“ಜಗದ್ಗುರುಗಳು ಫೋಕೊಲಾರೆ ಸದಸ್ಯರಿಗೆ: ಹಿಂಸಾಚಾರ ಮತ್ತು ದ್ವೇಷಕ್ಕೆ ಪ್ರತಿಬಲವಾಗಿರಿ”
ವ್ಯಾಟಿಕನ್ ವರದಿ
ಈ ಕಾಲದಲ್ಲಿ ಸಂಘರ್ಷಗಳು ಮತ್ತು ವಿಭಜನೆಗಳು ಹೆಚ್ಚುತ್ತಿರುವ ಹಿನ್ನೆಲೆ, ಜಗದ್ಗುರು XIVನೇ ಲಿಯೋರವರು ಫೋಕೊಲಾರೆ ಚಳವಳಿಗೆ ಏಕತೆಗಾಗಿ ಸಾಕ್ಷಿಗಳಾಗುವಂತೆ ಕರೆ ನೀಡಿದರು. ತಮ್ಮ ಸಂಘಟನೆಯೊಳಗೂ ಹಾಗೂ ಜಗತ್ತಿನಾದ್ಯಂತವೂ ಶಾಂತಿ ಮತ್ತು ಏಕತೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಪ್ರೋತ್ಸಾಹಿಸಿದರು. ಅದೇ ಸಮಯದಲ್ಲಿ ಪ್ರತಿಯೊಬ್ಬರ ಸ್ವಾತಂತ್ರ್ಯ ಮತ್ತು ಅಂತಃಕರಣವನ್ನು ಗೌರವಿಸುವುದರ ಮಹತ್ವವನ್ನೂ ಅವರು ಒತ್ತಿಹೇಳಿದರು.
ಇಂದು ಸಮಾಜದಲ್ಲಿ ವಿಭಜನೆ ಮತ್ತು ಸಂಘರ್ಷದ ವಿಷ ಮಾನವರ ಹೃದಯಗಳನ್ನು ಮತ್ತು ಸಂಬಂಧಗಳನ್ನು ಹಾಳು ಮಾಡುತ್ತಿದೆ ಎಂದು ಜಗದ್ಗುರುಗಳು ತಿಳಿಸಿದರು. ಇದನ್ನು ಎದುರಿಸಲು ಏಕತೆ, ಸಂವಾದ, ಕ್ಷಮೆ ಮತ್ತು ಶಾಂತಿಯ ಸುವಾರ್ತೆಯ ಸಾಕ್ಷ್ಯ ಅತ್ಯಂತ ಅಗತ್ಯವಾಗಿದೆ ಎಂದರು. ಇಂತಹ ಆತ್ಮವು ಇಂದಿನ ಕಾಲಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಫೋಕೊಲಾರೆ ಚಳವಳಿ, “ಮರಿಯಮ್ಮನವರ ಕಾರ್ಯ” ಎಂದು ಕರೆಯಲ್ಪಡುವ ಈ ಸಂಘಟನೆ, ಆತ್ಮೀಯ ಮತ್ತು ಸಾಮಾಜಿಕ ಪುನರುತ್ಥಾನಕ್ಕಾಗಿ ಕಾರ್ಯನಿರ್ವಹಿಸುತ್ತದೆ. ಚಿಯಾರಾ ಲೂಬಿಕ್ ರವರು 1943ರಲ್ಲಿ ಇದನ್ನು ಸ್ಥಾಪಿಸಿದರು. ಇಂದಿಗೆ ಇದು 140ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿಕೊಂಡಿದ್ದು, ಜಗತ್ತಿನಾದ್ಯಂತ ಶಾಂತಿಯ ಜನರನ್ನು ರೂಪಿಸುತ್ತಿದೆ.
ಜಗದ್ಗರುಗಳು ತಮ್ಮ ಭಾಷಣದಲ್ಲಿ ಧರ್ಮ ಸಭೆಯ ಪ್ರತಿಯೊಂದು ವರದಾನವು ಸುವಾರ್ತೆಯ ಒಂದು ಅಂಶವನ್ನು ತೋರಿಸುತ್ತದೆ ಎಂದು ಹೇಳಿದರು. ಫೋಕೊಲಾರೆ ಚಳವಳಿಯ ವರದಾನವು “ಏಕತೆಯ ಸಂದೇಶ”ವಾಗಿದ್ದು, ಇದು ಕ್ರಿಸ್ತನ ದೇವರೊಂದಿಗಿನ ಏಕತೆಯ ಪ್ರತಿಫಲವಾಗಿದೆ. ಈ ಏಕತೆಯ ಆತ್ಮವು ಸರಳವಾದದ್ದಾದರೂ ಬಹಳ ಶಕ್ತಿಯುತವಾಗಿದ್ದು, ಅನೇಕ ಜನರನ್ನು ಆಕರ್ಷಿಸುತ್ತದೆ ಮತ್ತು ಸೇವೆಗೆ ಪ್ರೇರೇಪಿಸುತ್ತದೆ.
