“ಗಣಿತ ದಿನದ ಸಂದೇಶದಲ್ಲಿ ಜಗದ್ಗುರು ಲಿಯೋರವರು: ನೈತಿಕ ಮೌಲ್ಯಗಳನ್ನು ಸದಾ ಕಾಪಾಡಬೇಕು.”
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ಅಂತರರಾಷ್ಟ್ರೀಯ ಗಣಿತ ದಿನದ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಹೊಸ ತಂತ್ರಜ್ಞಾನಗಳ ನೈತಿಕ ಆಯಾಮದ ಬಗ್ಗೆ ವಿಶೇಷ ಗಮನ ಕೊಡಬೇಕೆಂದು ಕರೆ ನೀಡಿದರು. ಈ ಸಂದೇಶವನ್ನು ಗಣಿತ ದಿನದ ಅಧ್ಯಕ್ಷೆ ಬೆಟುಲ್ ಟ್ಯಾನ್ಬೇ ಅವರಿಗೆ ಕಳುಹಿಸಲಾಗಿದ್ದು, ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಪಿಯಾತ್ರೋ ಪಾರೋಲಿನ್ ರವರು ಅದಕ್ಕೆ ಸಹಿ ಹಾಕಿದರು. ಗಣಿತ ಮತ್ತು ಭರವಸೆ ಎಂಬ ವಿಷಯದ ವೆಬಿನಾರ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಜಗದ್ಗುರುಗಳ ಆತ್ಮೀಯ ಶುಭಾಶಯಗಳನ್ನು ಕಳುಹಿಸಿದರು.
ಮಾನವಕುಟುಂಬ ಎದುರಿಸುತ್ತಿರುವ ಅನೇಕ ಸವಾಲುಗಳ ನಡುವೆ, ವಿಶೇಷವಾಗಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವು ಒಳ್ಳೆಯದಕ್ಕೂ ಕೆಟ್ಟದಕ್ಕೂ ಬಳಸಬಹುದಾದ ಸಾಮರ್ಥ್ಯವನ್ನು ಹೊಂದಿದೆ ಎಂದು ಜಗದ್ಗುರುಗಳು ಹೇಳಿದರು. ಈ ಸಂದರ್ಭದಲ್ಲಿ ಗಣಿತತಜ್ಞರು ಜಗತ್ತಿಗೆ ಭರವಸೆಯ ಚಿಹ್ನೆಗಳಾಗಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಆಲೋಚಿಸಲು ಅವರು ಎಲ್ಲರನ್ನು ಪ್ರೋತ್ಸಾಹಿಸಿದರು.
ವಿಶೇಷವಾಗಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ಅಲ್ಗಾರಿಥಮ್‌ಗಳ ಅಧ್ಯಯನ ಮತ್ತು ಸಂಶೋಧನೆ ಬಹಳ ಫಲಪ್ರದ ಕ್ಷೇತ್ರವಾಗಬಹುದು ಎಂದು ಜಗದ್ಗುರುಗಳು ಸೂಚಿಸಿದರು. ಆದರೆ ಇಂತಹ ಕಾರ್ಯವು ಕೇವಲ ಬೌದ್ಧಿಕ ಸಾಮರ್ಥ್ಯ ಅಥವಾ ಸೃಜನಶೀಲತೆಯಷ್ಟೇ ಅಲ್ಲ, ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವದ ಬೆಳವಣಿಗೆಯನ್ನೂ ಅಗತ್ಯವಿದೆ, ಏಕೆಂದರೆ ಹೊಸ ತಂತ್ರಜ್ಞಾನಗಳ ನೈತಿಕ ಆಯಾಮವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ತಾವು ಗಣಿತ ಮತ್ತು ಭೌತಶಾಸ್ತ್ರದ ಶಿಕ್ಷಕರಾಗಿದ್ದ ಕಾಲವನ್ನು ನೆನಪಿಸಿಕೊಂಡ ಜಗದ್ಗುರು XIVನೇ ಲಿಯೋರವರು ಬಹಳಷ್ಟು ಜ್ಞಾನವನ್ನು ಹೊಂದಿರುವುದೇ ಸಾಕಾಗುವುದಿಲ್ಲ ಎಂದು ಹೇಳಿದರು. ನಾವು ಯಾರು, ನಮ್ಮ ಜೀವನದ ಅರ್ಥವೇನು ಎಂಬುದನ್ನು ಅರಿಯುವುದು ಸಹ ಅದಕ್ಕಿಂತ ಮುಖ್ಯವೆಂದು ಅವರು ಒತ್ತಿಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಮಾನವ ಹೃದಯದ ಆಳವಾದ ಆಧ್ಯಾತ್ಮಿಕ ಅಗತ್ಯಗಳತ್ತ ಗಮನಹರಿಸಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ಡಿಜಿಟಲ್ ಜಗತ್ತನ್ನು ಮಾನವೀಯಗೊಳಿಸುವ ಮಾರ್ಗಗಳನ್ನು ಹುಡುಕಿ, ಅದನ್ನು ಸಹೋದರತ್ವ ಮತ್ತು ಸೃಜನಶೀಲತೆಯ ಅವಕಾಶವನ್ನಾಗಿ ರೂಪಿಸಬೇಕೆಂದು ಅವರು ಪ್ರೋತ್ಸಾಹಿಸಿದರು.
ಕೊನೆಯಲ್ಲಿ, ಜಗತ್ತಿನಲ್ಲಿ ಭರವಸೆ, ಸತ್ಯ ಮತ್ತು ಒಳ್ಳೆಯತನದ ಪ್ರವಾದಿಗಳಾಗಿರಲು ಜಗದ್ಗುರುಗಳು ಎಲ್ಲರನ್ನು ಆಹ್ವಾನಿಸಿದರು. ಈ ವರ್ಷದ ಅಂತರರಾಷ್ಟ್ರೀಯ ಗಣಿತ ದಿನದಲ್ಲಿ ಭಾಗವಹಿಸಿದ ಎಲ್ಲರ ಮೇಲೂ ದೇವರು ಜ್ಞಾನ, ಸಂತೋಷ ಮತ್ತು ಶಾಂತಿಯ ಸಮೃದ್ಧ ಆಶೀರ್ವಾದಗಳನ್ನು ನೀಡಲಿ ಎಂದು ಅವರು ಪ್ರಾರ್ಥಿಸಿದರು.
