ಪ್ರೇಷಿತರ ಪ್ರಯಾಣದ ಸಮಯದಲ್ಲಿ ಜಗದ್ಗುರು XIVನೇ ಲಿಯೋರವರು ಪ್ರೇಷಿತರ ಪ್ರಯಾಣದ ಸಮಯದಲ್ಲಿ ಜಗದ್ಗುರು XIVನೇ ಲಿಯೋರವರು 

ವ್ಯಾಟಿಕನ್ ನಗರವು ಜಗದ್ಗುರು XIVನೇ ಲಿಯೋರವರ ಆಫ್ರಿಕಾದ ಪ್ರೇಷಿತರ ಪ್ರವಾಸಕ್ಕಾಗಿ ಮೋಟೊಗಳು ಮತ್ತು ಲೋಗೊಗಳನ್ನು ಪ್ರಕಟಿಸಿದೆ.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ಜಗದ್ಗುರುಗಳ ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಈಕ್ವಟೋರಿಯಲ್ ಗಿನಿಯಾ ರಾಷ್ಟ್ರಗಳಿಗೆ ನಡೆಯಲಿರುವ ಪ್ರೇಷಿತರ ಪ್ರವಾಸದ ಅಧಿಕೃತ ಕಾರ್ಯಕ್ರಮ ಪ್ರಕಟವಾದ ಅದೇ ದಿನ, ಆ ಪ್ರವಾಸದ ಪ್ರತಿಯೊಂದು ಹಂತಕ್ಕೆ ಸಂಬಂಧಿಸಿದ ಲೋಗೊಗಳು ಮತ್ತು ಮೋಟೊಗಳನ್ನು ಸಹ ಬಿಡುಗಡೆ ಮಾಡಿತು.

ವ್ಯಾಟಿಕನ್ ವರದಿ

ಪತ್ರಿಕಾ ಕಚೇರಿಯು ಸೋಮವಾರ ಜಗದ್ಗುರು XIVನೇ ಲಿಯೋರವರ 2026ರ ಏಪ್ರಿಲ್ 13ರಿಂದ 23ರವರೆಗೆ ನಡೆಯಲಿರುವ ಪ್ರೇಷಿತರ  ಪ್ರವಾಸಕ್ಕಾಗಿ ಅಲ್ಜೀರಿಯಾ, ಕ್ಯಾಮರೂನ್, ಅಂಗೋಲಾ ಮತ್ತು ಈಕ್ವಟೋರಿಯಲ್ ಗಿನಿಯಾ ದೇಶಗಳಿಗೆ ಸಂಬಂಧಿಸಿದ ಮೋಟೊಗಳು ಮತ್ತು ಲೋಗೊಗಳನ್ನು ಪ್ರಕಟಿಸಿದೆ.

ಅಲ್ಜೀರಿಯಾ

ಅಲ್ಜೀರಿಯಾದ ಲೋಗೋ ಪ್ರಾಚೀನ ಶಿಲ್ಪಕಲೆಯಿಂದ ಪ್ರೇರಿತವಾಗಿದ್ದು, ಒಂದೇ ಪಾತ್ರೆಯಿಂದ ನೀರು ಕುಡಿಯುತ್ತಿರುವ ಎರಡು ಪಾರಿವಾಳಗಳನ್ನು ಚಿತ್ರಿಸುತ್ತದೆ. ಇದು ಶಾಂತಿ ಮತ್ತು ಸಹಭಾಗಿತ್ವದ ಸಂಕೇತವಾಗಿದೆ. ಜೊತೆಗೆ ಕ್ರೈಸ್ತ ಚಿಹ್ನೆಯಾದ ಚಿ-ರೋ ಹಾಗೂ ಅಲ್ಜೀರಿಯಾದ ನಕ್ಷೆ ಸೇರಿಸಲಾಗಿದೆ. ಹಸಿರು, ಕೆಂಪು ಮತ್ತು ಬಿಳಿ ಬಣ್ಣಗಳು ಅಲ್ಜೀರಿಯಾದ ಧ್ವಜವನ್ನು ಸೂಚಿಸುತ್ತವೆ, ಹಳದಿ ಬಣ್ಣವು ವ್ಯಾಟಿಕನ್‌ನ್ನು ಸೂಚಿಸುತ್ತದೆ. ಲೋಗೋದ ಮಧ್ಯಭಾಗದಲ್ಲಿ ಅರಬಿಕ್, ಅಮಜಿಘ್ ಮತ್ತು ಫ್ರೆಂಚ್ ಭಾಷೆಗಳಲ್ಲಿ “ನಿಮಗೆ ಶಾಂತಿ ಇರಲಿ”ಎಂಬ ಮೋಟೊ ನೀಡಲಾಗಿದೆ. ಅರಬಿಕ್ ಭಾಷೆಯಲ್ಲಿ ಇದು “ಅಸ್ಸಲಾಮು ಅಲೈಕುಂ” ಎಂಬ ಶುಭಾಶಯದ ರೂಪದಲ್ಲಿ ವ್ಯಕ್ತವಾಗಿದೆ. ಇದು ಕ್ರೈಸ್ತರು ಮತ್ತು ಮುಸ್ಲಿಮರ ನಡುವಿನ ಸಂವಾದ ಮತ್ತು ಸಹಬಾಳ್ವೆಯನ್ನು ಪ್ರತಿನಿಧಿಸುತ್ತದೆ.