ಈ ಏಕತೆಯ ಆತ್ಮವು ಸಂಘಟನೆಯ ರಚನೆಗಳಲ್ಲಿಯೂ ಹಾಗೂ ಜೀವನ ಶೈಲಿಯಲ್ಲಿಯೂ ತೋರುವಂತಾಗಬೇಕು ಎಂದು ಜಗದ್ಗುರುಗಳು ಹೇಳಿದರು. ನಾಯಕರು ಸಂಘಟನೆಯ ಮೂಲ ವರದಾನವನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದ್ದು, ಯಾವ ಅಂಶಗಳು ಮುಖ್ಯವೆಂಬುದನ್ನು ಗುರುತಿಸಿ ಉಳಿಸಬೇಕು ಹಾಗೂ ಅನಾವಶ್ಯಕವಾದ ಅಥವಾ ಸಮಸ್ಯೆ ಉಂಟುಮಾಡುವ ಪದ್ಧತಿಗಳನ್ನು ಬಿಟ್ಟುಬಿಡಬೇಕು ಎಂದರು.
ಇದಕ್ಕಾಗಿ ಪಾರದರ್ಶಕತೆ ಅತ್ಯಗತ್ಯ ಎಂದು ಜಗದ್ಗುರುಗಳು ಒತ್ತಿಹೇಳಿದರು. ಪಾರದರ್ಶಕತೆ ವಿಶ್ವಾಸಾರ್ಹತೆಗೆ ಆಧಾರವಾಗಿದ್ದು, ಪ್ರತಿಯೊಬ್ಬ ಸದಸ್ಯನೂ ಈ ವರದಾನದ ಹೊಣೆಗಾರನಾಗಿದ್ದಾನೆ. ಎಲ್ಲಾ ಸದಸ್ಯರ ಪಾಲ್ಗೊಳ್ಳುವಿಕೆ ಸಂಘಟನೆಯ ಬೆಳವಣಿಗೆಗೆ ಸಹಾಯಕವಾಗುತ್ತದೆ ಮತ್ತು ಪ್ರತಿಯೊಬ್ಬರ ಪ್ರತಿಭೆಯನ್ನು ಹೊರತೆಗೆಯುತ್ತದೆ ಎಂದರು.
ಜಗದ್ಗರುಗಳು ಮುಂದುವರೆದು, ಏಕತೆ ಎಂದರೆ ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವುದು ಅಥವಾ ಬದುಕುವುದು ಅಲ್ಲ ಎಂದು ಸ್ಪಷ್ಟಪಡಿಸಿದರು. ಬದಲಾಗಿ, ಪ್ರತಿಯೊಬ್ಬರ ವೈಶಿಷ್ಟ್ಯತೆ ಮತ್ತು ಕೊಡುಗೆಯನ್ನು ಗೌರವಿಸುವ ಮೂಲಕವೇ ನಿಜವಾದ ಏಕತೆ ಸಾಧ್ಯ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಅಂತಃಕರಣವನ್ನು ಗೌರವಿಸುವುದು ಅತ್ಯಂತ ಮುಖ್ಯ ಎಂದು ಅವರು ಹೇಳಿದರು.
ಕೊನೆಯಲ್ಲಿ, ಚಿಯಾರಾ ಲೂಬಿಕ್ ರವರ ವರದಾನದಿಂದ ಹುಟ್ಟಿದ ಈ ಮಹಾನ್ ಆತ್ಮೀಯ ಕುಟುಂಬಕ್ಕಾಗಿ ದೇವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಚಳವಳಿಯ ಮೂಲಕ ಧರ್ಮ ಸಭೆಗೆ ಮತ್ತು ಜಗತ್ತಿಗೆ ಅನೇಕ ಪವಿತ್ರ ಫಲಗಳು ದೊರಕಿರುವುದನ್ನು ಅವರು ಸ್ಮರಿಸಿದರು ಮತ್ತು ಎಲ್ಲರ ಸೇವೆಯನ್ನು ಕೊಂಡಾಡಿದರು.
