ಹುಡುಕಿ

Pope Leo XIV holds weekly general audience in Saint Peter's Square at the Vatican

“ಸಾಮಾನ್ಯ ಸಭೆಯಲ್ಲಿ ಜಗದ್ಗುರುಗಳು: ಧರ್ಮ ಸಭೆಯು ಎಲ್ಲರಿಗೂ ಶಾಂತಿ ಮತ್ತು ಏಕತೆಯ ಭವಿಷ್ಯವಾಣಿಯ ಸ್ಥಳವಾಗಿದೆ

ತಮ್ಮ ವಾರದ ಸಾಮಾನ್ಯ ಪ್ರೇಕ್ಷಕರ ಸಭೆಯ ವೇಳೆ, ಜಗದ್ಗುರು XIVನೇ ಲಿಯೋರವರು ಧರ್ಮ ಸಭೆ ಕುರಿತು ಇರುವ ಡಾಗ್ಮ್ಯಾಟಿಕ್ ಸಂವಿಧಾನ ಲುಮೆನ್ ಜೆಂಟಿಯಮ್ ಬಗ್ಗೆ ತಮ್ಮ ಚಿಂತನೆಗಳನ್ನು ಮುಂದುವರಿಸಿ, ಕ್ರಿಸ್ತನಲ್ಲಿ ಒಂದಾಗಿರುವ ದೇವರ ಜನರಿಂದ ನಿರ್ಮಿತವಾದ ಧರ್ಮ ಸಭೆಯ ಧ್ಯೇಯವನ್ನು ವಿಶೇಷವಾಗಿ ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಮಾರ್ಚ್ 11 ರಂದು ಸಂತ ಪೇತ್ರರ ಚೌಕದಲ್ಲಿ  ನಡೆದ ವಾರದ ಸಾಮಾನ್ಯ ಪ್ರೇಕ್ಷಕರ ಸಭೆಯಲ್ಲಿ ಮಾತನಾಡುತ್ತಾ, ವಿಭಜನೆಗಳು ಮತ್ತು ಉದ್ವಿಗ್ನತೆಯಿಂದ ಕೂಡಿದ ಇಂದಿನ ಜಗತ್ತಿನಲ್ಲಿ ಧರ್ಮ ಸಭೆ ಕ್ರಿಸ್ತನಲ್ಲಿ ಇರುವ ನಂಬಿಕೆ ಮತ್ತು ಪ್ರೀತಿಯ ಮೂಲಕ ಜನರನ್ನು ಒಂದಾಗಿಸುತ್ತದೆ ಎಂದು ಹೇಳಿದರು. ಆದ್ದರಿಂದ ಧರ್ಮ ಸಭೆ ಎಲ್ಲರಿಗೂ ತಲುಪುವ ಧ್ಯೇಯವನ್ನು ಹೊಂದಿದೆ ಎಂದು ಅವರು ಒತ್ತಿಹೇಳಿದರು. “ಕ್ರಿಸ್ತನಲ್ಲಿ ಒಂದಾಗಿರುವ ಧರ್ಮ ಸಭೆ ತನ್ನೊಳಗೆ ಮಾತ್ರ ಸೀಮಿತವಾಗಿರಲಾರದು ಅದು ಎಲ್ಲರಿಗೂ ತೆರೆದಿರುವ ಸಮುದಾಯವಾಗಿದೆ ಎಂದು ಜಗದ್ಗುರುಗಳು ಹೇಳಿದರು.

ಈ ಸಂದರ್ಭದಲ್ಲಿ ಅವರು ಧರ್ಮ ಸಭೆ ಕುರಿತು ಇರುವ ಲುಮೆನ್ ಜೆಂಟಿಯಮ್  ಎಂಬ ದಸ್ತಾವೇಜಿನ ಬಗ್ಗೆ ತಮ್ಮ ಧಾರ್ಮಿಕ ಚಿಂತನೆಗಳನ್ನು ಮುಂದುವರಿಸಿದರು. ಧರ್ಮ ಸಭೆ ದೇವರ ಜನರಿಂದ ರೂಪುಗೊಂಡ ಸಮುದಾಯವಾಗಿದ್ದು, ಕ್ರಿಸ್ತನಲ್ಲಿ ಒಂದಾಗಿರುವ ಜನರು ದೇವರ ಕುಟುಂಬವಾಗಿ ಬದುಕುತ್ತಾರೆ ಎಂದು ಅವರು ವಿವರಿಸಿದರು. ದೇವರು ತನ್ನ ಜನರೊಂದಿಗೆ ಒಡಂಬಡಿಕೆಯನ್ನು ಸ್ಥಾಪಿಸಿದ್ದಾರೆ ಮತ್ತು ಆ ಸಂಬಂಧವೇ ಧರ್ಮ ಸಭೆಯ ಜೀವನದ ಮೂಲವಾಗಿದೆ ಎಂದು ಅವರು ಹೇಳಿದರು.

