ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

“ಜಗದ್ಗುರುಗಳು ಎಫ್ಎಡಿಐಸಿಎ ಗೆ: ಅತ್ಯಂತ ದುರ್ಬಲರ ಬಗ್ಗೆ ಕಾಳಜಿ ವಹಿಸುವುದು ದೇವರ ಪ್ರೀತಿಯ ಪ್ರತಿಬಿಂಬವಾಗಿದೆ

ಎಫ್ಎಡಿಐಸಿಎ ಕಥೋಲಿಕರ ಪರೋಪಕಾರ ಜಾಲದ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ, ಜಗದ್ಗುರು XIVನೇ ಲಿಯೋರವರು ಅತ್ಯಂತ ಅಗತ್ಯದಲ್ಲಿರುವವರಿಗೆ ಸಹಾಯ ಮಾಡುವ ಅದರ ಮೌಲ್ಯಯುತ ಧರ್ಮಸೇವೆಯನ್ನು ಮುಂದುವರಿಸಲು ಸಂಸ್ಥೆಯನ್ನು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಎಫ್ಎಡಿಐಸಿಎ ಕಥೋಲಿಕ ಪರೋಪಕಾರ ಜಾಲ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸ್ಥೆಗೆ ಒಂದು ಸಂದೇಶವನ್ನು ಕಳುಹಿಸಿದರು.

ಅದೇನೆಂದರೆ ವ್ಯಾಟಿಕನ್‌ನ ವಿವಿಧ ಡಿಕಾಸ್ಟರಿಗಳಿಗೆ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ವಿಶ್ವದಾದ್ಯಂತ ನಡೆಯುವ ಹಲವಾರು ಕಥೋಲಿಕ ಕಾರ್ಯಗಳಿಗೆ ನೀಡಿರುವ ಅವರ ಉದಾರ ಬೆಂಬಲಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.

ಎಫ್ಎಡಿಐಸಿಎ ಸಂಸ್ಥೆಯ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸಿಯಾ ಕೆಲ್ಲಿರವರನ್ನು ಉದ್ದೇಶಿಸಿ ಕಳುಹಿಸಿದ ಸಂದೇಶದಲ್ಲಿ, ಈ ವಾರ್ಷಿಕೋತ್ಸವದ ಸಮಾವೇಶವು ತಪಸ್ಸು ಕಾಲದ  ಸಮಯದಲ್ಲಿ ನಡೆಯುತ್ತಿದೆ ಎಂದು ಜಗದ್ಗುರು ಲಿಯೋರವರು ಹೇಳಿದರು. ಈ ಕಾಲದಲ್ಲಿ “ಪ್ರಾರ್ಥನೆ ಮತ್ತು ಉಪವಾಸದ ಜೊತೆಗೆ, ಧರ್ಮ ಸಭೆಯ ಎಲ್ಲಾ ಕಥೋಲಿಕರನ್ನು ಹೆಚ್ಚಿದ ಉತ್ಸಾಹದಿಂದ ಕರುಣೆಯ ಕಾರ್ಯಗಳನ್ನು ಅಭ್ಯಾಸ ಮಾಡಲು ಆಹ್ವಾನಿಸುತ್ತದೆ ಎಂದು ಅವರು ಹೇಳಿದರು.

ಯೇಸು ಕ್ರಿಸ್ತನು ನಮ್ಮ ನೆರೆಯವರಿಗೆ ಹೇಗೆ ಸಹಾಯ ಮಾಡಬೇಕೆಂಬುದನ್ನು ವಿವೇಕದಿಂದ ಗುರುತಿಸಲು ನಮಗೆ ಬೋಧಿಸಿದ್ದಾರೆ ಎಂಬುದನ್ನು ನೆನಪಿಸಿದ ಜಗದ್ಗುರುಗಳು, ಎಲ್ಲರೂ ಒಳ್ಳೆಯ ಸಮಾರಿಯದವನ ದೃಷ್ಟಾಂತದ  ಉದಾಹರಣೆಯನ್ನು ಅನುಸರಿಸಬೇಕೆಂದು ಪ್ರೇರೇಪಿಸಿದರು.

ಅವರು ಹೇಳುವಂತೆ, ಜಗದ್ಗುರು ಫ್ರಾನ್ಸಿಸ್ ರವರು ಈ ಉಪಮೆಯವು “ದೇವರ ಸಮೀಪತೆ, ಕರುಣೆ ಮತ್ತು ಮೃದುವಾದ ಪ್ರೀತಿಯ ಶೈಲಿಯನ್ನು” ತೋರಿಸುತ್ತದೆ ಎಂದು ಆಗಾಗ್ಗೆ ಹೇಳುತ್ತಿದ್ದರು.

