ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು  

ಜಗದ್ಗರುಗಳು: ಯುದ್ಧಕ್ಕೆ ಕಾರಣರಾದ ಕ್ರೈಸ್ತರು ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳುತ್ತಾರೆಯೇ?

ಜಗದ್ಗುರು XIV ನೇ ಲಿಯೋರವರು ಭವಿಷ್ಯದ ಅಂಗೀಕಾರಪಿತೃಗಳನ್ನು ಭೇಟಿಯಾದ ಸಂದರ್ಭದಲ್ಲಿ, ಯುದ್ಧಕ್ಕೆ ಹೊಣೆಗಾರರಾಗಿರುವ ಕ್ರೈಸ್ತರು ತಮ್ಮ ಅಂತಃಕರಣವನ್ನು ಗಂಭೀರವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಆಹ್ವಾನಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಶುಕ್ರವಾರ  ಪ್ರೇಷಿತರ ಪ್ರಾಯಶ್ಚಿತ್ತ ಕಛೇರಿಯಲ್ಲಿ ಪ್ರತಿ ವರ್ಷ ಆಯೋಜಿಸುವ ಆಂತರಿಕ ಫೋರಮ್ ಕುರಿತು 36ನೇ ತರಬೇತಿಯಲ್ಲಿ ಭಾಗವಹಿಸಿದವರೊಂದಿಗೆ ಒಂದು ಭೇಟಿಯನ್ನು ನಡೆಸಿದರು.

ಈ ತರಬೇತಿ ಯಾಜಕರು ಮತ್ತು ಗುರು ವಿದ್ಯಾರ್ಥಿಗಳಿಗೆ ಪಶ್ಚಾತ್ತಾಪದ ಸಂಸ್ಕಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ  ತರಬೇತಿಯನ್ನು ನೀಡುತ್ತದೆ ಮತ್ತು ಸಾಮಾನ್ಯವಾಗಿ ಜಗದ್ಗುರುಗಳ ಭೇಟಿಯೊಂದಿಗೆ ಈ ಕಾರ್ಯಕ್ರಮವು ಮುಕ್ತಾಯಗೊಳ್ಳುತ್ತದೆ.

ಭವಿಷ್ಯದ ಅಂಗೀಕಾರಪಿತೃಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ, ಪಶ್ಚಾತ್ತಾಪದ ಸಂಸ್ಕಾರವು ಮಾನವ ಕುಟುಂಬದಲ್ಲಿ ಶಾಂತಿ ಮತ್ತು ಏಕತೆಯನ್ನು ಬೆಳೆಸುವ ಶಕ್ತಿ ಹೊಂದಿದೆ ಎಂದು ಹೇಳಿದರು.

“ಒಂದು ಪ್ರಶ್ನೆ ಕೇಳಬಹುದು,” ಎಂದು ಅವರು ಹೇಳಿದರು. “ಸಶಸ್ತ್ರ ಸಂಘರ್ಷಗಳಿಗೆ ಗಂಭೀರ ಹೊಣೆಗಾರಿಕೆ ಹೊಂದಿರುವ ಕ್ರೈಸ್ತರು ತಮ್ಮ ಅಂತಃಕರಣವನ್ನು ಗಂಭೀರವಾಗಿ ಪರಿಶೀಲಿಸಿ ಅಂಗೀಕಾರಕ್ಕೆ ಬರುವ ವಿನಯ ಮತ್ತು ಧೈರ್ಯ ಹೊಂದಿದೆಯೇ?” ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ಪಶ್ಚಾತ್ತಾಪದ ಸಂಸ್ಕಾರವು ಏಕತೆಯ ಪ್ರಯೋಗಾಲಯವಾಗಿದ್ದು, ಅದು ದೇವರೊಂದಿಗೆ ಇರುವ ಏಕತೆಯನ್ನು ಪುನಃಸ್ಥಾಪಿಸಿ, ಪಶ್ಚಾತ್ತಾಪಪಡುವ ವ್ಯಕ್ತಿಗೆ ಪವಿತ್ರೀಕರಣದ ಕೃಪೆಯನ್ನು ತುಂಬುತ್ತದೆ ಎಂದು ಅವರು ಹೇಳಿದರು.

ಅಂಗೀಕಾರವು ಜನರಿಗೆ ಪರಸ್ಪರ ಹಾಗೂ ಧರ್ಮ ಸಭೆಯೊಂದಿಗೆ ಏಕತೆಯಲ್ಲಿ ಬದುಕುವುದನ್ನು ಸಹ ಕಲಿಸುತ್ತದೆ, ಏಕೆಂದರೆ ಅದು ಮೊದಲು ನಮ್ಮೊಳಗಿನ ಆಂತರಿಕ ಏಕತೆಯನ್ನು ಪುನಃಸ್ಥಾಪಿಸುತ್ತದೆ.

