“ಜಗದ್ಗುರು ಲಿಯೋರವರು ಪ್ರೇಷಿತರ ಅರಮನೆಯಲ್ಲಿರುವ ವಾಸಸ್ಥಳದ ಅಧಿಕಾರವನ್ನು ಸ್ವೀಕರಿಸಿದರು.”
ವ್ಯಾಟಿಕನ್ ವರದಿ
ಮಾರ್ಚ್ 14ರ ಶನಿವಾರ ಮಧ್ಯಾಹ್ನ, ಜಗದ್ಗುರು XIVನೇ ಲಿಯೋರವರು ಪ್ರೇಷಿತರ ಅರಮನೆಯಲ್ಲಿರುವ ಜಗದ್ಗುರುಗಳ ವಾಸಸ್ಥಳವನ್ನು ಅಧಿಕೃತವಾಗಿ ಸ್ವೀಕರಿಸಲಿದ್ದಾರೆ. ತಮ್ಮ ಅತಿ ಸಮೀಪದ ಕೆಲವರೊಂದಿಗೆ ಅವರು ತಮ್ಮ ಪೂರ್ವಾಧಿಕಾರಿಗಳು ಬಳಸಿದ್ದ ಆ ಕೊಠಡಿಗಳಿಗೆ ಸ್ಥಳಾಂತರಗೊಳ್ಳಲಿದ್ದಾರೆ. ಈ ಸುದ್ದಿಯನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮ್ಯಾಟಿಯೊ ಬ್ರೂನಿ ದೃಢಪಡಿಸಿದ್ದಾರೆ.
ಜಗದ್ಗರುಗಳು ವ್ಯಾಟಿಕನ್‌ನ ಪಾಲಾಜೊ ಡೆಲ್ ಸಾಂತ್ ಉಫ್ಫಿಜಿಯೋದಲ್ಲಿ ವಾಸಿಸುತ್ತಿದ್ದರು. ಬಿಷಪ್‌ಗಳ ವಿಭಾಗದ ಪ್ರಿಫೆಕ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಅವರು ಅಲ್ಲಿ ವಾಸವಾಗಿದ್ದರು.
ಇತ್ತೀಚೆಗೆ ಪುನರ್‌ನಿರ್ಮಾಣಗೊಂಡಿರುವ ಜಗದ್ಗುರುಗಳ ವಾಸಸ್ಥಳವು ಪ್ರೇಷಿತರ ಅರಮನೆಯ ಮೂರನೇ ಲೊಜ್ಜಿಯಾದಲ್ಲಿ ಇದೆ. ಅದರಲ್ಲಿ ಹಲವು ಕೊಠಡಿಗಳು ಸೇರಿವೆ. ಅವುಗಳಲ್ಲಿ ಖಾಸಗಿ ಅಧ್ಯಯನ ಕೊಠಡಿ ಕೂಡ ಇದೆ; ಅಲ್ಲಿ ಇರುವ ಕಿಟಕಿಯಿಂದ ಜಗದ್ಗುರುಗಳು ಸಂತ ಪೇತ್ರರ ಚೌಕದಲ್ಲಿ ನಡೆಯುವ ತ್ರಿಕಾಲ ಪ್ರಾರ್ಥನೆಗಾಗಿ ಜನರಿಗೆ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಒಂದು ಗ್ರಂಥಾಲಯ ಹಾಗೂ ಸಣ್ಣ ಪ್ರಾರ್ಥನಾ ಮಂದಿರವೂ ಅಲ್ಲಿ ಇದೆ.
2025ರ ಮೇ 11ರಂದು ಜಗದ್ಗುರು XIVನೇ ಲಿಯೋರವರು ಪ್ರೇಷಿತರ ಅರಮನೆಯಲ್ಲಿರುವ ಜಗದ್ಗುರುಗಳ ವಾಸಸ್ಥಳದ ಬಾಗಿಲಿಗೆ ಹಾಕಲಾಗಿದ್ದ ಮುದ್ರೆಯನ್ನು ತೆಗೆದುಹಾಕಿದರು. ಈ ಮುದ್ರೆಯನ್ನು 2025ರ ಏಪ್ರಿಲ್ 21ರಂದು, ಜಗದ್ಗುರು ಫ್ರಾನ್ಸಿಸ್ ರವರ ನಿಧನದ ನಂತರ ಇರಿಸಲಾಗಿತ್ತು. ಜಗದ್ಗುರು ಫ್ರಾನ್ಸಿಸ್ ರವರು ಕಾಸಾ ಸಾಂಟಾ ಮಾರ್ಟಾದಲ್ಲಿ ವಾಸಿಸುವುದನ್ನು ಆಯ್ಕೆ ಮಾಡಿಕೊಂಡಿದ್ದರು.
ಪ್ರೇಷಿತರ ಅರಮನೆಯ ಮೂರನೇ ಲೊಜ್ಜಿಯಾದಲ್ಲಿರುವ ಈ ಕೊಠಡಿಗಳಲ್ಲಿ ವಾಸಿಸಿದ್ದ ಮೊದಲ ಜಗದ್ಗುರು Xನೇ ಪಿಯಸ್ (1903–1914) ರವರಾಗಿದ್ದರು.
