ಹುಡುಕಿ

"ಆತಿಥ್ಯ ಕ್ಯಾಥೆಡ್ರಾ" ದಲ್ಲಿ ಭಾಗವಹಿಸುವವರನ್ನು ಉದ್ದೇಶಿಸಿ ಜಗದ್ಗುರು XIVನೇ ಲಿಯೋರವರು  ಮಾತನಾಡುತ್ತಾರೆ. "ಆತಿಥ್ಯ ಕ್ಯಾಥೆಡ್ರಾ" ದಲ್ಲಿ ಭಾಗವಹಿಸುವವರನ್ನು ಉದ್ದೇಶಿಸಿ ಜಗದ್ಗುರು XIVನೇ ಲಿಯೋರವರು ಮಾತನಾಡುತ್ತಾರೆ.  (ANSA)

ಸಂತ ಜೋಸೆಫ್ ಮತ್ತು ಪವಿತ್ರ ಕುಟುಂಬವು ನಮಗೆ ನಿಜವಾದ ಆತಿಥ್ಯ, ಸ್ವೀಕಾರ ಮತ್ತು ಪ್ರೀತಿಯ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಕಲಿಸುತ್ತವೆ, ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು.

ಜಗದ್ಗುರು XIV ನೇ ಲಿಯೋರವರು ‘ಕಥೇದ್ರಾ ಆಫ್ ಹಾಸ್ಪಿಟಾಲಿಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡುತ್ತಾ, ಸಮುದಾಯಗಳು ಇತರರನ್ನು ಆತ್ಮೀಯವಾಗಿ ಸ್ವಾಗತಿಸುವ ತಮ್ಮ ಕರೆಯನ್ನು ಪುನಃ ಕಂಡುಕೊಳ್ಳಲು ಮತ್ತು ಸೇವೆಯ ಮಾರ್ಗದಲ್ಲಿ ನಡೆಯುವುದನ್ನು ಕಲಿಯಲು ನಜರೇತಿನ ಪವಿತ್ರ ಕುಟುಂಬವನ್ನು ಮಾದರಿಯಾಗಿ ನೋಡಬೇಕೆಂದು ಕರೆ ನೀಡಿದರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ತಮ್ಮ ಭಾಷಣದಲ್ಲಿ ಕ್ರೈಸ್ತ ಜೀವನದ ಮೂಲ ಕರೆಯು ಜನರ ನಡುವೆ ಏಕತೆಯನ್ನು ನಿರ್ಮಿಸುವುದಾಗಿದೆ ಎಂದು ಹೇಳಿದರು. ಈ ಏಕತೆ ಇತರರನ್ನು ಸ್ವಾಗತಿಸುವ ಮನೋಭಾವದಿಂದ, ಅವರ ಮಾತುಗಳನ್ನು ಕೇಳುವುದರಿಂದ ಮತ್ತು ಅವರಿಗೆ ಸಹಾಯ ಮಾಡುವ ಮನಸ್ಸಿನಿಂದ ಹುಟ್ಟುತ್ತದೆ ಎಂದು ಅವರು ಹೇಳಿದರು. ನಿಜವಾದ ಆತಿಥ್ಯ ಎಂದರೆ ಕೇವಲ ಸ್ವಾಗತಿಸುವುದಲ್ಲ, ಆದರೆ ಸಂಬಂಧವನ್ನು ನಿರ್ಮಿಸುವುದು ಎಂದು ಅವರು ವಿವರಿಸಿದರು.

ಈ ವರ್ಷದ ಕಾರ್ಯಕ್ರಮದಲ್ಲಿ ಯುವಕರ ಮೇಲೆ ವಿಶೇಷ ಗಮನ ಹರಿಸಲಾಗಿತ್ತು. ಜಗದ್ಗರುಗಳು ಯುವಕರು ಸಮಾಜದ ಮತ್ತು ಧರ್ಮ ಸಭೆಯ ಭವಿಷ್ಯ ಮಾತ್ರವಲ್ಲ, ಇಂದಿನ ಜೀವಂತ ವರ್ತಮಾನವೂ ಆಗಿದ್ದಾರೆ ಎಂದು ಹೇಳಿದರು. ಅವರ ಪ್ರಶ್ನೆಗಳು ಮತ್ತು ಚಿಂತನೆಗಳು ನಮ್ಮ ಸಂಬಂಧಗಳ ಶೈಲಿಯನ್ನು ಹೊಸದಾಗಿ ಪರಿವರ್ತಿಸಲು ನಮ್ಮನ್ನು ಆಹ್ವಾನಿಸುತ್ತವೆ ಎಂದು ಅವರು ತಿಳಿಸಿದರು. ಯುವಕರನ್ನು ಸ್ವಾಗತಿಸುವುದು ಎಂದರೆ ಅವರ ಧ್ವನಿಯನ್ನು ಕೇಳುವುದು ಮತ್ತು ಅವರ ಜೀವನದಲ್ಲಿ ದೇವರ ಆತ್ಮ ಕಾರ್ಯನಿರ್ವಹಿಸುತ್ತಿರುವುದನ್ನು ಗುರುತಿಸುವುದಾಗಿದೆ.