“ದೇವರೊಂದಿಗೆ, ಧರ್ಮ ಸಭೆಯೊಂದಿಗೆ ಮತ್ತು ನಮ್ಮೊಳಗಿನ ಏಕತೆಯ ಈ ಚಲನೆಯೇ ಜನಾಂಗಗಳ ನಡುವೆ ಶಾಂತಿಗೆ ಮೂಲಾಧಾರವಾಗಿದೆ, ಎಂದು ಜಗದ್ಗುರು ಲಿಯೋರವರು ಹೇಳಿದರು. ಸಮಾಧಾನಗೊಂಡ ವ್ಯಕ್ತಿಯೇ ನಿರಾಯುಧ ಮತ್ತು ನಿರಾಯುಧಗೊಳಿಸುವ ರೀತಿಯಲ್ಲಿ ಬದುಕಲು ಸಮರ್ಥನಾಗಿರುತ್ತಾನೆ ಎಂದರು.

ಅಹಂಕಾರದ ಆಯುಧಗಳನ್ನು ತ್ಯಜಿಸಿ ದೇವರ ಕ್ಷಮೆಯಿಂದ ಹೊಸದಾಗಿ ರೂಪುಗೊಳ್ಳಲು ಅವಕಾಶ ಕೊಡುವ ಕ್ರೈಸ್ತರು ತಮ್ಮ ದಿನನಿತ್ಯದ ಜೀವನದಲ್ಲಿ ಸಮಾಧಾನದ ದೂತರಾಗುತ್ತಾರೆ ಎಂದು ಅವರು ಹೇಳಿದರು.

ಅದೇ ಸಮಯದಲ್ಲಿ ದೇವರೊಂದಿಗೆ ಸಮಾಧಾನಗೊಂಡವರು ನಿಯಂತ್ರಣವಿಲ್ಲದ ಉಪಭೋಗಶೀಲತೆಯ ಅಪೂರ್ಣ ವಾಗ್ದಾನಗಳನ್ನು ಮತ್ತು ಸತ್ಯದಿಂದ ದೂರವಾದ ಸ್ವಾತಂತ್ರ್ಯದ ನಿರಾಶಾದಾಯಕ ಅನುಭವವನ್ನು ಹೆಚ್ಚು ಸುಲಭವಾಗಿ ಗುರುತಿಸುತ್ತಾರೆ ಎಂದು ಜಗದ್ಗುರುಗಳು ಹೇಳಿದರು.

ದೈವಿಕ ಕರುಣೆಯ ಮೂಲಕ ಕ್ರಿಸ್ತನು ನಮ್ಮೊಳಗೆ ನಮ್ಮ ಅಪೂರ್ಣತೆಯ ಅರಿವನ್ನು ಎಬ್ಬಿಸುತ್ತಾನೆ. ಇದು ನಮ್ಮ ಅಸ್ತಿತ್ವದ ಪ್ರಶ್ನೆಗಳನ್ನು ಹೊರತರುತ್ತದೆ ಆಗ ನಮ್ಮ ಅಂತರಂಗದ ಅತ್ಯಂತ ಆಳವಾದ ಬಯಕೆಗಳಿಗೆ ಸಂಪೂರ್ಣ ಉತ್ತರ ನೀಡಬಲ್ಲವರು ಕ್ರಿಸ್ತನೇ ಎಂಬುದನ್ನು ನಾವು ಅರಿಯುತ್ತೇವೆ ಎಂದರು.

ದೇವರು ನಮಗೆ ರಕ್ಷಣೆ ನೀಡಲು ಮಾನವನಾದರು, ಎಂದು ಜಗದ್ಗುರುಗಳು ಹೇಳಿದರು. ಅವರು ನಮ್ಮ ಧಾರ್ಮಿಕ ಭಾವನೆಯನ್ನು, ಸತ್ಯ ಮತ್ತು ಪ್ರೀತಿಗಾಗಿ ಇರುವ ನಮ್ಮ ನಾಶವಾಗದ ಬಯಕೆಯನ್ನು ಶಿಕ್ಷಣ ನೀಡಿ, ನಾವು ಬದುಕುವ, ಚಲಿಸುವ ಮತ್ತು ಅಸ್ತಿತ್ವ ಹೊಂದಿರುವ ಆ ರಹಸ್ಯವನ್ನು ಸ್ವೀಕರಿಸಲು ನಮಗೆ ಸಹಾಯ ಮಾಡುತ್ತಾರೆ.

