ಜಗದ್ಗರುಗಳು ಸಾಮಾನ್ಯ ಸಭೆಯಲ್ಲಿ: “ಪ್ರತಿ ದೀಕ್ಷಾಸ್ನಾನ ಪಡೆದವನು ಕ್ರಿಸ್ತನಿಗೆ ನಿರಂತರ ಸಾಕ್ಷಿಯಾಗಿರಬೇಕು
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ಬುಧವಾರದ ತಮ್ಮ ವಾರದ ಸಾಮಾನ್ಯ ಪ್ರೇಕ್ಷಕರ ಸಭೆಯಲ್ಲಿ ಮಾತನಾಡುತ್ತಾ, “ಪ್ರತಿ ದೀಕ್ಷಾಸ್ನಾನ ಪಡೆದ ವ್ಯಕ್ತಿಯೂ ಸುವಾರ್ತಾ ಪ್ರಸಾರದ ಕ್ರಿಯಾಶೀಲ ಭಾಗಿಯಾಗಿದ್ದು, ಕ್ರಿಸ್ತನಿಗೆ ನಿರಂತರ ಸಾಕ್ಷಿಯಾಗಲು ಕರೆಯಲ್ಪಟ್ಟಿದ್ದಾರೆ” ಎಂದು ಒತ್ತಿ ಹೇಳಿದರು. ಅವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ ಲುಮೆನ್ ಜೆಂಟಿಯಂ ದಸ್ತಾವೇಜಿನ ಚಿಂತನೆಗಳನ್ನು ಮುಂದುವರಿಸಿ, ಧರ್ಮ ಸಭೆಯನ್ನು ದೇವರ ಜನರಾಗಿ ಪರಿಗಣಿಸುವ ಮಹತ್ವವನ್ನು ವಿವರಿಸಿದರು.
ಕ್ರಿಸ್ತನಿಂದ ದೇವರ ಜನರಿಗೆ ಯಾಜಕ, ಪ್ರವಾದಿ ಮತ್ತು ರಾಜಕೀಯ ಕಾರ್ಯಗಳಲ್ಲಿ ಪಾಲ್ಗೊಳ್ಳುವ ವರ ದೊರೆಯುತ್ತದೆ. ದೀಕ್ಷಾಸ್ನಾನದ ಮೂಲಕ ವಿಶ್ವಾಸಿಗಳು ರಾಜ ಯಾಜಕತ್ವವನ್ನು ಪಡೆಯುತ್ತಾರೆ ಮತ್ತು ಆತ್ಮದಲ್ಲಿಯೂ ಸತ್ಯದಲ್ಲಿಯೂ ದೇವರನ್ನು ಆರಾಧಿಸಲು, ತಮ್ಮ ನಂಬಿಕೆಯನ್ನು ಇತರರ ಮುಂದೆ ಧೈರ್ಯವಾಗಿ ಒಪ್ಪಿಕೊಳ್ಳಲು ಕರೆಯಲ್ಪಟ್ಟಿದ್ದಾರೆ ಎಂದು ಹೇಳಿದರು.
ದೃಢೀಕರಣದ ಸಂಸ್ಕಾರ (ಕನ್ಫರ್ಮೇಶನ್) ಮೂಲಕ, ವಿಶ್ವಾಸಿಗಳು ಧರ್ಮ ಸಭೆಗೆ ಇನ್ನಷ್ಟು ದೃಢವಾಗಿ ಬದ್ಧರಾಗುತ್ತಾರೆ ಮತ್ತು ಪವಿತ್ರಾತ್ಮನು ಅವರಿಗೆ ವಿಶೇಷ ಶಕ್ತಿಯನ್ನು ನೀಡುತ್ತಾರೆ. ಇದರಿಂದ ಅವರು ಮಾತಿನಲ್ಲಿಯೂ ಕಾರ್ಯದಲ್ಲಿಯೂ ಕ್ರಿಸ್ತನ ಸತ್ಯ ಸಾಕ್ಷಿಗಳಾಗಿ ನಂಬಿಕೆಯನ್ನು ಹರಡುವ ಮತ್ತು ರಕ್ಷಿಸುವ ಕರ್ತವ್ಯವನ್ನು ಹೊಂದುತ್ತಾರೆ. ಈ ಪವಿತ್ರೀಕರಣವೇ ಯಾಜಕರೂ ಹಾಗೂ ಸಾಮಾನ್ಯ ವಿಶ್ವಾಸಿಗಳೂ ಒಂದೇ ಗುರಿಯಲ್ಲಿ ಒಂದಾಗುವ ಮೂಲವಾಗಿದೆ.