ಜಗದ್ಗುರುಗಳು ಆತಿಥ್ಯದ ಕ್ರೈಸ್ತ ಅರ್ಥವನ್ನು ವಿವರಿಸಲು ಹಾಜರಾತಿ ಮತ್ತು ಕಾಳಜಿ ಎಂಬ ಎರಡು ಪದಗಳನ್ನು ಉಲ್ಲೇಖಿಸಿದರು. ಕುಟುಂಬ, ಧರ್ಮ ಕೇಂದ್ರ, ಶಾಲೆ, ವಿಶ್ವವಿದ್ಯಾಲಯ ಮತ್ತು ಕೆಲಸದ ಸ್ಥಳಗಳು ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವ ಪ್ರಮುಖ ಸ್ಥಳಗಳಾಗಿವೆ ಎಂದು ಅವರು ಹೇಳಿದರು. ಇತರರ ಜೀವನದಲ್ಲಿ ಹಾಜರಿರುವುದು ಎಂದರೆ ಅವರೊಂದಿಗೆ ಸಮಯವನ್ನು ಹಂಚಿಕೊಳ್ಳುವುದು, ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಅವರಿಗೆ ನಂಬಿಕೆಯ ಆಧಾರವಾಗುವುದು ಎಂದು ಅವರು ವಿವರಿಸಿದರು.

ನಜರೇತಿನ ಪವಿತ್ರ ಕುಟುಂಬ ಕಡೆಗೆ ನೋಡುವ ಮೂಲಕ ಪ್ರತಿಯೊಂದು ಸಮುದಾಯವು ತನ್ನ ನಿಜವಾದ ಕರೆಯನ್ನು ಮತ್ತೆ ಕಂಡುಕೊಳ್ಳಬಹುದು ಮತ್ತು ಸೇವೆಯ ಮಾರ್ಗದಲ್ಲಿ ನಡೆಯಲು ಕಲಿಯಬಹುದು ಎಂದು ಜಗದ್ಗುರುಗಳು ಹೇಳಿದರು. ಸುವಾರ್ತೆಯಲ್ಲಿರುವ ಯೇಸುವನ್ನು ಮೂರು ದಿನಗಳ ನಂತರ ದೇವಾಲಯದಲ್ಲಿ ಕಂಡುಕೊಂಡ ಘಟನೆ, ಇತರರ ಹಾಜರಾತಿ ಸ್ವಯಂಸಿದ್ಧವಲ್ಲ ಅದನ್ನು ನಿರಂತರವಾಗಿ ಹುಡುಕಬೇಕಾಗುತ್ತದೆ ಎಂಬುದನ್ನು ನಮಗೆ ಕಲಿಸುತ್ತದೆ ಎಂದು ಅವರು ಹೇಳಿದರು.

ಜಗದ್ಗರುಗಳು ನಾವು ಕೆಲವೊಮ್ಮೆ ಯೇಸುವಿನ ಸಾನ್ನಿಧ್ಯವನ್ನು ಸಹಜವೆಂದು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಆದರೆ ಆತ ದೂರವಾದಂತೆ ಅನಿಸಿದಾಗ ನಾವು ಅವನನ್ನು ಮತ್ತೆ ವಿಶ್ವಾಸದಿಂದ ಹುಡುಕಬೇಕು. ಈ ಹುಡುಕಾಟವು ನಮ್ಮ ನಂಬಿಕೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಮತ್ತು ಆಶಾಭರವಸೆಯಿಂದ ಬದುಕಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.

ಕೊನೆಯಲ್ಲಿ ಜಗದ್ಗುರುಗಳು ಸಂತ ಜೋಸೆಫರ ಉದಾಹರಣೆಯನ್ನು ಉಲ್ಲೇಖಿಸಿದರು. ಸಂತ ಜೋಸೇಫರು ಕುಟುಂಬವನ್ನು ರಕ್ಷಿಸುವ ಮೂಲಕ ನಿಜವಾದ ಹಾಜರಾತಿ ಮತ್ತು ಕಾಳಜಿಯ ಅರ್ಥವನ್ನು ತೋರಿಸಿದರು ಎಂದು ಹೇಳಿದರು. ಜಗದ್ಗರುಗಳು ಎಲ್ಲರನ್ನು ಆತಿಥ್ಯದ ಶಿಕ್ಷಕರಾಗಿರಿ ಎಂದು ಪ್ರೋತ್ಸಾಹಿಸಿ, ಕ್ರೈಸ್ತ ಸಮುದಾಯ ಮತ್ತು ಸಮಾಜದಲ್ಲಿ ಸೌಹಾರ್ದ ಮತ್ತು ಸಹೋದರತ್ವವನ್ನು ಬೆಳೆಸುವ ವಾತಾವರಣವನ್ನು ನಿರ್ಮಿಸಲು ಒಟ್ಟಾಗಿ ಮುಂದುವರೆಯಿರಿ ಎಂದು ಕರೆ ನೀಡಿದರು.

12 ಮಾರ್ಚ್ 2026, 17:05