ನಮಗೆ ಪ್ರತಿಫಲ ನೀಡಲು ಸಾಧ್ಯವಿಲ್ಲದ ಅಗತ್ಯವಂತರಿಗೆ ಸಹಾಯ ಮಾಡುವಾಗ ನಾವು ದೇವರ ಸಾಧನಗಳಾಗುತ್ತೇವೆ ಎಂದು ಜಗದ್ಗುರು ಲಿಯೋರವರು ವಿವರಿಸಿದರು. ಏಕೆಂದರೆ ಪಕ್ಕದವನಿಗಾಗಿ ಮಾಡಲ್ಪಡುವ ಪ್ರತಿಯೊಂದು ಪ್ರೀತಿಯ ಕಾರ್ಯವೂ ಯಾವುದೋ ರೀತಿಯಲ್ಲಿ ದೈವಿಕ ದಾನಪ್ರೀತಿಯ ಪ್ರತಿಬಿಂಬವಾಗಿದೆ (ಡಿಲೆಕ್ಸಿ ತೆ,26).

ಈ ಹಿನ್ನೆಲೆಯಲ್ಲಿ, “ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ಕಾರ್ಯಕ್ರಮಗಳು, ಕಥೋಲಿಕ ಶಿಕ್ಷಣವನ್ನು ಬಲಪಡಿಸುವುದು, ಮಾನವ ಗೌರವವನ್ನು ರಕ್ಷಿಸುವುದು ಹಾಗೂ ಅತ್ಯಂತ ದುರ್ಬಲರನ್ನು ಕಾಳಜಿಯಿಂದ ನೋಡಿಕೊಳ್ಳುವ” ಎಫ್ಎಡಿಐಸಿಎ ಸಂಸ್ಥೆಯ ಕಾರ್ಯಗಳು ನಿಜಕ್ಕೂ ದೈವಿಕ ದಾನಪ್ರೀತಿಯ ಸ್ಪಷ್ಟ ವ್ಯಕ್ತೀಕರಣವಾಗಿವೆ ಎಂದು ಅವರು ಹೇಳಿದರು.

ತಮ್ಮ ಸೇವೆಯ ಮೂಲಕ ಅಗತ್ಯವಿರುವ ತಮ್ಮ ಸಹೋದರ-ಸಹೋದರಿಯರಲ್ಲಿ ಯೇಸುವನ್ನು ಕಂಡುಕೊಳ್ಳಲು ಇತರರನ್ನೂ ಪ್ರೇರೇಪಿಸುವಂತೆ ಈ ಕಾರ್ಯಗಳು ಮುಂದುವರಿಯಲಿ ಎಂಬ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸಿದರು.

ಆದ್ದರಿಂದ, ಅತ್ಯಂತ ಅಗತ್ಯದಲ್ಲಿರುವ ಜನರಿಗೆ ಸೇವೆ ಮಾಡುವವರತ್ತ ದೇವರು “ತಮ್ಮ ಉದಾರತೆಯಲ್ಲಿ ಹಿಂದೆ ಬೀಳುವುದಿಲ್ಲ” (ಡಿಲೆಕ್ಸಿ ತೆ,45) ಎಂಬ ವಿಶ್ವಾಸದೊಂದಿಗೆ ಎಫ್ಎಡಿಐಸಿಎ ಸಂಸ್ಥೆಯು ತನ್ನ ಮೌಲ್ಯಯುತ ಧರ್ಮಸೇವೆಯನ್ನು ಮುಂದುವರಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು.

ಸಂದೇಶದ ಅಂತ್ಯದಲ್ಲಿ ಜಗದ್ಗುರುಗಳು ಸಂಸ್ಥೆಯನ್ನು ಕನ್ಯಾ ಮರಿಯಮ್ಮನವರ  ಪ್ರೀತಿಪೂರ್ಣ ಮಧ್ಯಸ್ಥಿಕೆಗೆ ಒಪ್ಪಿಸಿ, “ಪ್ರಭುವಿನಲ್ಲಿ ಶಾಂತಿ ಮತ್ತು ಸಂತೋಷದ ಸಂಕೇತವಾಗಿ” ತಮ್ಮ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

 ಎಫ್ಎಡಿಐಸಿಎ ಎನ್ನುವುದು ಕಥೋಲಿಕ ಕಾರ್ಯಗಳು ಮತ್ತು ಉಪಕ್ರಮಗಳಿಗೆ ಬೆಂಬಲ ನೀಡುವ ಫೌಂಡೇಶನ್‌ಗಳು ಹಾಗೂ ದಾನಿಗಳ ಜಾಲವಾಗಿದ್ದು, ಸಾಮಾನ್ಯ ಮೌಲ್ಯಗಳಿಂದ ಒಂದಾಗಿ ಕೆಲಸ ಮಾಡುವ ಸಂಘಟನೆಯಾಗಿದೆ.

13 ಮಾರ್ಚ್ 2026, 18:04