ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು ಬುಧವಾರದ ಸಾಮಾನ್ಯ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು  (AFP or licensors)

ಜಗದ್ಗರುಗಳು ಸಾರ್ವಜನಿಕ ಸಭೆಯಲ್ಲಿ: ಧರ್ಮ ಸಭೆಯ ಮಾನವತ್ವ ಮತ್ತು ದೈವತ್ವ ಸಮನ್ವಯದಲ್ಲಿವೆ

ತಮ್ಮ ವಾರಾಂತ್ಯದ ಸಾಮಾನ್ಯ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ, ಜಗದ್ಗುರು XIV ನೇ ಲಿಯೋರವರು ‘ಲುಮೆನ್ ಜೆಂಟಿಯಮ್’ ಕುರಿತ ಚಿಂತನೆಗಳನ್ನು ಮುಂದುವರಿಸಿದರು. ಧರ್ಮ ಸಭೆಯ ಮಾನವೀಯ ಮತ್ತು ದೈವಿಕ ಆಯಾಮಗಳ ನಡುವೆ ಯಾವುದೇ ವಿರೋಧವಿಲ್ಲ ಎಂದು ಅವರು ಸೂಚಿಸಿದರು. ಇತಿಹಾಸದ ಪೂರ್ತಿ ಕ್ರಿಸ್ತನ ಧರ್ಮ ಸಭೆ ಯಾವುದೋ ದೂರದಲ್ಲಿರುವ ಆದರ್ಶ ಕಲ್ಪನೆ ಅಲ್ಲ ಎಂಬುದನ್ನೂ ಅವರು ಸ್ಮರಿಸಿದರು.

ವ್ಯಾಟಿಕನ್ ವರದಿ

ಜಗದ್ಗರು XIV ನೇ ಲಿಯೋರವರು ಬುಧವಾರ ಬೆಳಿಗ್ಗೆ ವ್ಯಾಟಿಕನ್‌ನಲ್ಲಿ ನಡೆದ ವಾರಾಂತ್ಯದ ಸಾಮಾನ್ಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಭೂಮಿಯಿಂದ ಪ್ರತ್ಯೇಕವಾಗಿರುವ ಆದರ್ಶ ಮತ್ತು ಶುದ್ಧ ಧರ್ಮ ಸಭೆಯ ಅಸ್ತಿತ್ವದಲ್ಲಿಲ್ಲ ಇತಿಹಾಸದಲ್ಲಿ ಅವತರಿಸಿಕೊಂಡಿರುವ ಕ್ರಿಸ್ತನ ಒಂದೇ ಧರ್ಮ ಸಭೆಯೇ ಅಸ್ತಿತ್ವದಲ್ಲಿದೆ ಎಂದು ಹೇಳಿದರು. ಈ ವಾರವೂ ಅವರು ದ್ವಿತೀಯ ವ್ಯಾಟಿಕನ್ ಪರಿಷತ್ತಿನ ಡಾಗ್ಮಾಟಿಕ್ ಸಂವಿಧಾನ ಲುಮೆನ್ ಜೆಂಟಿಯಮ್ ಕುರಿತು ತಮ್ಮ ಚಿಂತನೆಗಳನ್ನು ಮುಂದುವರಿಸಿದರು.

ಧರ್ಮ ಸಭೆಯ  ಮಾನವೀಯ ಮತ್ತು ದೈವಿಕ ಆಯಾಮಗಳ ಕುರಿತು ಮಾತನಾಡಿದ ಅವರು, ಧರ್ಮ ಸಭೆ ಸುಸಂಘಟಿತ ಸಮುದಾಯವಾಗಿದ್ದು, ಅದರಲ್ಲಿ ಮಾನವೀಯ ದುರ್ಬಲತೆ ಮತ್ತು ದೈವಿಕ ಕೃಪೆ ಎರಡೂ ಸಹ ಅಳವಡಿಸಿಕೊಂಡಿವೆ ಎಂದು ಹೇಳಿದರು. ಧರ್ಮ ಸಭೆಯ ಸದಸ್ಯರು ತಮ್ಮ ಶಕ್ತಿಗಳು ಮತ್ತು ದುರ್ಬಲತೆಗಳೊಂದಿಗೆ ಸುವಾರ್ತೆಯನ್ನು ಸಾರುವವರಾಗಿದ್ದಾರೆ ಆದರೆ ಧರ್ಮ ಸಭೆಯ ನಿಜಸ್ವರೂಪವನ್ನು ವಿವರಿಸಲು ಮಾನವೀಯ ಆಯಾಮ ಮಾತ್ರ ಸಾಕಾಗುವುದಿಲ್ಲ, ಏಕೆಂದರೆ ಅದು ದೇವರ ಯೋಜನೆಯಿಂದ ಕ್ರಿಸ್ತನಲ್ಲಿ ಸ್ಥಾಪಿತವಾದ ದೈವಿಕ ಆಯಾಮವನ್ನೂ ಹೊಂದಿದೆ ಎಂದು ವಿವರಿಸಿದರು.