ಕ್ಯಾಮರೂನ್

ಕ್ಯಾಮರೂನ್‌ಗೆ ಸಂಬಂಧಿಸಿದ ಲೋಗೋದಲ್ಲಿ ತೆರೆದ ಬೈಬಲ್ ಕಾಣಿಸುತ್ತದೆ ಇದು ಕ್ರೈಸ್ತ ಜೀವನದ ಮೂಲಾಧಾರವನ್ನು ಸೂಚಿಸುತ್ತದೆ. ಅದರ ಮೇಲೆ ದೇಶದ ನಕ್ಷೆಯನ್ನು ಹಸಿರು, ಕೆಂಪು ಮತ್ತು ಹಳದಿ ಬಣ್ಣಗಳಲ್ಲಿ (ರಾಷ್ಟ್ರಧ್ವಜದ ಬಣ್ಣಗಳು) ಚಿತ್ರಿಸಲಾಗಿದೆ. ಎಡಭಾಗದಲ್ಲಿ ಶಿಲುಬೆಯ ಸುವಾರ್ತೆಯ ಘೋಷಣೆಯನ್ನು ಸೂಚಿಸುತ್ತದೆ ಮತ್ತು ಅದರ ಕೆಳಭಾಗದಲ್ಲಿ ಮಾತೆ ಮರಿಯಮ್ಮನವರ  ಚಿಹ್ನೆ ಇದೆ. ಮಧ್ಯದಲ್ಲಿ ಬಂಗಾರದ ಪಾರಿವಾಳವು ಪ್ರಕಾಶ ಕಿರಣಗಳನ್ನು ಹರಡುತ್ತಿರುವಂತೆ ಕಾಣುತ್ತದೆ ಇದು ಪವಿತ್ರಾತ್ಮನ ಕ್ರಿಯೆಯನ್ನು ಹಾಗೂ ಸುವಾರ್ತೆಯ ಪ್ರಸಾರವನ್ನು ಸೂಚಿಸುತ್ತದೆ. ಬಲಭಾಗದಲ್ಲಿ ಪ್ರಾರ್ಥನೆಯ ಸ್ಥಿತಿಯಲ್ಲಿ ಇರುವ ಜಗದ್ಗುರು XIVನೇ ಲಿಯೋರವರ ಚಿತ್ರಣ ಇದೆ. ಬೈಬಲ್ ಪುಟಗಳಲ್ಲಿ  ಕ್ಯೂ ಟಸ್ ಸೋಯಂಟ್ ಅನ್ / ಅವರೆಲ್ಲರೂ ಒಂದಾಗಲಿ" (ಯೋಹಾನ 17:21) ಎಂಬ ಮೋಟೊ ಇದೆ, ಇದು ಕ್ರಿಸ್ತನಲ್ಲಿ ಏಕತೆಯನ್ನು ಸೂಚಿಸುತ್ತದೆ.

