂಘದ ಧಾರ್ಮಿಕ ಸದಸ್ಯೆ. 1865ರ ಜನವರಿ 30ರಂದು ಇಂದಿನ ಪೋಲ್ಯಾಂಡ್‌ನ ವೋರಿಟಿಯಲ್ಲಿ ಜನಿಸಿ, 1950ರ ಡಿಸೆಂಬರ್ 6ರಂದು ಗ್ವಾಟೆಮಾಲಾ ನಗರದಲ್ಲಿ ನಿಧನರಾದರು.
ದೇವರ ಸೇವಕಿ ಮೇರಿಯಾ ಆಫ್ ಬೆಥ್ಲೆಹೆಮ್ ಆಫ್ ದ ಹಾರ್ಟ್ ಆಫ್ ಜೀಸಸ್ ರೊಮೆರೊ ಅಲ್ಗರಿನ್ (ಜನನ ಹೆಸರು ಮೇರಿಯಾ ಡೊಲೊರೆಸ್), “ಹ್ಯಾಂಡ್‌ಮೇಡ್ಸ್ ಆಫ್ ದ ಡಿವೈನ್ ಹಾರ್ಟ್” ಸಂಘದ ಧಾರ್ಮಿಕ ಸದಸ್ಯೆ. 1916ರ ಅಕ್ಟೋಬರ್ 7ರಂದು ಸ್ಪೇನ್‌ನ ಸೆವಿಲ್ಲೆಯಲ್ಲಿ ಜನಿಸಿ, 1977ರ ನವೆಂಬರ್ 12ರಂದು ಸಾನ್‌ಲುಕಾರ್ ಲಾ ಮಯೋರ್‌ನಲ್ಲಿ ನಿಧನರಾದರು.
ದೇವರ ಸೇವಕ ಜ್ಯೂಸೆಪ್ಪೆ ಕಸ್ತಾನ್ಯೆಟ್ಟಿ, ಪ್ರಜೆಯಾಗಿ ಮತ್ತು ಕುಟುಂಬದ ತಂದೆಯಾಗಿದ್ದು, 1909ರ ಮಾರ್ಚ್ 15ರಂದು ಇಟಲಿಯ ಮೊಂಡೆಬರಾಂಜೋನೆನಲ್ಲಿ ಜನಿಸಿ, 1965ರ ಜೂನ್ 22ರಂದು ಅಲ್ಲಿ ನಿಧನರಾದರು.
ವೀರಧರ್ಮ ಗುಣಗಳ ಕುರಿತ ಈ ಡಿಕ್ರಿಗಳೊಂದಿಗೆ, ಸಂಬಂಧಿಸಿದ ಅಭ್ಯರ್ಥಿಗಳು “ವಂದನೀಯ ದೇವರ ಸೇವಕ” ಅಥವಾ ಸರಳವಾಗಿ “ವಂದನೀಯ” ಎಂಬ ಪಟ್ಟವನ್ನು ಪಡೆಯುತ್ತಾರೆ.