ಜಗದ್ಗರುಗಳು ವಿವರಿಸಿದಂತೆ, ಹಳೆಯ ಒಡಂಬಡಿಕೆಯಲ್ಲಿ ದೇವರು ಅಬ್ರಹಾಮನನ್ನು ಕರೆಯುವ ಮೂಲಕ ಒಂದು ಜನಾಂಗವನ್ನು ಆಯ್ಕೆಮಾಡಿ, ಅವರನ್ನು ದಾಸ್ಯದಿಂದ ಬಿಡುಗಡೆ ಮಾಡಿ ತನ್ನ ಒಡಂಬಡಿಕೆಯಲ್ಲಿ ಸೇರಿಸಿಕೊಂಡನು. ಆ ಜನರ ಗುರುತು ದೇವರ ಕಾರ್ಯ ಮತ್ತು ಅವರ ವಿಶ್ವಾಸದಿಂದ ಬರುತ್ತದೆ. ಅವರು ಇತರ ಜನಾಂಗಗಳಿಗೆ ಬೆಳಕಾಗುವಂತೆ ಕರೆಯಲ್ಪಟ್ಟಿದ್ದಾರೆ ಎಂದು ಜಗದ್ಗುರುಗಳು ಹೇಳಿದರು.

ಧರ್ಮ ಸಭೆಯ ನಿಜವಾದ ಗುರುತು ಎಂದರೆ ಕ್ರಿಸ್ತನಲ್ಲಿ ಒಂದಾಗಿರುವ ದೇವರ ಜನರು ಎಂಬುದಾಗಿದೆ. ವಿಶ್ವದ ವಿವಿಧ ದೇಶಗಳು, ಭಾಷೆಗಳು ಮತ್ತು ಸಂಸ್ಕೃತಿಗಳಿಂದ ಬಂದ ಮಹಿಳೆಯರು ಮತ್ತು ಪುರುಷರು ಧರ್ಮ ಸಭೆಯಲ್ಲಿ ಒಂದಾಗುತ್ತಾರೆ. ಅವರನ್ನು ಒಂದಾಗಿಸುವುದು ಭಾಷೆ ಅಥವಾ ಸಂಸ್ಕೃತಿ ಅಲ್ಲ ಕ್ರಿಸ್ತನಲ್ಲಿರುವ ನಂಬಿಕೆಯೇ ಅವರನ್ನು ಒಂದಾಗಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಪ್ರತಿ ಕ್ರೈಸ್ತರೂ ತಮ್ಮ ಜೀವನದ ಎಲ್ಲ ಪರಿಸರಗಳಲ್ಲಿ ಸುವಾರ್ತೆಯನ್ನು ಸಾರಲು ಮತ್ತು ತಮ್ಮ ನಂಬಿಕೆಗೆ ಸಾಕ್ಷಿಯಾಗಲು ಕರೆಯಲ್ಪಟ್ಟಿದ್ದಾರೆ. ಧರ್ಮ ಸಭೆಯಲ್ಲಿನ ಸಂಬಂಧಗಳನ್ನು ಜೀವಂತವಾಗಿರಿಸುವ ನಿಯಮ ಪ್ರೀತಿಯಾಗಿದೆ, ಮತ್ತು ಅದರ ಗುರಿ ದೇವರ ರಾಜ್ಯದತ್ತ ಎಲ್ಲ ಮಾನವರೊಂದಿಗೆ ಜೊತೆಯಾಗಿ ಸಾಗುವುದಾಗಿದೆ ಎಂದು ಅವರು ಹೇಳಿದರು.

ಕೊನೆಯಲ್ಲಿ ಜಗದ್ಗುರುಗಳು ಹೇಳಿದರು: ಧರ್ಮ ಸಭೆ ಒಂದೇ ಆಗಿದ್ದರೂ ಅದು ಎಲ್ಲರನ್ನು ಒಳಗೊಂಡಿದೆ. ದೇವರ ಹೊಸ ಜನರ ಭಾಗವಾಗಲು ಎಲ್ಲರೂ ಕರೆಯಲ್ಪಟ್ಟಿದ್ದಾರೆ. ಆದ್ದರಿಂದ ಧರ್ಮ ಸಭೆ ಎಲ್ಲಾ ಸಂಸ್ಕೃತಿಗಳನ್ನು ಸ್ವೀಕರಿಸುತ್ತಾ ಸುವಾರ್ತೆಯ ಬೆಳಕನ್ನು ಎಲ್ಲರಿಗೂ ತಲುಪಿಸಬೇಕು,  ಪ್ರತಿಯೊಬ್ಬರೂ ಕ್ರಿಸ್ತನನ್ನು ಭೇಟಿಯಾಗುವ ಅವಕಾಶವನ್ನು ಪಡೆಯುತ್ತಾರೆ ಎಂದರು.

11 ಮಾರ್ಚ್ 2026, 16:52