ಅಂಗೋಲಾ

ಅಂಗೋಲಾದ ಲೋಗೋ ಮುಖ್ಯವಾಗಿ ಕೆಂಪು ಬಣ್ಣದಲ್ಲಿ ರೂಪುಗೊಂಡಿದ್ದು, ಈ ಭೂಮಿಯ ಇತಿಹಾಸದಲ್ಲಿ ಸುರಿದ ರಕ್ತವನ್ನು ನೆನಪಿಸುತ್ತದೆ. ನಕ್ಷೆಯ ಮೇಲೆ ಕಪ್ಪು ಅಲೆಗಳಂತಿರುವ ರೇಖೆ ದೇವರ ಆಶೀರ್ವಾದವನ್ನು ಮತ್ತು ಆಫ್ರಿಕಾದ ಗುರುತನ್ನು ಸೂಚಿಸುತ್ತದೆ. ಮಧ್ಯದಲ್ಲಿ ಹಳದಿ ಅರ್ಧವೃತ್ತದ ಆಕಾರವು ಗಿಯರ್ ಚಕ್ರದಂತೆ ಕಾಣುತ್ತದೆ ಇದು ಕೆಲಸ ಮತ್ತು ರಾಷ್ಟ್ರಧ್ವಜದ ಸಂಕೇತವಾಗಿದ್ದು, ಶಿಲುಬೆಯೊಂದಿಗೆ ಸೇರಿ ಸಂಸ್ಕಾರವನ್ನು ಸೂಚಿಸುತ್ತದೆ. ಹೂವಿನ ದಳಗಳಂತಿರುವ ಆಕಾರಗಳು ದೇಶದ ಪ್ರಮುಖ ಮರವಾದ “ಮುಲೆಂಬಾ” ಮರವನ್ನು ಸೂಚಿಸುತ್ತವೆ. ನೀಲಿ ರೇಖೆಗಳು ದೇಶದ ನದಿಗಳನ್ನು ಪ್ರತಿನಿಧಿಸುತ್ತವೆ. ಈ ಲೋಗೋ ಒಟ್ಟಾರೆ ದೇವರ ಆಶೀರ್ವಾದದಿಂದ ಮತ್ತು ಜಗದ್ಗುರುಗಳ ಮಾರ್ಗದರ್ಶನದಿಂದ ಶಾಂತಿ, ಗೌರವ ಮತ್ತು ಹೊಸ ಭರವಸೆಯ ಭವಿಷ್ಯದತ್ತ ಸಾಗುತ್ತಿರುವ ಅಂಗೋಲಾವನ್ನು ತೋರಿಸುತ್ತದೆ. ಅದರ ಮೋಟೊ: “ಜಗದ್ಗುರು XIVನೇ ಲಿಯೋರವರು – ಭರವಸೆ, ಸಮಾಧಾನ ಮತ್ತು ಶಾಂತಿಯ ಯಾತ್ರಿಕನು ಅಂಗೋಲಾವನ್ನು ಆಶೀರ್ವದಿಸುತ್ತಾನೆ.”

ಇಕ್ವೇಟೋರಿಯಲ್ ಗಿನಿ

ಇಕ್ವೇಟೋರಿಯಲ್ ಗಿನಿಯ ಲೋಗೋದಲ್ಲಿ ಬಂಗಾರದ ಶಿಲುಬೆ ಮುಖ್ಯವಾಗಿ ಕಾಣಿಸುತ್ತದೆ ಇದು ಪುನರುತ್ಥಾನಗೊಂಡ ಕ್ರಿಸ್ತನನ್ನೂ ಕ್ರೈಸ್ತ ನಂಬಿಕೆಯನ್ನು ಕೂಡ ಸೂಚಿಸುತ್ತದೆ. ಅದರ ಮಧ್ಯದಲ್ಲಿ ದೇಶದ ನಕ್ಷೆ ಮತ್ತು ಧ್ವಜವನ್ನು ಚಿತ್ರಿಸಲಾಗಿದೆ. ಮತ್ತೊಂದೆಡೆ ಒಬ್ಬ ಪುರುಷ, ಒಬ್ಬ ಮಹಿಳೆ ಮತ್ತು ಒಂದು ಮಗುವಿನ ಆಕಾರದ ಮೂಲಕ ಕುಟುಂಬವನ್ನು ತೋರಿಸಲಾಗಿದೆ. ಕೆಳಭಾಗದಲ್ಲಿ ದೋಣಿಯಲ್ಲಿ ಪುಸ್ತಕ ಹಿಡಿದಿರುವ ವ್ಯಕ್ತಿಯ ಚಿತ್ರವಿದೆ ಇದು ಸುಮಾರು 170 ವರ್ಷಗಳ ಹಿಂದೆ ಸಮುದ್ರ ಮಾರ್ಗದಿಂದ ಬಂದ ಮೊದಲ ಸುವಾರ್ತಾ ಪ್ರಚಾರಕರನ್ನು ನೆನಪಿಸುತ್ತದೆ. ಬಂಗಾರ, ಹಸಿರು, ಬಿಳಿ ಮತ್ತು ಕೆಂಪು ಬಣ್ಣಗಳು ಕ್ರಮವಾಗಿ ಕ್ರಿಸ್ತನ ಬೆಳಕು, ಭೂಮಿ, ಶಾಂತಿ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವನ್ನು ಸೂಚಿಸುತ್ತವೆ. “ಕ್ರಿಸ್ತನು – ಇಕ್ವೇಟೋರಿಯಲ್ ಗಿನಿಯ ಬೆಳಕು; ಭರವಸೆಯ ಭವಿಷ್ಯದತ್ತ” ಎಂಬ ಮೋಟೊ ಭೂತಕಾಲದ ನೆನಪನ್ನು ಜ್ಞಾಪಿಸಿ ಭವಿಷ್ಯದ ಆಶಾಭರವಿರುವ ನಂಬಿಕೆಯ ದಾರಿಯನ್ನು ಸೂಚಿಸುತ್ತದೆ.

16 ಮಾರ್ಚ್ 2026, 09:21