ಜಗದ್ಗರುಗಳು ಬಲಿ ಪೂಜೆ ಅರ್ಪಣೆಯಲ್ಲಿ ಭಾಗವಹಿಸುವುದು ಸೇರಿದಂತೆ ಪ್ರಾರ್ಥನೆ, ತಪಸ್ಸು ಮತ್ತು ಸಕ್ರಿಯ ಪ್ರೀತಿಯ ಮೂಲಕ ವಿಶ್ವಾಸಿಗಳು ಪವಿತ್ರ ಜೀವನವನ್ನು ನಡೆಸುತ್ತಾರೆ ಎಂದು ಹೇಳಿದರು. ಈ ಮೂಲಕ ದೇವರ ಕೃಪೆಯಿಂದ ನವೀಕರಿಸಲ್ಪಟ್ಟ ಜೀವನಕ್ಕೆ ಸಾಕ್ಷಿಯಾಗುತ್ತಾರೆ. ಸಂಸ್ಕಾರಗಳು ಮತ್ತು ಸತ್ಪ್ರವೃತ್ತಿಗಳ ಅಭ್ಯಾಸದ ಮೂಲಕ ಧರ್ಮ ಸಭೆಯ ಪವಿತ್ರ ಸ್ವರೂಪ ಸ್ಪಷ್ಟವಾಗುತ್ತದೆ.
ಅವರು “ನಂಬಿಕೆಯ ಭಾವನೆ” (ಸೇನ್ಸಸ್ ಫಿದೇಯಿ) ಮತ್ತು “ವಿಶ್ವಾಸಿಗಳ ಒಗ್ಗಟ್ಟು” (ಕನ್ಸೆನ್ಸಸ್ ಫಿದೇಲಿಯುಮ್) ಎಂಬ ವಿಷಯಗಳನ್ನು ಉಲ್ಲೇಖಿಸಿ, ಇದು ಸಂಪೂರ್ಣ ದೇವರ ಜನರಿಗೆ ಸೇರಿರುವ ಒಂದು ಆತ್ಮಿಕ ಸಾಮರ್ಥ್ಯ ಎಂದು ಹೇಳಿದರು. ಈ ಮೂಲಕ ಧರ್ಮ ಸಭೆ ನಿಜ ಮತ್ತು ತಪ್ಪನ್ನು ಗುರುತಿಸಿ, ನಂಬಿಕೆಯನ್ನು ಆಳವಾಗಿ ಅರಿತು ಜೀವನದಲ್ಲಿ ಅನುಷ್ಠಾನಗೊಳಿಸುತ್ತದೆ.
ಕೊನೆಯಲ್ಲಿ, ಜಗದ್ಗುರುಗಳು ದೇವರ ಜನರಾಗಿ ನಾವು ಹೊಂದಿರುವ ಹೊಣೆಗಾರಿಕೆಯನ್ನು ನೆನಪಿಸಿದರು. ಪವಿತ್ರಾತ್ಮನು ಪ್ರತಿಯೊಬ್ಬರಿಗೂ ವಿಭಿನ್ನ ಕೃಪಾವರಗಳನ್ನು ನೀಡುತ್ತಾನೆ, ಇದರಿಂದ ಧರ್ಮ ಸಭೆಯ ನಿರ್ಮಾಣ ಮತ್ತು ನವೀಕರಣಕ್ಕೆ ಸಹಕಾರವಾಗುತ್ತದೆ. ಆದ್ದರಿಂದ, ನಾವು ದೇವರ ಜನರ ಭಾಗವಾಗಿರುವುದಕ್ಕೆ ಕೃತಜ್ಞರಾಗಿದ್ದು, ಅದರ ಜವಾಬ್ದಾರಿಯನ್ನು ಅರಿತು ಕ್ರಿಸ್ತನಿಗೆ ನಿಷ್ಠೆಯ ಸಾಕ್ಷಿಯಾಗಬೇಕು ಎಂದು ಅವರು ಆಹ್ವಾನಿಸಿದರು.
