“ಲೆಬನಾನ್‌ನಲ್ಲಿ ಹತ್ಯೆಯಾದ ಲೆಬನಿನ ಗುರುಗಳಿಗಾಗಿ ಜಗದ್ಗುರುಗಳು ಶೋಕ ವ್ಯಕ್ತಪಡಿಸಿ, ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.”
ವ್ಯಾಟಿಕನ್ ವರದಿ
ಜಗದ್ಗುರು XIV ನೇ ಲಿಯೋರವರು ತಮ್ಮ ವಾರದ ಸಾಮಾನ್ಯ ಪ್ರೇಕ್ಷಕರ ಸಭೆಯಲ್ಲಿ ಇರಾನ್ ಹಾಗೂ ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲೆಂದು ಪ್ರಾರ್ಥಿಸಬೇಕೆಂದು ವಿಶ್ವಾಸಿಗಳಿಗೆ ಮನವಿ ಮಾಡಿದರು. ಯುದ್ಧದಲ್ಲಿ ಸಾವಿಗೀಡಾದ ಅನೇಕ ನಿರಪರಾಧಿ ನಾಗರಿಕರು, ವಿಶೇಷವಾಗಿ ಮಕ್ಕಳಿಗಾಗಿ ಪ್ರಾರ್ಥನೆ ಸಲ್ಲಿಸಬೇಕೆಂದು ಅವರು ಹೇಳಿದರು. ನಮ್ಮ ಪ್ರಾರ್ಥನೆ ನೋವು ಅನುಭವಿಸುವವರಿಗೆ ಸಾಂತ್ವನವಾಗಲಿ ಮತ್ತು ಭವಿಷ್ಯಕ್ಕೆ ಭರವಸೆಯ ಬೀಜವಾಗಲಿ ಎಂದು ಜಗದ್ಗುರುಗಳು ಹೇಳಿದರು.
ಈ ಸಂದರ್ಭದಲ್ಲಿ ಜಗದ್ಗುರುಗಳು, ಲೆಬನಾನ್‌ನ ಕ್ವಲಾಯಾ ಗ್ರಾಮದಲ್ಲಿ ಹತ್ಯೆಗೀಡಾದ .ಸ್ವಾಮಿ ಪಿಯರೆ ಎಲ್-ರಾಹಿರವರ ಅಂತ್ಯಕ್ರಿಯೆ ನಡೆಯುತ್ತಿರುವುದನ್ನು ಸ್ಮರಿಸಿದರು. ದಕ್ಷಿಣ ಲೆಬನಾನ್‌ನ ಕ್ರೈಸ್ತ ಗ್ರಾಮಗಳಲ್ಲಿ ಈಗ ಮತ್ತೆ ಯುದ್ಧದ ದುಃಖಕರ ಪರಿಸ್ಥಿತಿ ಕಾಣಿಸುತ್ತಿದೆ ಎಂದು ಅವರು ಹೇಳಿದರು. ಈ ಕಠಿಣ ಪರೀಕ್ಷೆಯ ಸಮಯದಲ್ಲಿ ಲೆಬನಾನ್ ಜನರೊಂದಿಗೆ ನಾನು ಆತ್ಮೀಯವಾಗಿ ಇದ್ದೇನೆ ಎಂದು ಜಗದ್ಗುರುಗಳು ತಿಳಿಸಿದರು.
ಮಾರೋನೈಟ್ ವಿಧಿಯ ಈ ಗುರುಗಳು ಸೋಮವಾರ ಕ್ವಲಾಯಾದಲ್ಲಿ ಮೃತಪಟ್ಟರು. ಕೆಲವು ಮನೆಗಳ ಮೇಲೆ ಟ್ಯಾಂಕ್ ದಾಳಿ ನಡೆದಾಗ ಗಾಯಗೊಂಡಿದ್ದ ತನ್ನ ಧರ್ಮ ಕೇಂದ್ರದ ಸದಸ್ಯರಿಗೆ ಸಹಾಯ ಮಾಡಲು ಅವರು ಧಾವಿಸಿದ್ದರು ಎಂದು ವರದಿಗಳು ತಿಳಿಸಿವೆ. ಮನೆಗೆ ಮತ್ತೊಮ್ಮೆ ಟ್ಯಾಂಕ್ ದಾಳಿ ನಡೆದಾಗ ವಂ.ಸ್ವಾಮಿ ಪಿಯರೆ ಎಲ್-ರಾಹಿ ರವರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ನಂತರ ಗಾಯಗಳಿಂದ ಅವರು ಮೃತಪಟ್ಟರು.
ಜಗದ್ಗರುಗಳು “ಎಲ್-ರಾಹಿ” ಎಂಬ ಪದಕ್ಕೆ ಅರಬಿ ಭಾಷೆಯಲ್ಲಿ “ಮೇಯ್ಕೋರ” (ಕುರಿಗಾಹಿ) ಎಂಬ ಅರ್ಥವಿದೆ ಎಂದು ನೆನಪಿಸಿದರು. ವಂ.ಸ್ವಾಮಿ ಪಿಯರೆ ಎಲ್-ರಾಹಿರವರು ತಮ್ಮ ಜನರೊಂದಿಗೆ ಸದಾ ನಿಂತ ನಿಜವಾದ ಕುರಿಗಾಹಿಗಳಾಗಿದ್ದರು. ಒಳ್ಳೆಯ ಕುರಿಗಾಹಿಯು ಯೇಸುವಿನ ಪ್ರೀತಿ ಮತ್ತು ತ್ಯಾಗದ ಮನೋಭಾವದಿಂದ ಅವರು ತಮ್ಮ ಜನರನ್ನು ಸೇವಿಸಿದರು ಎಂದು ಜಗದ್ಗುರುಗಳು ಹೇಳಿದರು.
ಧರ್ಮ ಕೇಂದ್ರದ ಸದಸ್ಯರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಅವರು ಯಾವುದೇ ಸಂಶಯವಿಲ್ಲದೆ ಸಹಾಯ ಮಾಡಲು ಧಾವಿಸಿದ್ದರು ಎಂದು ಜಗದ್ಗುರುಗಳು ಸ್ಮರಿಸಿದರು. ಅವರ ಈ ತ್ಯಾಗಮಯ ಸೇವೆ ಕ್ರಿಸ್ತನ ಪ್ರೀತಿಯ ನಿಜವಾದ ಸಾಕ್ಷಿಯಾಗಿದೆ ಎಂದು ಹೇಳಿದರು.
ಕೊನೆಯಲ್ಲಿ ಜಗದ್ಗುರುಗಳು ವಂ.ಸ್ವಾಮಿ ಎಲ್-ರಾಹಿ ಸುರಿಸಿದ ರಕ್ತವು ಪ್ರಿಯ ಲೆಬನಾನ್ ದೇಶದಲ್ಲಿ ಶಾಂತಿಯ ಬೀಜವಾಗಲಿ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲಲಿ ಮತ್ತು ಯುದ್ಧದಿಂದ ನರಳುತ್ತಿರುವ ಎಲ್ಲ ನಿರಪರಾಧಿಗಳಿಗಾಗಿ ನಾವು ಪ್ರಾರ್ಥಿಸಬೇಕು ಎಂದು ಅವರು ಪುನಃ ಮನವಿ ಮಾಡಿದರು.