ಆದ್ದರಿಂದ ಧರ್ಮ ಸಭೆ ಒಂದೇ ಸಮಯದಲ್ಲಿ ಭೌತಿಕ ಸಮುದಾಯವೂ ಆಗಿದ್ದು, ಕ್ರಿಸ್ತನ ಅದ್ಭುತ ದೇಹವೂ ಆಗಿದೆ ದೃಶ್ಯ ಸಮೂಹವೂ ಆಗಿ, ಆಧ್ಯಾತ್ಮಿಕ ರಹಸ್ಯವೂ ಆಗಿದೆ ಇತಿಹಾಸದಲ್ಲಿ ಇರುವ ವಾಸ್ತವಿಕತೆಯೂ ಆಗಿ, ಪರಲೋಕದತ್ತ ಪಯಣಿಸುವ ದೇವಜನರೂ ಆಗಿದೆ. ಈ ಎರಡೂ ಆಯಾಮಗಳು ಪರಸ್ಪರ ವಿರೋಧದಲ್ಲಿಲ್ಲ, ಆದರೆ ಸಮನ್ವಯದಿಂದ ಒಂದರೊಳಗೆ ಮತ್ತೊಂದು ಸೇರ್ಪಡೆಯಾಗಿವೆ ಎಂದು ಜಗದ್ಗುರುಗಳು ಒತ್ತಿ ಹೇಳಿದರು.

 ಲುಮೆನ್ ಜೆಂಟಿಯಮ್ ಕ್ರಿಸ್ತನ ಜೀವನವನ್ನು ಉದಾಹರಣೆಯಾಗಿ ನೀಡುತ್ತದೆ ಎಂದು ಅವರು ವಿವರಿಸಿದರು. ಪ್ಯಾಲೆಸ್ಟೈನಿನ ಮಾರ್ಗಗಳಲ್ಲಿ ಯೇಸುವನ್ನು ಭೇಟಿಯಾದವರು ಅವರ ಮಾನವೀಯತೆಯನ್ನು ಅನುಭವಿಸಿದರು ಅವರ ಕಣ್ಣುಗಳು, ಕೈಗಳು, ಮಾತುಗಳು. ಆದರೆ ಅದೇ ಮಾನವನನ್ನು ಅನುಸರಿಸಿದಾಗ, ಶಿಷ್ಯರು ದೇವರ ಸನ್ನಿಧಿಯನ್ನು ಅನುಭವಿಸಿದರು ಏಕೆಂದರೆ ಕ್ರಿಸ್ತನಲ್ಲಿ ಕಾಣಿಸಿಕೊಂಡ ಮಾನವೀಯ ರೂಪವು ಅದೃಶ್ಯ ದೇವರನ್ನು ಪ್ರಕಟಿಸಿತು.

ಧರ್ಮ ಸಭೆಯ ಪವಿತ್ರತೆಯೂ ಇದೇ ರಹಸ್ಯದಲ್ಲಿ ನೆಲೆಸಿದೆ ಎಂದು ಜಗದ್ಗುರುಗಳು ಹೇಳಿದರು. ಧರ್ಮ ಸಭೆಯ ಸದಸ್ಯರು ಕೆಲವೊಮ್ಮೆ ತಪ್ಪುಮಾಡಿದರೂ, ಅವರ ಸಣ್ಣತನ ಮತ್ತು ದುರ್ಬಲತೆಯ ಮೂಲಕವೇ ಕ್ರಿಸ್ತನ ಸಾನ್ನಿಧ್ಯ ಮತ್ತು ರಕ್ಷಣಾತ್ಮಕ ಕ್ರಿಯೆ ವ್ಯಕ್ತವಾಗುತ್ತದೆ. ಆದ್ದರಿಂದ, ಸುವಾರ್ತೆಯ ಮತ್ತು ಸಂಸ್ಥೆಯ ನಡುವೆ ವಿರೋಧವಿಲ್ಲ ಧರ್ಮ ಸಭೆಯ ರಚನೆಗಳೇ ಸುವಾರ್ತೆಯನ್ನು ಜೀವನದಲ್ಲಿ ಸಾಕಾರಗೊಳಿಸಲು ಸಹಾಯ ಮಾಡುತ್ತವೆ.

ಕೊನೆಯಲ್ಲಿ, ವಿಶ್ವಾಸಿಗಳು ಕ್ರಿಸ್ತನ ಪ್ರೀತಿ ಮತ್ತು ದಾನಶೀಲತೆಯ ನಿಜವಾದ ಸಾಕ್ಷಿಗಳಾಗಿರಬೇಕೆಂದು ಜಗದ್ಗುರುಗಳು ಕರೆ ನೀಡಿದರು. ಪರಸ್ಪರ ಸಹಭಾಗಿತ್ವ ಮತ್ತು ಪ್ರೀತಿಯ ಮೂಲಕ ಕ್ರಿಸ್ತನ ದೇಹವಾದ ಆಧ್ಯಾತ್ಮಿಕ ಕಟ್ಟಡವನ್ನು ನಿರ್ಮಿಸಬೇಕು ಆಗ ನಮ್ಮೊಳಗೂ ನಮ್ಮ ನಡುವೆ ಇರುವ ಪ್ರೀತಿಯನ್ನು ನೋಡಿ ಎಲ್ಲರೂ ನಿಜವಾದ ಕ್ರೈಸ್ತರನ್ನು ಗುರುತಿಸಬಹುದು ಎಂದು ಅವರು ಹೇಳಿದರು.

04 ಮಾರ್ಚ್ 2026, 14:08