ಪಶ್ಚಾತ್ತಾಪದ ಸಂಸ್ಕಾರದ ಮಹತ್ವವನ್ನು ವಿವರಿಸುತ್ತಾ, ಜಗದ್ಗುರು ಲಿಯೋರವರು ಧರ್ಮ ಸಭೆಯ ಪ್ರಾಚೀನ ತತ್ತ್ವಶಾಸ್ತ್ರೀಯ ಪರಂಪರೆಯನ್ನು ನೆನಪಿಸಿದರು. ಕಾಲಕ್ರಮೇಣ ಅಭಿವೃದ್ಧಿಯಾದ ಈ ಬೋಧನೆಯ ಪ್ರಕಾರ ಪ್ರತಿ ಕಥೋಲಿಕ ಕನಿಷ್ಠ ವರ್ಷಕ್ಕೆ ಒಮ್ಮೆ ಈ ಸಂಸ್ಕಾರವನ್ನು ಸ್ವೀಕರಿಸಬೇಕು.

ಆದರೆ ಅನೇಕರು ಧರ್ಮ ಸಭೆಯ ಅನಂತ ಕರುಣೆಯ ಧನಸಂಪತ್ತಿಗೆ ಹೆಚ್ಚು ಬಾರಿ ಸಮೀಪಿಸುವುದಿಲ್ಲ ಎಂದು ಅವರು ವಿಷಾದಿಸಿದರು. ಬದಲಾಗಿ, ಸರಳ ನಂಬಿಕೆ ಮತ್ತು ಹೃದಯದೊಂದಿಗೆ ಅಂಗೀಕಾರಕ್ಕೆ ಬಂದು ಪ್ರಭುವಿನ ಕೃಪೆಯನ್ನು ಸ್ವೀಕರಿಸಬೇಕು ಎಂದು ಹೇಳಿದರು.

ಜಗದ್ಗುರು ಲಿಯೋರವರು ಈಗಿನ ಮತ್ತು ಭವಿಷ್ಯದ ಯಾಜಕರು ದೇವರ ಕ್ಷಮೆಯನ್ನು ಪಶ್ಚಾತ್ತಾಪದ ಸಂಸ್ಕಾರದ ಮೂಲಕ ನೀಡುವ ತಮ್ಮ ಮಹತ್ತರ ಹೊಣೆಗಾರಿಕೆಯನ್ನು ಸದಾ ಅರಿತುಕೊಳ್ಳುವಂತೆ ಆಹ್ವಾನಿಸಿದರು.

ಅಂಗೀಕಾರಪೀಠದಲ್ಲಿ ಪವಿತ್ರರಾಗಿದ ಅನೇಕ ಯಾಜಕರನ್ನು ಅವರು ಉದಾಹರಣೆಯಾಗಿ ಸೂಚಿಸಿದರು. ಅವರಲ್ಲಿ ಜಾನ್ ಮೇರಿ ವಿಯಾನಿ, ಲಿಯೋಪೋಲ್ಡ್ ಮಂಡಿಕ್, ಹಾಗೂ ಇತ್ತೀಚಿನ ಕಾಲದಲ್ಲಿ ಪಿಯೊ ಆಫ್ ಪಿಯೆಟ್ರೆಲ್ಸಿನಾ ಮತ್ತು ಮಿಚಾಲ್ ಸೊಪೊಕ್ಕೊ ಸೇರಿದ್ದಾರೆ.

ಸಕ್ರಾಮೆಂಟಲ್ ಅಂಗೀಕಾರವು ವ್ಯಕ್ತಿಯ ಆಂತರಿಕ ಏಕತೆಯನ್ನು ನಿರ್ಮಿಸುವಷ್ಟೇ ಅಲ್ಲ, ಧರ್ಮ ಸಭೆಯನ್ನು ಬಲಪಡಿಸುತ್ತದೆ. ಇದರಿಂದ ಸಮಾಜ ಮತ್ತು ಜಗತ್ತಿನೊಂದಿಗೆ ಧರ್ಮ ಸಭೆ ಹೆಚ್ಚು ಶಕ್ತಿಯುತವಾಗಿ ಸಂಪರ್ಕ ಸಾಧಿಸಲು ಹೊಸ ಉತ್ಸಾಹ ದೊರೆಯುತ್ತದೆ ಎಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಅಂಗೀಕಾರಪಿತೃಗಳಿಗೆ ನಿಷ್ಠೆಯಿಂದ ಮತ್ತು ನಿರಂತರವಾಗಿ ಕ್ಷಮೆಯ ಸಂಸ್ಕಾರವನ್ನು ಸ್ವತಃ ಸ್ವೀಕರಿಸಬೇಕು ಎಂದು ಪ್ರೋತ್ಸಾಹಿಸಿದರು. ಹೀಗೆ ಅವರು ದೈವಿಕ ಕರುಣೆಯ ಸೇವಕರಾಗುತ್ತಾರೆ ಆ ಕರುಣೆಯ ಮೊದಲ ಫಲಾನುಭವಿಗಳೂ ಅವರೇ ಆಗಿದ್ದಾರೆ ಎಂದರು.

13 ಮಾರ್ಚ್ 2026, 18:19